Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಲೂಕನು 2

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆ ದಿನಗಳಲ್ಲಿ ಇಡೀ ರೋಮನ್ ರಾಜ್ಯದಲ್ಲಿ ಜನಗಣತಿಯಾಗಬೇಕೆಂದು ಕೈಸರ್ ಔಗುಸ್ತನಿಂದ ಶಾಸನವು ಹೊರಟಿತು.
2ಕುರೇನ್ಯನು ಸಿರಿಯ ಪ್ರಾಂತಕ್ಕೆ ಅಧಿಪತಿಯಾಗಿದ್ದಾಗ, ಈ ಜನಗಣತಿಯು ಮೊದಲನೆಯ ಸಾರಿ ನಡೆಯಿತು.
3ಆಗ ಎಲ್ಲರೂ ತಮ್ಮ ಹೆಸರುಗಳನ್ನು ದಾಖಲೆ ಮಾಡಿಸಿಕೊಳ್ಳುವುದಕ್ಕಾಗಿ ತಮ್ಮ ತಮ್ಮ ಸ್ವಂತ ಪಟ್ಟಣಗಳಿಗೆ ಹೋದರು.
4ಯೋಸೇಫನು ದಾವೀದನ ಕುಟುಂಬದವನೂ ವಂಶದವನೂ ಆಗಿದ್ದರಿಂದ, ಅವನು ಸಹ ಗಲಿಲಾಯ ಪ್ರಾಂತದ ನಜರೇತೆಂಬ ಪಟ್ಟಣದಿಂದ ಯೂದಾಯ ಪ್ರಾಂತದ ಬೇತ್ಲೆಹೇಮ್ ಎಂಬ ದಾವೀದನ ಪಟ್ಟಣಕ್ಕೆ ಹೋದನು.
5ಅವನು ತನಗೆ ನಿಶ್ಚಯಿಸಿದ್ದ ಮತ್ತು ಪೂರ್ಣ ಗರ್ಭಿಣಿಯಾಗಿದ್ದ ಮರಿಯಳೊಂದಿಗೆ ಜನಗಣತಿಯ ದಾಖಲೆ ಮಾಡಿಸಿಕೊಳ್ಳುವುದಕ್ಕಾಗಿ ಹೋದನು.
6ಅವರು ಬೇತ್ಲೆಹೇಮಿನಲ್ಲಿ ಇದ್ದಾಗ, ಆಕೆಗೆ ಹೆರಿಗೆಯ ಕಾಲ ಸಮೀಪಿಸಿತು.
7ಮರಿಯಳು ತನ್ನ ಚೊಚ್ಚಲು ಮಗನನ್ನು ಹೆತ್ತು, ಬಟ್ಟೆಗಳಿಂದ ಸುತ್ತಿ, ಛತ್ರದಲ್ಲಿ ಅವರಿಗೆ ಸ್ಥಳವಿಲ್ಲವಾದ್ದರಿಂದ ಶಿಶುವನ್ನು ದನದ ಕೊಟ್ಟಿಗೆಯಲ್ಲಿ ಮಲಗಿಸಿದಳು.
8ಅದೇ ಸೀಮೆಯಲ್ಲಿ ಕುರುಬರು ಹೊಲದಲ್ಲಿದ್ದು, ರಾತ್ರಿಯಲ್ಲಿ ತಮ್ಮ ಹಿಂಡನ್ನು ಕಾಯುತ್ತಿದ್ದರು.
9ಆಗ ಕರ್ತದೇವರ ದೂತನು ಅವರಿಗೆ ಪ್ರತ್ಯಕ್ಷನಾದನು. ಕರ್ತದೇವರ ಮಹಿಮೆಯು ಅವರ ಸುತ್ತಲೂ ಪ್ರಕಾಶಿಸಿತು, ಅವರು ಬಹಳವಾಗಿ ಹೆದರಿದರು.
10ಆ ದೂತನು ಅವರಿಗೆ, “ಹೆದರಬೇಡಿರಿ. ಎಲ್ಲಾ ಜನರಿಗೆ ಮಹಾ ಸಂತೋಷವನ್ನುಂಟು ಮಾಡುವ ಶುಭಸಮಾಚಾರವನ್ನು ನಾನು ನಿಮಗೆ ತಿಳಿಸುತ್ತೇನೆ.
11ಅದೇನೆಂದರೆ, ಈ ದಿನ ದಾವೀದನ ಪಟ್ಟಣದಲ್ಲಿ ನಿಮಗೋಸ್ಕರ ಒಬ್ಬ ರಕ್ಷಕರು ಹುಟ್ಟಿದ್ದಾರೆ. ಅವರು ಯಾರೆಂದರೆ ಕರ್ತದೇವರು ಆಗಿರುವ ಕ್ರಿಸ್ತ.
12ಅಲ್ಲಿ ಬಟ್ಟೆಯಿಂದ ಸುತ್ತಿರುವ ಶಿಶುವು ಕೊಟ್ಟಿಗೆಯಲ್ಲಿ ಮಲಗಿರುವುದನ್ನು ನೀವು ಕಾಣುವಿರಿ. ಇದೇ ನಿಮಗೆ ಗುರುತು,” ಎಂದು ಹೇಳಿದನು.
13ತಕ್ಷಣವೇ ಆ ದೂತನ ಸಂಗಡ ಇದ್ದ ಪರಲೋಕ ಸೈನ್ಯದ ಸಮೂಹವು ದೇವರನ್ನು ಕೊಂಡಾಡುತ್ತಾ ಹೀಗೆ ಹೇಳಿದರು:
14“ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ದೇವರ ಮೆಚ್ಚುಗೆ, ಮಾನವರಿಗೆ ಸಮಾಧಾನ.”
15ದೇವದೂತರು ಅವರ ಬಳಿಯಿಂದ ಪರಲೋಕಕ್ಕೆ ಹೋದ ಮೇಲೆ ಕುರುಬರು, “ದೇವರು ನಮಗೆ ತಿಳಿಯಪಡಿಸಿದ ಈ ಸಂಗತಿಯನ್ನು ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ನೋಡೋಣ,” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
16ಅವರು ಅವಸರದಿಂದ ಹೋಗಿ ಮರಿಯಳನ್ನೂ ಯೋಸೇಫನನ್ನೂ ಕೊಟ್ಟಿಗೆಯಲ್ಲಿ ಮಲಗಿದ್ದ ಶಿಶುವನ್ನು ಕಂಡರು.
17ಅನಂತರ, ಈ ಶಿಶುವಿನ ವಿಷಯವಾಗಿ ತಮಗೆ ತಿಳಿಯಪಡಿಸಿದ ದೇವದೂತನ ಮಾತನ್ನು ಪ್ರಕಟಮಾಡಿದರು.
18ಕುರುಬರು ಹೇಳಿದ ವಿಷಯಗಳನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು.
19ಆದರೆ ಮರಿಯಳು ಈ ಎಲ್ಲಾ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟುಕೊಂಡು ಆಲೋಚಿಸುತ್ತಿದ್ದಳು.
20ತಮಗೆ ತಿಳಿಸಿದ ಪ್ರಕಾರವೇ ಕುರುಬರು ತಾವು ಕೇಳಿ, ಕಂಡ ಎಲ್ಲಾ ವಿಷಯಗಳಿಗಾಗಿ ದೇವರನ್ನು ಮಹಿಮೆಪಡಿಸುತ್ತಾ, ಕೊಂಡಾಡುತ್ತಾ ಹಿಂದಿರುಗಿ ಹೋದರು.
21ಶಿಶುವಿಗೆ ಸುನ್ನತಿ ಮಾಡಬೇಕಾಗಿದ್ದ ಎಂಟನೆಯ ದಿನದಲ್ಲಿ, ಮರಿಯಳು ಗರ್ಭಿಣಿಯಾಗುವುದಕ್ಕೆ ಮುಂಚೆಯೇ ದೂತನು ಸೂಚಿಸಿದ್ದಂತೆ “ಯೇಸು” ಎಂದು ನಾಮಕರಣ ಮಾಡಿದರು. ಯೇಸುವನ್ನು ದೇವಾಲಯದಲ್ಲಿ ಸಮರ್ಪಿಸಿದ್ದು
22ಮೋಶೆಯ ನಿಯಮದ ಪ್ರಕಾರ ಮರಿಯಳಿಗೆ ಶುದ್ಧೀಕರಣದ ದಿವಸಗಳು ಮುಗಿದ ಮೇಲೆ, ಯೋಸೇಫನು ಮತ್ತು ಮರಿಯಳು ಶಿಶುವನ್ನು ಕರ್ತದೇವರಿಗೆ ಸಮರ್ಪಿಸುವುದಕ್ಕಾಗಿ ಯೆರೂಸಲೇಮಿಗೆ ತಂದರು.
23ಕರ್ತದೇವರ ನಿಯಮದಲ್ಲಿ ಬರೆದಿರುವಂತೆ, “ಪ್ರತಿಯೊಂದು ಚೊಚ್ಚಲ ಗಂಡು ಮಗು ಕರ್ತದೇವರಿಗೆ ಪವಿತ್ರವಾಗಿ ಸಮರ್ಪಿಸಬೇಕು,”
24ಎಂತಲೂ, “ಒಂದು ಜೊತೆ ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ಬಲಿ ಅರ್ಪಿಸಬೇಕು,” ಎಂತಲೂ ಕರ್ತದೇವರ ನಿಯಮದಲ್ಲಿ ಹೇಳಿರುವ ಪ್ರಕಾರ ಅವರು ಸಮರ್ಪಿಸಿದರು.
25ಆಗ ಸಿಮೆಯೋನನೆಂಬ ಒಬ್ಬ ಮನುಷ್ಯನು ಯೆರೂಸಲೇಮಿನಲ್ಲಿದ್ದನು. ಅವನು ನೀತಿವಂತನೂ ಭಕ್ತನೂ ಆಗಿದ್ದನು. ಅವನು ಇಸ್ರಾಯೇಲರನ್ನು ಸಂತೈಸುವ ಒಬ್ಬರ ಬರುವಿಕೆಗಾಗಿ ಕಾಯುತ್ತಿದ್ದನು. ಪವಿತ್ರಾತ್ಮ ದೇವರ ಪ್ರಸನ್ನತೆ ಅವನ ಮೇಲಿತ್ತು.
26ಇದಲ್ಲದೆ, ಅವನು ಕರ್ತದೇವರು ಕಳುಹಿಸಲಿರುವ ಕ್ರಿಸ್ತನನ್ನು ಕಾಣುವುದಕ್ಕಿಂತ ಮುಂಚೆ ಮರಣ ಹೊಂದುವುದಿಲ್ಲವೆಂದು ಪವಿತ್ರಾತ್ಮನಿಂದ ಅವನಿಗೆ ಪ್ರಕಟನೆಯಾಗಿತ್ತು.
27ಅವನು ಪವಿತ್ರಾತ್ಮ ಪ್ರೇರಣೆಯಿಂದ ದೇವಾಲಯದ ಅಂಗಳದೊಳಗೆ ಬಂದನು, ಆಗ ನಿಯಮವನ್ನು ಪೂರೈಸಲು ತಂದೆತಾಯಿಗಳು ಶಿಶು ಯೇಸುವನ್ನು ಒಳಗೆ ತಂದರು.
28ಆಗ ಸಿಮೆಯೋನನು ಶಿಶುವನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ದೇವರನ್ನು ಕೊಂಡಾಡುತ್ತಾ ಹೀಗೆಂದನು:
29“ಸರ್ವೇಶ್ವರರಾದ ಕರ್ತದೇವರೇ, ನಿಮ್ಮ ವಾಗ್ದಾನದ ಪ್ರಕಾರ, ನಿಮ್ಮ ದಾಸನನ್ನು ಸಮಾಧಾನದಿಂದ ಈಗ ಕಳುಹಿಸಿರಿ.
30ನನ್ನ ಕಣ್ಣುಗಳು ನಿಮ್ಮ ರಕ್ಷಣೆಯನ್ನು ಕಂಡವು,
31ಈ ರಕ್ಷಣೆಯನ್ನು ನೀವು ಎಲ್ಲಾ ಜನಗಳ ಮುಂದೆ ಸಿದ್ಧಪಡಿಸಿದ್ದೀರಿ:
32ಅದು ಯೆಹೂದ್ಯರಲ್ಲದವರಿಗೆ ಪ್ರಕಟಣೆಯ ಬೆಳಕೂ, ನಿಮ್ಮ ಪ್ರಜೆಯಾದ ಇಸ್ರಾಯೇಲರ ಮಹಿಮೆಯೂ ಆಗಿದೆ.”
33ಶಿಶುವಿನ ವಿಷಯವಾಗಿ ಸಿಮೆಯೋನನು ಹೇಳಿದ ಮಾತುಗಳಿಗೆ ಶಿಶುವಿನ ತಂದೆತಾಯಿಗಳು ಆಶ್ಚರ್ಯಪಟ್ಟರು.
34ಅನಂತರ ಸಿಮೆಯೋನನು ಅವರನ್ನು ಆಶೀರ್ವದಿಸಿ, ಶಿಶುವಿನ ತಾಯಿ ಮರಿಯಳಿಗೆ, “ಇಗೋ, ಇಸ್ರಾಯೇಲಿನಲ್ಲಿ ಅನೇಕರು ಬೀಳುವುದಕ್ಕೂ ಏಳುವುದಕ್ಕೂ ಈ ಮಗು ನೇಮಕವಾಗಿದೆ, ಜನರು ಎದುರು ಮಾತನಾಡುವುದಕ್ಕೆ ಈ ಮಗು ಗುರುತಾಗಿರುವದು.
35ಹೀಗೆ ಅನೇಕ ಹೃದಯಗಳ ಆಲೋಚನೆಗಳು ಪ್ರಕಟವಾಗುವವು. ನಿನ್ನ ಸ್ವಂತ ಪ್ರಾಣವನ್ನು ಸಹ ಖಡ್ಗವು ತಿವಿಯುವುದು” ಎಂದನು.
36ಅಲ್ಲಿ ಆಶೇರನ ಗೋತ್ರದ ಫನೂಯೇಲನ ಮಗಳಾದ ಅನ್ನಳೆಂಬ ಒಬ್ಬ ಬಹು ಮುಪ್ಪಿನ ಪ್ರವಾದಿನಿಯಿದ್ದಳು. ಅವಳು ಮದುವೆಯಾಗಿ ಗಂಡನೊಂದಿಗೆ ಏಳು ವರ್ಷ ಬಾಳಿದ್ದಳು.
37ಅವಳು ಎಂಬತ್ತನಾಲ್ಕು ವರ್ಷ ವಿಧವೆಯಾಗಿದ್ದು, ದೇವಾಲಯವನ್ನು ಬಿಟ್ಟುಹೋಗದೆ ಉಪವಾಸಗಳಿಂದಲೂ ಪ್ರಾರ್ಥನೆಗಳಿಂದಲೂ ರಾತ್ರಿ ಹಗಲೂ ಆರಾಧನೆ ಮಾಡುತ್ತಿದ್ದಳು.
38ಆ ಸಂದರ್ಭದಲ್ಲಿ ಅನ್ನಳು ಬಂದು, ದೇವರನ್ನು ಕೊಂಡಾಡಿ ಯೆರೂಸಲೇಮಿನಲ್ಲಿ ವಿಮೋಚನೆಗಾಗಿ ಎದುರು ನೋಡುತ್ತಿದ್ದವರೆಲ್ಲರೊಂದಿಗೆ ಶಿಶುವಿನ ವಿಷಯವಾಗಿ ಮಾತನಾಡಿದಳು.
39ಯೋಸೇಫನೂ ಮರಿಯಳೂ ಕರ್ತದೇವರ ನಿಯಮದ ಪ್ರಕಾರ ಎಲ್ಲವನ್ನು ಮಾಡಿ ಮುಗಿಸಿದ ಮೇಲೆ, ತಮ್ಮ ಊರಾಗಿದ್ದ ಗಲಿಲಾಯದ ನಜರೇತಿಗೆ ಹಿಂದಿರುಗಿದರು.
40ಆ ಶಿಶುವು ಬೆಳೆದು ಬಲಗೊಂಡು; ಜ್ಞಾನದಲ್ಲಿ ವೃದ್ಧಿಯಾಯಿತು ಮತ್ತು ದೇವರ ಕೃಪೆಯು ಶಿಶುವಿನ ಮೇಲೆ ಇತ್ತು. ದೇವಾಲಯದಲ್ಲಿ ಬಾಲಕ ಯೇಸು
41ಯೇಸುವಿನ ತಂದೆತಾಯಿಗಳು ಪ್ರತಿವರ್ಷವೂ ಪಸ್ಕಹಬ್ಬಕ್ಕೆ ಯೆರೂಸಲೇಮಿಗೆ ಹೋಗುತ್ತಿದ್ದರು.
42ಯೇಸುವಿಗೆ ಹನ್ನೆರಡು ವರ್ಷವಾದಾಗ, ಪದ್ಧತಿಯ ಪ್ರಕಾರ ಅವರು ಹಬ್ಬಕ್ಕಾಗಿ ಯೆರೂಸಲೇಮಿಗೆ ಹೋದರು.
43ಅವರು ಆ ಹಬ್ಬವನ್ನು ಮುಗಿಸಿಕೊಂಡು ಹಿಂದಿರುಗಿ ಬರುವಾಗ ಬಾಲಕ ಯೇಸು ಯೆರೂಸಲೇಮಿನಲ್ಲಿಯೇ ಉಳಿದದ್ದು, ತಂದೆತಾಯಿಗಳಿಗೆ ತಿಳಿದಿರಲಿಲ್ಲ.
44ಯೇಸು ಗುಂಪಿನಲ್ಲಿ ಇದ್ದಿರಬಹುದೆಂದು ಅವರು ಭಾವಿಸಿ, ಒಂದು ದಿನದ ಪ್ರಯಾಣವನ್ನು ಮಾಡಿದ ಮೇಲೆ ತಮ್ಮ ಬಳಗದವರಲ್ಲಿಯೂ ಪರಿಚಿತರಲ್ಲಿಯೂ ಬಾಲಕ ಯೇಸುವನ್ನು ಹುಡುಕಿದರು.
45ಆದರೆ ಅವರು ಯೇಸುವನ್ನು ಕಂಡುಕೊಳ್ಳದೆ ಹೋದುದರಿಂದ, ಅವರನ್ನು ಹುಡುಕುತ್ತಾ ಪುನಃ ಯೆರೂಸಲೇಮಿಗೆ ಹಿಂತಿರುಗಿ ಬಂದರು.
46ಮೂರು ದಿವಸಗಳಾದ ಮೇಲೆ ಯೇಸುವನ್ನು ದೇವಾಲಯದಲ್ಲಿ ಕಂಡರು. ಬೋಧಕರ ನಡುವೆ ಕೂತುಕೊಂಡು, ಬಾಲಕ ಯೇಸು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಪ್ರಶ್ನಿಸುತ್ತಾ ಇರುವುದನ್ನು ಅವರು ಕಂಡರು.
47ಯೇಸು ಆಡಿದ ಮಾತುಗಳನ್ನು ಕೇಳಿದವರೆಲ್ಲರೂ ಅವರ ಜ್ಞಾನಕ್ಕೂ ಉತ್ತರಗಳಿಗೂ ಬೆರಗಾದರು.
48ತಂದೆತಾಯಿಗಳು ಯೇಸುವನ್ನು ಕಂಡಾಗ ಆಶ್ಚರ್ಯಪಟ್ಟರು. ಆತನ ತಾಯಿಯು, “ಮಗು, ನೀನು ನಮಗೆ ಹೀಗೇಕೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಕಳವಳಗೊಂಡು ನಿನ್ನನ್ನು ಹುಡುಕಿದೆವು,” ಎಂದಳು.
49ಯೇಸು ಅವರಿಗೆ, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕೆಂಬುದು ನಿಮಗೆ ತಿಳಿಯಲಿಲ್ಲವೋ?” ಎಂದರು.
50ಆದರೆ ಯೇಸು ಅವರಿಗೆ ಹೇಳಿದ ಮಾತನ್ನು ಅವರು ಗ್ರಹಿಸಲಿಲ್ಲ.
51ಬಳಿಕ ಯೇಸು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ಅಧೀನರಾಗಿದ್ದರು. ಆದರೆ ಯೇಸುವಿನ ತಾಯಿಯು ಈ ಮಾತುಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿ ಸಂಗ್ರಹಿಸಿ ಇಟ್ಟುಕೊಂಡಳು.
52ಯೇಸು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ಬೆಳೆದು, ದೇವರ ಮೆಚ್ಚುಗೆ ಮತ್ತು ಮನುಷ್ಯರ ಮೆಚ್ಚುಗೆ ಹೆಚ್ಚಾಗಿ ಅವರಿಗೆ ದೊರೆಯಿತು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.