Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 89

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರ ಮಹಾ ಪ್ರೀತಿಯನ್ನು ಯುಗಯುಗಕ್ಕೂ ಹಾಡುವೆನು. ತಲತಲಾಂತರಕ್ಕೂ ನಿಮ್ಮ ನಂಬಿಗಸ್ತಿಕೆಯನ್ನು ನನ್ನ ಬಾಯಿ ತಿಳಿಯಪಡಿಸುವುದು.
2ಎಂದೆಂದಿಗೂ ನಿಮ್ಮ ಪ್ರೀತಿಯನ್ನು ಸಾರುವೆನು. ಪರಲೋಕದಲ್ಲಿ ನಿಮ್ಮ ನಂಬಿಗಸ್ತಿಕೆಯನ್ನು ಸ್ಥಿರಪಡಿಸಿದ್ದೀರಿ ಎಂದು ಘೋಷಿಸುವೆನು.
3ನೀವು ಹೇಳಿದ್ದೇನಂದರೆ, “ನಾನು ಆಯ್ದುಕೊಂಡವನ ಸಂಗಡ ನಾನು ಒಡಂಬಡಿಕೆ ಮಾಡಿಕೊಂಡಿದ್ದೇನೆ. ನಾನು ನನ್ನ ಸೇವಕನಾದ ದಾವೀದನಿಗೆ ಪ್ರಮಾಣ ಮಾಡಿದ್ದೇನೆ.
4‘ಎಂದೆಂದಿಗೂ ನಿಮ್ಮ ಸಂತತಿಯನ್ನು ಸ್ಥಿರಪಡಿಸುವೆನು ತಲತಲಾಂತರಕ್ಕೂ ನಿಮ್ಮ ಸಿಂಹಾಸನವನ್ನು ಕಟ್ಟುವೆನು.’ ”
5ಯೆಹೋವ ದೇವರೇ, ಆಕಾಶಗಳು ನಿಮ್ಮ ಅದ್ಭುತಗಳನ್ನೂ ಪರಿಶುದ್ಧರ ಸಭೆಯಲ್ಲಿ ನಿಮ್ಮ ನಂಬಿಗಸ್ತಿಕೆಯನ್ನೂ ಕೊಂಡಾಡುವುವು.
6ಪ್ರಪಂಚದಲ್ಲಿ ಯೆಹೋವ ದೇವರಿಗೆ ಸಮಾನನಾದವನು ಯಾರು? ಪರಲೋಕ ಜೀವಿಗಳಲ್ಲಿ ಯೆಹೋವ ದೇವರಿಗೆ ಸಮಾನನಾದವನು ಯಾರು?
7ಅವರು ಪರಿಶುದ್ಧರ ಸಭೆಯಲ್ಲಿ ಭಯಭಕ್ತಿಗೆ ಪಾತ್ರರಾದ ದೇವರು. ತಮ್ಮ ಎಲ್ಲಾ ಪರಿವಾರದವರಿಗಿಂತ ಅವರು ಅತಿಶಯವಾದವರು.
8ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮ ಹಾಗೆ ಶಕ್ತರು ಯಾರು ಇದ್ದಾರೆ? ಯೆಹೋವ ದೇವರೇ, ನೀವು ಶಕ್ತರು, ನಿಮ್ಮ ನಂಬಿಗಸ್ತಿಕೆಯು ನಿಮ್ಮನ್ನು ಸುತ್ತುವರಿದಿದೆ.
9ನೀವು ಸಮುದ್ರದ ಏರುವಿಕೆಯನ್ನು ಆಳುತ್ತೀರಿ. ಅದರ ತೆರೆಗಳು ಏಳುವಾಗ ಅವುಗಳನ್ನು ಸುಮ್ಮನಿರಿಸುತ್ತೀರಿ.
10ಹತನಾದವನಂತೆ ನೀವು ರಹಬನ್ನು ಜಯಿಸಿದ್ದೀರಿ. ನಿಮ್ಮ ಭುಜಬಲದಿಂದ ನಿಮ್ಮ ಶತ್ರುಗಳನ್ನು ಚದರಿಸಿದ್ದೀರಿ.
11ಆಕಾಶಗಳು ನಿಮ್ಮವು, ಭೂಮಿಯು ಸಹ ನಿಮ್ಮದು. ಲೋಕವನ್ನೂ ಅದರಲ್ಲಿರುವುದೆಲ್ಲವನ್ನೂ ನೀವು ಉಂಟುಮಾಡಿದ್ದೀರಿ.
12ಉತ್ತರವನ್ನೂ ದಕ್ಷಿಣವನ್ನೂ ನೀವೇ ನಿರ್ಮಿಸಿದ್ದೀರಿ. ತಾಬೋರೂ, ಹೆರ್ಮೋನೂ ನಿಮ್ಮ ಹೆಸರಿನಲ್ಲಿ ಉತ್ಸಾಹ ಧ್ವನಿಗೈಯುತ್ತವೆ.
13ನಿಮ್ಮ ಭುಜವು ಶಕ್ತಿಯುತವಾದದ್ದು. ನಿಮ್ಮ ಕೈ ಬಲವುಳ್ಳದ್ದು; ನಿಮ್ಮ ಬಲಗೈ ಉನ್ನತವಾದದ್ದು.
14ನೀತಿಯೂ, ನ್ಯಾಯವೂ ನಿಮ್ಮ ಸಿಂಹಾಸನದ ಅಸ್ತಿವಾರವಾಗಿವೆ. ಪ್ರೀತಿಯೂ, ಸತ್ಯತೆಯೂ ನಿಮ್ಮ ಮುಂದೆ ಹೋಗುತ್ತವೆ.
15ನಿಮ್ಮ ಉತ್ಸಾಹ ಧ್ವನಿಯನ್ನು ಕೇಳಿದ ಜನರು ಧನ್ಯರು. ಯೆಹೋವ ದೇವರೇ, ನಿಮ್ಮ ಸನ್ನಿಧಿಯ ಬೆಳಕಿನಲ್ಲಿ ನಡೆಯುವವರು ಧನ್ಯರು.
16ನಿಮ್ಮ ಹೆಸರಿನಿಂದ ದಿನವೆಲ್ಲಾ ಉಲ್ಲಾಸಪಟ್ಟು, ನಿಮ್ಮ ನೀತಿಯಲ್ಲಿ ಅವರು ಉನ್ನತಕ್ಕೇರುವರು.
17ಏಕೆಂದರೆ ಅವರ ಬಲವೂ ಮಹಿಮೆಯೂ ನೀವೇ. ನಿಮ್ಮ ಮೆಚ್ಚುಗೆಯಿಂದ ನಮ್ಮ ಬಲವೆಂಬ ಕೊಂಬು ಉನ್ನತವಾಗುವುದು.
18ನಮ್ಮ ಗುರಾಣಿಯು ಯೆಹೋವ ದೇವರದೇ. ನಮ್ಮ ಅರಸರು ಇಸ್ರಾಯೇಲರ ಪರಿಶುದ್ಧರಾಗಿರುವರು.
19ಆ ಕಾಲದಲ್ಲಿ ನೀವು ದರ್ಶನದಲ್ಲಿ ನಿಮ್ಮ ಭಕ್ತರಿಗೆ ಹೇಳಿದ್ದೇನೆಂದರೆ: “ಒಬ್ಬ ಶೂರನಿಗೆ ನಾನು ಬಲವನ್ನು ಅನುಗ್ರಹಿಸಿದ್ದೇನೆ. ಪ್ರಜೆಗಳಲ್ಲಿ ಒಬ್ಬ ಯೌವನಸ್ಥನನ್ನು ಆರಿಸಿ ಉನ್ನತ ಸ್ಥಾನದಲ್ಲಿಟ್ಟಿದ್ದೇನೆ.
20ನನ್ನ ಸೇವಕನಾದ ದಾವೀದನನ್ನು ಕಂಡು, ನನ್ನ ಪರಿಶುದ್ಧ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದ್ದೇನೆ.
21ನನ್ನ ಕೈ ಅವನನ್ನು ಪರಿಪಾಲಿಸುವುದು; ನನ್ನ ಭುಜವು ಅವನನ್ನು ಬಲಪಡಿಸುವುದು.
22ಶತ್ರುವು ಅವನನ್ನು ಜಯಿಸಲಾರನು. ಯಾವ ದುಷ್ಟನೂ ಅವನನ್ನು ಹಿಂಸೆಪಡಿಸನು.
23ಅವನ ಮುಂದೆ ಅವನ ವೈರಿಗಳನ್ನು ಓಡಿಸಿಬಿಡುವೆನು; ಅವನ ವಿರೋಧಿಗಳನ್ನು ದಂಡಿಸುವೆನು.
24ನನ್ನ ನಂಬಿಗಸ್ತಿಕೆಯೂ ಪ್ರೀತಿಯೂ ಅವನ ಸಂಗಡ ಇರುವುವು. ನನ್ನ ಹೆಸರಿನಲ್ಲಿ ಅವನ ಬಲವೆಂಬ ಕೊಂಬು ಉನ್ನತವಾಗುವುದು.
25ಸಮುದ್ರ ಹಾಗು ನದಿಗಳ ಮೇಲೆ ಅವನ ಬಲಗೈಯನ್ನೂ ಇರಿಸುವೆನು.
26ಅವನು, ‘ನೀವು ನನ್ನ ತಂದೆಯೂ ನನ್ನ ದೇವರೂ ನನ್ನ ರಕ್ಷಣೆಯ ಬಂಡೆಯೂ ಆಗಿದ್ದೀರಿ’ ಎಂದು ನನಗೆ ಮೊರೆಯಿಡುವನು.
27ನಾನು ಆತನನ್ನು ನನ್ನ ಚೊಚ್ಚಲ ಮಗನನ್ನಾಗಿಯೂ ಭೂಮಿಯ ಅರಸರಿಗಿಂತ ಉನ್ನತನನ್ನಾಗಿಯೂ ಮಾಡಿಕೊಳ್ಳುವೆನು.
28ಎಂದೆಂದಿಗೂ ಆತನಿಗೋಸ್ಕರ ನನ್ನ ಪ್ರೀತಿಯನ್ನು ಕಾದಿಡುವೆನು. ನನ್ನ ಒಡಂಬಡಿಕೆಯು ಆತನೊಂದಿಗೆ ದೃಢವಾಗಿರುವುದು.
29ಆತನ ಸಂತತಿಯನ್ನು ಸಹ ಎಂದೆಂದಿಗೂ ಆತನ ಸಿಂಹಾಸನವನ್ನು ಆಕಾಶ ಇರುವವರೆಗೂ ಮಾಡುವೆನು.
30“ಆತನ ಸಂತತಿಯು ನನ್ನ ನಿಯಮವನ್ನು ಬಿಟ್ಟು, ನನ್ನ ಶಾಸನಗಳನ್ನು ಅನುಸರಿಸಿ ನಡೆಯದೆ,
31ಅವರು ನನ್ನ ತೀರ್ಪುಗಳನ್ನು ಮುರಿದು, ನನ್ನ ಆಜ್ಞೆಗಳನ್ನು ಕೈಗೊಳ್ಳದೆ ಹೋದರೆ,
32ಕೋಲಿನಿಂದ ಅವರ ದ್ರೋಹವನ್ನೂ ಪೆಟ್ಟುಗಳಿಂದ ಅವರ ಅಕ್ರಮವನ್ನೂ ದಂಡಿಸುವೆನು.
33ಆದರೂ ನನ್ನ ಪ್ರೀತಿ, ಕರುಣೆಯನ್ನು ಆತನಿಂದ ಸಂಪೂರ್ಣವಾಗಿ ತೊಲಗಿಸೆನು. ಇಲ್ಲವೆ ನನ್ನ ನಂಬಿಗಸ್ತಿಕೆಯಿಂದ ನಾನು ಜಾರಿಹೋಗೆನು.
34ನನ್ನ ಒಡಂಬಡಿಕೆಯನ್ನು ನಾನು ಮುರಿಯೆನು. ಇಲ್ಲವೆ ನನ್ನ ತುಟಿಗಳಿಂದ ಹೊರಟದ್ದನ್ನು ಬದಲಾಯಿಸೆನು.
35ಒಂದೇ ಸಾರಿ ನನ್ನ ಪರಿಶುದ್ಧತ್ವದಿಂದ ಆಣೆಯಿಟ್ಟು ಹೇಳಿದ್ದೇನೆ. ದಾವೀದನಿಗೆ ಸುಳ್ಳಾಡೆನು.
36ಆತನ ಸಂತತಿಯು ಯುಗಯುಗಕ್ಕೂ ಇರುವುದು. ಆತನ ಸಿಂಹಾಸನವು ನನ್ನ ಮುಂದೆ ಸೂರ್ಯನ ಹಾಗೆಯೂ ಇರುವುದು.
37ಚಂದ್ರನ ಹಾಗೆ ಅದು ಯುಗಯುಗಕ್ಕೂ ಸ್ಥಿರವಾಗಿರುವುದು; ಆಕಾಶದಲ್ಲಿರುವ ಸಾಕ್ಷಿಯ ಹಾಗೆ ನಂಬಿಗಸ್ತಿಕೆಯುಳ್ಳದ್ದಾಗಿರುವುದು.”
38ಆದರೆ ನೀವು ತಿರಸ್ಕರಿಸಿ ಬಿಟ್ಟುಬಿಟ್ಟ, ನಿಮ್ಮ ಅಭಿಷಿಕ್ತನಿಗೆ ವಿರೋಧವಾಗಿ ಬೇಸರವಾದಿರಿ.
39ನಿಮ್ಮ ಸೇವಕನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಅಸಡ್ಡೆಮಾಡಿ, ಅವನ ಕಿರೀಟವನ್ನು ಮಣ್ಣುಪಾಲು ಮಾಡಿದ್ದೀರಿ.
40ಅವನ ಗೋಡೆಗಳನ್ನೆಲ್ಲಾ ಮುರಿದು, ಅವನ ಕೋಟೆಗಳನ್ನು ಹಾಳುಮಾಡಲು ಅನುಮತಿಸಿದ್ದೀರಿ.
41ದಾರಿಯಲ್ಲಿ ಹೋಗುವವರು ಅವನನ್ನು ಕೊಳ್ಳೆ ಹೊಡೆಯುತ್ತಾರೆ. ತನ್ನ ನೆರೆಯವರಿಗೆ ಅವನು ನಿಂದೆಯಾಗಿದ್ದಾನೆ.
42ಅವನ ವೈರಿಗಳ ಬಲಗೈ ಉನ್ನತವಾಗಿದೆ. ಅವನ ವೈರಿಗಳೆಲ್ಲಾ ಆನಂದಿಸುತ್ತಿದ್ದಾರೆ.
43ಅವನ ಖಡ್ಗದ ಮೊನೆ ಮೊಂಡಾಗಿದೆ. ಯುದ್ಧದಲ್ಲಿ ನೀವು ಅವನನ್ನು ನಿಲ್ಲುವಂತೆ ಮಾಡಲಿಲ್ಲ.
44ಅವನ ಪ್ರಭೆ ಮುಗಿದು ಹೋಗಿದೆ. ಅವನ ಸಿಂಹಾಸನ ಉರುಳಿಬಿಟ್ಟಿದೆ.
45ಅವನ ಯೌವನದ ದಿವಸಗಳು ಕಡಿಮೆಯಾಗಿದೆ. ನಾಚಿಕೆ ಎಂಬ ವಸ್ತ್ರ ಅವನನ್ನು ಮುಚ್ಚಲು ನೀವು ಅನುಮತಿಸಿದ್ದೀರಿ.
46ಯೆಹೋವ ದೇವರೇ, ಇನ್ನೂ ಎಷ್ಟರವರೆಗೆ? ಸದಾಕಾಲಕ್ಕೆ ನೀವು ಅಡಗಿಕೊಳ್ಳುವಿರಾ? ನಿಮ್ಮ ಬೇಸರವು ಬೆಂಕಿಯ ಹಾಗೆ ಉರಿಯುವುದು ಎಷ್ಟರವರೆಗೆ?
47ನನ್ನ ಆಯುಸ್ಸು ಎಷ್ಟು ಕಡಿಮೆ ಎಂದು ಜ್ಞಾಪಕಮಾಡಿಕೊಳ್ಳಿರಿ. ನಿರ್ಮಿಸಿದ ಎಲ್ಲಾ ಮನುಷ್ಯರೂ ವ್ಯರ್ಥವಾಗಿದ್ದಾರೆ.
48ಮರಣವನ್ನು ಕಾಣದೆ ಬದುಕುವಂಥವರು ಯಾರು? ಸಮಾಧಿಯ ಶಕ್ತಿಯಿಂದ ಪ್ರಾಣವನ್ನು ತಪ್ಪಿಸಿಕೊಳ್ಳುವಂಥವರು ಯಾರು?
49ಯೆಹೋವ ದೇವರೇ, ನಿಮ್ಮ ಸತ್ಯದಲ್ಲಿ ನೀವು ದಾವೀದನಿಗೆ ಆಣೆಯಿಟ್ಟೆ. ನಿಮ್ಮ ಮೊದಲಿನ ಮಹಾ ಪ್ರೀತಿ ಎಲ್ಲಿ?
50ಯೆಹೋವ ದೇವರೇ, ನಿಮ್ಮ ಸೇವಕನು ನಿಂದೆ ಹೊಂದಿರುವದನ್ನು ನೆನಸಿಕೊಳ್ಳಿರಿ. ಎಲ್ಲಾ ರಾಷ್ಟ್ರಗಳ ಅಪಹಾಸ್ಯವನ್ನು ನಾನು ಹೇಗೆ ಸಹಿಸಿದೆನೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.
51ಯೆಹೋವ ದೇವರೇ, ನಿಮ್ಮ ಶತ್ರುಗಳು ನಿಂದಿಸುತ್ತಿದ್ದಾರೆ. ನಿಮ್ಮ ಅಭಿಷಿಕ್ತನ ಹೆಜ್ಜೆ ಹೆಜ್ಜೆಗೂ ನಿಂದಿಸುತ್ತಾರಲ್ಲಾ?
52ಯೆಹೋವ ದೇವರಿಗೆ ಯುಗಯುಗಕ್ಕೂ ಸ್ತುತಿಯಾಗಲಿ. ಆಮೆನ್, ಆಮೆನ್.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.