Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 109

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನಾನು ಸ್ತುತಿಸುವ ದೇವರೇ, ನೀವು ಮೌನವಾಗಿರಬೇಡಿರಿ.
2ದುಷ್ಟರೂ, ವಂಚಕರೂ ತಮ್ಮ ಬಾಯಿಯನ್ನು ನನಗೆ ವಿರೋಧವಾಗಿ ತೆರೆದಿದ್ದಾರೆ; ಸುಳ್ಳಿನ ನಾಲಿಗೆಯಿಂದ ನನಗೆ ವಿರೋಧವಾಗಿ ಮಾತಾಡಿದ್ದಾರೆ.
3ದ್ವೇಷ ಮಾತುಗಳಿಂದ ನನ್ನನ್ನು ಸುತ್ತಿಕೊಂಡಿದ್ದಾರೆ, ನನಗೆ ವಿರೋಧವಾಗಿ ಕಾರಣವಿಲ್ಲದೆ ಯುದ್ಧ ಮಾಡುತ್ತಿದ್ದಾರೆ.
4ನನ್ನ ಸ್ನೇಹಕ್ಕೆ ಬದಲಾಗಿ ನನ್ನ ಮೇಲೆ ದೂರು ಹೇಳುತ್ತಾರೆ; ಆದರೆ ನಾನು ಪ್ರಾರ್ಥನೆಯ ಮನುಷ್ಯನು.
5ನನಗೆ ಉಪಕಾರಕ್ಕೆ ಬದಲಾಗಿ ಕೇಡನ್ನು ಮಾಡುತ್ತಿದ್ದಾರೆ, ನನ್ನ ಸ್ನೇಹಕ್ಕೆ ಬದಲಾಗಿ ನನ್ನ ಮೇಲೆ ದೂರು ಹೇಳುತ್ತಾರೆ.
6ದುಷ್ಟನು ನನ್ನ ವೈರಿಯ ಮೇಲೆ ನೇಮಕವಾಗಲಿ; ಸೈತಾನನು ಅವನ ಬಲಗಡೆಯಲ್ಲಿ ನಿಂತುಕೊಳ್ಳಲಿ.
7ಅವನಿಗೆ ನ್ಯಾಯತೀರಿಸುವಾಗ ಅಪರಾಧಿಯೆಂದು ತೀರ್ಪು ಹೊಂದಲಿ; ಅವನ ಪ್ರಾರ್ಥನೆಯೇ ಅವನನ್ನು ಖಂಡಿಸಲಿ.
8ಅವನ ದಿವಸಗಳು ಸ್ವಲ್ಪವಾಗಿರಲಿ; ಅವನ ಹುದ್ದೆಯನ್ನು ಇನ್ನೊಬ್ಬನು ತೆಗೆದುಕೊಳ್ಳಲಿ.
9ಅವನ ಮಕ್ಕಳು ದಿಕ್ಕಿಲ್ಲದವರಾಗಲಿ, ಅವನ ಹೆಂಡತಿ ವಿಧವೆಯೂ ಆಗಲಿ.
10ಅವನ ಮಕ್ಕಳು ಅಲೆದು ಅಲೆದು ಭಿಕ್ಷೆಬೇಡಲಿ, ತಮ್ಮ ಹಾಳು ಮನೆಯಿಂದ ಹೊರಟು ಹೋಗಲಿ.
11ಸಾಲಗಾರರು ಅವನಿಗೆ ಇರುವುದನ್ನೆಲ್ಲಾ ದೋಚಿಕೊಳ್ಳಲಿ; ಪರರು ಅವನ ಕಷ್ಟಾರ್ಜಿತವನ್ನು ಸುಲಿದುಕೊಳ್ಳಲಿ.
12ಅವನಿಗೆ ದಯೆ ತೋರಿಸುವವನು ಯಾವನೂ ಇಲ್ಲದೆ ಇರಲಿ; ದಿಕ್ಕಿಲ್ಲದ ಅವನ ಮಕ್ಕಳನ್ನು ಯಾವನೂ ಕನಿಕರಿಸದಿರಲಿ.
13ಅವನ ಸಂತಾನವು ಮುಗಿದು ಹೋಗಲಿ; ಎರಡನೆಯ ತಲಾಂತರದಲ್ಲಿ ಅವರ ಹೆಸರು ಅಳಿದು ಹೋಗಲಿ.
14ಅವನ ಪಿತೃಗಳ ಅಕ್ರಮವು ಯೆಹೋವ ದೇವರ ಮುಂದೆ ಜ್ಞಾಪಕವಾಗಲಿ; ಅವನ ತಾಯಿಯ ಪಾಪವು ಅಳಿದು ಹೋಗದಿರಲಿ.
15ಅವು ಯಾವಾಗಲೂ ಯೆಹೋವ ದೇವರ ಮುಂದೆ ಇರಲಿ; ದೇವರು ಅವರ ನೆನಪನ್ನು ಭೂಮಿಯೊಳಗಿಂದ ತೆಗೆದುಬಿಡಲಿ.
16ಏಕೆಂದರೆ ಅವನು ಯಾರಿಗೂ ದಯೆ ತೋರಿಸಲಿಲ್ಲ. ಬಡವನನ್ನೂ, ದೀನನನ್ನೂ, ಮನಗುಂದಿದವನನ್ನೂ ಹಿಂಸಿಸಿ ಸಾಯಿಸಬೇಕೆಂದು ಯತ್ನಿಸಿದನು.
17ಅವನು ಶಾಪಕೊಡಲು ಇಷ್ಟಪಟ್ಟನು; ಅದೇ ಅವನಿಗೆ ಬರಲಿ; ಅವನು ಆಶೀರ್ವಾದವನ್ನು ಮೆಚ್ಚಲಿಲ್ಲ; ಅದು ಅವನಿಗೆ ದೂರವಾಗಿರಲಿ.
18ಅವನು ತನ್ನ ವಸ್ತ್ರದಂತೆ ಶಾಪವನ್ನು ಹೊದ್ದುಕೊಂಡನು; ಅದು ನೀರಿನಂತೆ ಅವನ ಅಂತರಂಗದಲ್ಲಿಯೂ, ಎಣ್ಣೆಯಂತೆ ಅವನ ಎಲುಬುಗಳಲ್ಲಿಯೂ ಸೇರಿತು.
19ಶಾಪವು ಅವನಿಗೆ ತೊಟ್ಟುಕೊಂಡ ಅಂಗಿಯ ಹಾಗೆಯೂ, ಯಾವಾಗಲೂ ಸೊಂಟಕ್ಕೆ ಕಟ್ಟುವ ನಡುಕಟ್ಟಿನ ಹಾಗೆಯೂ ಇರಲಿ.
20ಇದು ನನಗೆ ವಿರೋಧವಾಗಿ ಕೇಡು ಮಾತಾಡುವ ನನ್ನ ಎದುರಾಳಿಗಳಿಗೆ ಯೆಹೋವ ದೇವರಿಂದ ಪ್ರತಿಫಲವಾಗಿರಲಿ.
21ಆದರೆ ಸಾರ್ವಭೌಮ ಯೆಹೋವ ದೇವರೇ, ನಿಮ್ಮ ಹೆಸರಿಗೋಸ್ಕರ ನನಗೆ ಸಹಾಯಮಾಡಿರಿ. ನಿಮ್ಮ ಪ್ರೀತಿಯ ಒಳ್ಳೆಯತನದಿಂದ ನನ್ನನ್ನು ಬಿಡಿಸಿರಿ.
22ಏಕೆಂದರೆ ನಾನು ಬಡವನೂ ಅಗತ್ಯತೆಯಲ್ಲಿ ಇರುವವನೂ ಆಗಿದ್ದೇನೆ; ನನ್ನ ಹೃದಯವು ನನ್ನ ಅಂತರಂಗದಲ್ಲಿ ಗಾಯಗೊಂಡಿದೆ.
23ನಾನು ಇಳಿಯುವ ನೆರಳಿನ ಹಾಗೆ ಆಗಿದ್ದೇನೆ; ಮಿಡತೆಯ ಹಾಗೆ ಹಾರಾಡುತ್ತಿದ್ದೇನೆ.
24ನನ್ನ ಮೊಣಕಾಲುಗಳು ಉಪವಾಸದಿಂದ ಬಲಹೀನವಾಗಿವೆ; ನನ್ನ ದೇಹಕ್ಕೆ ಸಾರವಿಲ್ಲದೆ ಹೋಯಿತು.
25ನಾನು ನನ್ನ ದೂರುಗಾರರಿಗೆ ನಿಂದೆಯಾಗಿದ್ದೇನೆ; ಅವರು ನನ್ನನ್ನು ಕಂಡು ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾರೆ.
26ನನ್ನ ದೇವರಾದ ಯೆಹೋವ ದೇವರೇ, ನನಗೆ ಸಹಾಯಮಾಡಿರಿ; ನಿಮ್ಮ ಒಡಂಬಡಿಕೆಯ ಪ್ರೀತಿಯ ಪ್ರಕಾರ ನನ್ನನ್ನು ರಕ್ಷಿಸಿರಿ.
27ಇದು ನಿಮ್ಮ ಕೈ ಕೆಲಸ ಎಂದು ಅವರಿಗೆ ಗೊತ್ತಾಗಲಿ, ಇದು ನಿನ್ನಿಂದಲೇ ಆಯಿತೆಂದು ಅವರು ತಿಳಿದುಕೊಳ್ಳಲಿ.
28ಅವರು ಶಪಿಸಲಿ, ಆದರೆ ನೀವು ಆಶೀರ್ವದಿಸಿರಿ. ನನಗೆ ಹಾನಿಮಾಡುವವರು ನಾಚಿಕೆಪಡಲಿ; ಆದರೆ ನಿಮ್ಮ ಸೇವಕನಾದ ನಾನು ಸಂತೋಷಿಸಲಿ.
29ನನ್ನ ಎದುರಾಳಿಗಳು ಅವಮಾನವನ್ನು ಹೊದ್ದುಕೊಳ್ಳಲಿ, ತಮ್ಮ ನಾಚಿಕೆಯನ್ನು ಹೊದಿಕೆಯಂತೆ ತೊಟ್ಟುಕೊಳ್ಳಲಿ.
30ನಾನು ಯೆಹೋವ ದೇವರನ್ನು ನನ್ನ ಬಾಯಿಯಿಂದ ಬಹಳವಾಗಿ ಕೊಂಡಾಡುವೆನು; ಅನೇಕರ ಮಧ್ಯದಲ್ಲಿ ದೇವರನ್ನು ಸ್ತುತಿಸುವೆನು.
31ದೇವರು ಬಡವನ ಬಲಗಡೆಯಲ್ಲಿ ನಿಂತು, ಅವನ ಪ್ರಾಣವನ್ನು ಖಂಡಿಸುವವರಿಂದ ಅವನನ್ನು ರಕ್ಷಿಸುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.