Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಮತ್ತಾಯನು 28

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಸಬ್ಬತ್ ಮುಗಿದ ಮೇಲೆ, ವಾರದ ಮೊದಲನೆಯ ದಿನ ಬೆಳಗಾಗುವಾಗ ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಬಂದರು.
2ಆಗ ಮಹಾ ಭೂಕಂಪವಾಯಿತು. ಕರ್ತನ ದೂತನು ಪರಲೋಕದಿಂದ ಇಳಿದುಬಂದು, ಬಾಗಿಲಿನಿಂದ ಬಂಡೆಯನ್ನು ಉರುಳಿಸಿ ಅದರ ಮೇಲೆ ಕುಳಿತುಕೊಂಡನು.
3ಅವನ ರೂಪವು ಮಿಂಚಿನಂತೆಯೂ ಅವನ ಉಡುಪು ಹಿಮದಂತೆಯೂ ಬಿಳುಪಾಗಿತ್ತು.
4ಕಾವಲುಗಾರರು ಅವನಿಗೆ ಭಯಪಟ್ಟು ನಡುಗುತ್ತಾ ಸತ್ತಂತಾದರು.
5ಆ ದೂತನು ಸ್ತ್ರೀಯರಿಗೆ, “ನೀವು ಭಯಪಡಬೇಡಿರಿ. ಶಿಲುಬೆಗೇರಿಸಿದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು.
6ಅವರು ಇಲ್ಲಿ ಇಲ್ಲ. ಅವರು ಹೇಳಿದಂತೆಯೇ ಜೀವಂತರಾಗಿ ಎದ್ದಿದ್ದಾರೆ. ಕರ್ತನನ್ನು ಇಟ್ಟಿದ್ದ ಸ್ಥಳವನ್ನು ಬಂದು ನೋಡಿರಿ.
7ಬೇಗನೆ ಹೋಗಿ ಅವರ ಶಿಷ್ಯರಿಗೆ, ‘ಅವರು ಮರಣದಿಂದ ಎದ್ದಿದ್ದಾರೆ. ಅವರು ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುತ್ತಾರೆ. ನೀವು ಅಲ್ಲಿಯೇ ಅವರನ್ನು ಕಾಣುವಿರಿ,’ ಎಂದು ತಿಳಿಸಿರಿ. ಇದೇ ನಾನು ನಿಮಗೆ ತಿಳಿಸಬೇಕಾದ ಸಂಗತಿ,” ಎಂದನು.
8ಅವರು ಭಯದಿಂದಲೂ ಮಹಾ ಸಂತೋಷದಿಂದಲೂ ಸಮಾಧಿಯಿಂದ ಬೇಗನೆ ಹೊರಟು, ಶಿಷ್ಯರಿಗೆ ತಿಳಿಸುವುದಕ್ಕಾಗಿ ಓಡಿಹೋದರು.
9ಅವರು ಶಿಷ್ಯರಿಗೆ ತಿಳಿಸುವುದಕ್ಕೆ ಹೋಗುತ್ತಿದ್ದಾಗ, ಯೇಸು ಅವರನ್ನು ಸಂಧಿಸಿ, “ಶುಭವಾಗಲಿ” ಎಂದರು. ಅವರು ಬಂದು ಯೇಸುವಿನ ಪಾದಗಳನ್ನು ಹಿಡಿದು ಅವರನ್ನು ಆರಾಧಿಸಿದರು.
10ಆಗ ಯೇಸು ಅವರಿಗೆ, “ಭಯಪಡಬೇಡಿರಿ, ನನ್ನ ಸಹೋದರರು ಗಲಿಲಾಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವರೆಂದೂ ಹೋಗಿ ಅವರಿಗೆ ಹೇಳಿರಿ,” ಎಂದರು. ಕಾವಲುಗಾರರ ವರದಿ
11ಅವರು ಹೋಗುತ್ತಿರುವಾಗ, ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ಮುಖ್ಯಯಾಜಕರಿಗೆ ನಡೆದ ಸಂಗತಿಗಳನ್ನೆಲ್ಲಾ ಹೇಳಿದರು.
12ಇವರು ಹಿರಿಯರೊಂದಿಗೆ ಕೂಡಿಬಂದು ಆಲೋಚನೆ ಮಾಡಿ ಸೈನಿಕರಿಗೆ ಬಹಳ ಹಣಕೊಟ್ಟು,
13“ ‘ನಾವು ನಿದ್ರೆ ಮಾಡುತ್ತಿದ್ದಾಗ ಅವನ ಶಿಷ್ಯರು ರಾತ್ರಿಯಲ್ಲಿ ಬಂದು ಅವನನ್ನು ಕದ್ದುಕೊಂಡು ಹೋದರು,’ ಎಂದು ನೀವು ಹೇಳಿರಿ.
14ಇದು ರಾಜ್ಯಪಾಲನ ಕಿವಿಗೆ ಬಿದ್ದರೆ, ನೀವು ತಪ್ಪಿಸಿಕೊಳ್ಳುವ ಹಾಗೆ ನಾವು ಅವನನ್ನು ಸಮಾಧಾನಪಡಿಸುವೆವು,” ಎಂದರು.
15ಹೀಗೆ ಅವರು ಆ ಹಣವನ್ನು ತೆಗೆದುಕೊಂಡು ತಮಗೆ ಕಲಿಸಿದಂತೆ ವರದಿಮಾಡಿದರು. ಈ ಕಥೆಯು ಈ ದಿನದವರೆಗೂ ಯೆಹೂದ್ಯರಲ್ಲಿ ಹಬ್ಬಿದೆ. ಮಹಾ ಆದೇಶವು
16ಆಗ ಹನ್ನೊಂದು ಮಂದಿ ಶಿಷ್ಯರು ಯೇಸು ತಮಗೆ ನೇಮಿಸಿದ ಗಲಿಲಾಯದಲ್ಲಿರುವ ಬೆಟ್ಟಕ್ಕೆ ಹೋದರು.
17ಅವರು ಯೇಸುವನ್ನು ಕಂಡು ಆರಾಧಿಸಿದರು. ಆದರೆ ಕೆಲವರು ಸಂದೇಹ ಪಟ್ಟರು.
18ಯೇಸು ಬಂದು ಅವರೊಂದಿಗೆ ಮಾತನಾಡಿ, “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ ನನಗೆ ಕೊಡಲಾಗಿದೆ.
19ಆದ್ದರಿಂದ ನೀವು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ,
20ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಅನುಸರಿಸುವ ಹಾಗೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಎಲ್ಲಾ ದಿವಸ ನಾನು ನಿಮ್ಮ ಸಂಗಡ ಇರುತ್ತೇನೆ,” ಎಂದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.