Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪ್ರಕಟನೆ 12

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಪರಲೋಕದಲ್ಲಿ ಒಂದು ಮಹಾ ಸೂಚನೆಯು ಕಾಣಿಸಿತು: ಒಬ್ಬ ಸ್ತ್ರೀಯು ಸೂರ್ಯನನ್ನು ಧರಿಸಿಕೊಂಡಿದ್ದಳು, ಆಕೆಯ ಪಾದಗಳ ಕೆಳಗೆ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು.
2ಆಕೆಯು ಗರ್ಭಿಣಿಯಾಗಿದ್ದು, ಪ್ರಸವವೇದನೆಯಿಂದ ನರಳುತ್ತಾ ಕೂಗುತ್ತಿದ್ದಳು.
3ಪರಲೋಕದಲ್ಲಿ ಮತ್ತೊಂದು ಸೂಚನೆಯು ಕಾಣಿಸಿತು. ಕೆಂಪಾದ ಮಹಾ ಘಟಸರ್ಪವಿತ್ತು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. ಅದರ ತಲೆಯ ಮೇಲೆ ಏಳು ಮುಕುಟಗಳಿದ್ದವು.
4ಅದು ತನ್ನ ಬಾಲದಿಂದ ಆಕಾಶದ ನಕ್ಷತ್ರಗಳಲ್ಲಿ ಮೂರರಲ್ಲೊಂದು ಭಾಗವನ್ನು ಎಳೆದು ಭೂಮಿಗೆ ಚೆಲ್ಲಿತು. ಹೆರುತ್ತಿದ್ದ ಆ ಸ್ತ್ರೀಯು ಹೆತ್ತ ಕೂಡಲೇ, ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟಸರ್ಪವು ಅವಳ ಮುಂದೆ ನಿಂತುಕೊಂಡಿತ್ತು.
5ಆಕೆ, “ರಾಷ್ಟ್ರಗಳನ್ನು ಕಬ್ಬಿಣದ ಕೋಲಿನಿಂದ ಆಳಬೇಕಾದ” ಒಂದು ಗಂಡು ಮಗುವನ್ನು ಹೆತ್ತಳು. ಆಕೆಯ ಕೂಸು ದೇವರ ಬಳಿಗೂ ಅವರ ಸಿಂಹಾಸನದ ಬಳಿಗೂ ಎತ್ತಲಾಯಿತು.
6ಆ ಸ್ತ್ರೀಯು ಅರಣ್ಯಕ್ಕೆ ಓಡಿ ಹೋದಳು. ಅಲ್ಲಿ ಆಕೆಗೆ ಸಾವಿರದ ಇನ್ನೂರ ಅರವತ್ತು ದಿನಗಳವರೆಗೆ ಪೋಷಣೆಯಾಗಬೇಕೆಂದು ದೇವರು ಸ್ಥಳವನ್ನು ಸಿದ್ಧಮಾಡಿದ್ದರು.
7ಪರಲೋಕದಲ್ಲಿ ಯುದ್ಧನಡೆಯಿತು. ಮೀಕಾಯೇಲನೂ ಅವನ ದೂತರೂ ಘಟಸರ್ಪನ ಮೇಲೆ ಯುದ್ಧಮಾಡಿದರು. ಘಟಸರ್ಪನೂ ಅವನ ದೂತರೂ ಯುದ್ಧಮಾಡಿ ಸೋತುಹೋದರು.
8ಅವರಿಗೆ ಸಾಕಷ್ಟು ಸಾಮರ್ಥ್ಯವಿಲ್ಲದ್ದರಿಂದ, ಪರಲೋಕದೊಳಗೆ ಅವರಿಗಿರುವ ಸ್ಥಾನವನ್ನು ಕಳೆದುಕೊಂಡರು.
9ಭೂಲೋಕದವರನ್ನೆಲ್ಲಾ ವಂಚಿಸುತ್ತಿದ್ದ ಆ ಮಹಾ ಘಟಸರ್ಪನು ಎಂದರೆ ಪಿಶಾಚನೆಂತಲೂ ಸೈತಾನನೆಂತಲೂ ಕರೆಯಲಾದ ಪುರಾತನ ಸರ್ಪವನ್ನು ಭೂಮಿಗೆ ತಳ್ಳಲಾಯಿತು. ಅವನ ದೂತರನ್ನೂ ಅವನೊಂದಿಗೆ ತಳ್ಳಲಾಯಿತು.
10ಆಗ ಪರಲೋಕದಲ್ಲಿ ಮಹಾಧ್ವನಿಯನ್ನು ಕೇಳಿದೆನು. ಅದು, “ರಕ್ಷಣೆಯೂ ಶಕ್ತಿಯೂ ರಾಜ್ಯವೂ ಈಗ ನಮ್ಮ ದೇವರದಾದವು. ದೇವರ ಕ್ರಿಸ್ತ ಆಗಿರುವವರ ಅಧಿಕಾರವು ಈಗ ಸ್ಥಾಪಿತವಾಯಿತು. ಹಗಲಿರುಳು ನಮ್ಮ ಸಹೋದರರ ಮೇಲೆ, ನಮ್ಮ ದೇವರ ಮುಂದೆ ದೂರು ಹೇಳುವ ದೂರುಗಾರನನ್ನು ತಳ್ಳಲಾಗಿದೆ.
11ಅವರು ಮರಣದವರೆಗೆ ತಮ್ಮ ಪ್ರಾಣವನ್ನು ಪ್ರೀತಿಸದೆ, ಕುರಿಮರಿಯಾಗಿರುವವರ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ ಅವನನ್ನು ಜಯಿಸಿದರು.
12ಆದ್ದರಿಂದ ಪರಲೋಕವೇ, ಅದರಲ್ಲಿ ವಾಸಮಾಡುವವರೇ ಹರ್ಷಗೊಳ್ಳಿರಿ. ಭೂಮಿಯೇ, ಸಮುದ್ರವೇ, ನಿಮಗೆ ದುರ್ಗತಿ! ಎನ್ನುತ್ತೇನೆ. ಏಕೆಂದರೆ, ಪಿಶಾಚನು ತನಗಿರುವ ಕಾಲವು ಕೊಂಚವೆಂದು ತಿಳಿದು, ಮಹಾ ರೋಷವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ,” ಎಂಬುದಾಗಿ ಹೇಳಿತು.
13ಘಟಸರ್ಪನು ತಾನು ಭೂಮಿಗೆ ತಳ್ಳಲಾಗಿರುವುದನ್ನು ಕಂಡಾಗ, ಅವನು ಗಂಡು ಮಗುವನ್ನು ಹೆತ್ತ ಸ್ತ್ರೀಯನ್ನು ಅಟ್ಟಿಸಿಕೊಂಡು ಹೋದನು.
14ಆ ಸ್ತ್ರೀಯು ಅರಣ್ಯದಲ್ಲಿದ್ದ ತನ್ನ ಸ್ಥಳಕ್ಕೆ ಹಾರಿಹೋಗುವುದಕ್ಕಾಗಿ ಆಕೆಗೆ ದೊಡ್ಡ ಹದ್ದಿನ ಎರಡು ರೆಕ್ಕೆಗಳು ಕೊಡಲಾದವು. ಅಲ್ಲಿ ಆಕೆಯು ಒಂದುಕಾಲ, ಎರಡುಕಾಲ ಮತ್ತು ಅರ್ಧಕಾಲ ಸರ್ಪನಿಗೆ ಸಿಗದಂತೆ ಪೋಷಣೆ ಹೊಂದಿದಳು.
15ಆ ಸರ್ಪನು ಪ್ರವಾಹದಿಂದ ಸ್ತ್ರೀಯನ್ನು ಸೆಳೆದುಕೊಂಡು ಹೋಗಬೇಕೆಂದು ಆಕೆಯ ಹಿಂದೆ ತನ್ನ ಬಾಯೊಳಗಿಂದ ನೀರನ್ನು ನದಿಯಂತೆ ಬಿಟ್ಟನು.
16ಆದರೆ ಭೂಮಿಯು ಆ ಸ್ತ್ರೀಗೆ ಸಹಾಯ ಮಾಡಿತು. ಅದು ಬಾಯಿತೆರೆದು, ಘಟಸರ್ಪನು ತನ್ನ ಬಾಯೊಳಗಿಂದ ಬಿಟ್ಟ ನದಿಯನ್ನು ನುಂಗಿಬಿಟ್ಟಿತು.
17ಆಗ ಘಟಸರ್ಪನು ಸ್ತ್ರೀಯ ಮೇಲೆ ಬಹುಕೋಪಗೊಂಡು, ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಎಂದರೆ, ದೇವರ ಆಜ್ಞೆಗಳನ್ನು ಕೈಗೊಂಡು ನಡೆದು, ಯೇಸುವಿನ ಸಾಕ್ಷಿಯನ್ನು ಹೊಂದಿದವರ ಮೇಲೆ ಯುದ್ಧಮಾಡುವುದಕ್ಕೆ ಹೊರಟನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.