Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಜ್ಞಾನೋಕ್ತಿಗಳು 26

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಬೇಸಿಗೆಯಲ್ಲಿ ಹಿಮದಂತೆಯೂ, ಸುಗ್ಗಿಯಲ್ಲಿ ಮಳೆಯಂತೆಯೂ ಬುದ್ಧಿಹೀನನಿಗೆ ಮಾನವು ಸರಿಯಲ್ಲ.
2ಅಲೆದಾಡುವ ಪಕ್ಷಿಯಂತೆಯೂ, ಹಾರಾಡುವ ಬಾನಕ್ಕಿಯಂತೆಯೂ ಕಾರಣವಿಲ್ಲದೆ ಕೊಡುವ ಶಾಪವು ತಗಲದು.
3ಕುದುರೆಗೆ ಬಾರುಗೋಲು, ಕತ್ತೆಗೆ ಕಡಿವಾಣವು, ಮೂಢನ ಬೆನ್ನಿಗೆ ಬೆತ್ತ.
4ಮೂಢನ ಮೂರ್ಖತನಕ್ಕೆ ತಕ್ಕಂತೆ ಉತ್ತರಿಸಬೇಡ; ಇಲ್ಲವಾದರೆ ನೀನೂ ಅವನಿಗೆ ಸಮಾನನಾದೀಯೆ.
5ಮೂಢನ ಮೂರ್ಖತನಕ್ಕೆ ತಕ್ಕಂತೆ ಉತ್ತರಕೊಡು; ಇಲ್ಲವಾದರೆ ತನ್ನನ್ನು ಜ್ಞಾನಿಯೆಂದು ಎಣಿಸಿಕೊಂಡಾನು.
6ಬುದ್ಧಿಹೀನನ ಮೂಲಕ ವರ್ತಮಾನ ಕಳುಹಿಸುವವನು ತನ್ನ ಪಾದಗಳನ್ನು ತಾನೇ ಕಡಿದುಕೊಂಡು ಇಲ್ಲವೆ ಕೇಡನ್ನು ಕುಡಿಯುತ್ತಾನೆ.
7ಕುಂಟನ ಕಾಲುಗಳು ಜೋಲಾಡುವ ಹಾಗೆಯೇ, ಬುದ್ಧಿಹೀನರ ಬಾಯಲ್ಲಿ ಜ್ಞಾನೋಕ್ತಿಯು ಇರುತ್ತದೆ.
8ಮೂಢನಿಗೆ ಕೊಡುವ ಮಾನವು ಕವಣಿಯಲ್ಲಿಟ್ಟ ಕಲ್ಲಿನ ಹಾಗೆ.
9ಕುಡುಕನ ಕೈಯಲ್ಲಿ ಮುಳ್ಳು ಕೋಲಿನಂತೆ ಬುದ್ಧಿಹೀನರ ಬಾಯಲ್ಲಿ ಜ್ಞಾನೋಕ್ತಿಯು ಇರುವುದು.
10ಮೂಢರನ್ನೂ ದಾರಿಹೋಕರನ್ನೂ ಕೂಲಿಗೆ ಕರೆಯುವವನು ಯಾರಿಗಾದರೂ ತಗಲಲಿ ಎಂದು ಬಾಣ ಎಸೆಯುವ ಬಿಲ್ಲುಗಾರನಂತೆ.
11ತಾನು ಕಕ್ಕಿದ್ದಕ್ಕೆ ನಾಯಿಯು ತಿರುಗುವಂತೆ ಮೂಢನು ತನ್ನ ಮೂಢತನಕ್ಕೆ ಹಿಂದಿರುಗುತ್ತಾನೆ.
12ತನ್ನ ಸ್ವಂತ ಅಭಿಪ್ರಾಯದಲ್ಲಿ ಜ್ಞಾನಿಯಾದವನನ್ನು ನೀನು ಕಾಣುತ್ತಿದ್ದೀಯೋ? ಅವನಿಗಿಂತ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯು ಇರುತ್ತದೆ.
13ಸೋಮಾರಿಯು, “ದಾರಿಯಲ್ಲಿ ಸಿಂಹವಿದೆ, ಬೀದಿಗಳಲ್ಲಿ ಭೀಕರ ಸಿಂಹ ಇದೆ,” ಎಂದು ಹೇಳುತ್ತಾನೆ.
14ಬಾಗಿಲು ತಿರುಗುಣಿಗಳ ಮೇಲೆ ಹೇಗೆ ತಿರುಗುತ್ತದೋ, ಹಾಗೆಯೇ ಸೋಮಾರಿಯು ತನ್ನ ಹಾಸಿಗೆಯ ಮೇಲೆ ಹೊರಳಾಡುತ್ತಾನೆ.
15ಸೋಮಾರಿಯು ತಟ್ಟೆಯಲ್ಲಿ ತನ್ನ ಕೈಯನ್ನು ಹಾಕಿ, ತಿರುಗಿ ಅದನ್ನು ತನ್ನ ಬಾಯಿಗೆ ತರಲಾರದಷ್ಟು ಆಯಾಸಪಡುತ್ತಾನೆ.
16ಜ್ಞಾನದಿಂದ ಉತ್ತರಿಸಬಲ್ಲ ಏಳು ಜನರಿಗಿಂತ, ತಾನೇ ಜ್ಞಾನಿ ಎಂದು ಸೋಮಾರಿಯು ಭಾವಿಸುತ್ತಾನೆ.
17ಒಬ್ಬನು ಹಾದುಹೋಗುತ್ತಾ ತನಗೆ ಸಂಬಂಧಿಸದೇ ಇರುವ ವ್ಯಾಜ್ಯದಲ್ಲಿ ತಲೆಹಾಕುವವನು ನಾಯಿಯ ಕಿವಿ ಹಿಡಿದವನಂತೆ ಇದ್ದಾನೆ.
18–19ತನ್ನ ನೆರೆಯವನನ್ನು ಮೋಸಗೊಳಿಸಿ, “ಇದು ತಮಾಷೆಗೋಸ್ಕರ ಮಾಡುತ್ತೇನೆ,” ಎಂದು ಹೇಳುವವನು, ಕೊಳ್ಳಿಗಳನ್ನೂ, ಬಾಣಗಳನ್ನೂ, ಸಾವನ್ನೂ ಬೀರುವ ಹುಚ್ಚನಂತೆಯೇ.
20ಕಟ್ಟಿಗೆ ಇಲ್ಲದಿರುವಲ್ಲಿ ಬೆಂಕಿಯು ಆರಿಹೋಗುತ್ತದೆ; ಹಾಗೆಯೇ ಚಾಡಿಕೋರನು ಇಲ್ಲದಿರುವಲ್ಲಿ ಜಗಳ ಶಮನವಾಗುವುದು.
21ಕೆಂಡಗಳಿಗೆ ಇದ್ದಲು, ಬೆಂಕಿಗೆ ಕಟ್ಟಿಗೆ; ಹಾಗೆಯೇ ಜಗಳವನ್ನು ಕೆರಳಿಸುವಂತೆ ಕಲಹ ಮಾಡುವವನು ಇರುವನು.
22ಚಾಡಿಕೋರನ ಮಾತುಗಳು ರುಚಿಕರ ಭಕ್ಷ್ಯದ ಹಾಗೆ ಹೊಟ್ಟೆಯ ಅಂತರ್ಭಾಗಗಳಿಗೆ ಇಳಿಯುತ್ತವೆ.
23ಕೆಟ್ಟ ಹೃದಯದಿಂದ ಸವಿನುಡಿಯುವ ತುಟಿಯು, ಬೆಳ್ಳಿಯ ಹೊದಿಕೆಯಿಂದ ಮುಚ್ಚಲ್ಪಟ್ಟ ಬೋಕಿಯಂತೆ ಇದೆ.
24ಶತ್ರುಗಳು ತಮ್ಮ ತುಟಿಗಳಿಂದ ವೇಷ ಧರಿಸುತ್ತಾರೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾರೆ.
25ಸವಿಮಾತನ್ನಾಡಿದರೆ ಅವನನ್ನು ನಂಬಬೇಡ; ಏಕೆಂದರೆ ಅವನ ಹೃದಯದಲ್ಲಿ ಏಳು ಅಸಹ್ಯ ಕಾರ್ಯಗಳಿವೆ.
26ಅವನ ಹಗೆತನವು ಮೋಸದಿಂದ ಮುಚ್ಚಲ್ಪಟ್ಟಿದ್ದರೂ, ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವುದು.
27ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುತ್ತಾನೆ; ಕಲ್ಲು ಹೊರಳಿಸುವವನ ಮೇಲೆಯೇ ಅದು ತಿರುಗಿ ಹೊರಳುವುದು.
28ಸುಳ್ಳು ನಾಲಿಗೆಯವನು ತಾನು ಬಾಧಿಸಿದವರನ್ನೇ ಹಗೆ ಮಾಡುವನು; ಮುಖಸ್ತುತಿ ಮಾಡುವ ಬಾಯಿಯು ನಾಶವನ್ನುಂಟುಮಾಡುತ್ತದೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.