Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಅರಣ್ಯಕಾಂಡ 31

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
2“ನೀನು ಇಸ್ರಾಯೇಲರಿಂದ ಮಿದ್ಯಾನ್ಯರಿಗೆ ಮುಯ್ಯನ್ನು ತೀರಿಸಬೇಕು. ತರುವಾಯ ನೀನು ನಿನ್ನ ಪೂರ್ವಜರ ಬಳಿಗೆ ಸೇರಬೇಕು,” ಎಂದರು.
3ಆಗ ಮೋಶೆಯು ಜನರ ಸಂಗಡ ಮಾತನಾಡಿ, “ನಿಮ್ಮೊಳಗಿಂದ ಜನರು ಯುದ್ಧಕ್ಕೆ ಸಿದ್ಧಮಾಡಿಕೊಳ್ಳಲಿ. ಅವರು ಮಿದ್ಯಾನ್ಯರಿಗೆ ವಿರೋಧವಾಗಿ ಹೋಗಿ, ಯೆಹೋವ ದೇವರ ಪ್ರತೀಕಾರವನ್ನು ಅವರಿಗೆ ತೀರಿಸಬೇಕು.
4ಇಸ್ರಾಯೇಲರ ಸಮಸ್ತ ಗೋತ್ರಗಳೊಳಗೆ ಒಂದೊಂದು ಗೋತ್ರದಿಂದ ಸಾವಿರ ಮಂದಿಯನ್ನು ಯುದ್ಧಕ್ಕೆ ಕಳುಹಿಸಬೇಕು,” ಎಂದನು.
5ಆಗ ಇಸ್ರಾಯೇಲರ ಒಂದೊಂದು ಗೋತ್ರದಿಂದ ಸಾವಿರ ಮಂದಿಯಾಗಿ ಯುದ್ಧಕ್ಕೆ ಸಿದ್ಧವಾದ ಹನ್ನೆರಡು ಸಾವಿರ ಮಂದಿಯನ್ನು ಲೆಕ್ಕಿಸಿಕೊಟ್ಟರು.
6ಮೋಶೆ ಒಂದೊಂದು ಗೋತ್ರದಿಂದ ಸಾವಿರ ಮಂದಿಯಾಗಿರುವ ಅವರನ್ನೂ ಯಾಜಕನಾದ ಎಲಿಯಾಜರನ ಮಗ ಫೀನೆಹಾಸನನ್ನೂ ಪರಿಶುದ್ಧ ಸಲಕರಣೆಗಳ ಸಂಗಡವೂ ಸೂಚಿಸುವದಕ್ಕೋಸ್ಕರ ತುತೂರಿಗಳ ಸಂಗಡವೂ ಯುದ್ಧಕ್ಕೆ ಕಳುಹಿಸಿದನು.
7ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವರು ಮಿದ್ಯಾನ್ಯರ ಮೇಲೆ ಯುದ್ಧಮಾಡಿ,
8ಗಂಡಸರೆಲ್ಲರನ್ನು ಕೊಂದುಹಾಕಿದರು. ಈ ಹತರಾದವರಲ್ಲದೆ ಮಿದ್ಯಾನಿನ ಅರಸರನ್ನು ಕೊಂದುಹಾಕಿದರು. ಅವರು ಮಿದ್ಯಾನಿನ ಐದು ಮಂದಿ ಅರಸರಾಗಿರುವ ಎವೀ, ರೆಕೆಮ್, ಚೂರ್, ಹೂರ್, ರೆಬಾ, ಬೆಯೋರನ ಮಗ ಬಿಳಾಮನನ್ನೂ ಖಡ್ಗದಿಂದ ಕೊಂದುಹಾಕಿದರು.
9ಇಸ್ರಾಯೇಲರು ಮಿದ್ಯಾನ್ಯರ ಸ್ತ್ರೀಯರನ್ನೂ, ಅವರ ಮಕ್ಕಳನ್ನೂ ಸೆರೆಹಿಡಿದು, ಅವರ ಸಮಸ್ತ ಪಶುಗಳನ್ನೂ, ಅವರ ಸಮಸ್ತ ಹಿಂಡುಗಳನ್ನೂ, ಅವರ ಸಮಸ್ತ ಸಲಕರಣೆಗಳನ್ನೂ ಸುಲಿಗೆ ಮಾಡಿದರು.
10ಅವರು ವಾಸಮಾಡಿದ ಸಮಸ್ತ ಪಟ್ಟಣಗಳನ್ನೂ, ಅವರ ಸಮಸ್ತ ಕೋಟೆಗಳನ್ನೂ ಬೆಂಕಿಯಿಂದ ಸುಟ್ಟರು.
11ಮನುಷ್ಯರಲ್ಲಿಯೂ, ಪಶುಗಳಲ್ಲಿಯೂ ಸಮಸ್ತ ಸುಲಿಗೆಯನ್ನೂ, ಸಮಸ್ತ ಲೂಟಿಯನ್ನೂ ತೆಗೆದುಕೊಂಡರು.
12ಅವರು ಸೆರೆಯವರನ್ನೂ, ಲೂಟಿಯನ್ನೂ, ಸುಲಿಗೆಯನ್ನೂ ಮೋಶೆ, ಯಾಜಕನಾದ ಎಲಿಯಾಜರನು, ಇಸ್ರಾಯೇಲರ ಸಭೆ ಇವರ ಬಳಿಗೆ ಯೆರಿಕೋ ಪಟ್ಟಣಕ್ಕೆ ಎದುರಾಗಿ ಯೊರ್ದನ್ ನದಿಯ ಮೇಲೆ ಇರುವ ಮೋವಾಬಿನ ಬಯಲುಗಳಲ್ಲಿ ಇದ್ದ ಪಾಳೆಯದೊಳಗೆ ತಂದರು.
13ಮೋಶೆಯೂ, ಯಾಜಕನಾದ ಎಲಿಯಾಜರನೂ, ಸಮೂಹದ ಪ್ರಧಾನರೆಲ್ಲರೂ ಅವರಿಗೆ ಎದುರಾಗಿ ಪಾಳೆಯದ ಹೊರಗೆ ಹೋದರು.
14ಆದರೆ ಮೋಶೆಯು ಯುದ್ಧದಿಂದ ಬಂದ ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಆಗಿರುವ ಪಾಳೆಯದ ಮೇಲೆ ಕೋಪಮಾಡಿಕೊಂಡರು.
15ಮೋಶೆಯು ಅವರಿಗೆ, “ಹೆಂಗಸರನ್ನೆಲ್ಲಾ ಉಳಿಸಿದರೋ?
16ಇವರೇ ಬಿಳಾಮನ ಮಾತಿನಿಂದ ಪೆಯೋರನ ಕಾರ್ಯದಲ್ಲಿ ಯೆಹೋವ ದೇವರಿಗೆ ವಿರೋಧವಾಗಿ ದ್ರೋಹ ಮಾಡುವುದಕ್ಕೆ ಇಸ್ರಾಯೇಲರಿಗೆ ಕಾರಣವಾಗಿದ್ದರು. ಯೆಹೋವ ದೇವರ ಸಭೆಯೊಳಗೆ ಇವರಿಂದಲೇ ವ್ಯಾಧಿಯಾಯಿತು.
17ಆದಕಾರಣ ಈಗ ಬಾಲಕರನ್ನೂ, ಎಲ್ಲಾ ಪುರುಷನನ್ನು ಅರಿತಿರುವ ಎಲ್ಲಾ ಸ್ತ್ರೀಯರನ್ನು ಕೊಂದುಹಾಕಿರಿ.
18ಆದರೆ ಪುರುಷನನ್ನು ಅರಿಯದ ಎಲ್ಲಾ ಹೆಣ್ಣು ಮಕ್ಕಳನ್ನು ನಿಮಗಾಗಿ ಉಳಿಸಿಕೊಳ್ಳಿರಿ.
19“ಇದಲ್ಲದೆ ನಿಮ್ಮಲ್ಲಿ ಪ್ರಾಣ ತೆಗೆದವರು ಮತ್ತು ಶವವನ್ನು ಮುಟ್ಟಿದವರು ಏಳು ದಿವಸ ಪಾಳೆಯದ ಹೊರಗೆ ಇರಬೇಕು. ನೀವೂ, ನಿಮ್ಮ ಸೆರೆಯವರೂ ಮೂರನೆಯ ಹಾಗೂ ಏಳನೆಯ ದಿವಸಗಳಲ್ಲಿ ನಿಮ್ಮನ್ನು ಶುದ್ಧ ಮಾಡಿಕೊಳ್ಳಬೇಕು.
20ಎಲ್ಲಾ ಬಟ್ಟೆಗಳನ್ನೂ, ಎಲ್ಲಾ ಚರ್ಮದ ಸಲಕರಣೆಗಳನ್ನೂ, ಮೇಕೆ ಕೂದಲಿಂದ ಮಾಡಿದ್ದೆಲ್ಲವನ್ನೂ, ಕಟ್ಟಿಗೆ ಸಲಕರಣೆಗಳೆಲ್ಲವನ್ನೂ ಶುದ್ಧಮಾಡಬೇಕು,” ಎಂದು ಹೇಳಿದನು.
21ಯಾಜಕನಾದ ಎಲಿಯಾಜರನು ಯುದ್ಧಕ್ಕೆ ಹೋದ ಪಾಳೆಯದ ಜನರಿಗೆ, “ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ನ್ಯಾಯದ ಕಟ್ಟಳೆಯು ಇದೇ:
22ಬೆಂಕಿ ತಾಳುವ ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ತವರ, ಸೀಸ ಮೊದಲಾದವುಗಳನ್ನು
23ನೀವು ಬೆಂಕಿಯಿಂದ ದಾಟಿಸಬೇಕು. ಆಗ ಅವು ಶುದ್ಧವಾಗುವುವು. ಶುದ್ಧೀಕರಣದ ನೀರಿನಲ್ಲಿ ಅದ್ದಿ ಶುದ್ಧಮಾಡಬೇಕು. ಆಗ ಅವು ಶುದ್ಧವಾಗುವುವು. ಆದರೆ ಬೆಂಕಿ ತಾಳದ ಸಮಸ್ತವನ್ನು ನೀವು ನೀರಿನಿಂದ ತೊಳೆಯಬೇಕು.
24ಏಳನೆಯ ದಿವಸದಲ್ಲಿ ನೀವು ನಿಮ್ಮ ಬಟ್ಟೆಗಳನ್ನು ಒಗೆದುಕೊಂಡು ಶುದ್ಧರಾಗಬೇಕು. ತರುವಾಯ ಪಾಳೆಯದೊಳಗೆ ಬರಬೇಕು,” ಎಂದು ಹೇಳಿದನು. ಸುಲಿಗೆಯನ್ನು ಪಾಲು ಮಾಡಿಕೊಂಡದ್ದು
25ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
26“ನೀನೂ, ಯಾಜಕನಾದ ಎಲಿಯಾಜರನೂ, ಕುಲಾಧಿಪತಿಗಳೂ ಸೈನಿಕರ ಕೈಗೆ ಸಿಕ್ಕಿರುವ ಮನುಷ್ಯರನ್ನೂ ಪಶುಗಳನ್ನೂ ಲೆಕ್ಕಮಾಡಿ ಒಟ್ಟು ಎಷ್ಟೆಂದು ತಿಳಿದುಕೊಳ್ಳಿರಿ.
27ಆ ಸುಲಿಗೆಯನ್ನು ಯುದ್ಧಕ್ಕೆ ಹೊರಟ ಯುದ್ಧಭಟರಿಗೂ, ಸಮಸ್ತ ಸಭೆಗೂ ಎರಡು ಪಾಲನ್ನು ಮಾಡಬೇಕು.
28ಜನರಿಂದಲೂ, ಪಶುಗಳಿಂದಲೂ, ಕತ್ತೆಗಳಿಂದಲೂ, ಕುರಿಗಳಿಂದಲೂ ಐನೂರರಲ್ಲಿ ಒಂದು ಪ್ರಾಣವನ್ನು ಯುದ್ಧಕ್ಕೆ ಹೊರಟ ಯುದ್ಧಭಟರ ಕಡೆಯಿಂದ ಯೆಹೋವ ದೇವರಿಗೆ ಕಪ್ಪವಾಗಿ ಎತ್ತಬೇಕು.
29ಅವರ ಅರ್ಧ ಪಾಲಿನಿಂದ ಅದನ್ನು ತೆಗೆದುಕೊಂಡು, ಯೆಹೋವ ದೇವರಿಗೆ ಅರ್ಪಣೆಯಾಗಿ, ಯಾಜಕನಾದ ಎಲಿಯಾಜರನಿಗೆ ಕೊಡಬೇಕು.
30ಇಸ್ರಾಯೇಲರ ಅರ್ಧ ಪಾಲಿನಿಂದ ಜನರಿಂದಲೂ, ಕತ್ತೆಗಳಿಂದಲೂ, ಮಂದೆಗಳಿಂದಲೂ, ಸಮಸ್ತ ಪಶುಗಳಿಂದಲೂ ಐವತ್ತರಲ್ಲಿ ಒಂದು ಪಾಲು ತೆಗೆದುಕೊಂಡು, ಅವುಗಳನ್ನು ಯೆಹೋವ ದೇವರ ಗುಡಾರವನ್ನು ನಿರ್ವಹಿಸುವ ಲೇವಿಯರಿಗೆ ಕೊಡಬೇಕು,” ಎಂದರು.
31ಆಗ ಮೋಶೆಯೂ, ಯಾಜಕನಾದ ಎಲಿಯಾಜರನೂ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮಾಡಿದರು.
32ಯುದ್ಧಭಟರು ತೆಗೆದುಕೊಂಡು ಬಂದ ಲೂಟಿಯಲ್ಲಿ ಉಳಿದ ಸುಲಿಗೆ ಎಷ್ಟೆಂದರೆ 6,75,000 ಕುರಿಗಳು.
3372,000 ಪಶುಗಳು;
34ಕತ್ತೆಗಳು 61,000;
35ಪುರುಷರನ್ನು ಅರಿಯದ ಸ್ತ್ರೀಯರು 32,000 ಮಂದಿ.
36ಯುದ್ಧಕ್ಕೆ ಹೊರಟವರ ಅರ್ಧ ಭಾಗದ ಲೆಕ್ಕವಿದು: 3,37,500 ಕುರಿಗಳಿಂದ
37ಯೆಹೋವ ದೇವರಿಗೆ ಕೊಡಲಾದ ಕಪ್ಪವು 675;
38ಹಾಗೆಯೇ ಅವರಿಗೆ ದೊರಕಿದ 36,000 ದನಕರುಗಳಲ್ಲಿ ಯೆಹೋವ ದೇವರಿಗೆ ಉಂಟಾದ ಕಪ್ಪವು 72 ದನಕರುಗಳು;
3930,500 ಕತ್ತೆಗಳು; ಅವುಗಳಿಂದ ಯೆಹೋವ ದೇವರಿಗೆ ಉಂಟಾದ ಕಪ್ಪವು 61;
4016,000 ಜನರು, ಅವರಿಂದ ಯೆಹೋವ ದೇವರಿಗೆ ಉಂಟಾದ ಕಪ್ಪವು 32 ಜನ.
41ಮೋಶೆಯು ಯೆಹೋವ ದೇವರಿಗೆ ಪಡೆಯುವ ಕಪ್ಪವನ್ನು ಯಾಜಕನಾದ ಎಲಿಯಾಜರನಿಗೆ ಯೆಹೋವ ದೇವರು ಆಜ್ಞಾಪಿಸಿದ ಪ್ರಕಾರ ಕೊಟ್ಟನು.
42ಮೋಶೆಯು ಯುದ್ಧಕ್ಕೆ ಹೋದ ಜನರಿಂದ ತೆಗೆದುಕೊಂಡು ಇಸ್ರಾಯೇಲರಿಗೆ ಹಂಚಿದ ಅರ್ಧ ಭಾಗದ ವಿವರ:
43ಕುರಿಗಳಿಂದ ಸಭೆಯ ಅರ್ಧ 3, 37,500 ಕುರಿಗಳು;
4436,000 ಪಶುಗಳು;
4530,500 ಕತ್ತೆಗಳು;
4616,000 ಜನರು;
47ಮೋಶೆಯು ಇಸ್ರಾಯೇಲರ ಅರ್ಧದಿಂದ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಐವತ್ತರಲ್ಲಿ ಒಂದು ಪಾಲನ್ನು ತೆಗೆದುಕೊಂಡು, ಯೆಹೋವ ದೇವರು ತನಗೆ ಆಜ್ಞಾಪಿಸಿದ ಪ್ರಕಾರ ಯೆಹೋವ ದೇವರ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಟ್ಟನು.
48ಆಗ ಸೈನ್ಯದ ಅಧಿಕಾರಿಗಳಾದ ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಮೋಶೆಯ ಬಳಿಗೆ ಬಂದು,
49ಮೋಶೆಗೆ ಅವರು, “ನಿನ್ನ ಸೇವಕರಾದ ನಾವು ನಮ್ಮ ಕೈಯಲ್ಲಿದ್ದ ಯುದ್ಧಭಟರ ಲೆಕ್ಕವನ್ನು ತೆಗೆದುಕೊಂಡೆವು. ಅವರೊಳಗೆ ಒಬ್ಬನಾದರೂ ಕಡಿಮೆಯಾಗಲಿಲ್ಲ.
50ಆದ್ದರಿಂದ ಯೆಹೋವ ದೇವರ ಸಮ್ಮುಖದಲ್ಲಿ ನಮ್ಮ ಪ್ರಾಣಗಳಿಗೋಸ್ಕರ ಪ್ರಾಯಶ್ಚಿತ್ತಕ್ಕಾಗಿ ನಾವು ಒಬ್ಬೊಬ್ಬನಿಗೆ ಸಿಕ್ಕಿದಂಥ ಬಂಗಾರದ ವಸ್ತುಗಳಾದ ಸರಪಣಿಗಳನ್ನೂ, ಕಡಗಗಳನ್ನೂ, ಉಂಗುರಗಳನ್ನೂ, ವಾಲೆಗಳನ್ನೂ, ಪದಕಗಳನ್ನೂ ಯೆಹೋವ ದೇವರಿಗೆ ಕಾಣಿಕೆಯಾಗಿ ತಂದಿದ್ದೇವೆ,” ಎಂದು ಹೇಳಿದರು.
51ಮೋಶೆಯೂ, ಯಾಜಕನಾದ ಎಲಿಯಾಜರನೂ ವಿಚಿತ್ರ ಕೆಲಸವಾಗಿರುವ ಬಂಗಾರವನ್ನೆಲ್ಲಾ ಅದರಿಂದ ತೆಗೆದುಕೊಂಡರು.
52ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ ಯೆಹೋವ ದೇವರಿಗೆ ಅರ್ಪಿಸಿದ ಕಾಣಿಕೆಯ ಒಟ್ಟು ತೂಕ 16,750 ಶೆಕೆಲ್‌ಗಳು.
53ಯುದ್ಧದ ಜನರು ಒಬ್ಬೊಬ್ಬನು ಸ್ವಂತವಾಗಿ ಸುಲಿದುಕೊಂಡಿದ್ದನು.
54ಆಗ ಮೋಶೆಯೂ, ಯಾಜಕನಾದ ಎಲಿಯಾಜರನೂ ಸಹಸ್ರಾಧಿಪತಿಗಳ ಮತ್ತು ಶತಾಧಿಪತಿಗಳ ಕೈಯಿಂದ ಬಂಗಾರವನ್ನು ತೆಗೆದುಕೊಂಡು, ಯೆಹೋವ ದೇವರ ಸಮ್ಮುಖದಲ್ಲಿ ಇಸ್ರಾಯೇಲರಿಗೆ ಜ್ಞಾಪಕಕ್ಕಾಗಿ ದೇವದರ್ಶನ ಗುಡಾರದೊಳಗೆ ತಂದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.