Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಜ್ಞಾನೋಕ್ತಿಗಳು 28

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಹಿಂದಟ್ಟುವವನು ಇಲ್ಲದಿದ್ದರೂ ದುಷ್ಟನು ಓಡಿಹೋಗುತ್ತಾನೆ. ಆದರೆ ಸಿಂಹದ ಹಾಗೆ ನೀತಿವಂತರು ಧೈರ್ಯದಿಂದ ಇರುತ್ತಾರೆ.
2ದೇಶದ ದಂಗೆಯಿಂದ ಅನೇಕರು ನಾಯಕರಾಗುತ್ತಾರೆ. ಆದರೆ ಒಳನೋಟ ಹಾಗು ತಿಳುವಳಿಕೆಯ ನಾಯಕನಿಂದಲೇ ದೇಶವು ಸುಸ್ಥಿರವಾಗುವುದು.
3ಬಡವರನ್ನು ಹಿಂಸಿಸುವ ಅಧಿಕಾರಿಯು ಆಹಾರವನ್ನು ಉಳಿಸದಂತೆ ಸುರಿಯುವ ಮಳೆಯಂತಿದ್ದಾನೆ.
4ಬೋಧನೆಯನ್ನು ತ್ಯಜಿಸುವವರು ದುಷ್ಟರನ್ನು ಹೊಗಳುತ್ತಾರೆ; ಆದರೆ ಬೋಧನೆಯನ್ನು ಕೈಗೊಳ್ಳುವವರು ಅವರೊಂದಿಗೆ ಹೋರಾಡುತ್ತಾರೆ.
5ನ್ಯಾಯವನ್ನು ದುಷ್ಟರು ಗ್ರಹಿಸುವುದಿಲ್ಲ; ಆದರೆ ಯೆಹೋವ ದೇವರನ್ನು ಹುಡುಕುವವರು ಎಲ್ಲವುಗಳನ್ನು ಗ್ರಹಿಸುತ್ತಾರೆ.
6ಐಶ್ವರ್ಯವಂತನಾಗಿದ್ದರೂ ತನ್ನ ಮಾರ್ಗದಲ್ಲಿ ವಕ್ರವಾಗಿರುವವನಿಗಿಂತ ನಿರ್ದೋಷಿಯಾಗಿ ನಡೆಯುವ ದರಿದ್ರನು ಶ್ರೇಷ್ಠನು.
7ವಿವೇಚನೆಯ ಮಗನು ದೇವರ ಶಿಕ್ಷಣವನ್ನು ಕೈಗೊಳ್ಳುವನು. ಆದರೆ ಹೊಟ್ಟೆಬಾಕರ ಸಂಗಡಿಗನು ತನ್ನ ತಂದೆಯನ್ನು ಅವಮಾನಪಡಿಸುತ್ತಾನೆ.
8ಬಡ್ಡಿಯಿಂದಲೂ ಅನ್ಯಾಯದ ಲಾಭದಿಂದಲೂ ತನ್ನ ಆಸ್ತಿಯನ್ನು ವೃದ್ಧಿಗೊಳಿಸುವವನು, ಬಡವರ ಮೇಲೆ ದಯೆ ತೋರಿಸುವವನಿಗೆ ಅದನ್ನು ಕೂಡಿಸುವನು.
9ಶಿಕ್ಷಣವನ್ನು ಕೇಳದಂತೆ ತನ್ನ ಕಿವಿ ಮುಚ್ಚಿಕೊಳ್ಳುವವನ ಪ್ರಾರ್ಥನೆಯು ದೇವರಿಗೆ ಅಸಹ್ಯ.
10ಪ್ರಾಮಾಣಿಕರನ್ನು ದುರ್ಮಾರ್ಗದಲ್ಲಿ ದಾರಿತಪ್ಪಿಸುವವನು, ತಾನೇ ತೋಡಿದ ಗುಂಡಿಯಲ್ಲಿ ಬೀಳುವನು. ನಿರ್ದೋಷಿಗಳಾದರೋ ಒಳ್ಳೆಯ ಸೊತ್ತನ್ನು ಪಡೆಯುವರು.
11ಐಶ್ವರ್ಯವಂತನು ತನ್ನ ಸ್ವಂತ ಅಭಿಪ್ರಾಯದಲ್ಲಿ ಜ್ಞಾನಿಯಾಗಿದ್ದಾನೆ. ಆದರೆ ವಿವೇಚನೆಯುಳ್ಳ ಬಡವನು ಅವನ ವಂಚನೆಯನ್ನು ನೋಡಬಲ್ಲನು.
12ನೀತಿವಂತರಿಗೆ ಜಯವಾದರೆ, ದೊಡ್ಡ ಘನತೆ ಇರುವುದು. ಆದರೆ ದುಷ್ಟರಿಗೆ ಏಳಿಗೆಯಾದರೆ, ಮನುಷ್ಯರು ಅಡಗಿಕೊಳ್ಳುತ್ತಾರೆ.
13ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನಿಗೆ ಏಳಿಗೆ ಆಗುವುದಿಲ್ಲ. ಆದರೆ ಪಾಪಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರಕುವುದು.
14ಯಾವಾಗಲೂ ಯೆಹೋವ ದೇವರ ಭಯಭಕ್ತಿಯಲ್ಲಿ ನಡೆದುಕೊಳ್ಳುವವನು ಧನ್ಯನು. ಆದರೆ ಹೃದಯವನ್ನು ಕಠಿಣಪಡಿಸಿಕೊಳ್ಳುವವನು ಕೇಡಿಗೆ ಸಿಕ್ಕಿಬೀಳುವನು.
15ಗರ್ಜಿಸುವ ಸಿಂಹದಂತೆಯೂ ಅಲೆದಾಡುವ ಕರಡಿಯಂತೆಯೂ, ಬಡವರನ್ನು ದುಷ್ಟನು ಆಳುವನು.
16ಗ್ರಹಿಕೆಯಿಲ್ಲದ ಅಧಿಕಾರಿಯು ಮಹಾ ಸುಲಿಗೆಗಾರನು. ಆದರೆ ಲೋಭವನ್ನು ಹಗೆಮಾಡುವವನು ದೀರ್ಘಾಯುಷ್ಯನು.
17ನರಹತ್ಯದ ಅಪರಾಧ ಭಾವನೆಯಿಂದ ಇರುವವನು, ಮರಣದೆಡೆಗೆ ಓಡುತ್ತಿರುವನು, ಅವನನ್ನು ಯಾರೂ ತಡೆಯದಿರಲಿ.
18ನಿರ್ದೋಷಿಯಾಗಿ ನಡೆಯುವವನು ಸಂರಕ್ಷಣೆ ಹೊಂದುವನು. ವಕ್ರಮಾರ್ಗಿಯು ತಟ್ಟನೆ ಬೀಳುವನು.
19ತನ್ನ ಹೊಲವನ್ನು ವ್ಯವಸಾಯ ಮಾಡುವವನು ಆಹಾರದಿಂದ ತೃಪ್ತಿಹೊಂದುವನು. ಆದರೆ ವ್ಯರ್ಥ ಕಾರ್ಯವನ್ನು ಹಿಂಬಾಲಿಸುವವನಿಗೆ ಸಾಕಾದಷ್ಟು ಬಡತನವು ಇರುವುದು.
20ನಂಬಿಗಸ್ತನಾದ ಮನುಷ್ಯನು ಆಶೀರ್ವಾದಗಳಲ್ಲಿ ತುಂಬಿತುಳುಕುವನು; ಆದರೆ ಧನವಂತನಾಗಲು ಆತುರಪಡುವವನು, ನಿರ್ದೋಷಿಯಾಗಿರುವುದಿಲ್ಲ.
21ಪಕ್ಷಪಾತವು ಸರಿಯಲ್ಲ; ತುತ್ತು ರೊಟ್ಟಿಗಾಗಿ ಒಬ್ಬನು ದ್ರೋಹ ಮಾಡುವನು.
22ಧನವಂತನಾಗಲು ಆತುರಪಡುವವನು ಕೆಟ್ಟ ಕಣ್ಣುಳ್ಳವನಾಗಿದ್ದಾನೆ; ತನಗೆ ಬಡತನವು ಬರುವುದನ್ನು ಅವನು ಯೋಚಿಸುವುದಿಲ್ಲ.
23ತನ್ನ ನಾಲಿಗೆಯಿಂದ ಮುಖಸ್ತುತಿ ಮಾಡುವವನಿಗಿಂತ, ಒಬ್ಬನನ್ನು ಗದರಿಸುವವನು ತರುವಾಯ ಹೆಚ್ಚು ದಯಾಪಾತ್ರನಾಗುವನು.
24ತನ್ನ ತಂದೆಯಾನ್ನಾಗಲಿ, ತಾಯಿಯನ್ನಾಗಲಿ ದೋಚಿಕೊಂಡು, “ಇದು ದೋಷವಲ್ಲ,” ಎಂದು ಹೇಳುವವನು ಕೆಡುಕನಿಗೆ ಜೊತೆಗಾರನು.
25ದುರಾಶೆಯುಳ್ಳವನು ಕಲಹವನ್ನೆಬ್ಬಿಸುವನು; ಯೆಹೋವ ದೇವರಲ್ಲಿ ಭರವಸವಿಡುವವನು ಪುಷ್ಟನಾಗುವನು.
26ತನ್ನ ಬುದ್ಧಿಯಲ್ಲಿಯೇ ಭರವಸವಿಡುವವನು ಬುದ್ಧಿಹೀನನು; ಆದರೆ ಜ್ಞಾನದಿಂದ ನಡೆಯುವವನು ಉದ್ಧಾರ ಹೊಂದುವನು.
27ಬಡವರಿಗೆ ದಾನ ಮಾಡುವವನು, ಕೊರತೆ ಪಡುವುದಿಲ್ಲ; ಆದರೆ ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುವವನಿಗೆ ಅನೇಕ ಶಾಪಗಳು.
28ದುಷ್ಟರು ಎದ್ದರೆ ಜನರು ಅಡಗಿಕೊಳ್ಳುತ್ತಾರೆ, ಆದರೆ ಅವರು ನಾಶವಾದಾಗ ನೀತಿವಂತರು ವೃದ್ಧಿಯಾಗುತ್ತಾರೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.