Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಲೂಕನು 5

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಒಂದು ದಿನ ಯೇಸು ಗೆನೆಜರೇತ್ ಕೆರೆಯ ಬಳಿಯಲ್ಲಿ ನಿಂತುಕೊಂಡಿದ್ದಾಗ, ಜನರು ದೇವರ ವಾಕ್ಯವನ್ನು ಕೇಳುವುದಕ್ಕಾಗಿ ಅವರ ಸುತ್ತಲೂ ಗುಂಪಾಗಿ ಕೂಡಿದ್ದರು.
2ಯೇಸು ಕೆರೆಯ ಬಳಿಯಲ್ಲಿ ಎರಡು ದೋಣಿಗಳನ್ನು ಕಂಡರು. ಅಲ್ಲಿ ಬೆಸ್ತರು ಅವುಗಳಿಂದ ಹೊರಗೆ ಹೋಗಿ ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು.
3ಅವುಗಳಲ್ಲಿ ಸೀಮೋನನ ದೋಣಿಯನ್ನು, ಯೇಸು ಹತ್ತಿ ಅದನ್ನು ದಡದಿಂದ ಸ್ವಲ್ಪ ದೂರ ನೂಕಬೇಕೆಂದು ಅವನನ್ನು ಕೇಳಿಕೊಂಡರು. ಆಮೇಲೆ ಯೇಸು ಕುಳಿತುಕೊಂಡು ದೋಣಿಯೊಳಗಿಂದಲೇ ಜನರಿಗೆ ಬೋಧಿಸಿದರು.
4ಅವರು ಮಾತನಾಡುವುದನ್ನು ಮುಗಿಸಿದ ಮೇಲೆ ಸೀಮೋನನಿಗೆ, “ಆಳವಾದ ಸ್ಥಳಕ್ಕೆ ದೋಣಿಯನ್ನು ನಡೆಸಿ, ಮೀನು ಹಿಡಿಯುವುದಕ್ಕೆ ನಿಮ್ಮ ಬಲೆಗಳನ್ನು ಬೀಸಿರಿ,” ಎಂದರು.
5ಅದಕ್ಕೆ ಉತ್ತರವಾಗಿ ಸೀಮೋನನು ಯೇಸುವಿಗೆ, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ. ಆದರೂ ನಿಮ್ಮ ಮಾತಿನಂತೆ ನಾನು ಬಲೆಯನ್ನು ಬೀಸುತ್ತೇನೆ,” ಎಂದು ಹೇಳಿದನು.
6ಅವರು ಅದರಂತೆ ಬಲೆ ಹಾಕಿದಾಗ, ಮೀನಿನ ದೊಡ್ಡ ರಾಶಿಯನ್ನು ಹಿಡಿದರು ಅವರ ಬಲೆಯು ಹರಿಯುವಂತಾಯಿತು.
7ಆಗ ಬೇರೆ ದೋಣಿಯಲ್ಲಿದ್ದ ತಮ್ಮ ಪಾಲುಗಾರರು ಬಂದು ತಮಗೆ ಸಹಾಯ ಮಾಡಬೇಕೆಂದು ಅವರು ಸನ್ನೆಮಾಡಿದರು. ಪಾಲುಗಾರರು ಬಂದು ಎರಡು ದೋಣಿಗಳನ್ನು ತುಂಬಿಸಲಾಗಿ ಅವು ಮುಳುಗಲಾರಂಭಿಸಿದವು.
8ಸೀಮೋನ್ ಪೇತ್ರನು ಇದನ್ನು ಕಂಡಾಗ, ಯೇಸುವಿನ ಮುಂದೆ ಮೊಣಕಾಲೂರಿ, “ಸ್ವಾಮಿ, ನನ್ನನ್ನು ಬಿಟ್ಟು ಹೋಗಿರಿ, ನಾನು ಪಾಪಿ,” ಎಂದನು.
9ಯಾಕಂದರೆ, ಅವರು ಹಿಡಿದ ಮೀನುಗಳ ರಾಶಿಯನ್ನು ಕಂಡು ಅವನೂ ಅವನ ಸಂಗಡ ಇದ್ದವರೂ ವಿಸ್ಮಯಗೊಂಡಿದ್ದರು.
10ಸೀಮೋನನ ಕೂಡ ಪಾಲುಗಾರರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ, ಯೋಹಾನರೂ ಹಾಗೆಯೇ ವಿಸ್ಮಯಗೊಂಡಿದ್ದರು. ಆಗ ಯೇಸು ಸೀಮೋನನಿಗೆ, “ಹೆದರಬೇಡ; ಇಂದಿನಿಂದ ನೀನು ದೇವರಿಗಾಗಿ ಮನುಷ್ಯರನ್ನೇ ಹಿಡಿಯುವವನಾಗಿರುವೆ,” ಎಂದರು.
11ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದು ಎಲ್ಲವನ್ನು ಬಿಟ್ಟು, ಯೇಸುವನ್ನೇ ಹಿಂಬಾಲಿಸಿದರು. ಯೇಸು ಒಬ್ಬ ಕುಷ್ಠರೋಗಿಯನ್ನು ವಾಸಿಮಾಡಿದ್ದು
12ಯೇಸು ಒಂದು ಪಟ್ಟಣದಲ್ಲಿದ್ದಾಗ, ಮೈಯೆಲ್ಲಾ ಕುಷ್ಠರೋಗವಿದ್ದ ಒಬ್ಬ ಮನುಷ್ಯನು ಯೇಸುವನ್ನು ಕಂಡು ಅಡ್ಡಬಿದ್ದು ಅವರಿಗೆ, “ಸ್ವಾಮಿ, ನಿಮಗೆ ಮನಸ್ಸಿದ್ದರೆ, ನೀವು ನನ್ನನ್ನು ಶುದ್ಧಮಾಡಬಲ್ಲಿರಿ,” ಎಂದು ಅವರನ್ನು ಬೇಡಿಕೊಂಡನು.
13ಯೇಸು ತಮ್ಮ ಕೈಚಾಚಿ ಅವನನ್ನು ಮುಟ್ಟಿ ಅವನಿಗೆ, “ನನಗೆ ಮನಸ್ಸಿದೆ, ನೀನು ಶುದ್ಧನಾಗು!” ಎಂದು ಹೇಳಿದರು. ಕೂಡಲೇ ಆ ಕುಷ್ಠವು ಅವನನ್ನು ಬಿಟ್ಟುಹೋಯಿತು.
14ಆಗ ಯೇಸು ಅವನಿಗೆ, “ಇದನ್ನು ನೀನು ಯಾರಿಗೂ ಹೇಳಬೇಡ, ಆದರೆ ನೀನು ಗುಣಹೊಂದಿದ್ದಕ್ಕೆ ಜನರಿಗೆ ಸಾಕ್ಷಿಯಾಗಿರುವಂತೆ ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ನಿನ್ನ ಶುದ್ಧಾಚಾರಕ್ಕಾಗಿ ಮೋಶೆ ಅಪ್ಪಣೆ ಕೊಟ್ಟಂತೆ ಅರ್ಪಿಸು,” ಎಂದು ಆಜ್ಞಾಪಿಸಿದರು.
15ಆದರೂ ಯೇಸುವಿನ ವಿಷಯವು, ಇನ್ನೂ ಹೆಚ್ಚಾಗಿ ದೂರದವರೆಗೂ ಹರಡಿತು. ಅವರ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳನ್ನು ಅವರಿಂದ ವಾಸಿಮಾಡಿಸಿಕೊಳ್ಳುವುದಕ್ಕೂ ದೊಡ್ಡ ಸಮೂಹಗಳು ಕೂಡಿ ಬಂದವು.
16ಆದರೆ ಯೇಸು ತಮ್ಮನ್ನು ಪ್ರತ್ಯೇಕಿಸಿಕೊಂಡು ಎಂದಿನಂತೆ ಏಕಾಂತ ಸ್ಥಳಕ್ಕೆ ಹೋಗಿ ಪ್ರಾರ್ಥಿಸುತ್ತಿದ್ದರು. ಒಬ್ಬ ಪಾರ್ಶ್ವವಾಯು ರೋಗಿಯನ್ನು ಗುಣಮಾಡಿದ್ದು
17ಒಂದು ದಿನ ಯೇಸು ಬೋಧಿಸುತ್ತಿದ್ದಾಗ, ಗಲಿಲಾಯ ಯೂದಾಯ ಮತ್ತು ಯೆರೂಸಲೇಮಿನ ಪ್ರತಿಯೊಂದು ಊರಿನಿಂದ ಬಂದಿದ್ದ ಫರಿಸಾಯರೂ ನಿಯಮ ಬೋಧಕರೂ ಅಲ್ಲಿ ಕುಳಿತುಕೊಂಡಿದ್ದರು. ಯೇಸುವಿನಲ್ಲಿ ಸ್ವಸ್ಥಮಾಡುವುದಕ್ಕಾಗಿ ದೇವರ ಶಕ್ತಿಯು ಇತ್ತು.
18ಆಗ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯಲ್ಲಿ ಹೊತ್ತುಕೊಂಡು ಬಂದು, ಒಳಗೆ ಯೇಸುವಿನ ಎದುರಿಗೆ ತರುವುದಕ್ಕೆ ಪ್ರಯತ್ನಿಸುತ್ತಿದ್ದರು.
19ಆದರೆ ಅಲ್ಲಿದ್ದ ಜನಸಮೂಹದವರ ನಿಮಿತ್ತ ಅವರು ಅವನನ್ನು ಒಳಗೆ ತರುವ ಯಾವ ವಿಧಾನವನ್ನೂ ಕಾಣದೆ, ಮನೆಯ ಮೇಲೆ ಹೋಗಿ ಹೆಂಚುಗಳನ್ನು ತೆಗೆದು ಅವನನ್ನು ಹಾಸಿಗೆಯೊಂದಿಗೆ ಯೇಸುವಿನ ಮುಂದೆ ಇಳಿಸಿದರು.
20ಯೇಸು ಅವರ ವಿಶ್ವಾಸವನ್ನು ಕಂಡು ಅವನಿಗೆ, “ಮಗನೇ, ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದು ಹೇಳಿದರು.
21ಆಗ ಫರಿಸಾಯರೂ ನಿಯಮ ಬೋಧಕರೂ, “ದೇವದೂಷಣೆಯನ್ನು ಮಾಡುವುದಕ್ಕೆ ಈತನು ಯಾರು? ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು?” ಎಂದು ತಮ್ಮಲ್ಲಿ ಮಾತನಾಡಲಾರಂಭಿಸಿದರು.
22ಯೇಸು ಅವರ ಆಲೋಚನೆಗಳನ್ನು ತಿಳಿದು, “ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತಿರುವುದೇನು?
23ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲಾಗಿವೆ,’ ಎನ್ನುವುದೋ ಅಥವಾ ‘ಎದ್ದು ನಡೆ,’ ಎನ್ನುವುದೋ?
24ಆದರೆ ಮನುಷ್ಯಪುತ್ರನಾದ ನನಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವುದಕ್ಕೆ ಅಧಿಕಾರವುಂಟೆಂದು ನೀವು ತಿಳಿಯಬೇಕು,” ಎಂದು ಹೇಳಿ, ಆ ಪಾರ್ಶ್ವವಾಯು ರೋಗಿಗೆ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು.
25ಕೂಡಲೇ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು, ದೇವರನ್ನು ಸ್ತುತಿಸುತ್ತಾ ತನ್ನ ಮನೆಗೆ ಹೊರಟುಹೋದನು.
26ಅಲ್ಲಿದ್ದವರೆಲ್ಲರೂ ವಿಸ್ಮಯಗೊಂಡು ದೇವರನ್ನು ಸ್ತುತಿಸಿದರು. ಅವರು ಭಯಭಕ್ತಿಯಿಂದ ಕೂಡಿದವರಾಗಿ, “ನಾವು ಈ ದಿನ ಅಪೂರ್ವವಾದ ಕಾರ್ಯಗಳನ್ನು ಕಂಡೆವು,” ಎಂದರು. ಲೇವಿಯನ್ನು ಯೇಸು ಕರೆದದ್ದು
27ಇವುಗಳಾದ ಮೇಲೆ, ಯೇಸು ಹೊರಟುಹೋಗಿ ತೆರಿಗೆಯ ಕಛೇರಿಯಲ್ಲಿ ಕುಳಿತುಕೊಂಡಿದ್ದ ಲೇವಿ ಎಂಬ ಹೆಸರುಳ್ಳ ಒಬ್ಬ ಸುಂಕದವನನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು,” ಎಂದರು.
28ಲೇವಿ ಎಲ್ಲವನ್ನು ಬಿಟ್ಟು ಎದ್ದು ಯೇಸುವನ್ನು ಹಿಂಬಾಲಿಸಿದನು.
29ತರುವಾಯ ಲೇವಿಯು ತನ್ನ ಸ್ವಂತ ಮನೆಯಲ್ಲಿ ಯೇಸುವಿಗೆ ದೊಡ್ಡ ಔತಣವನ್ನು ಮಾಡಿಸಲು, ಬಹಳ ಜನ ಸುಂಕದವರು ಮತ್ತು ಇತರರು ಯೇಸುವಿನೊಂದಿಗೆ ಊಟಮಾಡುತ್ತಿದ್ದರು.
30ಆದರೆ ಫರಿಸಾಯರೂ ಅವರ ಗುಂಪಿಗೆ ಸೇರಿದ ನಿಯಮ ಬೋಧಕರೂ ಯೇಸುವಿನ ವಿರೋಧವಾಗಿ ಗೊಣಗಾಡುತ್ತಾ ಶಿಷ್ಯರಿಗೆ, “ನೀವು ಏಕೆ ಸುಂಕದವರ ಮತ್ತು ಪಾಪಿಗಳ ಸಂಗಡ ತಿಂದು ಕುಡಿಯುತ್ತೀರಿ?” ಎಂದು ಕೇಳಿದರು.
31ಅದಕ್ಕೆ ಯೇಸು, “ಆರೋಗ್ಯವಂತರಿಗೆ ವೈದ್ಯನು ಅವಶ್ಯವಿಲ್ಲ, ರೋಗಿಗಳಿಗೆ ವೈದ್ಯನು ಅವಶ್ಯ.
32ನಾನು ನೀತಿವಂತರನ್ನು ಕರೆಯಲು ಬರಲಿಲ್ಲ, ಪಾಪಿಗಳನ್ನೇ ದೇವರ ಕಡೆಗೆ ತಿರುಗಿಕೊಳ್ಳುವಂತೆ ಕರೆಯಲು ಬಂದೆನು,” ಎಂದರು. ಉಪವಾಸದ ಕುರಿತು ಯೇಸುವನ್ನು ಪ್ರಶ್ನಿಸಿದ್ದು
33ಕೆಲವರು ಯೇಸುವಿಗೆ, “ಯೋಹಾನನ ಶಿಷ್ಯರು ಪದೇಪದೇ ಉಪವಾಸವಿದ್ದು ಪ್ರಾರ್ಥನೆಗಳನ್ನು ಮಾಡುತ್ತಾರೆ, ಅದರಂತೆಯೇ ಫರಿಸಾಯರ ಶಿಷ್ಯರೂ ಮಾಡುತ್ತಾರೆ, ಆದರೆ ನಿಮ್ಮ ಶಿಷ್ಯರು ಏಕೆ ತಿಂದು ಕುಡಿಯುತ್ತಾರೆ?” ಎಂದು ಕೇಳಿದರು.
34ಅದಕ್ಕೆ ಯೇಸು, “ಮದುಮಗನು ಮದುವೆ ಅತಿಥಿಗಳ ಸಂಗಡವಿರುವಾಗ ಅವರನ್ನು ಉಪವಾಸವಿರಿಸಲಾದೀತೆ?
35ಆದರೆ ಮದುಮಗನನ್ನು ಅವರಿಂದ ತೆಗೆದುಕೊಂಡು ಹೋಗುವ ದಿವಸಗಳು ಬರುವುವು; ಆಗ ಆ ದಿವಸಗಳಲ್ಲಿ ಅವರು ಉಪವಾಸ ಮಾಡುವರು,” ಎಂದು ಹೇಳಿದರು.
36ಯೇಸು ಅವರಿಗೆ ಒಂದು ಸಾಮ್ಯವನ್ನು ಹೇಳಿದರು: “ಹಳೆಯ ವಸ್ತ್ರಕ್ಕೆ ಹೊಸ ಬಟ್ಟೆಯ ತುಂಡನ್ನು ಹರಿದು ತೇಪೆ ಹಚ್ಚುವುದಿಲ್ಲ. ಹಚ್ಚಿದರೆ ಆ ಹೊಸದು ಹರಿದು ಹೋಗುವುದು. ಹೊಸದರಿಂದ ಕತ್ತರಿಸಿದ ತುಂಡು ಹಳೆಯದರೊಂದಿಗೆ ಹೊಂದಿಕೆಯಾಗುವುದಿಲ್ಲ.
37ಯಾರೂ ಹೊಸ ದ್ರಾಕ್ಷಾರಸವನ್ನು ಹಳೆಯ ಚರ್ಮದ ಚೀಲಗಳಲ್ಲಿ ತುಂಬಿಡುವುದಿಲ್ಲ. ತುಂಬಿ ಇಟ್ಟರೆ, ಚರ್ಮದ ಚೀಲಗಳು ಒಡೆದು, ದ್ರಾಕ್ಷಾರಸವು ಚೆಲ್ಲಿಹೋಗಿ ಚರ್ಮದ ಚೀಲಗಳು ಹಾಳಾಗುತ್ತವೆ.
38ಆದರೆ, ಹೊಸ ದ್ರಾಕ್ಷಾರಸವನ್ನು ಹೊಸ ಚರ್ಮದ ಚೀಲಗಳಲ್ಲಿ ಹಾಕಿಡಬೇಕು.
39ಯಾರೂ ಹಳೆಯ ದ್ರಾಕ್ಷಾರಸವನ್ನು ಕುಡಿದ ಮೇಲೆ ಹೊಸದನ್ನು ಅಪೇಕ್ಷಿಸುವುದಿಲ್ಲ, ಏಕೆಂದರೆ ಅವರು, ‘ಹಳೆಯದೇ ಉತ್ತಮವಾದದ್ದು,’ ಎನ್ನುವರು,” ಎಂದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.