Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 9

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರೇ, ನನ್ನ ಪೂರ್ಣಹೃದಯದಿಂದ ನಾನು ನಿಮ್ಮನ್ನು ಸ್ತುತಿಸುವೆನು; ನಿಮ್ಮ ಅದ್ಭುತ ಕಾರ್ಯಗಳನ್ನೆಲ್ಲಾ ನಾನು ವರ್ಣಿಸುವೆನು.
2ನಾನು ನಿಮ್ಮಲ್ಲಿ ಆನಂದಿಸಿ ಉಲ್ಲಾಸಪಡುವೆನು; ಮಹೋನ್ನತರೇ, ನಾನು ನಿಮ್ಮ ಹೆಸರನ್ನು ಕೊಂಡಾಡಿ ಹಾಡುವೆನು.
3ನನ್ನ ಶತ್ರುಗಳು ಹಿಂದಿರುಗಿ ಓಡುವರು; ಅವರು ನಿಮ್ಮ ಮುಂದೆ ಎಡವಿಬಿದ್ದು ನಾಶವಾಗುವರು.
4ನೀವು ನನ್ನ ನ್ಯಾಯವನ್ನೂ ವ್ಯಾಜ್ಯವನ್ನೂ ತೀರಿಸಲು ನೀತಿಯುಳ್ಳ ನ್ಯಾಯಾಧಿಪತಿಯಾಗಿ ಸಿಂಹಾಸನದಲ್ಲಿ ಕುಳಿತುಕೊಂಡಿದ್ದೀರಿ.
5ರಾಷ್ಟ್ರಗಳನ್ನು ಖಂಡಿಸಿ ದುಷ್ಟರನ್ನು ದಂಡಿಸಿದ್ದೀರಿ; ಅವರ ಹೆಸರನ್ನು ಯುಗಯುಗಾಂತರಗಳವರೆಗೂ ಅಳಿಸಿಬಿಟ್ಟಿದ್ದೀರಿ.
6ವೈರಿಯನ್ನು ವಿನಾಶವು ನಿರಂತರವಾಗಿ ಬೆನ್ನಟ್ಟಿದೆ, ನೀವು ಅವರ ಪಟ್ಟಣಗಳನ್ನು ಕೆಡವಿದ್ದೀರಿ; ಅವರ ಸ್ಮರಣೆಯು ಅವರೊಂದಿಗೇ ನಾಶವಾಯಿತು.
7ಯೆಹೋವ ದೇವರು ಸದಾ ಆಳುವವರು; ಅವರು ನ್ಯಾಯಕ್ಕಾಗಿ ತಮ್ಮ ಸಿಂಹಾಸನವನ್ನು ಸ್ಥಾಪಿಸಿದ್ದಾರೆ.
8ಅವರು ನೀತಿಯಿಂದ ಲೋಕಕ್ಕೆ ನ್ಯಾಯತೀರಿಸುವರು; ಪ್ರಜೆಗಳಿಗೆ ಯಥಾರ್ಥವಾದ ತೀರ್ಪು ನೀಡುವರು.
9ಯೆಹೋವ ದೇವರು ಕುಗ್ಗಿದವರಿಗೆ ಆಶ್ರಯವಾಗಿರುವರು, ಇಕ್ಕಟ್ಟಿನ ದಿವಸಗಳಲ್ಲಿ ಭದ್ರಕೋಟೆಯಾಗಿರುವರು.
10ನಿಮ್ಮ ಹೆಸರನ್ನು ತಿಳಿದವರು ನಿಮ್ಮಲ್ಲಿ ಭರವಸೆ ಇಡುವರು, ಏಕೆಂದರೆ ಯೆಹೋವ ದೇವರೇ, ನಿಮ್ಮನ್ನು ಹುಡುಕುವವರನ್ನು ನೀವು ಎಂದಿಗೂ ತೊರೆದುಬಿಡುವುದಿಲ್ಲ.
11ಚೀಯೋನಿನಲ್ಲಿ ವಾಸಿಸುವ ಯೆಹೋವ ದೇವರಿಗೆ ಸ್ತುತಿಹಾಡಿರಿ; ಅವರ ಕ್ರಿಯೆಗಳನ್ನು ರಾಷ್ಟ್ರಗಳಲ್ಲಿ ಸಾರಿ ಹೇಳಿರಿ.
12ಅವರು ಪ್ರಾಣಹತ್ಯೆ ಮಾಡುವವರನ್ನು ಮುಯ್ಯಿತೀರಿಸಲು ಜ್ಞಾಪಕಮಾಡಿಕೊಳ್ಳುವರು; ಬಾಧೆಗೆ ಒಳಗಾಗಿರುವ ದೀನರ ಕೂಗನ್ನು ಅವರು ಅಲಕ್ಷ್ಯಮಾಡುವುದಿಲ್ಲ.
13ಯೆಹೋವ ದೇವರೇ, ನನ್ನ ವೈರಿಗಳು ನನ್ನನ್ನು ಹಿಂಸಿಸುವುದನ್ನು ನೋಡಿರಿ. ನನ್ನನ್ನು ಕರುಣಿಸಿ, ಮರಣ ದ್ವಾರದಿಂದ ನನ್ನನ್ನು ಮೇಲಕ್ಕೆತ್ತಿರಿ.
14ಆಗ ಚೀಯೋನೆಂಬ ನಗರ ದ್ವಾರಗಳಲ್ಲಿ ನಿಮ್ಮ ಸ್ತುತಿಯನ್ನು ಸಾರುವೆನು. ನಿಮ್ಮ ರಕ್ಷಣೆಯಲ್ಲಿ ಆನಂದಿಸುವೆನು.
15ರಾಷ್ಟ್ರಗಳು ತಾವು ಅಗೆದ ಕುಣಿಯಲ್ಲಿ ತಾವೇ ಬಿದ್ದಿದ್ದಾರೆ; ಅವರು ಅಡಗಿಸಿಟ್ಟ ಬಲೆಯಲ್ಲೇ ಅವರ ಕಾಲುಗಳು ಸಿಕ್ಕಿಕೊಂಡಿವೆ.
16ಯೆಹೋವ ದೇವರು ತಮ್ಮ ನ್ಯಾಯಕೃತ್ಯಗಳಲ್ಲಿ ಪ್ರಸಿದ್ಧರಾಗಿದ್ದಾರೆ; ದುಷ್ಟರು ತಮ್ಮ ಕೈಕೆಲಸದಲ್ಲಿ ಸಿಕ್ಕಿಕೊಂಡಿದ್ದಾರೆ.
17ದುಷ್ಟರು ಪಾತಾಳಕ್ಕೆ ತಿರುಗುವರು, ದೇವರನ್ನು ಮರೆಯುವ ರಾಷ್ಟ್ರಗಳ ಅಂತ್ಯವೂ ಹಾಗೇ ಇರುವುದು.
18ಆದರೆ ದೇವರು ಬಡವರನ್ನು ಎಂದೆಂದಿಗೂ ಮರೆಯುವುದಿಲ್ಲ; ಕುಗ್ಗಿದವರ ನಿರೀಕ್ಷೆ ಎಂದೆಂದಿಗೂ ನಾಶವಾಗುವುದಿಲ್ಲ.
19ಯೆಹೋವ ದೇವರೇ ಎದ್ದೇಳಿರಿ, ಮನುಷ್ಯರು ನನ್ನ ಮೇಲೆ ವಿಜಯ ಸಾಧಿಸದಿರಲಿ; ರಾಷ್ಟ್ರಗಳಿಗೆ ನಿಮ್ಮ ಮುಂದೆಯೇ ನ್ಯಾಯತೀರ್ಪಾಗಲಿ.
20ಯೆಹೋವ ದೇವರೇ, ಅವರನ್ನು ಭಯದಲ್ಲಿರಿಸಿರಿ; ರಾಷ್ಟ್ರಗಳು ತಾವು ಮನುಷ್ಯರೇ ಎಂದು ತಿಳಿದುಕೊಳ್ಳಲಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.