Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಮತ್ತಾಯನು 19

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ಮೇಲೆ, ಗಲಿಲಾಯದಿಂದ ಹೊರಟು ಯೊರ್ದನ್ ನದಿಯ ಆಚೆಯ ಯೂದಾಯ ಪ್ರಾಂತಕ್ಕೆ ಬಂದರು.
2ಜನರ ದೊಡ್ಡ ಸಮೂಹಗಳು ಅವರನ್ನು ಹಿಂಬಾಲಿಸಿದವು, ಯೇಸು ಅವರನ್ನು ಅಲ್ಲಿ ಸ್ವಸ್ಥಮಾಡಿದರು.
3ಫರಿಸಾಯರಲ್ಲಿ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಅವರ ಬಳಿಗೆ ಬಂದು, “ಒಬ್ಬ ಪುರುಷನು ಯಾವ ಕಾರಣದಿಂದಾದರೂ ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?” ಎಂದು ಕೇಳಿದರು.
4ಯೇಸು ಉತ್ತರವಾಗಿ ಅವರಿಗೆ, “ಆದಿಯಿಂದಲೇ ಸೃಷ್ಟಿಕರ್ತ, ‘ಅವರನ್ನು ಗಂಡು ಹೆಣ್ಣಾಗಿ ಮಾಡಿದರು.
5ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಶರೀರವಾಗಿರುವರು,’ ಎಂದು ಹೇಳಿದ್ದನ್ನು ನೀವು ಓದಲಿಲ್ಲವೇ?
6ಆದ್ದರಿಂದ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದಕಾರಣ ದೇವರು ಕೂಡಿಸಿದ್ದನ್ನು, ಮನುಷ್ಯನು ಅಗಲಿಸಬಾರದು,” ಎಂದು ಹೇಳಿದರು.
7ಅದಕ್ಕೆ ಅವರು ಯೇಸುವಿಗೆ, “ಹಾಗಾದರೆ ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಆಕೆಯನ್ನು ಬಿಟ್ಟು ಬಿಡಬಹುದೆಂದು ಮೋಶೆಯು ಏಕೆ ಅಪ್ಪಣೆಕೊಟ್ಟನು?” ಎಂದು ಕೇಳಿದರು.
8ಯೇಸು ಉತ್ತರವಾಗಿ ಅವರಿಗೆ, “ಮೋಶೆಯು ನಿಮ್ಮ ಹೃದಯ ಕಾಠಿಣ್ಯದ ದೆಸೆಯಿಂದ ಹೆಂಡತಿಯನ್ನು ಬಿಟ್ಟುಬಿಡುವುದಕ್ಕೆ ನಿಮಗೆ ಅನುಮತಿ ಕೊಟ್ಟನು. ಆದರೆ ಆದಿಯಿಂದ ಅದು ಹಾಗೆ ಇರಲಿಲ್ಲ.
9ನಾನು ನಿಮಗೆ ಹೇಳುವುದೇನೆಂದರೆ, ಹಾದರದ ಕಾರಣದಿಂದಲ್ಲದೆ, ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟು, ಮತ್ತೊಬ್ಬಳನ್ನು ಮದುವೆಯಾಗುವವನು ವ್ಯಭಿಚಾರ ಮಾಡುವವನಾಗಿದ್ದಾನೆ,” ಎಂದರು.
10ಆಗ ಶಿಷ್ಯರು ಯೇಸುವಿಗೆ, “ಸತಿಪತಿಯರ ಸಂಬಂಧ ಹೀಗಿರುವುದಾದರೆ, ಮದುವೆ ಆಗದಿರುವುದೇ ಒಳ್ಳೆಯದು,” ಎಂದರು.
11ಆದರೆ ಯೇಸು ಅವರಿಗೆ, “ಯಾರಿಗೆ ಇದು ಅನುಮತಿಸಲಾಗಿದೆಯೋ ಅವರೇ ಹೊರತು ಎಲ್ಲರೂ ಈ ಮಾತನ್ನು ಸ್ವೀಕರಿಸಲಾರರು.
12ತಮ್ಮ ತಾಯಿಯ ಗರ್ಭದಿಂದ ಹುಟ್ಟಿದಾಗಲೇ ಕೆಲವರು ನಪುಂಸಕರಾದವರಿದ್ದಾರೆ, ಕೆಲವರು ಮನುಷ್ಯರಿಂದ ಮಾಡಲಾದ ನಪುಂಸಕರು ಇದ್ದಾರೆ. ಇನ್ನು ಕೆಲವರು ಪರಲೋಕ ರಾಜ್ಯದ ನಿಮಿತ್ತವಾಗಿ ತಮ್ಮನ್ನು ತಾವೇ ನಪುಂಸಕರಾಗಿ ಮಾಡಿಕೊಂಡವರೂ ಇದ್ದಾರೆ. ಇದನ್ನು ಸ್ವೀಕರಿಸಬಲ್ಲವನು ಸ್ವೀಕರಿಸಲಿ,” ಎಂದರು. ಯೇಸುವಿನ ಬಳಿಗೆ ಬಂದ ಚಿಕ್ಕಮಕ್ಕಳು
13ಯೇಸು ತಮ್ಮ ಕೈಗಳನ್ನಿಟ್ಟು ಪ್ರಾರ್ಥಿಸುವಂತೆ ಕೆಲವು ಜನರು ಚಿಕ್ಕಮಕ್ಕಳನ್ನು ಯೇಸುವಿನ ಬಳಿಗೆ ತಂದರು. ಆದರೆ ಶಿಷ್ಯರು ಅವರನ್ನು ಗದರಿಸಿದರು.
14ಆದರೆ ಯೇಸು, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿರಿ, ಅವುಗಳಿಗೆ ಅಡ್ಡಿಮಾಡಬೇಡಿರಿ, ಪರಲೋಕ ರಾಜ್ಯವು ಇಂಥವರದೇ,” ಎಂದರು.
15ತರುವಾಯ ಯೇಸು ಮಕ್ಕಳ ಮೇಲೆ ತಮ್ಮ ಕೈಯಿಟ್ಟು ಆಶೀರ್ವದಿಸಿ ಅಲ್ಲಿಂದ ಹೊರಟು ಹೋದರು. ಧನಿಕ ಯುವಕನು
16ಆಗ ಒಬ್ಬನು ಬಂದು ಯೇಸುವಿಗೆ, “ಒಳ್ಳೆಯ ಬೋಧಕರೇ, ನಾನು ನಿತ್ಯಜೀವವನ್ನು ಹೊಂದುವುದಕ್ಕೆ ಯಾವ ಒಳ್ಳೆಯ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು.
17“ನೀನು ಒಳ್ಳೆಯದನ್ನು ಕುರಿತು ನನ್ನನ್ನು ಕೇಳುವುದೇಕೆ? ಒಬ್ಬಾತನೇ ಒಳ್ಳೆಯವನು. ಆದರೆ ನೀನು ಜೀವದಲ್ಲಿ ಪ್ರವೇಶಿಸಬೇಕಾದರೆ ದೇವರ ಆಜ್ಞೆಗಳನ್ನು ಅನುಸರಿಸಿ ನಡೆದುಕೋ,” ಎಂದು ಯೇಸು ಉತ್ತರಕೊಟ್ಟರು.
18ಅವನು ಯೇಸುವಿಗೆ, “ಅವು ಯಾವುವು?” ಎಂದು ಕೇಳಿದನು. ಅದಕ್ಕೆ ಯೇಸು, “ನರಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು,
19ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು. ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು,” ಎಂದು ಹೇಳಿದರು.
20ಆ ಯೌವನಸ್ಥನು ಯೇಸುವಿಗೆ, “ಇವೆಲ್ಲವನ್ನೂ ನಾನು ಕೈಗೊಂಡಿದ್ದೇನೆ, ಇನ್ನು ನನಗೇನು ಕಡಿಮೆಯಾಗಿದೆ?” ಎಂದು ಕೇಳಿದನು.
21ಯೇಸು ಅವನಿಗೆ, “ನೀನು ಸಂಪೂರ್ಣನಾಗಲು ಅಪೇಕ್ಷಿಸಿದರೆ, ಹೋಗಿ ನಿನ್ನ ಆಸ್ತಿಯನ್ನೆಲ್ಲಾ ಮಾರಿ ಬಡವರಿಗೆ ಕೊಡು; ನಿನಗೆ ಪರಲೋಕದಲ್ಲಿ ಸಂಪತ್ತಿರುವುದು. ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದು ಹೇಳಿದರು.
22ಆದರೆ ಆ ಯುವಕನು ಯೇಸು ಹೇಳಿದ್ದನ್ನು ಕೇಳಿ, ದುಃಖದಿಂದ ಹೊರಟುಹೋದನು. ಏಕೆಂದರೆ ಅವನಿಗೆ ಬಹಳ ಆಸ್ತಿ ಇತ್ತು.
23ಆಗ ಯೇಸು ತಮ್ಮ ಶಿಷ್ಯರಿಗೆ, “ಐಶ್ವರ್ಯವಂತನು ಪರಲೋಕ ರಾಜ್ಯದಲ್ಲಿ ಸೇರುವುದು ಕಷ್ಟ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
24ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ ಎಂದು ಪುನಃ ನಿಮಗೆ ಹೇಳುತ್ತೇನೆ,” ಎಂದರು.
25ಇದನ್ನು ಕೇಳಿದಾಗ ಯೇಸುವಿನ ಶಿಷ್ಯರು ಅತ್ಯಂತ ವಿಸ್ಮಯಗೊಂಡು, “ಹಾಗಾದರೆ ಯಾರು ರಕ್ಷಣೆಹೊಂದುವರು?” ಎಂದು ಕೇಳಿದರು.
26ಅದಕ್ಕೆ ಯೇಸು ಅವರನ್ನು ದೃಷ್ಟಿಸಿ ನೋಡಿ ಅವರಿಗೆ, “ಮನುಷ್ಯರಿಗೆ ಇದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ,” ಎಂದು ಹೇಳಿದರು.
27ಪೇತ್ರನು ಯೇಸುವಿಗೆ, “ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ! ನಮಗೆ ಏನು ದೊರೆಯುವುದು?” ಎಂದು ಕೇಳಿದನು.
28ಯೇಸು ಅವರಿಗೆ, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಸಮಸ್ತವೂ ನವೀಕರಣವಾಗುವಾಗ, ಮನುಷ್ಯಪುತ್ರನಾದ ನಾನು ನನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಂಡಿರಲು, ನನ್ನನ್ನು ಹಿಂಬಾಲಿಸಿದವರಾದ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯತೀರಿಸುವಿರಿ.
29ತನ್ನ ಮನೆಗಳನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆಯನ್ನಾಗಲಿ, ತಾಯಿಯನ್ನಾಗಲಿ, ಮಕ್ಕಳನ್ನಾಗಲಿ, ಹೊಲವನ್ನಾಗಲಿ, ನನ್ನ ಹೆಸರಿನ ನಿಮಿತ್ತವಾಗಿ ಬಿಟ್ಟುಬಿಡುವ ಪ್ರತಿಯೊಬ್ಬನು ನೂರರಷ್ಟು ಪಡೆದುಕೊಳ್ಳುವನು ಮತ್ತು ನಿತ್ಯಜೀವಕ್ಕೆ ಬಾಧ್ಯನಾಗುವನು.
30ಆದರೆ ಮೊದಲನೆಯವರಾದ ಅನೇಕರು ಕಡೆಯವರಾಗುವರು, ಕಡೆಯವರಾದವರು ಮೊದಲನೆಯವರಾಗುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.