Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ನೆಹೆಮೀಯ 8

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಜನರೆಲ್ಲರು ಏಕವಾಗಿ ನೀರು ಬಾಗಿಲಿಗೆ ಎದುರಾಗಿರುವ ಬೀದಿಯಲ್ಲಿ ಕೂಡಿಕೊಂಡು ಬಂದರು. ಯೆಹೋವ ದೇವರು ಇಸ್ರಾಯೇಲರಿಗೆ ಆಜ್ಞಾಪಿಸಿದ ಮೋಶೆಯ ನಿಯಮದ ಗ್ರಂಥವನ್ನು ತೆಗೆದುಕೊಂಡು ಬರಲು ಜನರು ನಿಯಮಶಾಸ್ತ್ರಿಯಾದ ಎಜ್ರನಿಗೆ ಹೇಳಿದರು.
2ಹೀಗೆಯೇ ಏಳನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸ್ತ್ರೀಪುರುಷರ ಮುಂದೆಯೂ ಗ್ರಹಿಕೆಯಿಂದ ಕೇಳುವವರೆಲ್ಲರ ಮುಂದೆಯೂ ಯಾಜಕನಾದ ಎಜ್ರನು ದೇವರ ನಿಯಮವನ್ನು ತೆಗೆದುಕೊಂಡು ಬಂದನು.
3ಅನಂತರ ಎಜ್ರನು ನೀರಿನ ಬಾಗಿಲ ಮುಂಭಾಗದಲ್ಲಿರುವ ಬೀದಿಯಲ್ಲಿ ಸ್ತ್ರೀಪುರುಷರ ಮುಂದೆಯೂ ಗ್ರಹಿಕೆಯುಳ್ಳ ಎಲ್ಲರ ಮುಂದೆಯೂ ಬೆಳಗಿನಿಂದ ಮಧ್ಯಾಹ್ನದವರೆಗೆ ಓದಿದನು. ಜನರೆಲ್ಲರು ನಿಯಮದ ಗ್ರಂಥಕ್ಕೆ ಕಿವಿಗೊಟ್ಟರು.
4ಆಗ ನಿಯಮಶಾಸ್ತ್ರಿಯಾದ ಎಜ್ರನು ಅದಕ್ಕೋಸ್ಕರ ಮಾಡಲಾಗಿದ್ದ ಒಂದು ಮರದ ಪೀಠದ ಮೇಲೆ ನಿಂತನು. ಅವನ ಬಳಿಯಲ್ಲಿ ಅವನ ಬಲಗಡೆಯಲ್ಲಿ ಮತ್ತಿತ್ಯ. ಶೆಮ, ಅನಾಯ, ಊರೀಯ, ಹಿಲ್ಕೀಯ, ಮಾಸೇಯ, ಅವನಿಗೆ ಎಡಗಡೆಯಲ್ಲಿ ಪೆದಾಯ್, ಮೀಷಾಯೇಲ್, ಮಲ್ಕೀಯ, ಹಾಷುಮ್, ಹಷ್ಬದ್ದಾನ, ಜೆಕರ್ಯ, ಮೆಷುಲ್ಲಾಮ್ ನಿಂತಿದ್ದರು.
5ಎಜ್ರನು ಸಕಲ ಜನರ ಕಣ್ಣು ಮುಂದೆ ದೇವರ ಗ್ರಂಥವನ್ನು ತೆರೆದನು. ಸಕಲ ಜನರಿಗಿಂತ ಎತ್ತರವಾದ ಸ್ಥಳದಲ್ಲಿ ನಿಂತಿದ್ದನು. ಅವನು ಅದನ್ನು ತೆರೆದಾಗ, ಜನರೆಲ್ಲರು ಎದ್ದು ನಿಂತರು.
6ಆಗ ಎಜ್ರನು ಮಹಾ ದೇವರಾಗಿರುವ ಯೆಹೋವ ದೇವರನ್ನು ಸ್ತುತಿಸಿದನು. ಅದಕ್ಕೆ ಜನರೆಲ್ಲರು ತಮ್ಮ ಕೈಗಳನ್ನೆತ್ತಿ ಉತ್ತರವಾಗಿ, “ಆಮೆನ್, ಆಮೆನ್,” ಎಂದು ಹೇಳಿ ನೆಲದವರೆಗೂ ತಮ್ಮ ತಲೆಗಳನ್ನು ಬಗ್ಗಿಸಿ ಯೆಹೋವ ದೇವರನ್ನು ಆರಾಧಿಸಿದರು.
7ಆಮೇಲೆ ಯೇಷೂವ, ಬಾನೀ, ಶೇರೇಬ್ಯ, ಯಾಮೀನ್, ಅಕ್ಕೂಬ್, ಶಬ್ಬೆತೈ, ಹೋದೀಯ, ಮಾಸೇಯ, ಕೆಲೀಟ, ಅಜರ್ಯ, ಯೋಜಾಬಾದ್, ಹಾನಾನ್, ಪೆಲಾಯ ಎಂಬ ಲೇವಿಯರು ನಿಯಮವನ್ನು ತಿಳಿಯುವಂತೆ ಹೇಳಿದರು. ಜನರು ತಮ್ಮ ತಮ್ಮ ಸ್ಥಳಗಳಲ್ಲಿ ನಿಂತುಕೊಂಡಿದ್ದರು.
8ಜನರು ಎದ್ದು ನಿಂತ ನಂತರ, ಅವರು ದೇವರ ನಿಯಮವನ್ನು ಸ್ಪಷ್ಟವಾಗಿ ಓದುತ್ತಾ, ಅದರ ತಾತ್ಪರ್ಯವನ್ನು ವಿವರಿಸಿದರು. ಜನರು ಚೆನ್ನಾಗಿ ಗ್ರಹಿಸಿಕೊಂಡರು.
9ರಾಜಪಾಲನಾದ ನೆಹೆಮೀಯನೂ, ನಿಯಮಶಾಸ್ತ್ರಿಯೂ, ಯಾಜಕನೂ ಆದ ಎಜ್ರನೂ, ಜನರನ್ನು ಬೋಧಿಸುತ್ತಿದ್ದ ಲೇವಿಯರೂ ಜನರೆಲ್ಲರಿಗೆ: “ಈ ದಿನವು ನಿಮ್ಮ ದೇವರಾಗಿರುವ ಯೆಹೋವ ದೇವರಿಗೆ ಪರಿಶುದ್ಧವಾದುದರಿಂದ ದುಃಖಿಸದೆ, ಅಳದೆ ಇರಿ,” ಎಂದರು. ಏಕೆಂದರೆ ಜನರೆಲ್ಲರು ದೇವರ ನಿಯಮದ ಮಾತುಗಳನ್ನು ಕೇಳಿದಾಗ ಅತ್ತರು.
10ಇದಲ್ಲದೆ ಎಜ್ರನು ಅವರಿಗೆ, “ನೀವು ಹೋಗಿ ಒಳ್ಳೆಯ ಆಹಾರವನ್ನು ತಿಂದು, ಸಿಹಿಯಾದದ್ದನ್ನು ಕುಡಿಯಿರಿ, ತಮಗಾಗಿ ಸಿದ್ಧಮಾಡಿಕೊಳ್ಳದವರಿಗೆ ಒಂದು ಪಾಲನ್ನು ಕಳುಹಿಸಿಕೊಡಿರಿ. ಈ ದಿನವು ನಮ್ಮ ಯೆಹೋವ ದೇವರಿಗೆ ಪರಿಶುದ್ಧವಾಗಿದೆ. ನೀವು ವ್ಯಥೆಪಡಬೇಡಿರಿ. ಯೆಹೋವ ದೇವರ ಆನಂದವೇ ನಿಮ್ಮ ಬಲ,” ಎಂದು ಹೇಳಿದನು.
11ಲೇವಿಯರು ಕೂಡ, “ಈ ದಿನವು ಪರಿಶುದ್ಧವಾದುದರಿಂದ ನೀವು ಶಾಂತವಾಗಿದ್ದು, ವ್ಯಥೆಪಡಬೇಡಿರಿ,” ಎಂದು ಹೇಳಿ ಜನರನ್ನು ಸುಮ್ಮನಿರಿಸಿದರು.
12ಆಗ ಜನರೆಲ್ಲರೂ ತಮಗೆ ತಿಳಿಸಿದ ಮಾತುಗಳನ್ನು ಗ್ರಹಿಸಿದ್ದರಿಂದ, ಅವರು ಅನ್ನಪಾನಗಳನ್ನು ತೆಗೆದುಕೊಂಡು, ಏನೂ ಇಲ್ಲದವರಿಗೆ ಆಹಾರ ಪಾಲುಗಳನ್ನು ಕಳುಹಿಸಲೂ ಮತ್ತು ಸಂತೋಷದಿಂದ ಆಚರಿಸಲೂ ಹೊರಟು ಹೋದರು.
13ಎರಡನೆಯ ದಿವಸದಲ್ಲಿ ಸಮಸ್ತ ಜನರ ಪಿತೃಗಳಲ್ಲಿರುವ ಮುಖ್ಯವಾದವರೂ ಯಾಜಕರೂ ಲೇವಿಯರೂ ದೇವರ ನಿಯಮದ ಮಾತುಗಳನ್ನು ತಿಳಿದುಕೊಳ್ಳುವ ಹಾಗೆ, ನಿಯಮಶಾಸ್ತ್ರಿಯಾದ ಎಜ್ರನ ಬಳಿಗೆ ಬಂದರು.
14ಆಗ ಅವರು ಏಳನೆಯ ತಿಂಗಳ ಹಬ್ಬದಲ್ಲಿ, ಇಸ್ರಾಯೇಲರು ಪರ್ಣಶಾಲೆಗಳಲ್ಲಿ ವಾಸವಾಗಿರಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರ ಆಜ್ಞಾಪಿಸಿದ ವಿಷಯ ನಿಯಮದಲ್ಲಿ ಬರೆದದ್ದನ್ನು ಕಂಡರು.
15ಅದರಲ್ಲಿ, “ಪರ್ಣಶಾಲೆಗಳಿಗಾಗಿ ಬೆಟ್ಟಕ್ಕೆ ಹೋಗಿ ಓಲಿವ್, ಕಾಡು ಓಲಿವ್, ಸುಗಂಧ, ಖರ್ಜೂರ ಮುಂತಾದ ದಟ್ಟವಾಗಿರುವ ಗಿಡದ ಕೊಂಬೆಗಳನ್ನೂ ತೆಗೆದುಕೊಂಡು ಬನ್ನಿರಿ ಎಂದೂ, ತಮ್ಮ ಸಕಲ ಪಟ್ಟಣಗಳಲ್ಲಿಯೂ, ಯೆರೂಸಲೇಮಿನಲ್ಲಿಯೂ ಬಹಿರಂಗವಾಗಿ ಸಾರಬೇಕು,” ಎಂದೂ ಬರೆದಿತ್ತು.
16ಹಾಗೆಯೇ ಜನರು ಹೊರಟುಹೋಗಿ ಕೊಂಬೆಗಳನ್ನು ತೆಗೆದುಕೊಂಡು ಬಂದು ಅವರವರು ತಮ್ಮ ಮನೆಗಳ ಮೇಲೆಯೂ, ತಮ್ಮ ಅಂಗಳಗಳಲ್ಲಿಯೂ, ದೇವರ ಮನೆಯ ಅಂಗಳಗಳಲ್ಲಿಯೂ, ನೀರು ಬಾಗಿಲ ಬೀದಿಗಳಲ್ಲಿಯೂ, ಎಫ್ರಾಯೀಮನ ಬಾಗಿಲ ಬೀದಿಗಳಲ್ಲಿಯೂ ತಮಗೆ ಪರ್ಣಶಾಲೆಗಳನ್ನು ಹಾಕಿದರು.
17ಈ ಪ್ರಕಾರ ಸೆರೆಯಿಂದ ತಿರುಗಿ ಬಂದ ಸಭೆಯವರೆಲ್ಲರು ಪರ್ಣಶಾಲೆಗಳನ್ನು ಹಾಕಿ, ಅದರಲ್ಲಿ ವಾಸವಾಗಿದ್ದರು. ನೂನನ ಮಗ ಯೆಹೋಶುವನ ದಿನವು ಮೊದಲುಗೊಂಡು ಆ ದಿವಸದವರೆಗೂ ಇಸ್ರಾಯೇಲರು ಹಾಗೆ ಮಾಡಿರಲಿಲ್ಲ. ಅಲ್ಲಿ ಅವರಿಗೆ ಬಹಳ ಸಂತೋಷವಿತ್ತು.
18ಎಜ್ರನು ಮೊದಲನೆಯ ದಿವಸದಿಂದ ಕಡೇ ದಿವಸದವರೆಗೂ ದಿನದಿನವೂ ದೇವರ ನಿಯಮದ ಗ್ರಂಥವನ್ನು ಓದುತ್ತಿದ್ದನು. ಹೀಗೆಯೇ ಅವರು ಏಳು ದಿವಸ ಹಬ್ಬವನ್ನು ಆಚರಿಸಿದರು. ಎಂಟನೆಯ ದಿವಸದಲ್ಲಿ ಪದ್ಧತಿಯ ಪ್ರಕಾರ ಸಭೆಯು ಸೇರಿತ್ತು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.