Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 44

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ದೇವರೇ, ನಾವು ನಮ್ಮ ಕಿವಿಯಾರೆ ಕೇಳಿದ್ದೇವೆ; ನೀವು ಪೂರ್ವಕಾಲದಲ್ಲಿ ನಮ್ಮ ಪಿತೃಗಳ ದಿವಸಗಳಲ್ಲಿ ಮಾಡಿದ ಕಾರ್ಯವನ್ನು ನಮಗೆ ಅವರು ವಿವರಿಸಿದ್ದಾರೆ.
2ನೀವು ನಿಮ್ಮ ಕೈಯಿಂದ ಜನಾಂಗಗಳನ್ನು ಹೊರಡಿಸಿ, ನಮ್ಮ ಪಿತೃಗಳನ್ನು ನೆಲೆಗೊಳಿಸಿದಿರಿ; ನೀವು ವೈರಿಗಳನ್ನು ತೆಗೆದುಹಾಕಿ, ನಮ್ಮ ಪಿತೃಗಳಿಗೆ ಸಮೃದ್ಧಿಯನ್ನುಂಟು ಮಾಡಿದಿರಿ.
3ನಮ್ಮ ಪಿತೃಗಳು ತಮ್ಮ ಖಡ್ಗದಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ; ಅವರ ತೋಳು ಅವರಿಗೆ ಜಯ ತರಲಿಲ್ಲ; ಆದರೆ ನಿಮ್ಮ ಬಲಗೈಯೂ ನಿಮ್ಮ ತೋಳೂ ನಿಮ್ಮ ಮುಖದ ಪ್ರಕಾಶವೇ ಅವರಿಗೆ ಜಯವನ್ನು ತಂದಿತು. ಏಕೆಂದರೆ ಅವರನ್ನು ನೀವು ಪ್ರೀತಿಸಿದಿರಿ.
4ನೀವೇ ನನ್ನ ಅರಸರೂ ದೇವರೂ ಆಗಿದ್ದೀರಿ. ಯಾಕೋಬಿಗೆ ಜಯವನ್ನು ಆಜ್ಞಾಪಿಸುವ ದೇವರಾಗಿದ್ದೀರಿ.
5ನಿಮ್ಮಿಂದ ನಮ್ಮ ವೈರಿಗಳನ್ನು ದಬ್ಬುವೆವು; ನಿಮ್ಮ ಹೆಸರಿನಲ್ಲಿ ನಮ್ಮ ಎದುರಾಳಿಗಳನ್ನು ತುಳಿಯುವೆವು.
6ನಾನು ನನ್ನ ಬಿಲ್ಲಿನಲ್ಲಿ ಭರವಸೆ ಇಡುವುದಿಲ್ಲ; ನನ್ನ ಖಡ್ಗವು ನನಗೆ ಜಯ ತರುವುದಿಲ್ಲ.
7ಆದರೆ ನೀವು ನಮ್ಮ ವೈರಿಗಳ ಮೇಲೆ ನಮಗೆ ಜಯವನ್ನು ಕೊಟ್ಟಿದ್ದೀರಿ. ನೀವು ನಮ್ಮನ್ನು ದ್ವೇಷಿಸುವವರನ್ನು ನಾಚಿಕೆಪಡಿಸಿದಿರಿ.
8ದೇವರಲ್ಲಿ ದಿನವೆಲ್ಲಾ ನಾವು ಹಿಗ್ಗುತ್ತಿದ್ದೇವೆ; ನಿಮ್ಮ ಹೆಸರನ್ನು ಯುಗಯುಗಕ್ಕೂ ಕೊಂಡಾಡುವೆವು.
9ಆದರೆ ಈಗ ನೀವು ನಮ್ಮನ್ನು ತಳ್ಳಿಬಿಟ್ಟದ್ದರಿಂದ ನಾವು ಕುಗ್ಗಿಹೋಗಿದ್ದೇವೆ. ನಮ್ಮ ಸೈನ್ಯಗಳ ಸಂಗಡ ನೀವು ಹೊರಡಲಿಲ್ಲ.
10ವೈರಿಯ ಮುಂದೆ ನಾವು ಓಡಿಹೋಗುವಂತೆ ಮಾಡಿದ್ದೀರಿ. ನಮ್ಮ ವೈರಿಗಳು ನಮ್ಮ ಸೊತ್ತನ್ನು ಕೊಳ್ಳೆ ಹೊಡೆಯುತ್ತಾರೆ.
11ಕಡಿಯತಕ್ಕ ಕುರಿಗಳಂತೆ ನಮ್ಮನ್ನು ಅವರಿಗೆ ಒಪ್ಪಿಸಿದ್ದೀರಿ; ಜನಾಂಗಗಳಲ್ಲಿ ನಮ್ಮನ್ನು ಚದರಿಸಿದ್ದೀರಿ.
12ನಿಮ್ಮ ಜನರನ್ನು ನೀವು ಕ್ರಯವಿಲ್ಲದೆ ಮಾರಿಬಿಟ್ಟಂತಿದೆ. ಆ ಮಾರಾಟದಿಂದ ಲಾಭ ಏನೂ ಇಲ್ಲದಂತಿದೆ.
13ನಮ್ಮ ನೆರೆಯವರಿಗೆ ನಾವು ನಿಂದೆಯಾಗಿದ್ದೇವೆ. ನಮ್ಮ ಸುತ್ತಲಿರುವವರಿಗೆ ಗೇಲಿಯಾಗಿಯೂ ಹಾಸ್ಯವೂ ಆಗಿದ್ದೇವೆ.
14ನಮ್ಮನ್ನು ಇತರ ದೇಶಗಳವರ ಗಾದೆಗೆ ಆಸ್ಪದ ಮಾಡಿರುವಿರಿ; ಅವರು ನಮ್ಮನ್ನು ಪರಿಹಾಸ್ಯದ ವಿಷಯವನ್ನಾಗಿ ಮಾಡಿಕೊಂಡಿದ್ದಾರೆ.
15ನಿಂದಕನ ಮತ್ತು ದೂಷಕನ ಮಾತುಗಳಿಗೂ ಮುಯ್ಯಿಗೆ ಮುಯ್ಯಿ ತೀರಿಸುವ ಶತ್ರುವಿನ ನಿಮಿತ್ತವೂ,
16ಸದಾ ನನ್ನ ಅವಮಾನವು ನನ್ನ ಮುಂದೆ ಇದೆ; ನನ್ನ ಮುಖವು ನಾಚಿಕೆಯಿಂದ ಮುಚ್ಚಿದೆ.
17ಇದೆಲ್ಲಾ ನಮ್ಮ ಮೇಲೆ ಬಂತು; ಆದರೆ ನಾವು ನಿಮ್ಮನ್ನು ಮರೆತುಬಿಡಲಿಲ್ಲ; ನಿಮ್ಮ ಒಡಂಬಡಿಕೆಯನ್ನು ಬಿಡಲಿಲ್ಲ.
18ನಮ್ಮ ಹೃದಯವು ಹಿಂದಿರುಗಲಿಲ್ಲ; ನಮ್ಮ ಹೆಜ್ಜೆಗಳು ನಿಮ್ಮ ಹಾದಿಯಿಂದ ತೊಲಗಲಿಲ್ಲ.
19ಆದರೂ ನರಿಗಳ ವಾಸಸ್ಥಳದಂತೆ ನಮ್ಮ ದೇಶವಿದೆ. ಕಾರ್ಗತ್ತಲಿನ ನೆರಳು ನಮ್ಮನ್ನು ಮುಚ್ಚಿಬಿಟ್ಟಂತಿದೆ.
20ನಾವು ನಮ್ಮ ದೇವರ ಹೆಸರನ್ನು ಮರೆತು ಅನ್ಯ ದೇವರಿಗೆ ನಮ್ಮ ಕೈಗಳನ್ನು ಚಾಚಿದ್ದರೆ,
21ದೇವರೇ ಹೃದಯದ ರಹಸ್ಯಗಳನ್ನು ತಿಳಿದಿರುವ ನಿಮಗೆ ಅವೆಲ್ಲವೂ ಮರೆಯಾಗಿರುತ್ತಿರಲಿಲ್ಲ.
22ಹೌದು, ನಿಮಗೋಸ್ಕರ ನಾವು ದಿನವೆಲ್ಲಾ ಮರಣಕ್ಕೆ ಗುರಿಯಾಗಿದ್ದೇವೆ. ವಧಿಸಲಿಕ್ಕಾಗಿರುವ ಕುರಿಗಳಂತೆ ಜನರು ನಮ್ಮನ್ನು ಎಣಿಸಿದ್ದಾರೆ.
23ಯೆಹೋವ ದೇವರೇ, ಏಳಿರಿ, ಹೌದು ಎದ್ದೇಳಿರಿ ಸದಾಕಾಲಕ್ಕೆ ನಮ್ಮನ್ನು ತಳ್ಳಿಬಿಡಬೇಡಿರಿ.
24ಏಕೆ ನಿಮ್ಮ ಮುಖವನ್ನು ಮರೆಮಾಡಿಕೊಂಡಿದ್ದೀರಿ? ನಮ್ಮ ಸಂಕಟ ಬಾಧೆಗಳನ್ನು ಮರೆತುಬಿಡುವಿರಾ?
25ನಮ್ಮ ಪ್ರಾಣವು ಮಣ್ಣು ಪಾಲಾದಂತಿದೆ. ನಮ್ಮ ಶರೀರವು ನೆಲ ಪಾಲಾದಂತಿದೆ.
26ನಮಗೆ ಸಹಾಯಕರಾಗಿ ಏಳಿರಿ; ನಿಮ್ಮ ಒಡಂಬಡಿಕೆಯ ಪ್ರೀತಿಗಾಗಿ ನಮ್ಮನ್ನು ವಿಮೋಚಿಸಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.