Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಜ್ಞಾನೋಕ್ತಿಗಳು 17

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ವಿವಾದದೊಂದಿಗೆ ತುಂಬಿದ ಔತಣದ ಮನೆಗಿಂತ, ಶಾಂತಿ ಸಮಾಧಾನದ ಒಣ ತುತ್ತು ಮೇಲು.
2ನಾಚಿಕೆಪಡಿಸುವ ಮಗನ ಮೇಲೆ ಜಾಣನಾದ ಸೇವಕನು ಆಳುವವನಾಗಿ ಸಹೋದರರಲ್ಲಿ ಬಾಧ್ಯತೆಗೆ ಪಾಲುಗಾರನಾಗುವನು.
3ಸೋಸುವುದಕ್ಕೆ ಬೆಳ್ಳಿಗೆ ಕುಲುಮೆ ಪುಟ, ಬಂಗಾರಕ್ಕೆ ಆವಿಗೆ; ಆದರೆ ಯೆಹೋವ ದೇವರು ಹೃದಯಗಳನ್ನು ಪರಿಶೋಧಿಸುತ್ತಾರೆ.
4ಕೇಡು ಮಾಡುವವನು ಕೆಟ್ಟ ಮಾತುಗಳಿಗೆ ಕಿವಿಗೊಡುತ್ತಾನೆ; ಸುಳ್ಳುಗಾರನು ನೀಚವಾದ ನಾಲಿಗೆಗೆ ಕಿವಿಗೊಡುವನು.
5ಬಡವರನ್ನು ಹಾಸ್ಯಮಾಡುವವನು, ತನ್ನನ್ನು ಸೃಷ್ಟಿಸಿದ ಯೆಹೋವ ದೇವರನ್ನು ನಿಂದಿಸುತ್ತಾನೆ; ಬೇರೆಯವರ ವಿಪತ್ತುಗಳಿಗೆ ಸಂತೋಷಿಸುವವನು ಶಿಕ್ಷೆಯನ್ನು ಹೊಂದುವನು.
6ಮಕ್ಕಳ ಮಕ್ಕಳು ವೃದ್ಧರಿಗೆ ಕಿರೀಟ; ಮಕ್ಕಳ ಭೂಷಣವು ಅವರ ತಂದೆತಾಯಿಗಳೇ.
7ಉತ್ತಮವಾದ ಪದಗಳು ಮೂರ್ಖನಿಗೆ ಸೂಕ್ತವಲ್ಲ; ಆಳುವವನಿಗೆ ಸುಳ್ಳಾಡುವ ತುಟಿಗಳು ಇನ್ನೂ ಎಷ್ಟೋ ಆಯುಕ್ತವಲ್ಲವೇ.
8ಕೊಡುವವನ ಕಣ್ಣಿಗೆ ಲಂಚವು ಆಕರ್ಷಣೆಯಾಗಿದೆ; ಪ್ರತಿ ತಿರುವಿನಲ್ಲಿಯೂ ಯಶಸ್ಸು ಬರುತ್ತದೆ ಎಂದು ಅವರು ಭಾವಿಸುತ್ತಾರೆ.
9ದೋಷವನ್ನು ಕ್ಷಮಿಸುವವನು ಪ್ರೀತಿಯನ್ನು ಹುಡುಕುತ್ತಾನೆ; ಆದರೆ ದೋಷವನ್ನು ಎತ್ತಿ ಆಡುವವನು ಸ್ನೇಹಿತರಿಂದ ಪ್ರತ್ಯೇಕಗೊಳ್ಳುತ್ತಾನೆ.
10ಬುದ್ಧಿಹೀನನ ಬೆನ್ನಿಗೆ ನೂರು ಪೆಟ್ಟುಗಳಿಗಿಂತ ಜ್ಞಾನಿಗೆ ಒಂದು ಗದರಿಕೆಯ ಮಾತು ಹೆಚ್ಚಾಗಿ ನಾಟುತ್ತದೆ.
11ತಿರುಗಿ ಬೀಳುವವನು ಕೆಟ್ಟದ್ದಕ್ಕೇ ತವಕಪಡುತ್ತಾನೆ; ಆದಕಾರಣ ಮರಣ ದೂತರನ್ನು ಅವನ ವಿರುದ್ಧ ಕಳುಹಿಸಲಾಗುವದು.
12ತನ್ನ ಮೂಢತೆಯಲ್ಲಿರುವ ಬುದ್ಧಿಹೀನನನ್ನು ಸಂಧಿಸುವುದಕ್ಕಿಂತ ಮರಿಗಳನ್ನು ಕಳೆದುಕೊಂಡ ಕರಡಿಯನ್ನು ಸಂಧಿಸುವುದು ಮೇಲು.
13ಉಪಕಾರಕ್ಕೆ ಅಪಕಾರವನ್ನು ಮಾಡುವವನ ಮನೆಯಿಂದ ಕೇಡು ತೊಲಗುವುದೇ ಇಲ್ಲ.
14ಕಲಹದ ಪ್ರಾರಂಭವು ಆಣೆಕಟ್ಟು ಒಡೆದಂತೆ ಇರುವುದು; ಆದಕಾರಣ ಆ ಕಲಹಕ್ಕೆ ಕೈಹಾಕುವುದಕ್ಕಿಂತ ಮುಂಚೆ ಅದನ್ನು ಬಿಟ್ಟುಬಿಡು.
15ದುಷ್ಟರನ್ನು ನೀತಿವಂತರೆಂದು ನಿರ್ಣಯಿಸುವವನು, ನೀತಿವಂತರನ್ನು ಖಂಡಿಸುವವನೂ ಇವರಿಬ್ಬರೂ ಯೆಹೋವ ದೇವರಿಗೆ ಅಸಹ್ಯ.
16ಜ್ಞಾನವನ್ನು ಸಂಪಾದಿಸುವುದಕ್ಕೆ ಬುದ್ಧಿಹೀನನ ಕೈಯಲ್ಲಿ ಹಣ ಏಕೆ? ಅವನಿಗೆ ಕಲಿಯಲು ಮನಸ್ಸಿಲ್ಲವಲ್ಲ.
17ಸ್ನೇಹಿತನು ಎಲ್ಲಾ ಸಮಯದಲ್ಲಿ ಪ್ರೀತಿಸುತ್ತಾನೆ; ಆಪತ್ತಿನಲ್ಲಿ ಸಹಾಯಮಾಡುವಗೋಸ್ಕರ ಸಹೋದರನು ಹುಟ್ಟಿದ್ದಾನೆ.
18ಬುದ್ಧಿಹೀನನು ಕೈ ಕುಲುಕಿ ತನ್ನ ನೆರೆಯವನಿಗೆ ಜಾಮಿನನಾಗುತ್ತಾನೆ.
19ಕಲಹವನ್ನು ಪ್ರೀತಿಮಾಡುವವನು ಪಾಪವನ್ನು ಪ್ರೀತಿಮಾಡುತ್ತಾನೆ; ತನ್ನ ಗೋಡೆಯನ್ನು ಹೆಚ್ಚಿಸಿಕೊಳ್ಳುವವನು ನಾಶನವನ್ನು ಆಮಂತ್ರಿಸುತ್ತಾನೆ.
20ವಕ್ರಹೃದಯವುಳ್ಳವನು ಸಮೃದ್ಧಿಯನ್ನು ಹೊಂದುವುದಿಲ್ಲ; ಮೋಸದ ನಾಲಿಗೆಯುಳ್ಳವನು ಹಾನಿಗೆ ಬೀಳುವನು.
21ಬುದ್ಧಿಹೀನ ಹೆತ್ತವನಿಗೆ ವ್ಯಥೆ; ಬುದ್ಧಿಹೀನನ ತಂದೆಗೆ ಸಂತೋಷವಿರುವುದಿಲ್ಲ.
22ಹರ್ಷಹೃದಯವು ಒಳ್ಳೆಯ ಔಷಧ; ಆದರೆ ಕುಗ್ಗಿದ ಮನಸ್ಸು ಎಲುಬುಗಳನ್ನು ಒಣಗಿಸುತ್ತದೆ.
23ನ್ಯಾಯದ ಮಾರ್ಗಗಳನ್ನು ತಿರುಗಿಸಿಬಿಡುವುದಕ್ಕೆ ದುಷ್ಟನು ಗುಪ್ತವಾಗಿ ಲಂಚವನ್ನು ತೆಗೆದುಕೊಳ್ಳುತ್ತಾನೆ.
24ವಿವೇಕಿಯು ಜ್ಞಾನವನ್ನು ತನ್ನ ಮುಂದೆ ಇಟ್ಟುಕೊಳ್ಳುತ್ತಾನೆ. ಆದರೆ ಬುದ್ಧಿಹೀನ ಕಣ್ಣುಗಳು ಭೂಮಿಯ ಅಂತ್ಯಗಳಲ್ಲಿ ಅಲೆಯುವವು.
25ಬುದ್ಧಿಹೀನನಾದ ಮಗನು ತನ್ನ ತಂದೆಗೆ ದುಃಖವೂ, ತನ್ನನ್ನು ಹೆತ್ತವಳಿಗೆ ಕಹಿಯೂ ಆಗಿದ್ದಾನೆ.
26ನೀತಿವಂತನಿಗೆ ದಂಡ ವಿಧಿಸುವುದು ಒಳ್ಳೆಯದಲ್ಲದಿದ್ದರೆ, ಖಂಡಿತವಾಗಿಯೂ ಪ್ರಾಮಾಣಿಕ ಅಧಿಕಾರಿಗಳನ್ನು ಹೊಡೆಯುವುದು ಸರಿಯಲ್ಲ.
27ಪರಿಜ್ಞಾನ ಹೊಂದಿರುವವನು ಮಿತವಾಗಿ ಮಾತನಾಡುತ್ತಾನೆ; ತಿಳುವಳಿಕೆಯನ್ನು ಹೊಂದಿರುವವನು ಶ್ರೇಷ್ಠವಾದ ಆತ್ಮವುಳ್ಳವನಾಗಿದ್ದಾನೆ.
28ಬುದ್ಧಿಹೀನನು ಮೌನವಾಗಿದ್ದರೆ ಜ್ಞಾನಿಯೆನಿಸಿಕೊಳ್ಳುವನು; ತನ್ನ ತುಟಿಗಳನ್ನು ಬಿಗಿ ಹಿಡಿಯುವವನು ವಿವೇಕಿ ಎನಿಸಿಕೊಳ್ಳುವನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.