Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಫಿಲಿಪ್ಪಿಯವರಿಗೆ 2

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನೀವು ಕ್ರಿಸ್ತನೊಂದಿಗೆ ಐಕ್ಯವಾಗಿರುವುದರಿಂದ ಉತ್ತೇಜನ, ಅವರ ಪ್ರೀತಿಯಿಂದ ಸಂತೈಸುವಿಕೆ, ಆತ್ಮನಲ್ಲಿ ಅನ್ಯೋನ್ಯತೆ, ಕನಿಕರದ ವಾತ್ಸಲ್ಯಗಳು ಇರುವುದಾದರೆ,
2ನೀವು ಒಂದೇ ಮನಸ್ಸು, ಒಂದೇ ಪ್ರೀತಿ, ಆತ್ಮ, ಹಾಗೂ ಒಂದೇ ಗುರಿಯುಳ್ಳವರಾಗಿ, ನನ್ನ ಸಂತೋಷವನ್ನು ಪರಿಪೂರ್ಣಗೊಳಿಸಿರಿ.
3ಸ್ವಾರ್ಥ ಉದ್ದೇಶದಿಂದಾಗಲಿ, ವ್ಯರ್ಥ ಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ ಪ್ರತಿಯೊಬ್ಬನೂ ದೀನತ್ವದಿಂದ ಮತ್ತೊಬ್ಬನನ್ನು ತನಗಿಂತಲೂ ಶ್ರೇಷ್ಠನೆಂದು ಎಣಿಸಲಿ.
4ಪ್ರತಿಯೊಬ್ಬನೂ ಸ್ವಹಿತವನ್ನು ನೋಡದೆ ಪರಹಿತವನ್ನು ಸಹ ನೋಡಲಿ.
5ಕ್ರಿಸ್ತ ಯೇಸುವಿನಲ್ಲಿದ್ದ ಮನಸ್ಸೇ ನಿಮ್ಮಲ್ಲಿಯೂ ಇರಲಿ:
6ಅವರು ದೇವರ ಸ್ವರೂಪವಾಗಿದ್ದರೂ, ದೇವರಿಗೆ ಸಮಾನರಾಗಿರುವುದನ್ನು ಬಿಡಲೊಲ್ಲೆನೆಂದು ಎಣಿಸದೆ,
7ತಮ್ಮನ್ನು ತಾವೇ ಬರಿದುಮಾಡಿಕೊಂಡು ಗುಲಾಮನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸಮನಾದರು.
8ಹೀಗೆ ಅವರು ಆಕಾರದಲ್ಲಿ ಮನುಷ್ಯರಾಗಿ ಕಾಣಿಸಿಕೊಂಡಾಗ ತಮ್ಮನ್ನು ತಾವೇ ತಗ್ಗಿಸಿಕೊಂಡು ಮರಣವನ್ನು ಎಂದರೆ ಶಿಲುಬೆಯ ಮರಣವನ್ನೂ ಹೊಂದುವಷ್ಟು ವಿಧೇಯರಾದರು.
9ಈ ಕಾರಣದಿಂದಲೇ ದೇವರು ಅವರನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಅವರಿಗೆ ದಯಪಾಲಿಸಿದ್ದಾರೆ.
10ಆದ್ದರಿಂದ ಪರಲೋಕ, ಭೂಲೋಕ, ಭೂಮಿಯ ಕೆಳಗಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಮೊಣಕಾಲೂರಿ,
11ತಂದೆಯಾದ ದೇವರ ಮಹಿಮೆಗಾಗಿ ಯೇಸು ಕ್ರಿಸ್ತನು ಕರ್ತದೇವರು ಎಂಬುದಾಗಿ ಪ್ರತಿಯೊಂದು ನಾಲಿಗೆಯೂ ಅರಿಕೆ ಮಾಡುವುದು. ಗೊಣಗುಟ್ಟದೆ ಎಲ್ಲವನ್ನೂ ಮಾಡಿರಿ
12ಹೀಗಿರುವಲ್ಲಿ ನನ್ನ ಪ್ರಿಯ ಸ್ನೇಹಿತರೇ, ನಿಮ್ಮಲ್ಲಿರುವಾಗ ಮಾತ್ರವಲ್ಲದೆ ನಾನಿಲ್ಲದಿರುವಾಗಲೂ ನೀವು ಯಾವಾಗಲೂ ನನಗೆ ವಿಧೇಯರಾದಂತೆ ಈಗಲೂ ವಿಧೇಯರಾಗಿ, ಬಹು ಹೆಚ್ಚಾಗಿ ಭಯದಿಂದ ನಡುಗುತ್ತಾ ನಿಮ್ಮ ರಕ್ಷಣೆಯನ್ನು ಕಾರ್ಯರೂಪಕ್ಕೆ ತನ್ನಿರಿ.
13ಏಕೆಂದರೆ, ತಮ್ಮ ಸದುದ್ದೇಶವನ್ನು ನೆರವೇರಿಸುವಂತೆ ನಿಮ್ಮಲ್ಲಿ ಬಯಕೆಯನ್ನೂ ಕಾರ್ಯಸಾಧನೆಯನ್ನೂ ನಿರ್ಮಿಸುವವರು ದೇವರೇ.
14ಗೊಣಗುಟ್ಟದೆಯೂ ವಿವಾದವಿಲ್ಲದೆಯೂ ಎಲ್ಲವನ್ನೂ ಮಾಡಿರಿ.
15ಹೀಗೆ ನೀವು ನಿಂದಾರಹಿತರೂ ದೋಷವಿಲ್ಲದವರೂ, “ನಿಷ್ಕಳಂಕರಾದ ದೇವರ ಮಕ್ಕಳಾಗಿ, ವಕ್ರವಾದ ದುಷ್ಟ ಜನಾಂಗದ ಮಧ್ಯದಲ್ಲಿ,” ಜೀವವಾಕ್ಯವನ್ನು ಹಿಡಿದುಕೊಂಡು, ಲೋಕದಲ್ಲಿ ನಕ್ಷತ್ರಗಳಂತೆ ಹೊಳೆಯುವವರಾಗಿರುವಿರಿ.
16ನೀವು ಜೀವವಾಕ್ಯವನ್ನು ಹಿಡಿದವರಾಗಿದ್ದರೆ, ಹೀಗೆ ನಾನು ಓಡಿದ ಓಟವೂ ಪ್ರಯಾಸವೂ ವ್ಯರ್ಥವಾಗಲಿಲ್ಲವೆಂದು ತಿಳಿದು ಕ್ರಿಸ್ತನ ಪುನರಾಗಮನ ದಿನದಲ್ಲಿ ಅಭಿಮಾನ ಪಡುವೆನು.
17ನಿಮ್ಮ ವಿಶ್ವಾಸದಿಂದ ಬರುವ ಯಜ್ಞದ ಮೇಲೆಯೂ ಸೇವೆಯ ಮೇಲೆಯೂ ನಾನು ಪಾನಸಮರ್ಪಣೆಯಾದರೂ ಸಹ ಹರ್ಷದಿಂದ ನಿಮ್ಮೆಲ್ಲರೊಡನೆ ಆನಂದಿಸುವೆನು.
18ಇದಕ್ಕಾಗಿಯೇ ನೀವೂ ಹರ್ಷಿಸಿರಿ. ನನ್ನೊಡನೆ ಆನಂದಿಸಿರಿ. ತಿಮೊಥೆಯನೂ ಎಪಫ್ರೊದೀತನೂ
19ನಾನು ತಿಮೊಥೆಯನನ್ನು ಬೇಗನೆ ನಿಮ್ಮ ಬಳಿಗೆ ಕಳುಹಿಸುವುದಕ್ಕೆ ಕರ್ತ ಯೇಸುವಿನಲ್ಲಿ ನಿರೀಕ್ಷಿಸುತ್ತೇನೆ. ಹೀಗೆ ಅವನ ಮುಖಾಂತರ ನಿಮ್ಮ ವಿಷಯವನ್ನು ತಿಳಿದು ನಾನು ಸಹ ಉತ್ತೇಜನಗೊಳ್ಳುವೆನು.
20ಅವನ ಹಾಗೆ ನಿಮ್ಮ ಯೋಗಕ್ಷೇಮವನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು, ನನ್ನ ಬಳಿ ಬೇರೆ ಯಾರೂ ಇಲ್ಲ.
21ಎಲ್ಲರೂ ಸ್ವಕಾರ್ಯಗಳನ್ನೇ ಹುಡುಕುತ್ತಾರೆಯೇ ಹೊರತು ಕ್ರಿಸ್ತ ಯೇಸುವಿನ ಕಾರ್ಯಗಳನ್ನು ಹುಡುಕುವುದಿಲ್ಲ.
22ಆದರೆ ತಿಮೊಥೆಯನ ಗುಣಸ್ವಭಾವವನ್ನು ನೀವು ಬಲ್ಲಿರಿ. ಮಗನು ತಂದೆಗೆ ಹೇಗೋ ಹಾಗೆಯೇ ಅವನು ಸುವಾರ್ತೆಯಲ್ಲಿ ನನ್ನೊಂದಿಗೆ ಶ್ರಮಿಸಿದ್ದಾನೆ.
23ಆದ್ದರಿಂದ ನನಗೆ ಏನು ಸಂಭವಿಸುವುದು ಎಂದು ತಿಳಿದ ಕೂಡಲೇ ಅವನನ್ನು ಕಳುಹಿಸುವ ನಿರೀಕ್ಷೆಯಿದೆ.
24ಇದಲ್ಲದೆ ನಾನು ಸಹ ಬೇಗನೆ ಬರುವೆನೆಂದು ಕರ್ತ ದೇವರಲ್ಲಿ ಭರವಸೆಯುಳ್ಳವನಾಗಿದ್ದೇನೆ.
25ಆದರೂ ನನ್ನ ಸಹೋದರನೂ ಜೊತೆ ಕೆಲಸದವನೂ ಸಹಸೈನಿಕನೂ ಆಗಿರುವ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವುದು ಅವಶ್ಯವೆಂದು ನಾನು ನೆನೆಸಿದ್ದೇನೆ. ಅವನು ನನ್ನ ಕೊರತೆಯಲ್ಲಿ ಸೇವೆ ಮಾಡುವಂತೆ ನೀವು ಕಳುಹಿಸಿದ ನಿಮ್ಮ ಸಂದೇಶಕನೂ ಆಗಿದ್ದಾನೆ.
26ಏಕೆಂದರೆ ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದಾನೆ. ತಾನು ಅಸ್ವಸ್ಥನಾದ ಸುದ್ದಿಯು ನಿಮಗೆ ಮುಟ್ಟಿತೆಂದು ತಿಳಿದು ತುಂಬಾ ವ್ಯಸನಪಡುತ್ತಿದ್ದಾನೆ.
27ಅವನು ಅಸ್ವಸ್ಥನಾಗಿ ಸಾಯುವ ಹಾಗೆ ಇದ್ದದ್ದು ನಿಜವೇ. ಆದರೆ ದೇವರು ಅವನನ್ನು ಕರುಣಿಸಿದರು. ಅವನನ್ನು ಮಾತ್ರವಲ್ಲದೆ ನನಗೆ ದುಃಖದ ಮೇಲೆ ದುಃಖ ಬಾರದಂತೆ ನನ್ನನ್ನು ಕರುಣಿಸಿದರು.
28ಆದ್ದರಿಂದ ನೀವು ಅವನನ್ನು ನೋಡಿ ಪುನಃ ಆನಂದಿಸುವಂತೆಯೂ ನನಗೆ ದುಃಖ ಕಡಿಮೆಯಾಗುವಂತೆಯೂ ನಾನು ಅವನನ್ನು ಅತ್ಯಾಸಕ್ತಿಯಿಂದ ಕಳುಹಿಸಿದ್ದೇನೆ.
29ನೀವು ಅವನನ್ನು ಪೂರ್ಣ ಆನಂದದಿಂದ ಕರ್ತನಲ್ಲಿ ಸೇರಿಸಿಕೊಳ್ಳಿರಿ ಮತ್ತು ಅಂಥವರನ್ನು ಸನ್ಮಾನಿಸಿರಿ.
30ಅವನು ಕ್ರಿಸ್ತನ ಸೇವೆಯ ನಿಮಿತ್ತ ಸಾಯುವ ಹಾಗಿದ್ದನು. ನೀವು ನನಗೆ ಮಾಡಲು ಸಾಧ್ಯವಾಗದೆ ಹೋದ ಸಹಾಯವನ್ನು ತಾನೇ ಪೂರ್ತಿ ಮಾಡುವುದಕ್ಕಾಗಿ, ಅವನು ತನ್ನ ಪ್ರಾಣವನ್ನೇ ಅಪಾಯಕ್ಕೆ ಗುರಿಪಡಿಸಿಕೊಂಡನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.