Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಮತ್ತಾಯನು 9

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೇಸು ದೋಣಿ ಹತ್ತಿ, ಸರೋವರವನ್ನು ದಾಟಿ ತಮ್ಮ ಸ್ವಂತ ಪಟ್ಟಣಕ್ಕೆ ಬಂದರು.
2ಆಗ ಹಾಸಿಗೆಯ ಮೇಲೆ ಮಲಗಿದ್ದ, ಒಬ್ಬ ಪಾರ್ಶ್ವವಾಯು ರೋಗಿಯನ್ನು ಜನರು ಯೇಸುವಿನ ಬಳಿಗೆ ತಂದರು. ಯೇಸು ಅವರ ನಂಬಿಕೆಯನ್ನು ಕಂಡು, ಆ ಪಾರ್ಶ್ವವಾಯು ರೋಗಿಗೆ, “ಮಗನೇ, ಧೈರ್ಯವಾಗಿರು. ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದರು.
3ಆಗ ನಿಯಮ ಬೋಧಕರಲ್ಲಿ ಕೆಲವರು, “ಈತನು ದೇವದೂಷಣೆ ಮಾಡುತ್ತಿದ್ದಾನೆ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
4ಯೇಸು ಅವರ ಆಲೋಚನೆಗಳನ್ನು ತಿಳಿದುಕೊಂಡು, “ನೀವು ನಿಮ್ಮ ಮನಸ್ಸಿನಲ್ಲಿ ಕೆಟ್ಟದ್ದನ್ನು ಯೋಚಿಸುವುದೇಕೆ?
5ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲಾಗಿವೆ,’ ಎನ್ನುವುದೋ ಅಥವಾ ‘ಎದ್ದು ನಡೆ,’ ಎನ್ನುವುದೋ?
6ಆದರೆ ಮನುಷ್ಯಪುತ್ರನಾದ ನನಗೆ ಈ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವುದಕ್ಕೆ ಅಧಿಕಾರವುಂಟೆಂದು ನೀವು ತಿಳಿಯಬೇಕು,” ಎಂದು ಹೇಳಿ ಆ ಪಾರ್ಶ್ವವಾಯು ರೋಗಿಗೆ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು.
7ಆಗ ಅವನು ಎದ್ದು ತನ್ನ ಮನೆಗೆ ಹೊರಟುಹೋದನು.
8ಜನರ ಗುಂಪು ಇದನ್ನು ಕಂಡು ಬೆರಗಾಗಿ, ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟ ದೇವರನ್ನು ಕೊಂಡಾಡಿದರು. ಮತ್ತಾಯನ ಕರೆಯುವಿಕೆ
9ಯೇಸು ಅಲ್ಲಿಂದ ಹಾದುಹೋಗುತ್ತಿದ್ದಾಗ, ಮತ್ತಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಸುಂಕದ ಕಟ್ಟೆಯಲ್ಲಿ ಕೂತಿರುವುದನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು,” ಎಂದು ಹೇಳಿದರು. ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು.
10ಇದಾದ ಮೇಲೆ ಯೇಸು ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ, ಬಹುಮಂದಿ ಸುಂಕದವರೂ ಅಪಖ್ಯಾತಿಯ ಪಾಪಿಗಳೂ ಬಂದು ಯೇಸುವಿನೊಂದಿಗೂ ಅವರ ಶಿಷ್ಯರೊಂದಿಗೂ ಕುಳಿತುಕೊಂಡರು.
11ಫರಿಸಾಯರು ಇದನ್ನು ಕಂಡು, “ನಿಮ್ಮ ಬೋಧಕನು ಸುಂಕದವರ ಮತ್ತು ಅಪಖ್ಯಾತಿಯ ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಯೇಸುವಿನ ಶಿಷ್ಯರನ್ನು ಕೇಳಿದರು.
12ಆದರೆ ಯೇಸು ಇದನ್ನು ಕೇಳಿ ಅವರಿಗೆ, “ಆರೋಗ್ಯವಂತರಿಗೆ ವೈದ್ಯನು ಅವಶ್ಯವಿಲ್ಲ, ರೋಗಿಗಳಿಗೆ ವೈದ್ಯನು ಅವಶ್ಯ.
13ಆದರೆ ನೀವು ಹೋಗಿ, ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ,’ ಎಂಬುದರ ಅರ್ಥವನ್ನು ಕಲಿತುಕೊಳ್ಳಿರಿ. ಏಕೆಂದರೆ ನಾನು ನೀತಿವಂತರನ್ನಲ್ಲ, ಪಾಪಿಗಳನ್ನು ಕರೆಯಲು ಬಂದಿದ್ದೇನೆ,” ಎಂದು ಹೇಳಿದರು. ಯೇಸುವಿಗೆ ಉಪವಾಸದ ವಿಷಯ ಪ್ರಶ್ನಿಸಿದ್ದು
14ಬಳಿಕ ಯೋಹಾನನ ಶಿಷ್ಯರು ಯೇಸುವಿನ ಬಳಿಗೆ ಬಂದು, “ನಾವೂ, ಫರಿಸಾಯರೂ ಉಪವಾಸ ಮಾಡುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಉಪವಾಸಮಾಡುವುದಿಲ್ಲ?” ಎಂದು ಕೇಳಿದರು.
15ಅದಕ್ಕೆ ಯೇಸು ಅವರಿಗೆ, “ಮದುಮಗನು ತಮ್ಮ ಜೊತೆಯಲ್ಲಿ ಇರುವ ತನಕ ಮದುಮಗನ ಆಪ್ತರು ದುಃಖಪಡುವುದುಂಟೇ? ಆದರೆ ಮದುಮಗನು ಅಗಲಬೇಕಾಗುವ ದಿವಸಗಳು ಬರುತ್ತವೆ; ಆಗ ಅವರು ಉಪವಾಸ ಮಾಡುವರು.
16“ಯಾರೂ ಹಳೆಯ ವಸ್ತ್ರಕ್ಕೆ ಹೊಸ ಬಟ್ಟೆಯ ತೇಪೆಯನ್ನು ಹಾಕುವುದಿಲ್ಲ. ಏಕೆಂದರೆ ಅದು ಆ ವಸ್ತ್ರವನ್ನು ಹಿಂಜುವುದರಿಂದ ಹರಕು ಹೆಚ್ಚಾಗುವುದು.
17ಅಂತೆಯೇ ಜನರು ಹೊಸ ದ್ರಾಕ್ಷಾರಸವನ್ನು ಹಳೆಯ ಚರ್ಮದ ಚೀಲಗಳಲ್ಲಿ ತುಂಬಿಡುವುದಿಲ್ಲ. ಅವರು ಹಾಗೇನಾದರೂ ಮಾಡಿದರೆ ಚರ್ಮದ ಚೀಲಗಳು ಹರಿದು, ದ್ರಾಕ್ಷಾರಸವು ಚೆಲ್ಲಿಹೋಗಿ ಚರ್ಮದ ಚೀಲಗಳು ಹಾಳಾಗುತ್ತವೆ. ಹೊಸ ದ್ರಾಕ್ಷಾರಸವನ್ನು ಹೊಸ ಚರ್ಮದ ಚೀಲಗಳಲ್ಲಿ ತುಂಬಿಡುತ್ತಾರೆ. ಆಗ ಅವೆರಡೂ ಉಳಿಯುತ್ತವೆ,” ಎಂದರು. ಸತ್ತ ಬಾಲಕಿ ಮತ್ತು ರೋಗಿಯಾದ ಸ್ತ್ರೀ
18ಯೇಸು ಇದೆಲ್ಲವನ್ನು ಅವರೊಂದಿಗೆ ಮಾತನಾಡುತ್ತಿದ್ದಾಗ, ಸಭಾಮಂದಿರದ ಒಬ್ಬ ಅಧಿಕಾರಿಯು ಬಂದು ಯೇಸುವಿನ ಮುಂದೆ ಮೊಣಕಾಲೂರಿ, “ನನ್ನ ಮಗಳು ಈಗ ತಾನೆ ಸತ್ತುಹೋದಳು. ಆದರೂ ನೀವು ಬಂದು ಆಕೆಯ ಮೇಲೆ ನಿಮ್ಮ ಕೈಯನ್ನಿಡಿರಿ; ಆಗ ಅವಳು ಬದುಕುವಳು,” ಎಂದು ಹೇಳಿದನು.
19ಯೇಸು ಎದ್ದು ತಮ್ಮ ಶಿಷ್ಯರೊಂದಿಗೆ ಆ ಅಧಿಕಾರಿಯ ಹಿಂದೆ ಹೋದರು.
20ಆಗ ಅಲ್ಲಿ ಹನ್ನೆರಡು ವರ್ಷಗಳಿಂದ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀಯು ಹಿಂಬದಿಯಿಂದ ಬಂದು, ಯೇಸುವಿನ ನಿಲುವಂಗಿಯ ಅಂಚನ್ನು ಮುಟ್ಟಿ,
21“ನಾನು ಯೇಸುವಿನ ಉಡುಪನ್ನು ಮುಟ್ಟಿದರೆ ಸಾಕು, ನನಗೆ ಗುಣವಾಗುವುದು,” ಎಂದು ಆಕೆಯು ತನ್ನೊಳಗೆ ಹೇಳಿಕೊಂಡಳು.
22ಯೇಸು ಹಿಂತಿರುಗಿ ಆಕೆಯನ್ನು ನೋಡಿ, “ಮಗಳೇ, ಧೈರ್ಯವಾಗಿರು; ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ,” ಎಂದರು. ಆ ಗಳಿಗೆಯಲ್ಲೇ ಆ ಸ್ತ್ರೀಯು ಸ್ವಸ್ಥಳಾದಳು.
23ತರುವಾಯ ಯೇಸು ಆ ಅಧಿಕಾರಿಯ ಮನೆಯೊಳಗೆ ಬಂದು ಕೊಳಲೂದುವವರನ್ನೂ ಜನರ ಗೊಂದಲವನ್ನೂ ಕಂಡು,
24ಅವರಿಗೆ, “ಹೊರಗೆ ಹೋಗಿರಿ, ಬಾಲಕಿಯು ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ,” ಎಂದರು. ಅದಕ್ಕವರು ನಕ್ಕು ಯೇಸುವನ್ನು ಹಾಸ್ಯಮಾಡಿದರು.
25ಆದರೆ ಜನರನ್ನು ಹೊರಗೆ ಕಳುಹಿಸಿದ ಮೇಲೆ ಯೇಸು ಒಳಗೆ ಹೋಗಿ, ಬಾಲಕಿಯ ಕೈಯನ್ನು ಹಿಡಿದು ಎಬ್ಬಿಸಿದಾಗ ಬಾಲಕಿಯು ಎದ್ದಳು.
26ಈ ಸಮಾಚಾರವು ನಾಡಿನಲ್ಲೆಲ್ಲಾ ಹರಡಿತು. ಯೇಸು ಕುರುಡರನ್ನು ಮತ್ತು ಮೂಕನನ್ನು ಸ್ವಸ್ಥಮಾಡಿದ್ದು
27ಯೇಸು ಅಲ್ಲಿಂದ ಹೋಗುತ್ತಿರುವಾಗ ಇಬ್ಬರು ಕುರುಡರು, “ದಾವೀದನ ಪುತ್ರನೇ, ನಮ್ಮ ಮೇಲೆ ಕರುಣೆಯಿಡು,” ಎಂದು ಮೊರೆಯಿಡುತ್ತಾ ಯೇಸುವಿನ ಹಿಂದೆ ಹೋದರು.
28ಯೇಸು ಮನೆಗೆ ಬಂದಾಗ, ಆ ಕುರುಡರು ಅವರ ಬಳಿಗೆ ಬಂದರು. ಆಗ ಯೇಸು ಅವರಿಗೆ, “ನಾನು ಇದನ್ನು ಮಾಡಲು ಶಕ್ತನೆಂದು ನೀವು ನಂಬುತ್ತೀರೋ?” ಎಂದು ಕೇಳಿದರು. ಅದಕ್ಕವರು ಯೇಸುವಿಗೆ, “ಹೌದು ಕರ್ತನೆ,” ಎಂದರು.
29ಆಗ ಯೇಸು ಅವರ ಕಣ್ಣುಗಳನ್ನು ಮುಟ್ಟಿ, “ನಿಮ್ಮ ನಂಬಿಕೆಯಂತೆ ನಿಮಗಾಗಲಿ,” ಎಂದು ಹೇಳಿದರು.
30ಆಗ ಅವರಿಗೆ ದೃಷ್ಟಿ ಬಂದಿತು. ಯೇಸು ಅವರಿಗೆ, “ಇದು ಯಾರಿಗೂ ತಿಳಿಯಬಾರದು,” ಎಂದು ಅವರಿಗೆ ಖಂಡಿತವಾಗಿ ಎಚ್ಚರಿಸಿದರು.
31ಆದರೆ ಸ್ವಸ್ಥರಾದವರು ಹೊರಟುಹೋಗಿ, ಆ ನಾಡಿನಲ್ಲೆಲ್ಲಾ ಯೇಸುವಿನ ಕೀರ್ತಿಯನ್ನು ಹರಡಿದರು.
32ಯೇಸು ಮತ್ತು ಶಿಷ್ಯರು ಹೊರಟು ಹೋಗುತ್ತಿದ್ದಾಗ, ದೆವ್ವ ಹಿಡಿದಿದ್ದ ಒಬ್ಬ ಮೂಕನನ್ನು ಕೆಲವರು ಯೇಸುವಿನ ಬಳಿಗೆ ತಂದರು.
33ದೆವ್ವ ಬಿಡಿಸಿದ ಮೇಲೆ, ಆ ಮೂಕನು ಮಾತನಾಡಿದನು. ಜನರು ಆಶ್ಚರ್ಯಪಟ್ಟು, “ಇಂಥದ್ದನ್ನು ಎಂದೂ ಇಸ್ರಾಯೇಲಿನಲ್ಲಿ ಕಂಡಿಲ್ಲ,” ಎಂದು ಹೇಳಿದರು.
34ಆದರೆ ಫರಿಸಾಯರು, “ದೆವ್ವಗಳ ಅಧಿಪತಿಯಿಂದಲೇ ಈತನು ದೆವ್ವಗಳನ್ನು ಓಡಿಸುತ್ತಾನೆ,” ಎಂದರು. ಕೆಲಸದವರು ಕೆಲವರೇ
35ಯೇಸು ಎಲ್ಲಾ ಹಳ್ಳಿಗಳಲ್ಲಿಯೂ ಪಟ್ಟಣಗಳಲ್ಲಿಯೂ ಇದ್ದ ಸಭಾಮಂದಿರಗಳಲ್ಲಿ ಬೋಧಿಸುತ್ತಾ, ರಾಜ್ಯದ ಸುವಾರ್ತೆಯನ್ನು ಸಾರುತ್ತಾ, ಜನರ ಪ್ರತಿಯೊಂದು ವ್ಯಾಧಿಯನ್ನೂ ರೋಗವನ್ನೂ ಗುಣಪಡಿಸುತ್ತಾ ಸಂಚರಿಸಿದರು.
36ಜನಸಮೂಹವೂ ಕುರುಬನಿಲ್ಲದ ಕುರಿಗಳಂತೆ ಅಲೆಯುವವರಾಗಿಯೂ ನಿಸ್ಸಹಾಯಕರಾಗಿಯೂ ಇರುವುದನ್ನು ಕಂಡು ಯೇಸು ಅವರ ಮೇಲೆ ಕನಿಕರಪಟ್ಟರು.
37ಆಗ ಯೇಸು ತಮ್ಮ ಶಿಷ್ಯರಿಗೆ, “ಬೆಳೆಯೇನೋ ಬಹಳವಾಗಿದೆ, ಕೆಲಸದವರೋ ಕೆಲವರು.
38ಆದ್ದರಿಂದ, ಬೆಳೆಯ ಯಜಮಾನನನ್ನು ತನ್ನ ಬೆಳೆಗೆ ತಕ್ಕಷ್ಟು ಕೆಲಸದವರನ್ನು ಕಳುಹಿಸುವಂತೆ, ನೀವು ಬೇಡಿಕೊಳ್ಳಿರಿ,” ಎಂದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.