Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ರೋಮಾಪುರದವರಿಗೆ 10

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಪ್ರಿಯರೇ, ನನ್ನ ಹೃದಯದ ಬಯಕೆಯು, ನಾನು ದೇವರಿಗೆ ಸಲ್ಲಿಸುವ ಪ್ರಾರ್ಥನೆಯು ಇಸ್ರಾಯೇಲರು ರಕ್ಷಣೆ ಹೊಂದಬೇಕೆಂಬುದೇ.
2ಅವರು ದೇವರಿಗಾಗಿ ಆಸಕ್ತರು ಎಂಬುದಾಗಿ ನಾನು ಸಾಕ್ಷಿಕೊಡುತ್ತೇನೆ. ಆದರೆ ಅವರ ಆಸಕ್ತಿಯು ಜ್ಞಾನಕ್ಕೆ ಅನುಸಾರವಾದದ್ದು ಅಲ್ಲ.
3ಅವರು ದೇವರಿಂದ ಬರುವ ನೀತಿಯನ್ನು ತಿಳಿಯದವರಾಗಿ ತಮ್ಮದೇ ಆದ ನೀತಿಯನ್ನು ಸ್ಥಾಪಿಸಲು ಪ್ರಯತ್ನಪಟ್ಟದ್ದರಿಂದ ಅವರು ತಮ್ಮನ್ನು ದೇವರ ನೀತಿಗೆ ಒಳಪಡಿಸಲಿಲ್ಲ.
4ಕ್ರಿಸ್ತ ಯೇಸುವನ್ನು ನಂಬುವ ಪ್ರತಿಯೊಬ್ಬರಿಗೂ ನೀತಿಯು ದೊರಕುವಂತೆ ಕ್ರಿಸ್ತ ಯೇಸು ಮೋಶೆಯ ನಿಯಮದ ಅಂತ್ಯವಾಗಿರುತ್ತಾರೆ.
5ನಿಯಮದಿಂದ ಬರುವ ನೀತಿಯ ಬಗ್ಗೆ ಮೋಶೆಯು ಬರೆದಿರುವುದು ಏನೆಂದರೆ: “ನಿಯಮದಲ್ಲಿ ಬರೆದಿರುವ ಎಲ್ಲವನ್ನೂ ಮಾಡುವವರೇ ಬಾಳುವವರು,” ಎಂಬುದಾಗಿ ಬರೆದನು.
6ಆದರೆ ವಿಶ್ವಾಸದಿಂದ ಬರುವ ನೀತಿಯ ಬಗ್ಗೆ ಮೋಶೆಯು ಹೇಳುವುದೇನೆಂದರೆ: “ ‘ಕ್ರಿಸ್ತನನ್ನು ಕೆಳಗೆ ತರಲು ಪರಲೋಕಕ್ಕೆ ಯಾರು ಏರಿ ಹೋಗುವರು?’
7ಅಥವಾ, ‘ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರಲು ಯಾರು ಪಾತಾಳಕ್ಕೆ ಇಳಿದು ಹೋಗುವರು?’ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳಬೇಡ.”
8ಆದರೆ ಇದು ಏನು ಹೇಳುತ್ತದೆ, “ತಕ್ಕ ವಾಕ್ಯವು ನಿನ್ನ ಬಳಿಯಲ್ಲಿ ಇದೆ, ಅದು ನಿನ್ನ ಬಾಯಿಯಲ್ಲಿಯೂ ಹೃದಯದಲ್ಲಿಯೂ ಇದೆ.” ಅದೇ ನಾವು ಸಾರುವ ವಿಶ್ವಾಸದ ವಾಕ್ಯ.
9ನೀನು, “ಯೇಸುವೇ ಕರ್ತ,” ಎಂದು ಬಾಯಿಂದ ಅರಿಕೆಮಾಡಿ, ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರೆಂದು ಹೃದಯದಲ್ಲಿ ನಂಬಿದರೆ ನೀನು ರಕ್ಷಣೆ ಹೊಂದುವೆ.
10ನೀನು ನಿನ್ನ ಹೃದಯದಿಂದ ನಂಬಿ ನೀತಿವಂತನೆಂದು ಎಣಿಸಿಕೊಳ್ಳುವಿ ಮತ್ತು ನಿನ್ನ ಬಾಯಿಂದ ನಿನ್ನ ವಿಶ್ವಾಸವನ್ನು ಅರಿಕೆ ಮಾಡಿದಾಗ ರಕ್ಷಣೆ ಹೊಂದುತ್ತಿ.
11ಪವಿತ್ರ ವೇದದಲ್ಲಿ ಹೇಳಿರುವಂತೆ, “ಅವರ ಮೇಲೆ ನಂಬಿಕೆಯಿಡುವ ಯಾವನಾದರೂ ಆಶಾಭಂಗಪಡುವದೇ ಇಲ್ಲ.”
12ಈ ವಿಷಯದಲ್ಲಿ ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವೂ ಇಲ್ಲ. ಎಲ್ಲರಿಗೂ ಕರ್ತ ಆಗಿರುವ ಒಬ್ಬರೇ ಕರ್ತ; ಅವರು ತಮ್ಮನ್ನು ಕರೆಯುವವರೆಲ್ಲರನ್ನು ಹೇರಳವಾಗಿ ಆಶೀರ್ವದಿಸುತ್ತಾರೆ.
13ಏಕೆಂದರೆ, “ಕರ್ತನ ಹೆಸರನ್ನು ಕರೆಯುವವರೆಲ್ಲರಿಗೆ ರಕ್ಷಣೆ ಆಗುವುದು.”
14ಆದರೆ, ತಾವು ವಿಶ್ವಾಸವಿಡದ ಕರ್ತನನ್ನು ಕರೆಯುವುದಾದರೂ ಹೇಗೆ? ತಾವು ಕೇಳದ ಕರ್ತನ ಬಗ್ಗೆ ಅವರು ವಿಶ್ವಾಸವಿಡುವುದು ಹೇಗೆ? ಕರ್ತನ ಬಗ್ಗೆ ಸಾರುವವನಿಲ್ಲದೆ ಅವರು ಕೇಳುವುದಾದರೂ ಹೇಗೆ?
15ಅವರು ಕಳುಹಿಸದ ಹೊರತು ಸಾರುವುದಾದರೂ ಹೇಗೆ? ಆದ್ದರಿಂದಲೇ, “ಶುಭವರ್ತಮಾನವನ್ನು ಸಾರುವವರ ಪಾದಗಳು ಎಷ್ಟೊಂದು ಅಂದವಾಗಿವೆ!” ಎಂದು ಬರೆಯಲಾಗಿದೆ.
16ಆದರೆ ಇಸ್ರಾಯೇಲರಲ್ಲಿ ಎಲ್ಲರೂ ಸುವಾರ್ತೆಯನ್ನು ಸ್ವೀಕರಿಸಲಿಲ್ಲ. ಏಕೆಂದರೆ, “ಕರ್ತನೇ, ನಮ್ಮ ಸಂದೇಶವನ್ನು ಯಾರು ನಂಬಿದರು?” ಎಂದು ಯೆಶಾಯ ಪ್ರವಾದಿಯು ಹೇಳುತ್ತಾನೆ.
17ಆದಕಾರಣ, ತಕ್ಕ ವಾಕ್ಯವನ್ನು ಕೇಳುವುದರಿಂದಲೇ ವಿಶ್ವಾಸವು ಬರುತ್ತದೆ, ಅದು ಕ್ರಿಸ್ತನ ವಾಕ್ಯವನ್ನು ಕೇಳುವುದರಿಂದಲೇ ಬರುತ್ತದೆ.
18ಆದರೆ ಇಸ್ರಾಯೇಲರು ಎಂದೂ ಸುವಾರ್ತೆಯನ್ನು ಕೇಳಲಿಲ್ಲವೋ ಎಂದು ನಾನು ಪ್ರಶ್ನಿಸುತ್ತೇನೆ? ಅವರು ನಿಶ್ಚಯವಾಗಿ ಕೇಳಿದ್ದಾರೆ. ಪವಿತ್ರ ವೇದದಲ್ಲಿ ಹೇಳಿರುವಂತೆ: “ಅವರ ಸ್ವರವು ಭೂಮಿಯ ಎಲ್ಲಾ ಕಡೆಗಳಲ್ಲಿ ಹೋಗಿರುತ್ತದೆ, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿವೆ.”
19ಆದರೆ ಇಸ್ರಾಯೇಲರಿಗೆ ಅರ್ಥವಾಗಲಿಲ್ಲವೇ? ಎಂದು ನಾನು ಪ್ರಶ್ನಿಸುತ್ತೇನೆ. ಮೊದಲನೆಯದಾಗಿ ಮೋಶೆಯು, “ನಾನು ಜನಾಂಗವಲ್ಲದವರ ಮೂಲಕ ನೀವು ಅಸೂಯೆಪಡುವಂತೆ ಮಾಡುವೆನು. ತಿಳುವಳಿಕೆಯಿಲ್ಲದ ಜನಾಂಗದವರ ಮೂಲಕ ನೀವು ಕೋಪಗೊಳ್ಳುವಂತೆ ಮಾಡುವೆನು,” ಎಂದು ಹೇಳುತ್ತಾನೆ.
20ಆದರೆ ಯೆಶಾಯನು ಬಹು ಧೈರ್ಯವಾಗಿ, “ನನ್ನನ್ನು ಹುಡುಕದವರಿಗೆ ನಾನು ಸಿಕ್ಕಿದೆನು. ನನ್ನ ವಿಷಯವಾಗಿ ವಿಚಾರ ಮಾಡದವರಿಗೂ ಪ್ರತ್ಯಕ್ಷನಾದೆನು,” ಎಂದು ಹೇಳುತ್ತಾನೆ.
21ಆದರೆ ಇಸ್ರಾಯೇಲರ ಕುರಿತಾಗಿ, “ನನಗೆ ಅವಿಧೇಯರೂ ಎದುರುಮಾತಾಡುವವರೂ ಆಗಿರುವ ಜನರಿಗೆ, ದಿನವೆಲ್ಲಾ ನಾನು ಕೈಚಾಚಿ ಕರೆದೆನು,” ಎಂದು ಹೇಳುತ್ತಾನೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.