Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 18

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನನ್ನ ಬಲವಾಗಿರುವ ಯೆಹೋವ ದೇವರೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ.
2ಯೆಹೋವ ದೇವರು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕರೂ ಆಗಿದ್ದಾರೆ; ನನ್ನ ಬಂಡೆಯಾದ ದೇವರಲ್ಲಿ, ನಾನು ಭರವಸವಿಡುವೆನು ಅವರು ನನ್ನ ಗುರಾಣಿ ಮತ್ತು ನನ್ನ ರಕ್ಷಣೆಯ ಕೊಂಬು, ನನ್ನ ಉನ್ನತವಾದ ದುರ್ಗ ಆಗಿದ್ದಾರೆ.
3ಸ್ತುತಿ ಪಾತ್ರರಾಗಿರುವ ಯೆಹೋವ ದೇವರನ್ನು ನಾನು ಮೊರೆಯಿಟ್ಟದ್ದರಿಂದ, ಅವರು ನನ್ನ ಶತ್ರುಗಳಿಂದ ನನ್ನನ್ನು ಕಾಪಾಡಿದ್ದಾರೆ.
4ಮರಣದ ಪಾಶಗಳು ನನ್ನನ್ನು ಸುತ್ತಿಕೊಂಡವು; ವಿನಾಶಪ್ರವಾಹಗಳು ನನ್ನ ಮೇಲೆ ಹರಿದವು.
5ಪಾತಾಳದ ಪಾಶಗಳು ನನ್ನನ್ನು ಸುತ್ತಿಕೊಂಡವು; ಮರಣದ ಬಲೆಗಳು ನನ್ನನ್ನು ಎದುರಿಸಿದವು.
6ನನ್ನ ಇಕ್ಕಟ್ಟಿನಲ್ಲಿ ಯೆಹೋವ ದೇವರನ್ನು ಬೇಡಿದೆನು; ನನ್ನ ದೇವರಿಗೆ ಮೊರೆಯಿಟ್ಟೆನು; ಅವರು ತಮ್ಮ ಮಂದಿರದೊಳಗಿಂದ ನನ್ನ ಧ್ವನಿಯನ್ನು ಕೇಳಿದರು; ನನ್ನ ಮೊರೆಯು ಅವರ ಸನ್ನಿಧಿ ಸೇರಿ ಅವರ ಕಿವಿಗೆ ಬಿತ್ತು.
7ದೇವರು ಬೇಸರಗೊಂಡಿದ್ದರಿಂದ ಭೂಮಿಯು ನಡುಗಿ ಕದಲಿದವು; ಪರ್ವತಗಳ ಅಸ್ತಿವಾರಗಳು ಸಹ ಕದಲಿದವು.
8ಮೂಗಿನಿಂದ ಹೊಗೆ ಬಂದಂತೆಯೂ ಬಾಯಿಯೊಳಗಿಂದ ದಹಿಸುವ ಅಗ್ನಿ ಹೊರಟಂತೆಯೂ; ಕೆಂಡಗಳು ಅದರಿಂದ ಜ್ವಾಲಿಸಿದಂತೆಯೂ ಇರಲು,
9ದೇವರು ಆಕಾಶಗಳನ್ನು ಬಾಗಿಸಿ ಕೆಳಗಿಳಿದು ಬಂದರು; ಅವರ ಪಾದಗಳ ಕೆಳಗೆ ಕಾರ್ಮೋಡಗಳಿದ್ದವು.
10ಅವರು ಕೆರೂಬಿಯ ಮೇಲೆ ಕೂತು ಹಾರಿದರು, ಗಾಳಿಯ ರೆಕ್ಕೆಗಳ ಮೇಲೆ ಕಾಣಿಸಿಕೊಂಡರು.
11ಅವರು ಕತ್ತಲನ್ನು ತಮ್ಮ ಹೊದಿಕೆಯನ್ನಾಗಿಯೂ ಮಳೆ ತರುವ ಆಕಾಶದ ಕಾರ್ಮೋಡಗಳನ್ನು ತಮ್ಮ ಸುತ್ತಲಿನ ಪರದೆಯನ್ನಾಗಿಯೂ ಮಾಡಿಕೊಂಡರು.
12ಅವರ ಸನ್ನಿಧಿಯ ಪ್ರಕಾಶದಿಂದ ಮೋಡಗಳು, ಕಲ್ಮಳೆ ಹಾಗೂ ಗುಡುಗು ಮಿಂಚುಗಳು ಹೊರಹೊಮ್ಮಿದವು.
13ಯೆಹೋವ ದೇವರು ಆಕಾಶಗಳಲ್ಲಿ ಗುಡುಗಿದರು; ಮಹೋನ್ನತ ದೇವರ ಧ್ವನಿಯು ಕಲ್ಮಳೆ ಹಾಗೂ ಮಿಂಚುಗಳಿಂದ ಪ್ರತಿಧ್ವನಿಸಿತು.
14ಅವರು ತಮ್ಮ ಬಾಣಗಳನ್ನು ಎಸೆದು ವೈರಿಗಳನ್ನು ಚದರಿಸಿದರು; ಸಿಡಿಲಿನಿಂದ ವೈರಿಗಳನ್ನೆಲ್ಲ ಅಟ್ಟಿಸಿಬಿಟ್ಟರು.
15ಯೆಹೋವ ದೇವರೇ, ನಿಮ್ಮ ಗದರಿಕೆಯಿಂದಲೂ, ನಿಮ್ಮ ಮೂಗಿನ ಶ್ವಾಸದ ಗಾಳಿಯಿಂದಲೂ ಸಮುದ್ರದ ತಳವು ಕಾಣಿಸಿದವು, ಭೂಲೋಕದ ಅಸ್ತಿವಾರಗಳು ಬಯಲಾದವು.
16ಅವರು ಮೇಲಿನಿಂದ ಕೈಚಾಚಿ ನನ್ನನ್ನು ಹಿಡಿದು ಅಗಾಧವಾದ ಜಲರಾಶಿಗಳಿಂದ ಹೊರಗೆಳೆದರು.
17ಅವರು ನನಗಿಂತ ಶಕ್ತಿಶಾಲಿಯಾದ ಶತ್ರುಗಳಿಂದ, ದ್ವೇಷಿಸುತ್ತಿದ್ದ ವೈರಿಗಳಿಂದ ನನ್ನನ್ನು ಬಿಡಿಸಿ ರಕ್ಷಿಸಿದರು.
18ನನ್ನ ಆಪತ್ತಿನ ದಿನದಲ್ಲಿ ನನ್ನನ್ನು ಆ ಶತ್ರುಗಳು ದಾಳಿಮಾಡಿದರು; ಆದರೆ ಯೆಹೋವ ದೇವರು ನನಗೆ ಆಧಾರವಾಗಿದ್ದರು.
19ದೇವರು ನನ್ನನ್ನು ಹೊರಗೆ ವಿಶಾಲ ಸ್ಥಳಕ್ಕೆ ತಂದರು; ನನ್ನಲ್ಲಿ ಸಂತೋಷಪಟ್ಟದ್ದರಿಂದ ನನ್ನನ್ನು ಕಾಪಾಡಿದರು.
20ಯೆಹೋವ ದೇವರು ನನ್ನ ನೀತಿಯ ಪ್ರಕಾರ ನನ್ನೊಂದಿಗೆ ವ್ಯವಹರಿಸಿದರು; ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಪ್ರತಿಫಲಕೊಟ್ಟರು.
21ಏಕೆಂದರೆ ನಾನು ಯೆಹೋವ ದೇವರ ಮಾರ್ಗಗಳನ್ನು ಕೈಗೊಂಡೆನು; ನನ್ನ ದೇವರನ್ನು ಬಿಟ್ಟುಹೋಗುವ ದುಷ್ಟತ್ವವನ್ನು ನಾನು ಮಾಡಲಿಲ್ಲ.
22ದೇವರ ಆಜ್ಞೆಗಳೆಲ್ಲಾ ನನ್ನ ಮುಂದೆ ಇಟ್ಟುಕೊಂಡೆನು; ಅವರ ತೀರ್ಪುಗಳಿಂದ ನಾನು ತೊಲಗಿಹೋಗಲಿಲ್ಲ.
23ನಾನು ಅವರ ದೃಷ್ಟಿಯಲ್ಲಿ ನಿರ್ದೋಷಿಯು ನಾನು ಪಾಪದಿಂದ ನನ್ನನ್ನು ಕಾಪಾಡಿಕೊಂಡೆನು.
24ಆದ್ದರಿಂದ ಯೆಹೋವ ದೇವರು ನನ್ನ ನೀತಿಯ ಪ್ರಕಾರವೂ ಅವರ ದೃಷ್ಟಿಯಲ್ಲಿ ನನ್ನ ಕೈಗಳ ಶುದ್ಧತ್ವದ ಪ್ರಕಾರವೂ ನನಗೆ ಪ್ರತಿಫಲಕೊಟ್ಟರು.
25ದಯವಂತರಿಗೆ ನೀವು ನಿಮ್ಮನ್ನು ದಯವಂತರಾಗಿ ತೋರಿಸುತ್ತೀರಿ. ನಿರ್ದೋಷಿಗೆ ನೀವು ನಿರ್ದೋಷಿಯಾಗಿ ತೋರಿಸುತ್ತೀರಿ.
26ಶುದ್ಧರಿಗೆ ನೀವು ಶುದ್ಧರಾಗಿ ತೋರಿಸುತ್ತೀರಿ. ವಕ್ರ ವ್ಯಕ್ತಿಗೆ ನಿಮ್ಮ ಬುದ್ಧಿವಂತಿಕೆಯನ್ನು ತೋರಿಸುತ್ತೀರಿ.
27ದೀನರನ್ನು ರಕ್ಷಿಸುತ್ತೀರಿ, ಆದರೆ ನೀವು ಗರ್ವಿಷ್ಠರ ಕಣ್ಣುಗಳನ್ನು ತಗ್ಗಿಸುತ್ತೀರಿ.
28ಯೆಹೋವ ದೇವರೇ, ನೀವು ನನ್ನ ದೀಪವನ್ನು ಬೆಳಗಿಸಿರಿ. ನನ್ನ ದೇವರು ನನ್ನ ಕತ್ತಲೆಯನ್ನು ಬೆಳಕನ್ನಾಗಿ ಮಾರ್ಪಡಿಸುವರು.
29ನಿಮ್ಮ ಸಹಾಯದಿಂದ ವೈರಿಸೇನೆಯ ವಿರುದ್ಧ ಹೋಗುವೆನು, ನನ್ನ ದೇವರೊಂದಿಗೆ ಕೋಟೆಗೋಡೆಯನ್ನೂ ಹಾರುವೆನು.
30ದೇವರ ಮಾರ್ಗವು ಪರಿಪೂರ್ಣವಾದದ್ದು, ಯೆಹೋವ ದೇವರ ವಾಕ್ಯವು ದೋಷವಿಲ್ಲದ್ದು; ತಮ್ಮಲ್ಲಿ ಆಶ್ರಯ ಹೊಂದಿದ ಎಲ್ಲರಿಗೂ ಅವರು ಗುರಾಣಿಯಾಗಿದ್ದಾರೆ.
31ಏಕೆಂದರೆ ಯೆಹೋವ ದೇವರಲ್ಲದೆ ಬೇರೆ ದೇವರು ಯಾರು? ಮತ್ತು ನಮ್ಮ ದೇವರನ್ನು ಹೊರತುಪಡಿಸಿ ರಕ್ಷಕ ಯಾರು?
32ಬಲದಿಂದ ನನಗೆ ಆಯುಧವನ್ನು ಧರಿಸುವಂತೆ ಮಾಡಿ, ನನ್ನ ಮಾರ್ಗವನ್ನು ಸುರಕ್ಷಿತಗೊಳಿಸುವ ದೇವರು ಅವರೇ.
33ನನ್ನ ಕಾಲುಗಳನ್ನು ಜಿಂಕೆಗಳ ಕಾಲುಗಳಂತೆ ಚುರುಕು ಮಾಡಿ, ಅವರು ನನ್ನನ್ನು ಉನ್ನತ ಸ್ಥಳಗಳ ಮೇಲೆ ನಿಲ್ಲಿಸುತ್ತಾರೆ.
34ಅವರು ಯುದ್ಧಕ್ಕಾಗಿ ನನ್ನ ಕೈಗಳಿಗೆ ತರಬೇತುಕೊಟ್ಟು, ನನ್ನ ಭುಜದಿಂದ ಕಂಚಿನ ಬಿಲ್ಲನ್ನು ಬಗ್ಗಿಸುವಂತೆ ಮಾಡುತ್ತಾರೆ.
35ನಿಮ್ಮ ರಕ್ಷಣೆಯ ಸಹಾಯವನ್ನು ನನಗೆ ಗುರಾಣಿಯನ್ನಾಗಿ ಮಾಡಿದ್ದೀರಿ. ನಿಮ್ಮ ಬಲಗೈ ನನಗೆ ಆಧಾರವಾಗಿದೆ; ನಿಮ್ಮ ಸಹಾಯವು ನನ್ನನ್ನು ಘನವಂತನನ್ನಾಗಿ ಮಾಡಿದೆ.
36ನೀವು ನನ್ನ ಕಾಲಡಿಗಳಿಗೆ ವಿಶಾಲಸ್ಥಳ ಒದಗಿಸಿದ್ದೀರಿ, ಆದುದರಿಂದ ನನ್ನ ಹಿಮ್ಮಡಿಗಳು ಜಾರುವುದಿಲ್ಲ.
37ನನ್ನ ಶತ್ರುಗಳನ್ನು ಹಿಂದಟ್ಟಿ ಹಿಡಿದಿದ್ದೇನೆ; ಅವರನ್ನು ಸಂಹರಿಸಿಬಿಡುವವರೆಗೂ ನಾನು ಹಿಂದಿರುಗಲಿಲ್ಲ.
38ಏಳಲಾರದಂತೆ ಅವರನ್ನು ತುಳಿದುಬಿಟ್ಟೆನು; ಅವರು ನನ್ನ ಪಾದಗಳ ಕೆಳಗೆ ಬಿದ್ದರು.
39ನೀವು ಯುದ್ಧಕ್ಕಾಗಿ ನನಗೆ ಬಲವನ್ನು ಆಯುಧವನ್ನಾಗಿ ನೀಡಿ, ನನ್ನ ಎದುರಾಳಿಗಳನ್ನು ನನಗೆ ಅಧೀನ ಮಾಡಿದ್ದೀರಿ.
40ನನ್ನ ಶತ್ರುಗಳು ನನಗೆ ಬೆನ್ನುಮಾಡಿ ಓಡಿಹೋಗುವಂತೆ ಮಾಡಿದಿರಿ; ನಾನು ನನ್ನ ವೈರಿಗಳನ್ನು ಸಂಹರಿಸಿದೆನು.
41ಅವರು ಸಹಾಯಕ್ಕಾಗಿ ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇರಲಿಲ್ಲ ಯೆಹೋವ ದೇವರಿಗೂ ಮೊರೆಯಿಟ್ಟರು, ಆದರೆ ಅವರೂ ಉತ್ತರ ಕೊಡಲಿಲ್ಲ.
42ಅವರನ್ನು ಗಾಳಿಯಿಂದ ಬಡಿಸಿಕೊಂಡು ಹೋಗುವ ಧೂಳಿನಂತೆ ಪುಡಿಪುಡಿ ಮಾಡಿದೆನು; ಬೀದಿಯಲ್ಲಿನ ಕೆಸರು ಎಂಬಂತೆ ತುಳಿದು ಎಸೆದುಬಿಟ್ಟೆನು.
43ನೀವು ನನ್ನ ಜನರ ಒಳಕಲಹದಿಂದ ನನ್ನನ್ನು ತಪ್ಪಿಸಿದ್ದೀರಿ; ನನ್ನನ್ನು ಜನಾಂಗಗಳಿಗೆ ನಾಯಕನನ್ನಾಗಿ ಮಾಡಿರುವಿರಿ. ನಾನು ಅರಿಯದ ಜನರು ನನಗೆ ವಿಧೇಯರಾಗುವರು.
44ವಿದೇಶಿಯರು ನನಗೆ ಅಧೀನರಾದರು; ನನ್ನ ಸುದ್ದಿ ಕೇಳಿದ ಕೂಡಲೇ ನನಗೆ ವಿಧೇಯರಾಗುವರು.
45ಅವರು ಭಯಗೊಳ್ಳುವರು; ನಡುಗುತ್ತಾ ತಮ್ಮ ಕೋಟೆಗಳಿಂದ ಹೊರಬರುವರು.
46ಯೆಹೋವ ದೇವರು ಜೀವಿಸುವ ದೇವರು! ನನ್ನ ಆಶ್ರಯವಾಗಿರುವ ದೇವರಿಗೆ ಸ್ತೋತ್ರವಾಗಲಿ. ನನ್ನ ರಕ್ಷಕರಾದ ದೇವರು ಮಹಿಮೆ ಹೊಂದಲಿ.
47ದೇವರೇ ನನಗೋಸ್ಕರ ಮುಯ್ಯಿಗೆ ಮುಯ್ಯಿ ತೀರಿಸುವವರೂ ಜನರನ್ನು ನನಗೆ ಅಧೀನಪಡಿಸುವವರೂ ಆಗಿದ್ದಾರೆ.
48ದೇವರು ನನ್ನ ಶತ್ರುಗಳಿಂದ ನನ್ನನ್ನು ಬಿಡಿಸುತ್ತಾರೆ; ನೀವು ನನ್ನ ಎದುರಾಳಿಗಳಿಂದ ನನ್ನನ್ನು ತಪ್ಪಿಸಿ ಗೌರವಿಸುತ್ತೀರಿ, ಬಲಾತ್ಕಾರ ಮಾಡುವವನಿಂದ ನನ್ನನ್ನು ರಕ್ಷಿಸುತ್ತೀರಿ.
49ಆದ್ದರಿಂದ ಯೆಹೋವ ದೇವರೇ, ನಾನು ಜನಾಂಗಗಳಲ್ಲಿ ನಿಮ್ಮನ್ನು ಕೊಂಡಾಡುವೆನು, ನಿಮ್ಮನ್ನು ಕೊಂಡಾಡಿ ನಿಮ್ಮ ಹೆಸರನ್ನು ಕೀರ್ತಿಸುವೆನು.
50ದೇವರು ತಮ್ಮ ಅರಸನಿಗೆ ವಿಶೇಷ ರಕ್ಷಣೆಯನ್ನು ಕೊಡುವರು; ತಮ್ಮ ಅಭಿಷಿಕ್ತನಿಗೂ ದಾವೀದನಿಗೂ ಅವನ ಸಂತತಿಯವರಿಗೂ ಒಡಂಬಡಿಕೆಯ ಪ್ರೀತಿಯನ್ನು ಯುಗಯುಗಕ್ಕೂ ಅನುಗ್ರಹಿಸುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.