Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಜ್ಞಾನೋಕ್ತಿಗಳು 13

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಜ್ಞಾನಿಯಾದ ಮಗನು ತನ್ನ ತಂದೆಯ ಉಪದೇಶವನ್ನು ಸ್ವೀಕರಿಸುತ್ತಾನೆ; ಆದರೆ ಅಪಹಾಸ್ಯ ಮಾಡುವವನು ಗದರಿಕೆಯನ್ನು ಕೇಳುವುದಿಲ್ಲ.
2ತನ್ನ ಬಾಯಿಯ ಫಲದಿಂದ ಒಬ್ಬ ಮನುಷ್ಯನು ಶ್ರೇಷ್ಠವಾದದ್ದನ್ನು ಆನಂದಿಸುತ್ತಾನೆ, ಆದರೆ ವಿಶ್ವಾಸದ್ರೋಹಿಗಳಿಗೆ ಹಿಂಸೆಯ ಹಸಿವು ಇರುತ್ತದೆ.
3ತನ್ನ ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ; ತನ್ನ ತುಟಿಗಳನ್ನು ಹತೋಟಿಯಲ್ಲಿಡದವನು ನಾಶವಾಗುವನು.
4ಸೋಮಾರಿಯ ಹಸಿವು ಎಂದಿಗೂ ತುಂಬುವುದಿಲ್ಲ; ಆದರೆ ಶ್ರಮಪಡುವವರ ಆಸೆಗಳು ಸಂಪೂರ್ಣವಾಗಿ ಈಡೇರುವವು.
5ನೀತಿವಂತನು ಸುಳ್ಳನ್ನು ಹಗೆಮಾಡುತ್ತಾನೆ, ಆದರೆ ದುಷ್ಟರು ತಮ್ಮನ್ನು ತಾವೇ ದುರ್ವಾಸನೆಗೊಳಪಡಿಸಿಕೊಳ್ಳುತ್ತಾರೆ ಮತ್ತು ತಮ್ಮ ಮೇಲೆ ಅವಮಾನವನ್ನು ತಂದುಕೊಳ್ಳುತ್ತಾರೆ.
6ನೀತಿಯು ಯಥಾರ್ಥವಂತನನ್ನು ಕಾಪಾಡುತ್ತದೆ; ಆದರೆ ದುಷ್ಟತನವು ಪಾಪಿಯನ್ನು ಕೆಡವುತ್ತದೆ.
7ಬಡವನಾಗಿದ್ದರೂ ಐಶ್ವರ್ಯವಂತನಾಗಿ ನಟಿಸುವವನು ಇದ್ದಾನೆ; ಮತ್ತೊಬ್ಬನು ದರಿದ್ರನಾಗಿ ಕಾಣಿಸಿದರೂ ಬಹು ಸಿರಿವಂತನೇ.
8ಐಶ್ವರ್ಯವಂತನ ಪ್ರಾಣದ ವಿಮೋಚನೆಯು ಅವನ ಐಶ್ವರ್ಯದಿಂದಲೇ; ಆದರೆ ಬಡವನು ಬೆದರಿಕೆಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ.
9ನೀತಿವಂತರ ಬೆಳಕು ಪ್ರಕಾಶಮಾನವಾಗಿ ಹೊಳೆಯುತ್ತದೆ; ದುಷ್ಟರ ದೀಪವು ಆರಿಹೋಗುವುದು.
10ಎಲ್ಲಿ ಗರ್ವವೋ ಅಲ್ಲಿ ಕಲಹ; ಆದರೆ ಒಳ್ಳೆಯ ಸಲಹೆಯನ್ನು ತೆಗೆದುಕೊಳ್ಳುವವರಲ್ಲಿ ಜ್ಞಾನವು ಕಂಡುಬರುತ್ತದೆ.
11ಅಪ್ರಾಮಾಣಿಕವಾಗಿ ಹೊಂದಿದ ಸಂಪತ್ತು ಕ್ಷಯಿಸುವುದು; ಪ್ರಯಾಸದಿಂದ ಕೂಡಿಸಿದ ಸಂಪತ್ತು ವೃದ್ಧಿಗೊಳ್ಳುವುದು.
12ನಿರೀಕ್ಷೆ ತಡವಾದರೆ ಹೃದಯವು ಅಸ್ವಸ್ಥಗೊಳ್ಳುತ್ತದೆ; ಆಶೆಯು ಈಡೇರಿದರೆ, ಅದು ಜೀವಕರವಾದ ವೃಕ್ಷವು.
13ದೇವರ ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು; ಆಜ್ಞೆಗೆ ಭಯಪಡುವವನು ಪ್ರತಿಫಲ ಹೊಂದುವನು.
14ಮರಣದ ಪಾಶಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಜ್ಞಾನವಂತರ ಉಪದೇಶವು ಜೀವದ ಬುಗ್ಗೆಯಾಗಿದೆ.
15ಒಳ್ಳೆಯ ಪ್ರಜ್ಞೆ ಇರುವ ವ್ಯಕ್ತಿಯನ್ನು ಗೌರವಿಸಲಾಗುತ್ತದೆ; ಆದರೆ ವಿಶ್ವಾಸದ್ರೋಹಿಯ ಮಾರ್ಗವು ನಾಶಕರವಾಗಿದೆ.
16ಪ್ರತಿ ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ; ಆದರೆ ಮೂರ್ಖನು ತನ್ನ ಮೂರ್ಖತ್ವವನ್ನು ಹೊರಗೆಡವುತ್ತಾನೆ.
17ದುಷ್ಟ ದೂತನು ಕೇಡಿಗೆ ಬೀಳುತ್ತಾನೆ; ಆದರೆ ನಂಬಿಗಸ್ತನಾದ ರಾಯಭಾರಿಯು ಆರೋಗ್ಯದಾಯಕನು.
18ಬೋಧನೆಯನ್ನು ಕಡೆಗಣಿಸುವವನಿಗೆ ಬಡತನವೂ, ಅವಮಾನವೂ ಬರುವುವು; ಗದರಿಕೆಯನ್ನು ಗಮನಿಸುವವನು ಸನ್ಮಾನ ಹೊಂದುವನು.
19ಕನಸುಗಳು ನನಸಾಗುವುದನ್ನು ನೋಡುವುದು ಆಹ್ಲಾದಕರವಾಗಿರುತ್ತದೆ; ಕೆಟ್ಟತನದಿಂದ ತಿರುಗುವುದು ಮೂರ್ಖರಿಗೆ ಅಸಹ್ಯವಾಗಿದೆ.
20ಜ್ಞಾನವಂತರ ಜೊತೆಗೆ ನಡೆಯುವವನು ಜ್ಞಾನಿಯಾಗುವನು; ಆದರೆ ಮೂರ್ಖರ ಜೊತೆಗಾರನು ಸಂಕಟಪಡುವನು.
21ವಿಪತ್ತು ಪಾಪಿಗಳನ್ನು ಹಿಂಬಾಲಿಸುತ್ತದೆ; ಆದರೆ ನೀತಿವಂತರಿಗೆ ಒಳ್ಳೆಯದು ಪ್ರತಿಫಲವಾಗುವುದು.
22ಒಳ್ಳೆಯವನು ಮೊಮ್ಮಕ್ಕಳಿಗೆ ಆಸ್ತಿಯನ್ನು ಬಿಟ್ಟುಬಿಡುವನು; ಆದರೆ ಪಾಪಿಯ ಸಂಪತ್ತು ನೀತಿವಂತರಿಗಾಗಿ ಸಂಗ್ರಹವಾಗಿದೆ.
23ಬಡವರಿಗೆ ಜವುಳು ಭೂಮಿಯಲ್ಲಿಯೂ ಬಹು ಬೆಳೆಯು ಸಿಕ್ಕುತ್ತದೆ; ಅನ್ಯಾಯವು ಅದನ್ನು ಹಾರಿಸಿಬಿಡುವುದು.
24ಬೆತ್ತವನ್ನು ಹಿಡಿಯದವನು ತನ್ನ ಮಗನನ್ನು ಹಗೆಮಾಡುತ್ತಾನೆ; ಆದರೆ ತಮ್ಮ ಮಕ್ಕಳನ್ನು ಪ್ರೀತಿಸುವವನು ಅವರನ್ನು ಶಿಸ್ತು ಮಾಡಲು ಜಾಗರೂಕರಾಗಿರುತ್ತಾನೆ.
25ನೀತಿವಂತನು ತನ್ನ ಪ್ರಾಣವು ತೃಪ್ತಿಯಾಗುವವರೆಗೆ ತಿನ್ನುತ್ತಾನೆ; ದುಷ್ಟರ ಹೊಟ್ಟೆಗೆ ಕೊರತೆಯಾಗುವುದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.