Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಮತ್ತಾಯನು 4

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆಮೇಲೆ ಸೈತಾನನಿಂದ ಶೋಧಿತರಾಗಲೆಂದು ಪವಿತ್ರಾತ್ಮರು ಯೇಸುವನ್ನು ಅರಣ್ಯಕ್ಕೆ ನಡೆಸಿದರು.
2ನಲವತ್ತು ದಿನ ಹಗಲೂ ರಾತ್ರಿ ಉಪವಾಸವಿದ್ದ ಮೇಲೆ ಯೇಸುವಿಗೆ ಹಸಿವಾಯಿತು.
3ಆಗ ಶೋಧಕನು ಯೇಸುವಿನ ಬಳಿ ಬಂದು, “ನೀನು ದೇವರ ಪುತ್ರನಾಗಿದ್ದರೆ, ಈ ಕಲ್ಲುಗಳು ರೊಟ್ಟಿಗಳಾಗುವಂತೆ ಆಜ್ಞಾಪಿಸು,” ಎಂದನು.
4ಅದಕ್ಕೆ ಯೇಸು, “ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ, ‘ಮನುಷ್ಯನು ಜೀವಿಸುವುದು ರೊಟ್ಟಿಯಿಂದ ಮಾತ್ರವಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಜೀವಿಸುತ್ತಾನೆ,’” ಎಂದರು.
5ಆಮೇಲೆ ಸೈತಾನನು ಯೇಸುವನ್ನು ಪವಿತ್ರ ನಗರಕ್ಕೆ ಕರೆದುಕೊಂಡು ಹೋಗಿ ದೇವಾಲಯದ ಅತಿ ಎತ್ತರವಾದ ಶಿಖರದ ಮೇಲೆ ನಿಲ್ಲಿಸಿ,
6“ನೀನು ದೇವರ ಪುತ್ರನಾಗಿದ್ದರೆ, ಕೆಳಕ್ಕೆ ಧುಮುಕು. ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ: “ ‘ದೇವರು ನಿನ್ನ ವಿಷಯವಾಗಿ ತಮ್ಮ ದೂತರಿಗೆ ಆಜ್ಞಾಪಿಸುವರು, ನಿನ್ನ ಪಾದಗಳು ಕಲ್ಲಿಗೆ ತಗಲದಂತೆ ದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು,’” ಎಂದನು.
7ಅದಕ್ಕೆ ಯೇಸು, “ ‘ನಿನ್ನ ದೇವರಾದ ಕರ್ತದೇವರನ್ನು ಪರೀಕ್ಷಿಸಬಾರದು’ ಎಂಬುದನ್ನು ಸಹ ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.
8ಅನಂತರ ಸೈತಾನನು ಯೇಸುವನ್ನು ಬಹಳ ಎತ್ತರವಾದ ಪರ್ವತಕ್ಕೆ ಕರೆದುಕೊಂಡು ಹೋಗಿ, ಲೋಕದ ಎಲ್ಲಾ ರಾಜ್ಯಗಳನ್ನೂ ಅವುಗಳ ಮಹಿಮೆಯನ್ನೂ ಅವರಿಗೆ ತೋರಿಸಿ,
9“ನೀನು ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವೆಲ್ಲವನ್ನು ನಿನಗೆ ಕೊಡುವೆನು,” ಎಂದನು.
10ಯೇಸು ಅವನಿಗೆ, “ಸೈತಾನನೇ, ತೊಲಗು. ಏಕೆಂದರೆ, ‘ನಿನ್ನ ಕರ್ತದೇವರನ್ನು ಆರಾಧಿಸಿ, ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು,’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.
11ಆಗ ಸೈತಾನನು ಯೇಸುವನ್ನು ಬಿಟ್ಟುಹೋದನು. ದೇವದೂತರು ಬಂದು ಅವರಿಗೆ ಉಪಚಾರ ಮಾಡಿದರು. ಯೇಸುವಿನ ಉಪದೇಶದ ಪ್ರಾರಂಭ
12ಯೋಹಾನನು ಬಂಧಿತನಾದನೆಂದು ಕೇಳಿ, ಯೇಸು ಗಲಿಲಾಯಕ್ಕೆ ಹಿಂದಿರುಗಿದರು.
13ಬಳಿಕ ನಜರೇತನ್ನು ಬಿಟ್ಟು, ಜೆಬುಲೂನ್ ಮತ್ತು ನೆಫ್ತಲೀಮ್ ಪ್ರಾಂತಗಳಿಗೆ ಬಂದು ಸರೋವರದ ಬಳಿಯಲ್ಲಿದ್ದ ಕಪೆರ್ನೌಮ್ ಎಂಬ ಊರಿನಲ್ಲಿ ವಾಸಮಾಡಿದರು.
14ಹೀಗೆ ಪ್ರವಾದಿ ಯೆಶಾಯನ ಮುಖಾಂತರ ಹೇಳಿಸಿರುವ ಈ ಮಾತು ನೆರವೇರಿತು. ಅದೇನೆಂದರೆ:
15“ಜೆಬುಲೂನ್ ನಾಡು ಮತ್ತು ನೆಫ್ತಲೀಮ್ ನಾಡು, ಯೊರ್ದನ್ ನದಿಯ ಆಚೆ ಸರೋವರದ ಕಡೆ, ಯೆಹೂದ್ಯರಲ್ಲದವರಿರುವ ಗಲಿಲಾಯ ನಾಡು,
16ಕತ್ತಲಲ್ಲಿ ವಾಸಿಸಿದ ಈ ಸ್ಥಳಗಳ ಜನರಿಗೆ ಮಹಾ ಬೆಳಕು ಕಾಣಿಸಿತು; ಮರಣ ಛಾಯೆಯ ಈ ಪ್ರದೇಶದಲ್ಲಿ ವಾಸಿಸುವವರಿಗೆ ಬೆಳಕು ಉದಯಿಸಿತು.”
17ಅಂದಿನಿಂದ ಯೇಸು, “ದೇವರ ಕಡೆಗೆ ತಿರುಗಿಕೊಳ್ಳಿರಿ, ಪರಲೋಕ ರಾಜ್ಯವು ಸಮೀಪಿಸಿದೆ,” ಎಂದು ಬೋಧಿಸತೊಡಗಿದರು. ಯೇಸು ಪ್ರಥಮ ಶಿಷ್ಯರನ್ನು ಕರೆದದ್ದು
18ಯೇಸು ಗಲಿಲಾಯ ಸರೋವರದ ತೀರದಲ್ಲಿ ನಡೆದುಹೋಗುತ್ತಿರುವಾಗ, ಪೇತ್ರ ಎನಿಸಿಕೊಂಡ ಸೀಮೋನನನ್ನೂ ಅವನ ಸಹೋದರ ಅಂದ್ರೆಯನನ್ನೂ ಕಂಡರು. ಬೆಸ್ತರಾಗಿದ್ದ ಅವರು ಸರೋವರದಲ್ಲಿ ಬಲೆ ಬೀಸುತ್ತಿದ್ದರು.
19ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿರಿ. ನಾನು ನಿಮ್ಮನ್ನು, ಮನುಷ್ಯರನ್ನು ದೇವರ ಮಾರ್ಗದಲ್ಲಿ ನಡೆಸುವವರನ್ನಾಗಿ ಮಾಡುವೆನು,” ಎಂದು ಹೇಳಿದರು.
20ತಕ್ಷಣವೇ, ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
21ಯೇಸು ಅಲ್ಲಿಂದ ಮುಂದೆ ಹೋಗುತ್ತಿದ್ದಾಗ ಇನ್ನಿಬ್ಬರು ಅಣ್ಣತಮ್ಮಂದಿರನ್ನು ಅಂದರೆ, ಜೆಬೆದಾಯನ ಮಗ ಯಾಕೋಬ ಮತ್ತು ಅವನ ಸಹೋದರ ಯೋಹಾನನನ್ನು ಕಂಡರು. ಅವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯೊಳಗೆ ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಅವರನ್ನೂ ಕರೆದರು.
22ಕೂಡಲೇ, ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಯೇಸು ಅಸ್ವಸ್ಥರನ್ನು ಗುಣಪಡಿಸಿದ್ದು
23ಯೇಸು ಗಲಿಲಾಯದಲ್ಲೆಲ್ಲಾ ಸಂಚರಿಸಿ, ಯೆಹೂದ್ಯರ ಸಭಾಮಂದಿರಗಳಲ್ಲಿ ಬೋಧಿಸುತ್ತಾ, ರಾಜ್ಯದ ಸುವಾರ್ತೆಯನ್ನು ಸಾರುತ್ತಾ, ಜನರಲ್ಲಿದ್ದ ಸಕಲ ವಿಧವಾದ ವ್ಯಾಧಿಗಳನ್ನೂ ಸಕಲ ವಿಧವಾದ ಬೇನೆಗಳನ್ನೂ ಗುಣಪಡಿಸುತ್ತಾ ಬಂದರು.
24ಯೇಸುವಿನ ಸುದ್ದಿ ಸಿರಿಯಾ ದೇಶದಲ್ಲೆಲ್ಲಾ ಹಬ್ಬಿದ್ದರಿಂದ, ಜನರು ವಿವಿಧ ವ್ಯಾಧಿಗಳಿಂದಲೂ ತೀವ್ರ ವೇದನೆಯಿಂದಲೂ ಅಸ್ವಸ್ಥರಾದವರನ್ನೂ ದೆವ್ವ ಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯು ಪೀಡಿತರನ್ನೂ ಅವರ ಬಳಿಗೆ ಕರೆದುಕೊಂಡು ಬಂದರು; ಯೇಸು ಅವರನ್ನೆಲ್ಲಾ ಗುಣಪಡಿಸಿದರು.
25ಗಲಿಲಾಯ, ದೆಕಪೊಲಿ, ಯೆರೂಸಲೇಮ್, ಯೂದಾಯ ಹಾಗೂ ಯೊರ್ದನ್ ನದಿಯ ಆಚೆಕಡೆಯಿಂದಲೂ ಜನರು ದೊಡ್ಡ ಗುಂಪಾಗಿ ಯೇಸುವನ್ನು ಹಿಂಬಾಲಿಸಿದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.