Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಅರಣ್ಯಕಾಂಡ 18

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರು ಆರೋನನಿಗೆ, “ನೀನೂ, ನಿನ್ನ ಪುತ್ರರೂ, ನಿನ್ನ ಪಿತೃಗಳ ಮನೆಯವರೂ ಪರಿಶುದ್ಧ ಸ್ಥಳಕ್ಕೆ ವಿರೋಧವಾಗಿ ನಡೆಯುವ ಕಾರ್ಯಗಳ ಜವಾಬ್ದಾರಿ ವಹಿಸಬೇಕು. ಯಾಜಕತ್ವಕ್ಕೆ ವಿರೋಧವಾಗಿ ನಡೆಯುವ ಅಕ್ರಮಗಳಿಗೆ ನೀನು ಮತ್ತು ನಿನ್ನ ಪುತ್ರರು ಮಾತ್ರ ಹೊಣೆಯಾಗಿರುತ್ತೀರಿ.
2ನಿನ್ನ ಗೋತ್ರದ ಮೂಲಪುರುಷನಾದ ಲೇವಿ ವಂಶದವರನ್ನು ಸಹ ನಿನ್ನ ಸಂಗಡ ಸೇರಿಸಿಕೋ. ಏಕೆಂದರೆ ಅವರು ನಿನ್ನ ಕೂಡ ಇದ್ದು, ನಿನಗೆ ಸೇವೆಮಾಡಬೇಕು. ಆದರೆ ನೀನು ಮತ್ತು ನಿನ್ನ ಮಕ್ಕಳ ಸಹಿತವಾಗಿ ಸಾಕ್ಷಿ ಗುಡಾರದ ಮುಂದೆ ಸೇವೆಮಾಡಬೇಕು.
3ಅವರು ನಿನಗೂ ದೇವದರ್ಶನದ ಗುಡಾರದ ಕಾರ್ಯಗಳಿಗೂ ಜವಾಬ್ದಾರರಾಗಿರುವರು. ಆದರೆ ಪರಿಶುದ್ಧಸ್ಥಳದ ಸಲಕರಣೆಗಳ ಹತ್ತಿರವಾಗಲಿ, ಬಲಿಪೀಠದ ಹತ್ತಿರವಾಗಲಿ ಅವರು ಬರಬಾರದು, ಬಂದರೆ ಅವರು ಮಾತ್ರವಲ್ಲ ನೀವೂ ಸಹ ಸಾಯುವಿರಿ.
4ಆದರೆ ಅವರು ನಿನ್ನ ಸಹಾಯಕರಾಗಿದ್ದು, ದೇವದರ್ಶನದ ಗುಡಾರದ ಎಲ್ಲಾ ಕಾರ್ಯಗಳಿಗೂ ಅದನ್ನು ಕಾಪಾಡುವುದಕ್ಕೂ ಜವಾಬ್ದಾರರಾಗಿರುವರು. ಬೇರೆ ಕುಲದವರು ನಿಮ್ಮ ಸಮೀಪಕ್ಕೆ ಬರಬಾರದು.
5“ಇಸ್ರಾಯೇಲರ ಮೇಲೆ ಇನ್ನು ಮುಂದೆ ಎಂದಿಗೂ ನನ್ನ ಕೋಪಾಗ್ನಿಯು ಬಾರದ ಹಾಗೆ ಪರಿಶುದ್ಧ ಸ್ಥಳವನ್ನು ಮತ್ತು ಬಲಿಪೀಠವನ್ನು ನೀವೇ ನೋಡಿಕೊಳ್ಳಬೇಕು.
6ನಾನು ನಿಮ್ಮ ಸಹೋದರರಾದ ಲೇವಿಯರನ್ನು ಇಸ್ರಾಯೇಲರೊಳಗಿಂದ ತೆಗೆದುಕೊಂಡಿದ್ದೇನೆ. ದೇವದರ್ಶನ ಗುಡಾರದ ಸೇವೆಯನ್ನು ಮಾಡುವುದಕ್ಕೆ ಅವರು ಯೆಹೋವ ದೇವರಿಗಾಗಿ ನಿಮಗೆ ಕಾಣಿಕೆಯಾಗಿ ಸಮರ್ಪಿತರಾಗಿದ್ದಾರೆ.
7ಆದ್ದರಿಂದ ನೀನು ನಿನ್ನ ಪುತ್ರರ ಸಹಿತವಾಗಿ ನಿಮ್ಮ ಯಾಜಕತ್ವವನ್ನು ಕಾಪಾಡಬೇಕು. ಬಲಿಪೀಠದ ಸಮಸ್ತ ಕಾರ್ಯಗಳಿಗೋಸ್ಕರ ತೆರೆಯ ಒಳಗೆ ನೀವು ಸೇವೆಮಾಡಬೇಕು. ನಿಮ್ಮ ಯಾಜಕತ್ವ ಸೇವೆಯನ್ನು ನಿಮಗೆ ದಾನವಾಗಿ ಕೊಟ್ಟಿದ್ದೇನೆ. ಪರಕೀಯನು ಸಮೀಪಕ್ಕೆ ಬಂದರೆ ಮರಣಶಿಕ್ಷೆಯಾಗಬೇಕು,” ಎಂದರು. ಯಾಜಕರ ಮತ್ತು ಲೇವಿಯರ ಕಾಣಿಕೆಗಳು
8ಯೆಹೋವ ದೇವರು ಮಾತನಾಡಿ ಆರೋನನಿಗೆ, “ನನಗೆ ಕೊಡುವ ಎಲ್ಲಾ ಕಾಣಿಕೆಗಳ ಮೇಲೆ ನಿನ್ನನ್ನು ನೇಮಿಸಿದ್ದೇನೆ. ಇಸ್ರಾಯೇಲರು ನನಗೆ ಸಮರ್ಪಿಸುವ ಎಲ್ಲಾ ಪರಿಶುದ್ಧವಾದ ಕಾಣಿಕೆಗಳನ್ನೆಲ್ಲಾ ನಿನಗೂ ನಿನ್ನ ಮಕ್ಕಳಿಗೂ ಶಾಶ್ವತ ಪಾಲನ್ನು ನೀಡುತ್ತೇನೆ,” ಎಂದರು.
9ದಹನಬಲಿಗೆ ಒಳಗಾಗದ ಮಹಾಪರಿಶುದ್ಧವಾದ ವಸ್ತುಗಳು ನಿನಗೆ ಕಾಣಿಕೆಯಾಗಿ ಸಲ್ಲಬೇಕು ಯಾವುವೆಂದರೆ ಇಸ್ರಾಯೇಲರು ನನಗೆ ಸಮರ್ಪಿಸುವ ಧಾನ್ಯ, ದೋಷಪರಿಹಾರಕ ಬಲಿಗಳು ಮತ್ತು ಪ್ರಾಯಶ್ಚಿತ್ತ ಬಲಿಗಳು, ಇವುಗಳಲ್ಲಿ ದಹನವಾಗದೆ ಉಳಿದವುಗಳು ಮಹಾಪರಿಶುದ್ಧವಾದದರಿಂದ ನಿನಗೂ ನಿನ್ನ ಪುತ್ರರಿಗೂ ಸೇರಬೇಕು.
10ಮಹಾಪರಿಶುದ್ಧ ಸ್ಥಳದಲ್ಲಿ ನೀನು ಅದನ್ನು ತಿನ್ನಬೇಕು. ಪುರುಷರು ಅದನ್ನು ತಿನ್ನಬಹುದು. ಅದು ನಿನಗೆ ಪರಿಶುದ್ಧವಾಗಿರುವುದೆಂದು ಪರಿಗಣಿಸಬೇಕು.
11“ಅವರು ಕೊಟ್ಟ ಅರ್ಪಣೆಯೂ ಇಸ್ರಾಯೇಲರು ನೈವೇದ್ಯವಾಗಿ ನಿವಾಳಿಸುವ ಎಲ್ಲಾ ಸಮರ್ಪಣೆಗಳೂ ನಿನ್ನದಾಗಿರುವುವು. ಅವುಗಳನ್ನು ನಾನು ನಿನಗೂ, ನಿನ್ನ ಪುತ್ರಪುತ್ರಿಯರಿಗೂ ಶಾಶ್ವತ ನಿಯಮವಾಗಿ ಸಲ್ಲಬೇಕೆಂದು ಅನುಗ್ರಹಿಸಿದ್ದೇನೆ. ನಿನ್ನ ಮನೆಯಲ್ಲಿರುವ ಶುದ್ಧನಾದ ಪ್ರತಿಯೊಬ್ಬನೂ ಅದನ್ನು ತಿನ್ನಬಹುದು.
12“ಜನರು ಯೆಹೋವ ದೇವರಿಗೆ ಸಮರ್ಪಿಸುವ ಪ್ರಥಮ ಫಲಗಳನ್ನು ಅಂದರೆ ಎಲ್ಲಾ ಉತ್ತಮವಾದ ಎಣ್ಣೆಯೂ ಉತ್ತಮವಾದ ಹೊಸ ದ್ರಾಕ್ಷಾರಸ, ಧಾನ್ಯವೂ ನಿನಗೆ ಕೊಟ್ಟಿದ್ದೇನೆ.
13ಅವರು ಯೆಹೋವ ದೇವರಿಗೆ ತರುವ ಅವರ ದೇಶದಲ್ಲಿರುವ ಎಲ್ಲವುಗಳ ಪ್ರಥಮ ಫಲಗಳು ನಿನ್ನವುಗಳಾಗಿರುವುವು. ನಿನ್ನ ಮನೆಯಲ್ಲಿರುವ ಶುದ್ಧನಾದ ಪ್ರತಿಯೊಬ್ಬನೂ ಅದನ್ನು ತಿನ್ನಬಹುದು.
14“ಇಸ್ರಾಯೇಲರು ಯೆಹೋವ ದೇವರಿಗೆ ಹರಕೆಮಾಡಿ ಸಮರ್ಪಿಸಿದ ಪ್ರತಿಯೊಂದೂ ನಿನ್ನದಾಗಿದೆ.
15ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ ಯೆಹೋವ ದೇವರಿಗೆ ಸಮರ್ಪಿಸುವ ಚೊಚ್ಚಲಾದದ್ದೆಲ್ಲಾ ನಿನ್ನದಾಗಿರಬೇಕು. ಆದರೆ ಮನುಷ್ಯರ ಚೊಚ್ಚಲಾದದ್ದನ್ನೂ ಅಪವಿತ್ರವಾದ ಗಂಡು ಪಶುಗಳ ಚೊಚ್ಚಲಾದದ್ದನ್ನೂ ನೀನು ವಿಮೋಚಿಸಬೇಕು.
16ಅವು ಒಂದು ತಿಂಗಳಿನ ಪ್ರಾಯಕ್ಕೆ ಬಂದಾಗ, ದೇವರ ಸೇವೆಗೆ ನಿಗದಿಯಾದ ಇಪ್ಪತ್ತು ಗೇರಾ ತೂಕದ ನಾಣ್ಯದ ಮೇರೆಗೆ ಐದು ಶೆಕೆಲ್ ನಾಣ್ಯವನ್ನು ತೆಗೆದುಕೊಂಡು ಅವುಗಳನ್ನು ವಿಮೋಚಿಸಿಕೊಳ್ಳಬೇಕು.
17“ಆದರೆ ಆಕಳಿನ ಚೊಚ್ಚಲನ್ನಾದರೂ ಕುರಿಯ ಚೊಚ್ಚಲನ್ನಾದರೂ ಮೇಕೆಯ ಚೊಚ್ಚಲನ್ನಾದರೂ ನೀನು ಬಿಟ್ಟುಬಿಡಬಾರದು. ಅವು ಪರಿಶುದ್ಧವಾಗಿವೆ, ಅವುಗಳ ರಕ್ತವನ್ನು ಬಲಿಪೀಠದ ಮೇಲೆ ಚಿಮುಕಿಸಬೇಕು, ಅವುಗಳ ಕೊಬ್ಬನ್ನು ಯೆಹೋವ ದೇವರಿಗೆ ಸುವಾಸನೆಯ ದಹನಬಲಿ ಮಾಡಬೇಕು.
18ನೈವೇದ್ಯವಾಗಿ ನಿವಾಳಿಸುವ ಎದೆಯೂ ಬಲಭುಜವೂ ನಿನ್ನದಾಗಿರುವ ಪ್ರಕಾರ ಅವುಗಳ ಮಾಂಸವೂ ನಿನ್ನದಾಗಿರಬೇಕು.
19ಇಸ್ರಾಯೇಲರು ಯೆಹೋವ ದೇವರಿಗೆ ನೈವೇದ್ಯ ಮಾಡುವ ಪರಿಶುದ್ಧವಾದ ಬಲಿಗಳನ್ನೆಲ್ಲಾ ನಿನಗೂ ನಿನ್ನ ಪುತ್ರಪುತ್ರಿಯರಿಗೂ ಕ್ರಮ ಪ್ರಕಾರವಾದ ಭಾಗವಾಗಿ ಕೊಟ್ಟಿದ್ದೇನೆ. ಇದು ಯೆಹೋವ ದೇವರ ಮುಂದೆ ನಿನಗೂ ನಿನ್ನ ಸಂಗಡ ಇರುವ ನಿನ್ನ ಸಂತತಿಗೂ ಶಾಶ್ವತವಾದ ಉಪ್ಪಿನ ಒಡಂಬಡಿಕೆಯಾಗಿರಬೇಕು,” ಎಂದರು.
20ಯೆಹೋವ ದೇವರು ಆರೋನನಿಗೆ, “ನಿನಗೆ ಅವರ ದೇಶದಲ್ಲಿ ಯಾವ ಸ್ವಾಸ್ತ್ಯವೂ ಇರಬಾರದು, ನಿನಗೆ ಅವರ ಮಧ್ಯದಲ್ಲಿ ಯಾವ ಪಾಲೂ ಇರಬಾರದು. ನಾನೇ ಇಸ್ರಾಯೇಲರ ಮಧ್ಯದಲ್ಲಿ ನಿನ್ನ ಪಾಲೂ ನಿನ್ನ ಸ್ವಾಸ್ತ್ಯವೂ ಆಗಿದ್ದೇನೆ.
21“ಅವರು ದೇವದರ್ಶನ ಗುಡಾರದ ಸೇವೆಯನ್ನೂ ಮಾಡುವುದರಿಂದ ನಾನು ಲೇವಿಯ ಮಕ್ಕಳಿಗೆ ಅವರ ಸೇವೆಗೋಸ್ಕರ ಇಸ್ರಾಯೇಲರಲ್ಲಿ ಹತ್ತನೆಯ ಭಾಗವನ್ನು ಸೊತ್ತಾಗಿ ಕೊಟ್ಟಿದ್ದೇನೆ.
22ಇನ್ನು ಮೇಲೆ ಇಸ್ರಾಯೇಲರು ಪಾಪವನ್ನು ಹೊತ್ತುಕೊಂಡು ಸಾಯದ ಹಾಗೆ ದೇವದರ್ಶನದ ಗುಡಾರದ ಸಮೀಪಕ್ಕೆ ಬರಬಾರದು.
23ಆದರೆ ಲೇವಿಯರೇ ದೇವದರ್ಶನ ಗುಡಾರದ ಸೇವೆಯನ್ನು ಮಾಡಬೇಕು. ಅವರು ಅಲ್ಲಿ ಅಕ್ರಮವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿರಬೇಕು. ಇದು ನಿಮ್ಮ ಸಂತತಿಗಳಿಗೆ ಶಾಶ್ವತ ಕಟ್ಟಳೆಯಾಗಿದೆ, ಇಸ್ರಾಯೇಲರ ಮಧ್ಯದಲ್ಲಿ ಲೇವಿಯರಿಗೆ ಸ್ವಾಸ್ತ್ಯ ಇರಬಾರದು.
24ಇಸ್ರಾಯೇಲರು ಯೆಹೋವ ದೇವರಿಗೆ ಬಲಿಯಾಗಿ ಅರ್ಪಿಸುವ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿದ್ದೇನೆ. ಆದಕಾರಣ, ‘ಇಸ್ರಾಯೇಲರ ಮಧ್ಯದಲ್ಲಿ ಅವರಿಗೆ ಸೊತ್ತು ಇರಬಾರದು ಎಂದು ನಾನು ಅವರಿಗೆ ಹೇಳಿದ್ದೇನೆ,’ ” ಎಂದರು.
25ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
26“ನೀನು ಲೇವಿಯರಿಗೆ ಹೇಳಬೇಕಾದದ್ದೇನೆಂದರೆ, ‘ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟ ಹತ್ತನೆಯ ಒಂದು ಪಾಲನ್ನು ಇಸ್ರಾಯೇಲರಿಂದ ನೀವು ತೆಗೆದುಕೊಳ್ಳುವಾಗ ಅದರಲ್ಲಿ ಹತ್ತನೆಯದರಿಂದ ಒಂದು ಪಾಲನ್ನು ಪ್ರತ್ಯೇಕಿಸಿ ಯೆಹೋವ ದೇವರಿಗೆ ಸಮರ್ಪಿಸಬೇಕು.
27ಈ ನಿಮ್ಮ ಸಮರ್ಪಣೆಯನ್ನು ಕಣದ ಧಾನ್ಯದ ಹಾಗೆಯೂ ದ್ರಾಕ್ಷಿತೊಟ್ಟಿಯ ರಸದಂತೆಯೂ ಪರಿಗಣಿಸಲಾಗುವುದು.
28ಈ ಪ್ರಕಾರ ನೀವು ಸಹ ಇಸ್ರಾಯೇಲರ ಕಡೆಯಿಂದ ತೆಗೆದುಕೊಳ್ಳುವ ನಿಮ್ಮ ಎಲ್ಲಾ ಹತ್ತನೆಯ ಒಂದು ಭಾಗವನ್ನು ಯೆಹೋವ ದೇವರಿಗೆ ಕಾಣಿಕೆಯಾಗಿ ಅರ್ಪಿಸಬೇಕು, ನೀವು ಅದರಿಂದ ಯೆಹೋವ ದೇವರ ಯಾಜಕನಾದ ಆರೋನನಿಗೆ ಕೊಡಬೇಕು.
29ನಿಮ್ಮ ಎಲ್ಲಾ ಕಾಣಿಕೆಗಳಲ್ಲಿ ಅದರ ಒಂದೊಂದರ ಉತ್ತಮವಾದದ್ದನ್ನು ಅದರೊಳಗಿನ ಪರಿಶುದ್ಧವಾದ ಭಾಗವನ್ನೇ ಯೆಹೋವ ದೇವರಿಗೆ ಸಮರ್ಪಣೆಯಾಗಿ ಅರ್ಪಿಸಬೇಕು.’
30“ನೀನು ಲೇವಿಯರಿಗೆ ಹೇಳಬೇಕಾದದ್ದೇನೆಂದರೆ, ‘ನೀವು ಅದರಲ್ಲಿ ಉತ್ತಮವಾದದ್ದನ್ನು ಸಮರ್ಪಿಸಿದ ನಂತರ ಉಳಿದವುಗಳನ್ನು ಕಣದಲ್ಲಿನ ದವಸದಂತೆಯೂ ದ್ರಾಕ್ಷಿತೊಟ್ಟಿಯ ರಸದಂತೆಯೂ ಪರಿಗಣಿಸಲಾಗುತ್ತದೆ.
31ನೀವೂ ನಿಮ್ಮ ಮನೆಯವರೂ ಅದನ್ನು ಸಕಲ ಸ್ಥಳಗಳಲ್ಲಿ ತಿನ್ನಬಹುದು. ಏಕೆಂದರೆ ದೇವದರ್ಶನದ ಗುಡಾರದಲ್ಲಿ ನೀವು ಮಾಡುವ ಸೇವೆಗೋಸ್ಕರ ಅದು ನಿಮಗೆ ಪ್ರತಿಫಲವಾಗಿದೆ.
32ಆದಕಾರಣ ನೀವು ಅದರಲ್ಲಿ ಉತ್ತಮವಾದದ್ದನ್ನು ಅರ್ಪಿಸಿದಾಗ, ಅದರ ದೆಸೆಯಿಂದ ಯಾವ ದೋಷಕ್ಕೂ ನೀವು ಗುರಿಯಾಗುವುದಿಲ್ಲ. ಇಸ್ರಾಯೇಲರು ಸಮರ್ಪಿಸುವ ಪರಿಶುದ್ಧವಾದವುಗಳನ್ನು ಅಪವಿತ್ರ ಮಾಡದಿದ್ದರೆ ನೀವು ಸಾಯುವುದಿಲ್ಲ,’ ” ಎಂದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.