Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 102

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ; ನನ್ನ ಮೊರೆಯು ನಿಮಗೆ ಮುಟ್ಟಲಿ.
2ನನಗೆ ಇಕ್ಕಟ್ಟು ಇರುವ ದಿವಸದಲ್ಲಿ ನಿಮ್ಮ ಮುಖವನ್ನು ನನಗೆ ಮರೆಮಾಡಬೇಡಿರಿ, ಸಹಾಯಮಾಡಿರಿ; ನಾನು ಕರೆಯುವಾಗ ನನ್ನ ಕಡೆಗೆ ತಿರುಗಿರಿ, ಬೇಗನೇ ನನಗೆ ಉತ್ತರಕೊಡಿರಿ.
3ನನ್ನ ದಿವಸಗಳು ಹೊಗೆಯಂತೆ ಕಳೆದುಹೋಗುತ್ತವೆ; ನನ್ನ ಎಲುಬುಗಳು ಬೂದಿ ಮುಚ್ಚಿದ ಕೆಂಡದಂತೆ ಸುಟ್ಟುಹೋಗಿವೆ.
4ನನ್ನ ಹೃದಯವು ಬಾಡಿಹೋಗಿ ಹುಲ್ಲಿನ ಹಾಗೆ ಒಣಗಿಹೋಗಿದೆ; ನಾನು ಊಟಮಾಡುವುದಕ್ಕೆ ಸಹ ಮರೆತುಬಿಡುತ್ತೇನೆ.
5ನಾನು ನನ್ನ ನಿಟ್ಟುಸಿರಿನಿಂದ ಮೊರೆಯಿಡುತ್ತಿದ್ದೇನೆ. ನನ್ನಲ್ಲಿ ಎಲುಬು ತೊಗಲು ಮಾತ್ರ ಉಳಿದಿರುತ್ತವೆ.
6ನಾನು ಅರಣ್ಯದ ಗೂಬೆಗೆ ಸಮಾನನಾಗಿದ್ದೇನೆ; ನಾನು ಹಾಳೂರಿನ ಗೂಬೆಯ ಹಾಗಿದ್ದೇನೆ.
7ನಿದ್ರೆಯಿಲ್ಲದೆ ಬಳಲುತ್ತಿದ್ದೇನೆ; ಮಾಳಿಗೆಯ ಮೇಲಿರುವ ಒಂಟಿಯಾದ ಪಕ್ಷಿಯ ಹಾಗಿದ್ದೇನೆ.
8ದಿನವೆಲ್ಲಾ ನನ್ನ ಶತ್ರುಗಳು ನನ್ನನ್ನು ನಿಂದಿಸುತ್ತಾರೆ; ನನ್ನ ಮೇಲೆ ಕೋಪಿಸಿಕೊಳ್ಳುವವರೆಲ್ಲರು ನನಗೆ ವಿರೋಧವಾಗಿ ಶಪಿಸುತ್ತಾರೆ.
9ನಿಮ್ಮ ದುಃಖ ಬೇಸರದ ನಿಮಿತ್ತ, ಬೂದಿಯನ್ನು ರೊಟ್ಟಿಯಂತೆ ತಿಂದಿದ್ದೇನೆ; ನನ್ನ ಪಾನವನ್ನು ಕಣ್ಣೀರಿನಿಂದ ಬೆರೆಸಿದ್ದೇನೆ.
10ಇದಕ್ಕೆ ಕಾರಣ ನೀವು ಗಮನ ಕೊಡದಿರುವುದೇ. ನೀವು ನನಗೆ ಲಕ್ಷ್ಯಕೊಡುತ್ತಾಯಿಲ್ಲ.
11ನನ್ನ ದಿವಸಗಳು ಸಾಯಂಕಾಲದ ನೆರಳಿನ ಹಾಗಿವೆ; ನಾನು ಹುಲ್ಲಿನ ಹಾಗೆ ಒಣಗುತಿದ್ದೇನೆ.
12ಆದರೆ ನೀವು ಯೆಹೋವ ದೇವರೇ, ಎಂದೆಂದಿಗೂ ಇರುತ್ತೀರಿ; ನಿಮ್ಮ ಪ್ರಸಿದ್ಧ ಕಾರ್ಯಗಳು ತಲತಲಾಂತರಕ್ಕೂ ಇರುತ್ತವೆ.
13ನೀವು ಎದ್ದು ಚೀಯೋನನ್ನು ಕನಿಕರಿಸುವಿರಿ; ಅದನ್ನು ಕರುಣಿಸುವ ಕಾಲ ಇದೇ; ಹೌದು, ನೀವು ನಿರ್ಣಯಿಸಿದ ಸಮಯವು ಬಂದಿದೆ.
14ಅದು ಕಲ್ಲು ಕುಪ್ಪೆಯಾಗಿ ಹೋಗಿದ್ದರೂ, ನಿಮ್ಮ ಸೇವಕರಿಗೆ ಅತಿ ಪ್ರಿಯವಾಗಿದೆ; ಅದರ ಧೂಳಿಗೆ ಅವರು ಮರಗುತ್ತಾರೆ.
15ಜನಾಂಗಗಳು ಯೆಹೋವ ದೇವರ ಹೆಸರಿಗೂ, ಭೂರಾಜರೆಲ್ಲರೂ ನಿಮ್ಮ ಮಹಿಮೆಗೂ ಭಯಪಡುವರು.
16ಏಕೆಂದರೆ ಯೆಹೋವ ದೇವರು ಚೀಯೋನನ್ನು ಮರಳಿ ಕಟ್ಟುವರು; ಅವರು ತಮ್ಮ ಮಹಿಮೆಯಲ್ಲಿ ಕಾಣಿಸಿಕೊಳ್ಳುವರು.
17ಅವರು ದಿಕ್ಕಿಲ್ಲದವರ ಪ್ರಾರ್ಥನೆಗೆ ಕಿವಿಗೊಡುತ್ತಾರೆ; ದೇವರು ಅವರ ಪ್ರಾರ್ಥನೆಯನ್ನು ತಿರಸ್ಕರಿಸುವುದಿಲ್ಲ.
18ಇದು ಮುಂದಿನ ಸಂತತಿಗೋಸ್ಕರ ಲಿಖಿತವಾಗಿರಲಿ; ಹುಟ್ಟಲಿಕ್ಕಿರುವ ಜನರು ಯೆಹೋವ ದೇವರನ್ನು ಸ್ತುತಿಸಲಿ.
19ಯೆಹೋವ ದೇವರು ಉನ್ನತವಾದ ಪವಿತ್ರ ಸ್ಥಾನದಿಂದ ಕೆಳಕ್ಕೆ ನೋಡಿದ್ದಾರೆ; ಅವರು ಪರಲೋಕದಿಂದ ಭೂಮಿಯನ್ನು ದೃಷ್ಟಿಸಿದ್ದಾರೆ.
20ಅವರು ಸೆರೆಯವರ ಗೋಳಾಟವನ್ನು ಕೇಳಿ, ಮರಣದಂಡನೆಗೆ ಪಾತ್ರನಾದವರನ್ನು ಬಿಡಿಸುವರು,
21ಬಿಡುಗಡೆಯಾದವರು ಚೀಯೋನಿನಲ್ಲಿ ಯೆಹೋವ ದೇವರ ನಾಮವನ್ನು ಸಾರುವಂತೆಯೂ, ಯೆರೂಸಲೇಮಿನಲ್ಲಿ ತಮ್ಮ ಸ್ತೋತ್ರವನ್ನು ಪ್ರಕಟಿಸುವಂತೆಯೂ ಮಾಡಿದ್ದಾರೆ.
22ಜನಾಂಗಗಳೂ, ರಾಜ್ಯಗಳೂ ಕೂಡಿಬಂದು ಇವರೊಡನೆ ಯೆಹೋವ ದೇವರನ್ನು ಸೇವಿಸುತ್ತವೆ, ಎಂದು ಹೇಳಲಾಗುವುದು.
23ದೇವರು ನನ್ನ ಜೀವಮಾನದ ಬಲವನ್ನು ಕುಂದಿಸಿದ್ದಾರೆ, ನನ್ನ ದಿನಗಳನ್ನೂ ಕಡಿಮೆ ಮಾಡಿದ್ದಾರೆ.
24ಆದ್ದರಿಂದ ನಾನು, “ನನ್ನ ದೇವರೇ, ನನ್ನ ಆಯುಷ್ಯದ ಮಧ್ಯದಲ್ಲಿ ನನ್ನನ್ನು ತೆಗೆದುಕೊಳ್ಳಬೇಡಿರಿ; ನಿಮ್ಮ ವರ್ಷಗಳು ತಲತಲಾಂತರಗಳಿಗೂ ಇವೆ.
25ಆದಿಯಲ್ಲಿ ನೀವು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀರಿ; ಆಕಾಶಗಳು ನಿಮ್ಮ ಕೈಕೆಲಸಗಳಾಗಿವೆ.
26ಅವು ನಾಶವಾಗುವುವು; ಆದರೆ ನೀವು ಸದಾಕಾಲವೂ ಜೀವಿಸುತ್ತೀರಿ. ಅವುಗಳೆಲ್ಲಾ ವಸ್ತ್ರದ ಹಾಗೆ ಹಳೆಯದಾಗುವುದು; ಅಂಗಿಯ ಹಾಗೆ ಅವುಗಳನ್ನು ಬದಲಾಯಿಸುವಿರಿ; ಅವು ತೆಗೆದುಹಾಕಲಾಗುವುದು.
27ಆದರೆ ನೀವು ಏಕರೀತಿಯಾಗಿದ್ದೀರಿ. ನಿಮ್ಮ ವರ್ಷಗಳು ಮುಗಿದುಹೋಗುವುದಿಲ್ಲ.
28ನಿಮ್ಮ ಸೇವಕರ ಮಕ್ಕಳು ನಿಮ್ಮ ಸನ್ನಿಧಿಯಲ್ಲಿ ಬದುಕುವರು; ಅವರ ಸಂತತಿಯು ನಿಮ್ಮ ಮುಂದೆ ನೆಲೆಯಾಗಿರುವುದು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.