Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಮಾರ್ಕನು 13

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೇಸು ದೇವಾಲಯದೊಳಗಿಂದ ಹೊರಗೆ ಹೋಗುತ್ತಿದ್ದಾಗ ಅವರ ಶಿಷ್ಯರಲ್ಲಿ ಒಬ್ಬನು ಯೇಸುವಿಗೆ, “ಬೋಧಕರೇ, ಇಲ್ಲಿ ಎಂಥಾ ಭಾರಿ ಕಲ್ಲುಗಳು ಮತ್ತು ಎಂಥಾ ಮಹಾ ಕಟ್ಟಡಗಳು ಇವೆ ನೋಡಿರಿ!” ಎಂದನು.
2ಯೇಸು ಅವನಿಗೆ ಉತ್ತರವಾಗಿ, “ನೀನು ಈ ದೊಡ್ಡ ಕಟ್ಟಡಗಳನ್ನು ನೋಡುತ್ತೀಯೋ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ; ಎಲ್ಲವೂ ಕೆಡವಲಾಗುವವು,” ಎಂದರು.
3ಯೇಸು ಓಲಿವ್ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕುಳಿತುಕೊಂಡಿದ್ದಾಗ ಪೇತ್ರ, ಯಾಕೋಬ, ಯೋಹಾನ, ಅಂದ್ರೆಯ ಇವರು ಪ್ರತ್ಯೇಕವಾಗಿ ಯೇಸುವಿಗೆ,
4“ಇವೆಲ್ಲಾ ಯಾವಾಗ ಆಗುವವು? ಇವೆಲ್ಲವೂ ನೆರವೇರುವುದಕ್ಕೆ ಸೂಚನೆ ಏನು? ನಮಗೆ ಹೇಳು,” ಎಂದು ಕೇಳಿದರು.
5ಯೇಸು ಅವರಿಗೆ ಹೀಗೆಂದನು, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಾಗಿರಿ.
6ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.
7ಇದಲ್ಲದೆ ಯುದ್ಧಗಳನ್ನೂ, ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಾಗ ಕಳವಳಪಡಬೇಡಿರಿ. ಏಕೆಂದರೆ ಇವೆಲ್ಲವು ಸಂಭವಿಸುವುದು ಅಗತ್ಯ. ಆದರೆ ಇದು ಇನ್ನೂ ಅಂತ್ಯವಲ್ಲ.
8ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. ನಾನಾ ಕಡೆಗಳಲ್ಲಿ ಭೂಕಂಪಗಳಾಗುವವು. ಬರಗಾಲಗಳು ಉಂಟಾಗುವವು, ಇವು ಪ್ರಸವವೇದನೆಯ ಪ್ರಾರಂಭ ಮಾತ್ರ.
9“ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಜನರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಒಪ್ಪಿಸುವರು, ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು. ನನ್ನ ನಿಮಿತ್ತವಾಗಿ ಅಧಿಕಾರಿಗಳ ಮತ್ತು ಅರಸರ ಮುಂದೆ ನಿಲ್ಲಿಸುವರು. ಹೀಗೆ ಇದು ಅವರಿಗೆ ಸಾಕ್ಷಿಯಾಗಿರುವುದು.
10ಸುವಾರ್ತೆಯು ಮೊದಲು ಎಲ್ಲಾ ಜನಾಂಗಗಳಲ್ಲಿ ಸಾರುವುದು ಅಗತ್ಯವಾಗಿದೆ.
11ಅವರು ನಿಮ್ಮನ್ನು ಬಂಧಿಸಿ ಒಪ್ಪಿಸುವುದಕ್ಕಾಗಿ ತೆಗೆದುಕೊಂಡು ಹೋಗುವಾಗ ನೀವು ಏನು ಮಾತನಾಡಬೇಕೆಂಬುದನ್ನು ಮುಂಚಿತವಾಗಿಯೇ ಚಿಂತಿಸಬೇಡಿರಿ. ಆ ಗಳಿಗೆಯಲ್ಲಿ ನಿಮ್ಮ ಮನಸ್ಸಿನಲ್ಲಿ ನಿಮಗೆ ಯಾವುದು ಕೊಡಲಾಗುವುದೋ ಅದನ್ನೇ ಮಾತನಾಡಿರಿ. ಏಕೆಂದರೆ ಮಾತನಾಡುವವರು ನೀವಲ್ಲ, ಪವಿತ್ರಾತ್ಮನೇ.
12“ಸಹೋದರನು ತನ್ನ ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು.
13ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಮಾಡುವರು. ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆಹೊಂದುವನು.
14“ಆದರೆ ‘ಅಸಹ್ಯ ವಸ್ತು’ ನಿಲ್ಲಬಾರದ ಸ್ಥಳದಲ್ಲಿ ನಿಂತಿರುವುದನ್ನು ನೀವು ಕಾಣುವಾಗ ಓದುವವನು ತಿಳಿದುಕೊಳ್ಳಲಿ. ಆಗ ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ.
15ಮಾಳಿಗೆಯ ಮೇಲಿದ್ದವರು ಕೆಳಗೆ ಇಳಿದು ಮನೆಯೊಳಕ್ಕೆ ಹೋಗದಿರಲಿ; ತಮ್ಮ ಮನೆಯೊಳಗೆ ಪ್ರವೇಶಿಸಿ ಅದರೊಳಗಿಂದ ಏನನ್ನೂ ತೆಗೆದುಕೊಳ್ಳದಿರಲಿ.
16ಹೊಲದಲ್ಲಿರುವವರು ಬಟ್ಟೆಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂದಿರುಗದಿರಲಿ.
17ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ!
18ಈ ಸಂಕಟ ಚಳಿಗಾಲದಲ್ಲಿ ಆಗದಂತೆ ನೀವು ಪ್ರಾರ್ಥಿಸಿರಿ.
19ಆ ದಿವಸಗಳಲ್ಲಿ ಮಹಾ ಸಂಕಟವಿರುವುದು, ದೇವರು ಜಗತ್ತನ್ನು ಸೃಷ್ಟಿಸಿದ ದಿನದಿಂದ ಮೊದಲುಗೊಂಡು ಈ ಸಮಯದವರೆಗೂ ಅಂಥ ಸಂಕಟವು ಆಗಲಿಲ್ಲ. ಇನ್ನು ಮುಂದೆಯೂ ಆಗುವುದಿಲ್ಲ.
20“ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಯಾರೂ ತಪ್ಪಿಹೋಗುವುದಿಲ್ಲ. ಆದರೆ ತಾನು ಆಯ್ಕೆಯಾದವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಿದ್ದಾರೆ.
21ಆಗ ಯಾರಾದರೂ ನಿಮಗೆ, ‘ಇಗೋ, ಕ್ರಿಸ್ತನು ಇಲ್ಲಿದ್ದಾನೆ, ಅಗೋ, ಆತನು ಅಲ್ಲಿದ್ದಾನೆ,’ ಎಂದು ಹೇಳಿದರೆ ನಂಬಬೇಡಿರಿ.
22ಏಕೆಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು, ಸಾಧ್ಯವಾದರೆ ಆಯ್ಕೆಯಾದವರನ್ನು ಸಹ ಮೋಸಗೊಳಿಸುವಂತೆ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.
23ಆದರೆ ನೀವು ಜಾಗರೂಕರಾಗಿರಿ, ನಾನು ನಿಮಗೆ ಎಲ್ಲವುಗಳನ್ನು ಮುಂದಾಗಿಯೆ ಹೇಳಿದ್ದೇನೆ.
24“ಇದಲ್ಲದೆ ಆ ದಿವಸಗಳಲ್ಲಿ ಸಂಕಟವು ತೀರಿದ ನಂತರ, “ ‘ಸೂರ್ಯನಿಗೆ ಕತ್ತಲು ಮುಸುಕುವುದು; ಚಂದ್ರನು ಕಾಂತಿಹೀನನಾಗುವನು.
25ಆಕಾಶದಿಂದ ನಕ್ಷತ್ರಗಳು ಬೀಳುವವು ಮತ್ತು ಆಕಾಶದ ಶಕ್ತಿಗಳು ಕದಲುವವು.’
26“ಆಗ ಮನುಷ್ಯಪುತ್ರನಾದ ನಾನು ಬಹು ಶಕ್ತಿಯಿಂದಲೂ ಮಹಿಮೆಯಿಂದಲೂ ಮೇಘಗಳಲ್ಲಿ ಬರುವುದನ್ನು ಅವರು ಕಾಣುವರು.
27ನಾನು ನನ್ನ ದೂತರನ್ನು ಕಳುಹಿಸಿ ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯವರೆಗೆ ನಾನು ಆರಿಸಿಕೊಂಡವರನ್ನು ನಾಲ್ಕು ದಿಕ್ಕುಗಳಿಂದಲೂ ಒಟ್ಟುಗೂಡಿಸುವೆನು.
28“ಅಂಜೂರದ ಮರದ ಸಾಮ್ಯದಿಂದ ಈ ಪಾಠವನ್ನು ಕಲಿತುಕೊಳ್ಳಿರಿ: ಅದರ ರೆಂಬೆ ಇನ್ನೂ ಎಳೆಯದಾಗಿದ್ದು ಎಲೆಗಳನ್ನು ಬಿಡುವಾಗ ಬೇಸಿಗೆಯು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ.
29ಅದೇ ಪ್ರಕಾರ ಇವೆಲ್ಲವೂ ಸಂಭವಿಸುವುದನ್ನು ನೀವು ಕಾಣುವಾಗ, ಮನುಷ್ಯಪುತ್ರನಾದ ನಾನು ಬಾಗಿಲ ಹತ್ತಿರದಲ್ಲಿಯೇ ಇದ್ದೇನೆ ಎಂದು ತಿಳಿದುಕೊಳ್ಳಿರಿ.
30ಇವೆಲ್ಲವೂ ನೆರವೇರುವವರೆಗೆ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
31ಭೂಮ್ಯಾಕಾಶಗಳು ಅಳಿದುಹೋಗುವುವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ. ಆ ದಿನವು ಮತ್ತು ಆ ಗಳಿಗೆಯು ಯಾರಿಗೂ ತಿಳಿಯದು
32“ಆ ದಿನದ ಮತ್ತು ಆ ಗಳಿಗೆಯ ವಿಷಯವಾಗಿ ತಂದೆಗೆ ಹೊರತು ಯಾವ ಮನುಷ್ಯನಿಗಾಗಲಿ, ಪರಲೋಕದಲ್ಲಿರುವ ದೂತರಿಗಾಗಲಿ, ಪುತ್ರನಿಗಾಗಲಿ ತಿಳಿಯದು.
33ನೀವು ಎಚ್ಚರವಾಗಿರಿ, ಜಾಗರೂಕರಾಗಿರಿ. ಏಕೆಂದರೆ ಆ ಕಾಲವು ಬರುವುದು ಯಾವಾಗ ಎಂದು ನಿಮಗೆ ತಿಳಿಯದು.
34ಅದು ಒಬ್ಬ ಮನುಷ್ಯನು ದೂರ ಪ್ರಯಾಣಕ್ಕಾಗಿ ತನ್ನ ಮನೆಯನ್ನು ಬಿಟ್ಟು, ತನ್ನ ಸೇವಕರಿಗೆ ಅಧಿಕಾರವನ್ನೂ ಪ್ರತಿಯೊಬ್ಬನಿಗೆ ಅವನವನ ಕೆಲಸವನ್ನು ಕೊಟ್ಟು ಬಾಗಿಲು ಕಾಯುವವನಿಗೆ ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇರುತ್ತದೆ ಎಂದು ನಾನು ನಿಮಗೆ ಹೇಳುತ್ತಿದ್ದೇನೆ.
35“ಆದ್ದರಿಂದ ಜಾಗರೂಕರಾಗಿರಿ. ಮನೆಯಜಮಾನನು ಸಂಜೆಯಲ್ಲಿಯೋ ಮಧ್ಯರಾತ್ರಿಯಲ್ಲಿಯೋ ಹುಂಜ ಕೂಗುವಾಗಲೋ ಬೆಳಕಾಗುವಾಗಲೋ, ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲ.
36ಆತನು ಫಕ್ಕನೆ ಬಂದು ನೀವು ನಿದ್ರೆ ಮಾಡುವುದನ್ನು ಕಂಡಾನು.
37ನಿಮಗೆ ಹೇಳುವುದನ್ನು ನಾನು ಎಲ್ಲರಿಗೂ ಹೇಳುತ್ತೇನೆ: ‘ಎಚ್ಚರವಾಗಿರಿ,’ ” ಎಂದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.