Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಅರಣ್ಯಕಾಂಡ 8

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರು ಮೋಶೆಗೆ:
2“ಆರೋನನ ಸಂಗಡ ಮಾತನಾಡಿ ಅವನಿಗೆ ಹೀಗೆ ಹೇಳಬೇಕು, ‘ನೀನು ದೀಪಗಳನ್ನು ಹಚ್ಚುವಾಗ ಆ ಏಳು ದೀಪಗಳೂ ದೀಪಸ್ತಂಭದ ಎದುರಿಗಿರುವ ಸ್ಥಳಕ್ಕೆ ಪ್ರಕಾಶಕೊಡುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.”
3ಆರೋನನು ಹಾಗೆಯೇ ಮಾಡಿ, ದೀಪಸ್ತಂಭದ ಎದುರಿನ ಪ್ರದೇಶಕ್ಕೆ ಬೆಳಕುಕೊಡುವಂತೆ ಅದರ ದೀಪಗಳನ್ನು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರವೇ ಹಚ್ಚಿದನು.
4ದೀಪಸ್ತಂಭವೂ ಅದರ ಬುಡಭಾಗವೂ, ಪುಷ್ಪಾಲಂಕಾರಗಳೂ ಬಂಗಾರದ ನಕಾಸಿ ಕೆಲಸದಿಂದ ಹೊಡೆದು ಮಾಡಲಾಗಿತ್ತು. ಯೆಹೋವ ದೇವರು ಮೋಶೆಗೆ ತೋರಿಸಿದ ಮಾದರಿಯ ಪ್ರಕಾರವೇ ಅವನು ಅದನ್ನು ಮಾಡಿದನು. ಲೇವಿಯರ ಶುದ್ಧೀಕರಣ
5ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
6“ಲೇವಿಯರನ್ನು ಇಸ್ರಾಯೇಲರೊಳಗಿಂದ ತೆಗೆದುಕೊಂಡು ಅವರನ್ನು ಪ್ರತ್ಯೇಕಿಸಿ ಶುದ್ಧಮಾಡು.
7ಅವರನ್ನು ಶುದ್ಧಮಾಡುವುದಕ್ಕೆ ಅವರಿಗೆ ಮಾಡಬೇಕಾದದ್ದೇನೆಂದರೆ ಶುದ್ಧೀಮಾಡುವ ನೀರನ್ನು ಅವರ ಮೇಲೆ ಚಿಮುಕಿಸು. ಅವರು ಸರ್ವಾಂಗ ಕ್ಷೌರ ಮಾಡಿಸಿಕೊಳ್ಳಲಿ. ಅವರು ತಮ್ಮ ವಸ್ತ್ರಗಳನ್ನು ಒಗೆದುಕೊಳ್ಳಲಿ. ಹೀಗೆ ಅವರು ತಮ್ಮನ್ನು ತಾವೇ ಶುದ್ಧ ಮಾಡಿಕೊಳ್ಳಬೇಕು.
8ಅವರು ದಹನಬಲಿಗಾಗಿ ಒಂದು ಎಳೆಯ ಹೋರಿಯನ್ನು, ಅದರೊಂದಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಬೆರೆಸಿದ ನಯವಾದ ಹಿಟ್ಟನ್ನು ತೆಗೆದುಕೊಳ್ಳಬೇಕು. ದೋಷಪರಿಹಾರಕ ಬಲಿಗಾಗಿ ಮತ್ತೊಂದು ಹೋರಿಯನ್ನೂ ನೀನು ತೆಗೆದುಕೋ.
9ಆಗ ನೀನು ಲೇವಿಯರನ್ನು ದೇವದರ್ಶನದ ಗುಡಾರದ ಮುಂದೆ ಕರೆತಂದು, ಇಸ್ರಾಯೇಲರ ಸಮೂಹವನ್ನೆಲ್ಲಾ ಒಟ್ಟುಗೂಡಿಸಬೇಕು.
10ನೀನು ಲೇವಿಯರನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಕರೆತಂದಾಗ, ಇಸ್ರಾಯೇಲರು ತಮ್ಮ ಕೈಗಳನ್ನು ಲೇವಿಯರ ಮೇಲೆ ಇಡಬೇಕು.
11ಲೇವಿಯರು ಇಸ್ರಾಯೇಲರ ಪರವಾಗಿ ಯೆಹೋವ ದೇವರ ಸೇವೆಯನ್ನು ಮಾಡುವುದಕ್ಕೆ ಸಿದ್ಧರಾಗುವಂತೆ ಆರೋನನು ಅವರನ್ನು ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯದಂತೆ ಸಮರ್ಪಿಸಬೇಕು.
12“ಲೇವಿಯರು ತಮ್ಮ ಕೈಗಳನ್ನು ಆ ಹೋರಿಗಳ ತಲೆಗಳ ಮೇಲೆ ಇಡಬೇಕು. ಆಗ ನೀನು ಲೇವಿಯರಿಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಯೆಹೋವ ದೇವರಿಗೆ ಒಂದು ಹೋರಿಯನ್ನು ದೋಷಪರಿಹಾರಕ ಬಲಿಗಾಗಿಯೂ ಮತ್ತೊಂದು ಹೋರಿಯನ್ನು ದಹನಬಲಿಗಾಗಿಯೂ ಸಮರ್ಪಿಸಬೇಕು.
13ತರುವಾಯ ನೀನು ಲೇವಿಯರನ್ನು ಆರೋನನ ಮುಂದೆಯೂ ಅವನ ಪುತ್ರರ ಮುಂದೆಯೂ ನಿಲ್ಲಿಸಿ, ಅವರನ್ನು ಯೆಹೋವ ದೇವರಿಗೆ ನೈವೇದ್ಯದಂತೆ ಸಮರ್ಪಿಸಬೇಕು.
14ಹೀಗೆ ನೀನು ಲೇವಿಯರನ್ನು ಇಸ್ರಾಯೇಲರೊಳಗಿಂದ ಪ್ರತ್ಯೇಕಿಸಬೇಕು, ಆಗ ಲೇವಿಯರು ನನ್ನವರಾಗುವರು.
15“ಅದರ ತರುವಾಯ ಲೇವಿಯರು ಸೇವೆ ಮಾಡವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸುವರು. ಆಗ ನೀನು ಅವರನ್ನು ಶುದ್ಧೀಮಾಡಿ, ನೈವೇದ್ಯದಂತೆ ಸಮರ್ಪಿಸಬೇಕು.
16ಏಕೆಂದರೆ ಅವರು ಇಸ್ರಾಯೇಲರಲ್ಲಿ ನನಗೆ ಸಂಪೂರ್ಣವಾಗಿ ಸಮರ್ಪಿತರಾದವರು. ಚೊಚ್ಚಲು ಮಕ್ಕಳಿಗೆ ಬದಲಾಗಿ, ಅಂದರೆ ಇಸ್ರಾಯೇಲರ ಜೇಷ್ಠಪುತ್ರರಿಗೆ ಬದಲಾಗಿ ನಾನು ಅವರನ್ನೇ ನನಗೋಸ್ಕರ ತೆಗೆದುಕೊಂಡಿದ್ದೇನೆ.
17ಏಕೆಂದರೆ ಇಸ್ರಾಯೇಲರಲ್ಲಿ ಮನುಷ್ಯರಾದರೂ ಪಶುಗಳಾದರೂ ಜೇಷ್ಠರಾದದ್ದೆಲ್ಲಾ ನನ್ನದೇ. ನಾನು ಈಜಿಪ್ಟ್ ದೇಶದಲ್ಲಿ ಚೊಚ್ಚಲಾದದ್ದನ್ನೆಲ್ಲಾ ನಾನು ಸಂಹರಿಸಿದಾಗ ಇಸ್ರಾಯೇಲರಲ್ಲಿ ಚೊಚ್ಚಲಾದದ್ದನ್ನು ನನ್ನ ಸ್ವಂತಕ್ಕಾಗಿ ಪ್ರತ್ಯೇಕಿಸಿಕೊಂಡೆನು.
18ಇಸ್ರಾಯೇಲರಲ್ಲಿರುವ ಎಲ್ಲಾ ಜೇಷ್ಠಪುತ್ರರಿಗೆ ಬದಲಾಗಿ ಲೇವಿಯರನ್ನು ನಾನು ತೆಗೆದುಕೊಂಡೆನು.
19ಅವರು ದೇವದರ್ಶನದ ಗುಡಾರದಲ್ಲಿ ಇಸ್ರಾಯೇಲರ ಸೇವೆಯನ್ನು ಮಾಡುವುದಕ್ಕೂ ಇಸ್ರಾಯೇಲರಿಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕೂ ಪರಿಶುದ್ಧ ಸ್ಥಳಕ್ಕೆ ಇಸ್ರಾಯೇಲರು ಸಮೀಪಿಸುವಾಗ ಇಸ್ರಾಯೇಲರೊಳಗೆ ವ್ಯಾಧಿಯು ಇರದಂತೆ ನಾನು ಲೇವಿಯರನ್ನು ಇಸ್ರಾಯೇಲರೊಳಗಿಂದ ಆರೋನನಿಗೂ, ಅವನ ಪುತ್ರರಿಗೂ ದಾನವಾಗಿ ಕೊಟ್ಟಿದ್ದೇನೆ.”
20ಆಗ ಯೆಹೋವ ದೇವರು ಮೋಶೆಗೆ ಲೇವಿಯರ ವಿಷಯದಲ್ಲಿ ಆಜ್ಞಾಪಿಸಿದಂತೆಯೇ ಮೋಶೆಯೂ ಆರೋನನೂ ಮತ್ತು ಇಸ್ರಾಯೇಲರ ಸಮೂಹದವರೆಲ್ಲರೂ ಮಾಡಿದರು.
21ಲೇವಿಯರು ತಮ್ಮನ್ನು ಶುದ್ಧಿಮಾಡಿಕೊಂಡು, ತಮ್ಮ ವಸ್ತ್ರಗಳನ್ನು ತೊಳೆದುಕೊಂಡರು. ಆರೋನನು ಅವರನ್ನು ಯೆಹೋವ ದೇವರ ಮುಂದೆ ನೈವೇದ್ಯದಂತೆ ಅರ್ಪಿಸಿದನು. ಅವರು ಶುದ್ಧರಾಗುವ ಹಾಗೆ ಆರೋನನು ಅವರಿಗೋಸ್ಕರ ಪ್ರಾಯಶ್ಚಿತ್ತ ಮಾಡಿದನು.
22ತರುವಾಯ ಲೇವಿಯರು ದೇವದರ್ಶನದ ಗುಡಾರದಲ್ಲಿ ಆರೋನನ ಮುಂದೆಯೂ, ಅವನ ಪುತ್ರರ ಮುಂದೆಯೂ ಅವರ ಸೇವೆ ಮಾಡುವುದಕ್ಕೆ ಒಳಗೆ ಪ್ರವೇಶಿಸಿದರು. ಯೆಹೋವ ದೇವರು ಮೋಶೆಗೆ ಲೇವಿಯರ ವಿಷಯವಾಗಿ ಹೇಗೆ ಆಜ್ಞಾಪಿಸಿದರೋ, ಹಾಗೆಯೇ ಮಾಡಿದನು.
23ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
24“ಲೇವಿಯರಿಗೆ ಸಂಬಂಧಪಟ್ಟದ್ದು ಇದಾಗಿದೆ: ಇಪ್ಪತ್ತೈದು ವರ್ಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ದೇವದರ್ಶನದ ಗುಡಾರದ ಸೇವೆಗಾಗಿ ಒಳಗೆ ಸೇರಬೇಕು.
25ಆದರೆ ಐವತ್ತು ವರ್ಷದವರಾದ ನಂತರ ಸೇವೆಯನ್ನು ಬಿಟ್ಟು ನಿವೃತ್ತರಾಗಬೇಕು ಮತ್ತು ತದನಂತರ ಕೆಲಸಮಾಡಬಾರದು.
26ಆದರೆ ಅವರು ದೇವದರ್ಶನದ ಗುಡಾರದಲ್ಲಿ ಅಪ್ಪಣೆಯನ್ನು ಕೈಗೊಂಡು ತಮ್ಮ ಸಹೋದರರೊಂದಿಗೆ ಕೆಲಸಮಾಡಲಿ, ಆದರೆ ಅವರು ಸೇವೆಯನ್ನು ತಾವಾಗಿ ಮಾಡಬಾರದು. ಈ ಪ್ರಕಾರ ನೀನು ಲೇವಿಯರಿಗೆ ಕರ್ತವ್ಯಗಳನ್ನು ಆಜ್ಞಾಪಿಸಬೇಕು,” ಎಂಬುದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.