Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ರೋಮಾಪುರದವರಿಗೆ 16

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನಮ್ಮ ಸಹೋದರಿಯೂ ಕೆಂಖ್ರೆಯ ಸಭೆಯ ಸೇವಕಿಯೂ ಆಗಿರುವ ಫೊಯಿಬೆಯನ್ನು ನಿಮಗೆ ಪರಿಚಯಿಸುತ್ತೇನೆ.
2ಕರ್ತನಲ್ಲಿ ದೇವಜನರಿಗೆ ಯೋಗ್ಯವಾಗಿರುವ ರೀತಿಯಲ್ಲಿ ಆಕೆಯನ್ನು ಸ್ವೀಕರಿಸಿ, ಆಕೆಯು ಅನೇಕರಿಗೂ ನನಗೂ ವಿಶೇಷವಾದ ರೀತಿಯಲ್ಲಿ ಸಹಾಯ ಮಾಡಿದವಳಾಗಿರುವುದರಿಂದ ನಿಮಗೆ ಯಾವ ಕೊರತೆಗಳಿದ್ದರೂ ಆಕೆಗೆ ಬೇಕಾದದ್ದನ್ನು ಒದಗಿಸಿರಿ.
3ಕ್ರಿಸ್ತ ಯೇಸುವಿನಲ್ಲಿ ನನ್ನ ಜೊತೆ ಕೆಲಸದವರಾಗಿರುವ ಪ್ರಿಸ್ಕಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ತಿಳಿಸಿರಿ.
4ಅವರು ನನ್ನ ಪ್ರಾಣದ ನಿಮಿತ್ತವಾಗಿ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಒಡ್ಡಿದರು. ಅವರಿಗೆ ನಾನು ಮಾತ್ರವೇ ಅಲ್ಲ ಯೆಹೂದ್ಯರಲ್ಲದವರು ಎಲ್ಲಾ ಸಭೆಗಳವರೂ ಕೃತಜ್ಞರಾಗಿರುತ್ತಾರೆ.
5ಅವರ ಮನೆಯಲ್ಲಿ ಸೇರಿ ಬರುವ ಸಭೆಗೂ ನನ್ನ ವಂದನೆಗಳನ್ನು ತಿಳಿಸಿರಿ. ಏಷ್ಯಾ ಪ್ರಾಂತದಲ್ಲಿ ಕ್ರಿಸ್ತನಿಗೆ ಪ್ರಥಮ ಫಲವಾಗಿರುವ ನನ್ನ ಪ್ರಿಯನಾಗಿರುವ ಎಪೈನೆತನಿಗೂ ನನ್ನ ವಂದನೆಗಳನ್ನು ತಿಳಿಸಿರಿ.
6ನಿಮಗೋಸ್ಕರ ಬಹು ಶ್ರಮೆಪಟ್ಟ ಮರಿಯಳಿಗೆ ವಂದನೆಗಳು.
7ನನ್ನ ಬಂಧುಗಳೂ ಜೊತೆ ಸೆರೆಯವರೂ ಆದ ಅಂದ್ರೋನಿಕನಿಗೂ ಯೂನ್ಯಳಿಗೂ ವಂದನೆಗಳು. ಅವರು ಅಪೊಸ್ತಲರಲ್ಲಿ ಪ್ರಸಿದ್ಧರೂ ಮತ್ತು ನನಗಿಂತ ಮೊದಲೇ ಕ್ರಿಸ್ತನಲ್ಲಿದ್ದವರೂ ಆಗಿರುತ್ತಾರೆ.
8ನನಗೆ ಕರ್ತನಲ್ಲಿ ಪ್ರಿಯನಾದ ಅಂಪ್ಲಿಯಾತನಿಗೆ ವಂದನೆಗಳು.
9ಕ್ರಿಸ್ತನಲ್ಲಿ ನನ್ನ ಜೊತೆ ಸೇವಕನಾಗಿರುವ ಉರ್ಬಾನನಿಗೂ ನನಗೆ ಪ್ರಿಯನಾದ ಸ್ತಾಖುನಿಗೂ ವಂದನೆಗಳು.
10ಕ್ರಿಸ್ತನಲ್ಲಿ ಪರಿಶೋಧಿತನಾದ ಅಪೆಲ್ಲನಿಗೆ ವಂದನೆಗಳು, ಅರಿಸ್ತೊಬೂಲನ ಮನೆಯವರಿಗೆ ವಂದನೆಗಳು.
11ನನ್ನ ಸಂಬಂಧಿಯಾಗಿರುವ ಹೆರೊಡಿಯೋನನಿಗೆ ವಂದನೆಗಳು, ಕರ್ತನಲ್ಲಿರುವ ನಾರ್ಕಿಸ್ಸನ ಕುಟುಂಬದವರಿಗೆ ವಂದನೆಗಳು.
12ಕರ್ತನ ಸೇವೆಯಲ್ಲಿ ದುಡಿಯುವ ತ್ರುಫೈನಳಿಗೂ ತ್ರುಫೋಸಳಿಗೂ ವಂದನೆಗಳು, ಕರ್ತನಲ್ಲಿ ತುಂಬಾ ಶ್ರಮಪಟ್ಟು ದುಡಿದಿರುವ ಪ್ರೀತಿಯ ಪೆರ್ಸೀಸಳಿಗೂ ನನ್ನ ವಂದನೆಗಳು.
13ಕರ್ತನಲ್ಲಿ ಆಯ್ಕೆಯಾಗಿರುವ ರೂಫನಿಗೂ ನನಗೂ ತಾಯಿಯಂತಿದ್ದ ಅವನ ತಾಯಿಗೂ ವಂದನೆಗಳು.
14ಅಸುಂಕ್ರಿತ, ಪ್ಲೆಗೋನ, ಹೆರ್ಮೆಯನಿಗೂ ಪತ್ರೋಬನಿಗೂ ಹೆರ್ಮಾನ ಮತ್ತು ಅವನೊಂದಿಗಿರುವ ಪ್ರಿಯರಿಗೂ ವಂದನೆಗಳು.
15ಫಿಲೊಲೊಗ, ಯೂಲ್ಯಳು, ನೇರ್ಯ ಮತ್ತು ಅವನ ಸಹೋದರಿ, ಒಲುಂಪ ಮತ್ತು ಅವರೊಂದಿಗಿರುವ ಎಲ್ಲಾ ಭಕ್ತರಿಗೂ ವಂದನೆಗಳು.
16ಪವಿತ್ರವಾದ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಎಲ್ಲಾ ಸಭೆಗಳವರೂ ನಿಮಗೆ ವಂದನೆಗಳನ್ನು ಕಳುಹಿಸುತ್ತಾರೆ.
17ಪ್ರಿಯರೇ, ನೀವು ಕಲಿತುಕೊಂಡ ಬೋಧನೆಗೆ ವಿರೋಧವಾಗಿರುವ ಭೇದಗಳನ್ನೂ ಅಭ್ಯಂತರಗಳನ್ನೂ ಮಾಡುವವರ ಬಗ್ಗೆ ಎಚ್ಚರಿಕೆಯಿಂದಿರಿ. ಅಂಥವರಿಂದ ದೂರವಾಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
18ಅಂಥಾ ಜನರು ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನ ಸೇವೆ ಮಾಡುವವರಾಗಿರದೆ ತಮ್ಮ ಹೊಟ್ಟೆಯ ಸೇವೆ ಮಾಡುವವರಾಗಿರುತ್ತಾರೆ. ನಯವಾದ ಮತ್ತು ಮುಖಸ್ತುತಿಯ ಮಾತುಗಳಿಂದ ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.
19ನಿಮ್ಮ ವಿಧೇಯತೆಯು ಎಲ್ಲಾ ಮನುಷ್ಯರಿಗೂ ಪ್ರಸಿದ್ಧವಾಯಿತು. ಆದ್ದರಿಂದ ನಾನು ನಿಮ್ಮ ವಿಷಯದಲ್ಲಿ ಸಂತೋಷಪಡುತ್ತೇನೆ. ಆದರೆ ನೀವು ಒಳ್ಳೆಯದನ್ನು ಕುರಿತು ಜ್ಞಾನಿಗಳಾಗಿಯೂ ಕೆಟ್ಟವುಗಳನ್ನು ಕುರಿತು ನಿಷ್ಕಳಂಕರಾಗಿಯೂ ಇರಬೇಕೆಂದು ಅಪೇಕ್ಷಿಸುತ್ತೇನೆ.
20ಆಗ ಸಮಾಧಾನದ ದೇವರು ಬೇಗನೆ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ಜಜ್ಜಿಬಿಡುವನು. ನಮ್ಮ ಕರ್ತ ಆಗಿರುವ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.
21ನನ್ನ ಜೊತೆ ಕೆಲಸದವನಾಗಿರುವ ತಿಮೊಥೆಯನು ನಿಮಗೆ ವಂದನೆಗಳನ್ನು ತಿಳಿಸುತ್ತಾನೆ. ಹಾಗೆಯೇ ನನ್ನ ಬಂಧುಗಳಾದ ಲೂಕ್ಯನೂ ಯಾಸೋನನೂ ಸೋಸಿಪತ್ರನೂ ನಿಮಗೆ ವಂದನೆಗಳನ್ನು ತಿಳಿಸುತ್ತಾರೆ.
22ಈ ಪತ್ರವನ್ನು ಬರೆದ ತೆರ್ತ್ಯನೆಂಬ ನಾನು ಕರ್ತನಲ್ಲಿ ನಿಮ್ಮನ್ನು ವಂದಿಸುತ್ತೇನೆ.
23ಇಲ್ಲಿ ನನಗೂ ಇಡೀ ಸಭೆಗೂ ಅತಿಥಿ ಸತ್ಕಾರ ಮಾಡುತ್ತಿರುವ ಗಾಯನು ತನ್ನ ವಂದನೆಗಳನ್ನು ತಿಳಿಸುತ್ತಾನೆ. ಈ ಪಟ್ಟಣದ ಖಜಾಂಚಿಯಾಗಿರುವ ಎರಸ್ತನೂ ಮತ್ತು ಸಹೋದರ ಕ್ವರ್ತನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ.
24ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮೆಲ್ಲರೊಡನೆ ಇರಲಿ! ಆಮೆನ್.
25ನನ್ನ ಸುವಾರ್ತೆಯು ಹೇಳುವಂತೆಯೇ ನಿಮ್ಮನ್ನು ಬಲಪಡಿಸುವ ದೇವರಿಗೆ ಈಗ ಎಲ್ಲಾ ಮಹಿಮೆಯಾಗಲಿ. ಕ್ರಿಸ್ತ ಯೇಸುವಿನ ಕುರಿತಾಗಿರುವ ಈ ಸಂದೇಶವು ಆದಿಯಿಂದಲೂ ಗುಪ್ತವಾಗಿರುವ ರಹಸ್ಯದ ದೇವರ ಯೋಜನೆಯು ಯೆಹೂದ್ಯರಲ್ಲದವರಾದ ನಿಮಗಾಗಿ ಈಗ ಪ್ರಕಟವಾಗಿದೆ.
26ಆದರೆ ನಿತ್ಯ ದೇವರು ಆಜ್ಞಾಪಿಸಿದಂತೆ ಈಗ ಪ್ರವಾದಿಗಳ ಗ್ರಂಥಗಳ ಮೂಲಕ ಮುಂತಿಳಿಸಿರುವಂತೆ, ಈ ಸಂದೇಶವು ಯೆಹೂದ್ಯರಲ್ಲದ ಜನರೆಲ್ಲರಿಗೂ ತಿಳಿಸಲಾಗಿದೆ. ಹೀಗೆ ಅವರು ನಂಬಿದ್ದರಿಂದ ವಿಧೇಯರಾಗುತ್ತಾರೆ.
27ಶಕ್ತರಾಗಿರುವ ಒಬ್ಬರೇ ಜ್ಞಾನವಂತರಾಗಿರುವ ದೇವರಿಗೆ ಕ್ರಿಸ್ತ ಯೇಸುವಿನ ಮೂಲಕ ಎಂದೆಂದಿಗೂ ಮಹಿಮೆಯಾಗಲಿ! ಆಮೆನ್.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.