Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪ್ರಕಟನೆ 15

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನಾನು ಪರಲೋಕದಲ್ಲಿ ಆಶ್ಚರ್ಯಕರವಾದ ಮತ್ತೊಂದು ಮಹಾ ಚಿಹ್ನೆಯನ್ನು ಕಂಡೆನು. ಏಳುಮಂದಿ ದೂತರಲ್ಲಿ ಕಡೆಯ ಏಳು ಉಪದ್ರವಗಳಿದ್ದವು. ಏಕೆಂದರೆ, ಅವುಗಳಲ್ಲಿ ದೇವರ ಕೋಪವು ಸಂಪೂರ್ಣವಾಗುವುದು.
2ನನಗೆ ಬೆಂಕಿ ಬೆರೆತ ಗಾಜಿನ ಸಮುದ್ರವೋ ಎಂಬಂತೆ ಒಂದು ಕಾಣಿಸಿತು. ಆಗ ಮೃಗದ ಮೇಲೆಯೂ ಅದರ ವಿಗ್ರಹದ ಮೇಲೆಯೂ ಅದರ ಹೆಸರಿನ ಸಂಖ್ಯೆಯ ಮೇಲೆಯೂ ಜಯಹೊಂದಿದವರು ದೇವರ ಕಿನ್ನರಿಗಳನ್ನು ಕೈಯಲ್ಲಿ ಹಿಡಿದುಕೊಂಡು, ಗಾಜಿನ ಸಮುದ್ರದ ಮೇಲೆ ನಿಂತುಕೊಂಡು,
3ದೇವರ ದಾಸನಾದ ಮೋಶೆಯ ಮತ್ತು ಕುರಿಮರಿ ಆಗಿರುವವರ ಹಾಡನ್ನೂ ಹಾಡುತ್ತಾ: “ಕರ್ತ ಆಗಿರುವ ಸರ್ವಶಕ್ತ ದೇವರೇ, ನಿಮ್ಮ ಕೃತ್ಯಗಳು ಮಹತ್ತಾದವುಗಳೂ ಆಶ್ಚರ್ಯವಾದವುಗಳೂ ಆಗಿವೆ. ರಾಷ್ಟ್ರಗಳ ಅರಸರಾಗಿರುವ ನಿಮ್ಮ ಮಾರ್ಗಗಳು ನೀತಿಯುಳ್ಳವೂ ಸತ್ಯವೂ ಆಗಿವೆ.
4ಕರ್ತನೇ, ನಿನಗೆ ಭಯಪಡದವರೂ ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರು? ಏಕೆಂದರೆ ನೀನೊಬ್ಬನೇ ಪರಿಶುದ್ಧನು. ನಿನ್ನ ನೀತಿಯುಳ್ಳ ಕೃತ್ಯಗಳು ಪ್ರಕಟವಾದ್ದರಿಂದ ಎಲ್ಲಾ ರಾಷ್ಟ್ರಗಳವರು ಬಂದು, ನಿನ್ನ ಸನ್ನಿಧಾನದಲ್ಲಿ ಆರಾಧಿಸುವರು,” ಎಂದು ಹೇಳಿದರು.
5ಇದಾದ ಮೇಲೆ ನಾನು ನೋಡಿದಾಗ, ಪರಲೋಕದಲ್ಲಿರುವ ಸಾಕ್ಷಿಯ ಗುಡಾರದ ದೇವಾಲಯವು ತೆರೆದಿರುವುದನ್ನು ಕಂಡೆನು.
6ಆ ದೇವಾಲಯದೊಳಗಿಂದ ಏಳು ಉಪದ್ರವಗಳನ್ನು ಹಿಡಿದು, ಆ ಏಳು ದೇವದೂತರು ಬಂದರು. ಅವರು ಪ್ರಕಾಶಮಯವಾದ ಶುಭ್ರವಾದ ನಾರುಮಡಿಯನ್ನು ಧರಿಸಿಕೊಂಡಿದ್ದರು. ತಮ್ಮ ಎದೆಗಳಿಗೆ ಚಿನ್ನದ ಪಟ್ಟಿಯನ್ನು ಕಟ್ಟಿಕೊಂಡಿದ್ದರು.
7ನಾಲ್ಕು ಜೀವಿಗಳಲ್ಲಿ ಒಂದು, ಆ ಏಳು ದೂತರಿಗೆ, ಯುಗಯುಗಾಂತರಗಳಲ್ಲಿಯೂ ಜೀವಿಸುವವರಾದ ದೇವರ ಕೋಪದಿಂದ ತುಂಬಿದ್ದ ಏಳು ಚಿನ್ನದ ಬೋಗುಣಿಗಳನ್ನು ಕೊಟ್ಟಿತು.
8ದೇವರ ಮಹಿಮೆಯಿಂದಲೂ ಅವರ ಶಕ್ತಿಯಿಂದಲೂ ಉಂಟಾದ ಹೊಗೆಯಿಂದ ದೇವಾಲಯವು ಆವರಿಸಿದ ಕಾರಣ, ಆ ಏಳುಮಂದಿ ದೇವದೂತರ ಏಳು ಉಪದ್ರವಗಳು ತೀರುವ ತನಕ, ಆ ದೇವಾಲಯದೊಳಗೆ ಪ್ರವೇಶಿಸುವುದಕ್ಕೆ ಯಾರಿಗೂ ಆಗಲಿಲ್ಲ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.