Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಮಾರ್ಕನು 3

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಇನ್ನೊಂದು ಸಾರಿ ಯೇಸು ಸಭಾಮಂದಿರಕ್ಕೆ ಹೋದರು. ಅಲ್ಲಿ ಕೈ ಬತ್ತಿದ ಒಬ್ಬ ಮನುಷ್ಯನಿದ್ದನು.
2ಕೆಲವರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು, ಸಬ್ಬತ್ ದಿನದಲ್ಲಿ ಅವನನ್ನು ಯೇಸು ಗುಣಪಡಿಸುವರೋ ಏನೋ ಎಂದು ಲಕ್ಷವಿಟ್ಟು ನೋಡುತ್ತಿದ್ದರು.
3ಯೇಸು ಕೈಬತ್ತಿದವನಿಗೆ, “ಎದ್ದು ಮುಂದೆ ಬಾ,” ಎಂದರು.
4ಆಗ ಯೇಸು ಅವರನ್ನು, “ಸಬ್ಬತ್ ದಿನದಲ್ಲಿ ಒಳ್ಳೆಯದನ್ನು ಮಾಡುವುದು ನಿಯಮಕ್ಕೆ ಸಮ್ಮತವೋ ಅಥವಾ ಕೆಟ್ಟದ್ದನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಥವಾ ತೆಗೆಯುವುದೋ?” ಎಂದು ಕೇಳಿದರು. ಅದಕ್ಕೆ ಅವರು ಸುಮ್ಮನಿದ್ದರು.
5ಆಗ ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ನೋಡಿ, ಅವರ ಹೃದಯಕಾಠಿಣ್ಯಕ್ಕಾಗಿ ದುಃಖಪಟ್ಟು, ಆ ಮನುಷ್ಯನಿಗೆ, “ನಿನ್ನ ಕೈಚಾಚು,” ಎಂದು ಹೇಳಿದರು. ಅವನು ಕೈಚಾಚಿದಾಗ, ಅವನ ಕೈ ಸಂಪೂರ್ಣವಾಗಿ ಗುಣವಾಯಿತು.
6ಫರಿಸಾಯರು ಅಲ್ಲಿಂದ ಹೊರಗೆ ಹೋಗಿ ಕೂಡಲೇ ಹೆರೋದ್ಯರೊಂದಿಗೆ ಸೇರಿಕೊಂಡು ಯೇಸುವನ್ನು ಹೇಗೆ ಕೊಲ್ಲಬೇಕೆಂದು ಅವರ ವಿರೋಧವಾಗಿ ಒಳಸಂಚು ಮಾಡಿದರು. ಜನರ ಗುಂಪುಗಳು ಯೇಸುವನ್ನು ಹಿಂಬಾಲಿಸಿದ್ದು
7ಯೇಸು ತಮ್ಮ ಶಿಷ್ಯರೊಂದಿಗೆ ಸರೋವರದ ಬಳಿಗೆ ಹೊರಟು ಹೋದರು. ಗಲಿಲಾಯದಿಂದ ಬಂದ ಒಂದು ದೊಡ್ಡ ಜನರ ಗುಂಪು ಯೇಸುವನ್ನು ಹಿಂಬಾಲಿಸಿತು.
8ಯೇಸು ಮಾಡುತ್ತಿದ್ದ ಎಲ್ಲವನ್ನು ಕೇಳಿ, ಬಹುಜನರು ಯೂದಾಯದಿಂದಲೂ ಯೆರೂಸಲೇಮ್ ನಗರದಿಂದಲೂ ಇದುಮಾಯದಿಂದಲೂ ಯೊರ್ದನ್ ನದಿಯ ಆಚೆಕಡೆಯಿಂದಲೂ ಟೈರ್, ಸೀದೋನ್ ಪಟ್ಟಣಗಳ ಸುತ್ತಲಿನಿಂದಲೂ ಯೇಸುವಿನ ಬಳಿಗೆ ಬಂದರು.
9ಜನರ ಗುಂಪು ಹೆಚ್ಚಾಗುತ್ತಿದ್ದುದರಿಂದ ಅವರು ತಮ್ಮ ಮೈಮೇಲೆ ಬಿದ್ದಾರೆಂದು ಯೇಸು ತಮಗಾಗಿ ಒಂದು ಚಿಕ್ಕ ದೋಣಿಯನ್ನು ಸಿದ್ಧವಾಗಿಡಲು ತಮ್ಮ ಶಿಷ್ಯರಿಗೆ ಹೇಳಿದರು.
10ಯೇಸು ಅನೇಕರನ್ನು ಗುಣಪಡಿಸಿದ್ದರಿಂದ ರೋಗಿಗಳೆಲ್ಲರೂ ಯೇಸುವನ್ನು ಮುಟ್ಟಬೇಕೆಂದು ನುಗ್ಗುತ್ತಿದ್ದರು.
11ದುರಾತ್ಮಗಳು ಯೇಸುವನ್ನು ಕಂಡಾಗಲೆಲ್ಲಾ ಅವರ ಮುಂದೆ ಬಿದ್ದು, “ನೀವು ದೇವರ ಪುತ್ರ,” ಎಂದು ಕಿರುಚಿದವು.
12ಆದರೆ ಯೇಸು, ತಾನು ಯಾರೆಂದು ಯಾರಿಗೂ ಪ್ರಕಟಿಸಬಾರದೆಂದು ಅವುಗಳಿಗೆ ಕಟ್ಟಪ್ಪಣೆ ಮಾಡಿದರು. ಯೇಸು ಹನ್ನೆರಡು ಮಂದಿ ಶಿಷ್ಯರನ್ನು ನೇಮಿಸಿದ್ದು
13ಯೇಸು ಬೆಟ್ಟವನ್ನೇರಿ ತಮಗೆ ಬೇಕಾದವರನ್ನು ಕರೆದರು. ಅವರು ಯೇಸುವಿನ ಬಳಿಗೆ ಬಂದರು.
14ಯೇಸು ಹನ್ನೆರಡು ಮಂದಿಯನ್ನು ತಮ್ಮ ಸಂಗಡ ಇರಲು ಮತ್ತು ಅವರನ್ನು ಉಪದೇಶಮಾಡಲು ನೇಮಿಸಿ, ಅವರಿಗೆ “ಅಪೊಸ್ತಲರು” ಎಂದು ಕರೆದರು.
15ಅವರಿಗೆ ದೆವ್ವಗಳನ್ನು ಓಡಿಸುವ ಅಧಿಕಾರ ಕೊಟ್ಟರು.
16ಯೇಸು ನೇಮಿಸಿದ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಇಂತಿವೆ: ಸೀಮೋನನಿಗೆ ಯೇಸು “ಪೇತ್ರ” ಎಂಬ ಹೆಸರನ್ನು ಕೊಟ್ಟರು.
17ಜೆಬೆದಾಯನ ಮಗ ಯಾಕೋಬ ಮತ್ತು ಅವನ ತಮ್ಮ ಯೋಹಾನ ಇವರಿಗೆ ಯೇಸು “ಬೊವನೆರ್ಗೆಸ್” ಎಂದರೆ ಗುಡುಗಿನ ಪುತ್ರರು ಎಂಬ ಹೆಸರಿಟ್ಟರು.
18ಅಂದ್ರೆಯ, ಫಿಲಿಪ್ಪ, ಬಾರ್ತೊಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗ ಯಾಕೋಬ, ತದ್ದಾಯ, ಕಾನಾನ್ಯನಾದ ಸೀಮೋನನು.
19ಯೇಸುವಿಗೆ ದ್ರೋಹಮಾಡಿದ ಇಸ್ಕರಿಯೋತ ಯೂದ. ಯೇಸು ಮತ್ತು ಬೆಲ್ಜೆಬೂಲನು
20ಯೇಸು ಒಂದು ಮನೆಯೊಳಗೆ ಹೋದಾಗ, ಜನರು ತಿರುಗಿ ಗುಂಪಾಗಿ ನೆರೆದು ಬಂದದ್ದರಿಂದ ಯೇಸುವಿಗೂ ಅವರ ಶಿಷ್ಯರಿಗೂ ಊಟಮಾಡುವುದಕ್ಕೂ ಸಾಧ್ಯವಾಗಲಿಲ್ಲ.
21ಯೇಸುವಿನ ಕುಟುಂಬದವರು ಇದನ್ನು ಕೇಳಿದಾಗ, “ಆತನಿಗೆ ಹುಚ್ಚುಹಿಡಿದಿದೆ,” ಎಂದು ಹೇಳಿ, ಯೇಸುವನ್ನು ಹಿಡಿದು ತರಲು ಹೊರಟರು.
22ಯೆರೂಸಲೇಮಿನಿಂದ ಬಂದ ನಿಯಮ ಬೋಧಕರು, “ಈತನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ! ದೆವ್ವಗಳ ಅಧಿಪತಿಯ ಸಹಾಯದಿಂದಲೇ ಈತನು ದೆವ್ವಗಳನ್ನು ಓಡಿಸುತ್ತಾನೆ,” ಎಂದರು.
23ಆಗ ಯೇಸು ಅವರನ್ನು ಹತ್ತಿರಕ್ಕೆ ಕರೆದು ಸಾಮ್ಯರೂಪದಲ್ಲಿ ಹೇಳಿದ್ದೇನೆಂದರೆ: “ಸೈತಾನನು ಸೈತಾನನನ್ನು ಓಡಿಸುವುದು ಹೇಗೆ?
24ಒಂದು ರಾಜ್ಯ ತನಗೆ ವಿರೋಧವಾಗಿ ವಿಭಾಗಿಸಿಕೊಂಡರೆ ಆ ರಾಜ್ಯವು ನಿಲ್ಲುವುದಿಲ್ಲ.
25ಒಂದು ಕುಟುಂಬ ತನಗೆ ವಿರೋಧವಾಗಿ ವಿಭಾಗಿಸಿಕೊಂಡರೆ ಆ ಕುಟುಂಬವು ನಿಲ್ಲುವುದಿಲ್ಲ.
26ಸೈತಾನನು ತನಗೆ ವಿರೋಧವಾಗಿ ತಾನೇ ಎದ್ದು ವಿಭಾಗಿಸಿಕೊಂಡರೆ, ಅವನು ನಿಲ್ಲಲಾರದೆ ನಾಶವಾಗುವನು.
27ಒಬ್ಬನು ಬಲಿಷ್ಠನ ಮನೆಗೆ ನುಗ್ಗಿ ಮೊದಲು ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆ ಮಾಡಲಾಗುವುದಿಲ್ಲ. ಮೊದಲು ಅವನನ್ನು ಕಟ್ಟಿದ ನಂತರ ಅವನ ಮನೆಯನ್ನು ಕೊಳ್ಳೆ ಹೊಡೆಯಬಹುದು.
28ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೆ ಮತ್ತು ದೂಷಣೆಗಳಿಗೆ ಕ್ಷಮಾಪಣೆ ದೊರೆಯುವುದು.
29ಆದರೆ ಪವಿತ್ರಾತ್ಮರನ್ನು ದೂಷಿಸುವವನಿಗೆ ಎಂದಿಗೂ ಕ್ಷಮಾಪಣೆ ದೊರೆಯುವುದಿಲ್ಲ. ಅವನು ನಿತ್ಯ ಪಾಪದ ಅಪರಾಧಿಯಾಗಿದ್ದಾನೆ,” ಎಂದರು.
30“ಆತನಲ್ಲಿ ಅಶುದ್ಧಾತ್ಮವಿದೆ,” ಎಂದು ಅವರು ಹೇಳುತ್ತಿದ್ದುದರಿಂದ ಯೇಸು ಹೀಗೆ ಹೇಳಿದರು.
31ಆಗ ಯೇಸುವಿನ ತಾಯಿ ಮತ್ತು ಸಹೋದರರು ಬಂದು ಹೊರಗೆ ನಿಂತುಕೊಂಡು, ಯೇಸುವನ್ನು ಕರೆಯಲು ಹೇಳಿ ಕಳುಹಿಸಿದರು.
32ಯೇಸುವಿನ ಸುತ್ತಲೂ ಗುಂಪಾಗಿ ಕುಳಿತಿದ್ದ ಜನರು ಅವರಿಗೆ, “ನಿಮ್ಮ ತಾಯಿಯೂ ಸಹೋದರರೂ ನಿಮಗಾಗಿ ಹೊರಗೆ ಕಾದಿದ್ದಾರೆ,” ಎಂದು ಹೇಳಿದರು.
33ಅದಕ್ಕೆ ಯೇಸು, “ನನ್ನ ತಾಯಿ ಮತ್ತು ಸಹೋದರರು ಯಾರು?” ಎಂದು ಕೇಳಿದರು.
34ಅನಂತರ ತಮ್ಮ ಸುತ್ತಲೂ ಕುಳಿತ್ತಿದ್ದವರನ್ನು ನೋಡಿ, “ಇಗೋ, ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು!
35ದೇವರ ಚಿತ್ತದಂತೆ ಮಾಡುವವರೇ ನನ್ನ ಸಹೋದರ, ಸಹೋದರಿ ಮತ್ತು ತಾಯಿ ಆಗಿದ್ದಾರೆ,” ಎಂದು ಹೇಳಿದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.