Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 55

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡಿರಿ, ನನ್ನ ವಿಜ್ಞಾಪನೆಗೆ ನಿಮ್ಮನ್ನು ಮರೆಮಾಡಿಕೊಳ್ಳಬೇಡಿರಿ.
2ನನ್ನನ್ನು ಆಲೈಸಿರಿ, ನನಗೆ ಉತ್ತರಕೊಡಿರಿ. ನಾನು ನನ್ನ ಚಿಂತೆಯಿಂದ ದುಃಖಿಸುತ್ತಾ ಬೇಸರವಾಗಿದ್ದೇನೆ.
3ಶತ್ರುವಿನ ಗರ್ಜನೆಯಿಂದಲೂ ದುಷ್ಟರ ಬೆದರಿಕೆಯಿಂದಲೂ ನರಳುತ್ತೇನೆ. ಏಕೆಂದರೆ ಅವರು ಅಪರಾಧವನ್ನು ನನ್ನ ಮೇಲೆ ಬರಮಾಡಿ, ಕೋಪದಿಂದ ನನ್ನನ್ನು ಹಗೆ ಮಾಡುತ್ತಾರೆ.
4ನನ್ನ ಹೃದಯವು ನನ್ನ ಅಂತರಂಗದಲ್ಲಿ ನೊಂದುಕೊಳ್ಳುತ್ತದೆ. ಮರಣದ ಬೆದರಿಕೆಗಳು ನನ್ನ ಮೇಲೆ ಬಿದ್ದಿವೆ.
5ಭಯವೂ ನಡುಗೂ ನನಗೆ ಬಂದಿವೆ; ಭೀತಿಯು ನನ್ನನ್ನು ಮುಚ್ಚಿದೆ.
6“ಓ, ಪಾರಿವಾಳದಂತೆ ನನಗೆ ರೆಕ್ಕೆಗಳು ಇರುತ್ತಿದ್ದರೆ, ಹಾರಿಹೋಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದೆ.
7ನಾನು ದೂರ ಹಾರಿಹೋಗಿ ಮರುಭೂಮಿಯಲ್ಲಿ ವಾಸಿಸುತ್ತಿದ್ದೆ.
8ಚಂಡಮಾರುತದಿಂದಲೂ ಬಿರುಗಾಳಿಯಿಂದಲೂ ತಪ್ಪಿಸಿಕೊಳ್ಳುತ್ತಿದ್ದೆ,” ಎಂದುಕೊಂಡೆನು.
9ಯೆಹೋವ ದೇವರೇ, ದುಷ್ಟರನ್ನು ಕಳವಳಗೊಳಿಸಿರಿ, ಅವರ ಮಾತುಗಳನ್ನು ನಿಲ್ಲಿಸಿಬಿಡಿರಿ. ಬಲಾತ್ಕಾರವನ್ನೂ ವಿವಾದವನ್ನೂ ಪಟ್ಟಣದಲ್ಲಿ ನಾನು ಕಾಣುತ್ತಿದ್ದೇನೆ.
10ಅವರು ಹಗಲಿರುಳು ಪಟ್ಟಣದ ಗೋಡೆಗಳನ್ನು ಸುತ್ತುತ್ತಾರೆ. ಕೇಡು ಅನಾಚಾರಗಳು ಅದರ ಮಧ್ಯದಲ್ಲಿ ಇವೆ.
11ನಾಶಕರ ಶಕ್ತಿಗಳು ನಗರ ಮಧ್ಯದಲ್ಲಿ ಇವೆ. ಬೀದಿಗಳೊಳಗಿಂದ ಬೆದರಿಕೆಯೂ ವಂಚನೆಯೂ ತೊಲಗುವುದಿಲ್ಲ.
12ನನ್ನನ್ನು ನಿಂದಿಸುವವನು ಶತ್ರುವಲ್ಲ, ಶತ್ರುವಾದರೆ ತಾಳಿಕೊಳ್ಳುತ್ತಿದ್ದೆ. ನನಗೆ ವಿರೋಧವಾಗಿರುವವನು ನನ್ನ ವೈರಿಯಾಗಿದ್ದರೆ, ಅವನಿಂದ ಅಡಗಿಕೊಳ್ಳುತ್ತಿದ್ದೆನು.
13ಆದರೆ ನನ್ನ ಜೊತೆಗಾರನೂ ನನ್ನ ಆಪ್ತನೂ, ನನಗೆ ಸಮನಾದವನೇ ವಿರೋಧವಾಗಿದ್ದಾನೆ.
14ದೇವರ ಆಲಯಕ್ಕೆ ಆರಾಧಕರ ಗುಂಪಿನೊಂದಿಗೆ ನಾವಿಬ್ಬರೂ ನಡೆದು ಹೋಗುವಾಗ ಮಧುರ ಅನ್ಯೋನ್ಯತೆಯನ್ನು ಅನುಭವಿಸಿದೆವು.
15ಮರಣ ನನ್ನ ವೈರಿಗಳನ್ನು ತಟ್ಟನೆ ಹಿಡಿಯಲಿ. ಜೀವಸಹಿತ ಪಾತಾಳಕ್ಕೆ ಅವರು ಇಳಿಯಲಿ, ಅವರ ಮನೆಯಲ್ಲಿ ದುಷ್ಟತನವು ಇದೆ.
16ಆದರೆ ನಾನು ದೇವರನ್ನು ಕರೆಯುವೆನು. ಯೆಹೋವ ದೇವರು ನನ್ನನ್ನು ರಕ್ಷಿಸುವರು.
17ಸಂಜೆ, ಮುಂಜಾನೆ, ಮಧ್ಯಾಹ್ನಗಳಲ್ಲಿ ಹಂಬಲಿಸಿ ಮೊರೆಯಿಡುವೆನು. ದೇವರು ನನ್ನ ಧ್ವನಿಯನ್ನು ಕೇಳುವರು.
18ಅನೇಕರು ನನ್ನನ್ನು ವಿರೋಧಿಸಿದರೂ ನನಗೆ ವಿರೋಧವಾಗಿ ಆಗುವ ಯುದ್ಧಗಳಲ್ಲಿ ದೇವರು ನನ್ನನ್ನು ಯಾವುದೇ ಹಾನಿಯಾಗದಂತೆ ವಿಮೋಚಿಸುವರು.
19ಆದಿಯಿಂದ ಸಿಂಹಾಸನಾರೂಢರಾಗಿರುವ ದೇವರು, ಅವರ ಮೊರೆಯನ್ನು ಕೇಳಿ ಅವರನ್ನು ತಗ್ಗಿಸುವರು, ಏಕೆಂದರೆ, ಅವರು ದೇವರಿಗೆ ಭಯಪಡುವುದಿಲ್ಲ. ದೇವರು ಬದಲಾಗುವುದಿಲ್ಲ.
20ನನ್ನ ಜೊತೆಗಾರನು ತನ್ನ ಸ್ನೇಹಿತನ ಮೇಲೆ ದಾಳಿಮಾಡಿದ್ದಾನೆ. ತಾನು ಮಾಡಿದ ಒಡಂಬಡಿಕೆಯನ್ನು ಭಂಗಪಡಿಸಿದ್ದಾನೆ.
21ಅವನ ಬಾಯಿಯ ಮಾತುಗಳು ಬೆಣ್ಣೆಗಿಂತ ನುಣ್ಣಗಾಗಿವೆ; ಆದರೆ ಅವನ ಹೃದಯದಲ್ಲಿ ಕಾಳಗವಿದೆ; ಅವನ ಮಾತುಗಳು ಎಣ್ಣೆಗಿಂತ ನಯವಾಗಿವೆ; ಆದರೆ ಅವು ಬಿಚ್ಚುಗತ್ತಿಗಳಾಗಿವೆ.
22ಯೆಹೋವ ದೇವರ ಮೇಲೆ ನಿಮ್ಮ ಭಾರವನ್ನು ಹಾಕಿರಿ. ಅವರು ನಿಮಗೆ ಆಧಾರವಾಗಿರುವರು. ದೇವರು ಎಂದೆಂದಿಗೂ ನೀತಿವಂತನನ್ನು ಕದಲಗೊಡಿಸುವುದಿಲ್ಲ.
23ಆದರೆ ದೇವರೇ, ದುಷ್ಟರನ್ನು ನಾಶದ ಕುಣಿಯಲ್ಲಿ ಇಳಿಯ ಮಾಡುವಿರಿ. ಕೊಲೆಪಾತಕರೂ ಮೋಸಗಾರರೂ ತಮ್ಮ ಆಯುಷ್ಕಾಲದಲ್ಲಿ ಅರ್ಧವನ್ನೂ ಜೀವಿಸುವುದಿಲ್ಲ. ನಾನಾದರೋ ನಿಮ್ಮಲ್ಲಿ ಭರವಸವಿಡುತ್ತೇನೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.