Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪ್ರಕಟನೆ 4

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಇವುಗಳಾದ ಮೇಲೆ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿದ್ದ ಒಂದು ದ್ವಾರವು ಕಾಣಿಸಿತು. ನನ್ನೊಂದಿಗೆ ತುತೂರಿಯ ಧ್ವನಿಯಂತೆ ಮಾತನಾಡಿದ, ನಾನು ಮೊದಲು ಕೇಳಿದ ಧ್ವನಿಯಿಂದ, “ಬಾ, ಮುಂದೆ ಸಂಭವಿಸಲಿಕ್ಕೆ ಇರುವವುಗಳನ್ನು ನಿನಗೆ ತೋರಿಸುವೆನು,” ಎಂದು ಹೇಳಿತು.
2ಕೂಡಲೇ ನಾನು ಆತ್ಮವಶನಾದೆನು. ಆಗ ನನ್ನೆದುರಿನಲ್ಲಿ ಪರಲೋಕದಲ್ಲಿ ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬರು ಕುಳಿತಿದ್ದರು.
3ಆಸೀನರಾದವರು ಸೂರ್ಯಕಾಂತ, ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದರು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಮಳೆಬಿಲ್ಲು ಹೊಳೆಯುತ್ತಿತ್ತು.
4ಇದಲ್ಲದೆ ಸಿಂಹಾಸನದ ಸುತ್ತ ಇತರ ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ ಬಿಳಿವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. ಅವರ ತಲೆಗಳ ಮೇಲೆ ಬಂಗಾರದ ಕಿರೀಟಗಳಿದ್ದವು.
5ಸಿಂಹಾಸನದೊಳಗಿಂದ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಹರಡಿದವು. ಸಿಂಹಾಸನದ ಮುಂದೆ ದೇವರ ಏಳು ಆತ್ಮಗಳನ್ನು ಸೂಚಿಸುವ ಏಳು ದೀಪಗಳು ಬೆಳಗುತ್ತಿದ್ದವು.
6ಇದಲ್ಲದೆ ಸಿಂಹಾಸನದ ಮುಂದೆ ಸ್ಪಟಿಕದಂಥ ಗಾಜಿನ ಸಮುದ್ರವೊಂದು ಇದ್ದಂತೆ ಕಾಣಿಸಿತು. ಸಿಂಹಾಸನದ ಮಧ್ಯದಲ್ಲಿ, ಅದರ ಸುತ್ತಲೂ ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು.
7ಮೊದಲನೆಯ ಜೀವಿಯು ಸಿಂಹದಂತಿತ್ತು, ಎರಡನೆಯ ಜೀವಿಯು ಹೋರಿಯಂತಿತ್ತು, ಮೂರನೆಯದು ಮನುಷ್ಯನಂತಿತ್ತು, ನಾಲ್ಕನೆಯದು ಹಾರುವ ಹದ್ದಿನಂತಿತ್ತು.
8ಆ ನಾಲ್ಕು ಜೀವಿಗಳಿಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ಆ ಜೀವಿಗಳ ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ ಹೀಗೆ ಹೇಳುತ್ತಿದ್ದವು: “ ‘ದೇವರು ಆಗಿರುವ ಕರ್ತ ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು, ಅವರು ಸರ್ವಶಕ್ತರು,’ ಗತಕಾಲ, ವರ್ತಮಾನ ಭವಿಷ್ಯತ್ಕಾಲಗಳಲ್ಲಿ ಇರುವವರು.”
9ಯುಗಯುಗಾಂತರಗಳಲ್ಲಿಯೂ ಜೀವಿಸುವವರಾಗಿ, ಸಿಂಹಾಸನದ ಮೇಲೆ ಆಸೀನರಾದವರಿಗೆ ಆ ನಾಲ್ಕು ಜೀವಿಗಳು ಮಹಿಮೆ, ಮಾನ, ಕೃತಜ್ಞತಾ ಸ್ತುತಿಗಳನ್ನು ಸಲ್ಲಿಸುವಾಗ,
10ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಆಸೀನರಾದವರ ಎದುರಿಗೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ,
11“ನಮ್ಮ ಕರ್ತ ಆಗಿರುವ ದೇವರೇ, ನೀವು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯರಾಗಿದ್ದೀರಿ. ಏಕೆಂದರೆ ಸಮಸ್ತವನ್ನು ಸೃಷ್ಟಿಸಿದವರು ನೀವೇ. ಎಲ್ಲವೂ ನಿಮ್ಮ ಚಿತ್ತದಿಂದಲೇ ನಿರ್ಮಿತವಾದವು, ನಿಮ್ಮ ಚಿತ್ತದಿಂದಲೇ ಇದ್ದವು,” ಎಂದು ಹೇಳುತ್ತಾ, ಯುಗಯುಗಾಂತರಗಳಲ್ಲಿಯೂ ಜೀವಿಸುವವರನ್ನು ಆರಾಧಿಸುತ್ತಿದ್ದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.