Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯಾಜಕಕಾಂಡ 22

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ತರುವಾಯ ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
2“ಆರೋನನೊಂದಿಗೂ, ಅವನ ಪುತ್ರರೊಂದಿಗೂ ಮಾತನಾಡು, ಅವರು ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಮಾಡದಂತೆ ಇಸ್ರಾಯೇಲರು ನನಗೆ ಸಲ್ಲಿಸುವ ಪರಿಶುದ್ಧವಾದವುಗಳನ್ನು ಗೌರವದಿಂದ ಅವರು ಪ್ರತ್ಯೇಕವಾಗಿರಿಸಬೇಕು. ನಾನೇ ಯೆಹೋವ ದೇವರು.
3“ಅವರಿಗೆ ನೀನು ಹೀಗೆ ಹೇಳು: ‘ನಿಮ್ಮ ಎಲ್ಲಾ ಸಂತತಿಯ ವಂಶಾವಳಿಗಳಲ್ಲಿ ಅಶುದ್ಧತ್ವವಿರುವ ಇಸ್ರಾಯೇಲರು ಯೆಹೋವ ದೇವರಿಗೆ ಸಲ್ಲಿಸುವ ಪರಿಶುದ್ಧವಾದವುಗಳ ಬಳಿಗೆ ಯಾವನು ಬರುವನೋ, ಅವನನ್ನು ನನ್ನ ಸನ್ನಿಧಿಯಿಂದ ತೆಗೆದುಹಾಕಬೇಕು. ನಾನೇ ಯೆಹೋವ ದೇವರು.
4“ ‘ಆರೋನನ ಸಂತತಿಯವರಲ್ಲಿ ಯಾವನಾದರೂ ಚರ್ಮರೋಗ ಇಲ್ಲವೆ ಸ್ರಾವವುಳ್ಳವನಿದ್ದರೆ, ಅವನು ಶುದ್ಧನಾಗುವವರೆಗೆ ಪರಿಶುದ್ಧವಾದವುಗಳನ್ನು ತಿನ್ನಬಾರದು. ಹೆಣದಿಂದ ಅಶುದ್ಧವಾದದ್ದನ್ನು ಮುಟ್ಟಿದವನು ಇಲ್ಲವೆ ತನ್ನೊಳಗಿಂದ ವೀರ್ಯ ಹೊರಟವನು
5ಇಲ್ಲವೆ ತನ್ನನ್ನು ಅಶುದ್ಧನಾಗುವಂತೆ ಹರಿದಾಡುವ ಯಾವುದನ್ನಾಗಲಿ ಇಲ್ಲವೆ ಅಶುದ್ಧ ಮನುಷ್ಯನನ್ನಾಗಲಿ ಮುಟ್ಟಿದವನು,
6ಸಂಜೆಯವರೆಗೆ ಅಶುದ್ಧನಾಗಿರಬೇಕು. ಅವನು ನೀರಿನಲ್ಲಿ ಸ್ನಾನಮಾಡಿದ ಮೇಲೆ ಪರಿಶುದ್ಧವಾದವುಗಳನ್ನು ತಿನ್ನಬಹುದು.
7ಸೂರ್ಯನು ಮುಳುಗಿದಾಗ ಅವನು ಶುದ್ಧನಾಗಿರುವನು. ತರುವಾಯ ಅವನು ಪರಿಶುದ್ಧವಾದವುಗಳನ್ನು ತಿನ್ನಲಿ. ಏಕೆಂದರೆ ಅದು ಅವನಿಗೆ ಆಹಾರ.
8ತನ್ನನ್ನು ಅಶುದ್ಧಮಾಡಿಕೊಳ್ಳದಂತೆ ತನ್ನಷ್ಟಕ್ಕೆ ತಾನೇ ಸತ್ತಿರುವುದನ್ನಾಗಲಿ ಇಲ್ಲವೆ ಕಾಡುಮೃಗಗಳಿಂದ ಕೊಂದದ್ದನ್ನಾಗಲಿ ತಿನ್ನಬಾರದು. ನಾನೇ ಯೆಹೋವ ದೇವರು.
9“ ‘ಯಾಜಕರು ಅದನ್ನು ಅಪವಿತ್ರ ಪಡಿಸಿದರೆ, ಅದರ ನಿಮಿತ್ತ ಅಪರಾಧಿಯಾಗಿ ಸಾಯದಂತೆ ನನ್ನ ವಿಧಿಗಳನ್ನು ಕೈಗೊಳ್ಳಬೇಕು. ಅವರನ್ನು ಶುದ್ಧೀಕರಿಸುವ ಯೆಹೋವ ದೇವರು ನಾನೇ.
10“ ‘ಪರಿಶುದ್ಧವಾದದ್ದನ್ನು ಪರಕೀಯನು ತಿನ್ನಬಾರದು. ಯಾಜಕನ ಅತಿಥಿಯಾಗಲಿ ಇಲ್ಲವೆ ಕೂಲಿ ಆಳಾಗಲಿ ಪರಿಶುದ್ಧವಾದವುಗಳಲ್ಲಿ ತಿನ್ನಬಾರದು.
11ಆದರೆ ಯಾಜಕನು ಯಾವನನ್ನಾದರೂ ತನ್ನ ಹಣದಿಂದ ಕೊಂಡುಕೊಂಡರೆ, ಅವನು ಅದರಲ್ಲಿ ತಿನ್ನಬಹುದು. ಅವನ ಮನೆಯಲ್ಲಿ ಹುಟ್ಟಿದವನು ಅದನ್ನು ತಿನ್ನಬಹುದು.
12ಯಾಜಕನ ಮಗಳು ಒಬ್ಬ ಯಾಜಕನಲ್ಲದವನನ್ನು ಮದುವೆಯಾದರೆ, ಅವಳು ಸಮರ್ಪಣೆಯಾದ ಪರಿಶುದ್ಧವಾದವುಗಳಲ್ಲಿ ತಿನ್ನಬಾರದು.
13ಯಾಜಕನ ಮಗಳು ವಿಧವೆಯಾಗಿದ್ದರೆ ಇಲ್ಲವೆ ಗಂಡಬಿಟ್ಟವಳಾಗಿದ್ದರೆ ಮತ್ತು ಮಕ್ಕಳಿಲ್ಲದವಳಾಗಿ ತನ್ನ ಯೌವನದಲ್ಲಿದ್ದಂತೆಯೇ ತನ್ನ ತಂದೆಯ ಮನೆಗೆ ಹಿಂದಿರುಗಿದವಳಾಗಿದ್ದರೆ, ಅವಳು ತನ್ನ ತಂದೆಯ ಆಹಾರದಲ್ಲಿ ತಿನ್ನಲಿ. ಆದರೆ ಯಾಜಕರಲ್ಲದ ಕುಟುಂಬದವರು ಅದರಲ್ಲಿ ತಿನ್ನಬಾರದು.
14“ ‘ಇದಲ್ಲದೆ ಯಾವನಾದರೂ ತಿಳಿಯದೆ ಪರಿಶುದ್ಧವಾದದ್ದನ್ನು ತಿಂದರೆ, ಅವನು ಅದರ ಐದನೆಯ ಪಾಲನ್ನು ಕೂಡಿಸಿ, ಪರಿಶುದ್ಧವಾದದ್ದನ್ನು ಯಾಜಕನಿಗೆ ಕೊಡಬೇಕು.
15ಇಸ್ರಾಯೇಲರು ಯೆಹೋವ ದೇವರಿಗೆ ಅರ್ಪಿಸುವ ಪರಿಶುದ್ಧವಾದವುಗಳನ್ನು ಅವರು ಅಪವಿತ್ರ ಮಾಡಬಾರದು.
16ಇಲ್ಲವೆ ಅವರು ಪರಿಶುದ್ಧವಾದವುಗಳನ್ನು ತಿನ್ನುವುದರಿಂದ ತಮ್ಮ ಮೇಲೆ ಅತಿಕ್ರಮದ ಅಪರಾಧವನ್ನು ಹೊತ್ತುಕೊಳ್ಳದಿರಲಿ. ಏಕೆಂದರೆ ಅವರನ್ನು ಶುದ್ಧೀಕರಿಸುವ ಯೆಹೋವ ದೇವರು ನಾನೇ.’ ” ಅಂಗೀಕೃತವಾಗದ ಅರ್ಪಣೆಗಳು
17ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
18“ಆರೋನನೊಂದಿಗೂ, ಅವನ ಪುತ್ರರೊಂದಿಗೂ ಮಾತನಾಡಿ ಅವರಿಗೆ ಹೇಳಬೇಕಾದದ್ದು ಇದೇ, ‘ಇಸ್ರಾಯೇಲ್ ಮನೆತನದವರಲ್ಲಿಯಾಗಲಿ, ಇಸ್ರಾಯೇಲರಾದ ಪರಕೀಯರಲ್ಲಿಯಾಗಲಿ ಯಾರಾದರೂ ತಮ್ಮ ಎಲ್ಲಾ ಪ್ರಮಾಣಗಳ ನಿಮಿತ್ತವಾಗಿ ಕಾಣಿಕೆಯನ್ನು ದಹನಬಲಿಯಾಗಿ ಯೆಹೋವ ದೇವರಿಗೆ ಅರ್ಪಿಸುವ ಉಚಿತವಾದ ಅರ್ಪಣೆಗಳಲ್ಲಿ
19ನೀವು ನಿಮ್ಮ ಸ್ವಯಿಚ್ಛೆಯಿಂದ ಕಳಂಕರಹಿತವಾದ ಗಂಡು ಪಶು, ಕುರಿ ಅಥವಾ ಮೇಕೆಯನ್ನೇ ಅರ್ಪಿಸಬೇಕು.
20ಆದರೆ ದೋಷವಿರುವ ಯಾವುದನ್ನೂ ಸಮರ್ಪಿಸಬಾರದು. ಏಕೆಂದರೆ ಅದು ನಿಮಗೋಸ್ಕರ ಅಂಗೀಕಾರವಾಗುವುದಿಲ್ಲ.
21ತಮ್ಮ ಪ್ರಮಾಣವನ್ನು ಪೂರೈಸುವ ಹಾಗೆ ಯಾರಾದರೂ ಸಮಾಧಾನದ ಬಲಿಯನ್ನಾಗಲಿ, ಪಶುಗಳನ್ನಾಗಲಿ, ಕುರಿಗಳನ್ನಾಗಲಿ ಉಚಿತವಾದ ಕಾಣಿಕೆಯಾಗಿ ಯೆಹೋವ ದೇವರಿಗೆ ಅರ್ಪಿಸುವುದಾದರೆ, ಅದು ಅಂಗೀಕಾರಕ್ಕೆ ಪರಿಪೂರ್ಣವುಳ್ಳದ್ದಾಗಿರಬೇಕು. ಅದರೊಳಗೆ ಯಾವ ದೋಷವೂ ಕಳಂಕವೂ ಇರಬಾರದು.
22ಕುರುಡಾದದ್ದು, ಮುರಿದದ್ದು, ಅಂಗಹೀನವಾದದ್ದು, ಬೊಕ್ಕೆಯುಳ್ಳದ್ದು, ಕಜ್ಜಿ ತುರಿಯುಳ್ಳದ್ದು, ಇವುಗಳನ್ನು ನೀವು ಯೆಹೋವ ದೇವರಿಗೆ ಸಮರ್ಪಿಸಲೂಬಾರದು ಮತ್ತು ಅವುಗಳನ್ನು ಬಲಿಪೀಠದ ಮೇಲೆ ದಹನಬಲಿಯಾಗಿ ಯೆಹೋವ ದೇವರಿಗೆ ಸಮರ್ಪಿಸಲೂಬಾರದು.
23ಹೋರಿಯಾಗಲಿ ಇಲ್ಲವೆ ಕುರಿಮರಿಯಾಗಲಿ ಅದಕ್ಕೆ ಹೆಚ್ಚಾದ ಅಂಗವಿರುವದಾಗಿದ್ದರೆ ಇಲ್ಲವೆ ಅದರ ಅಂಗಗಳಲ್ಲಿ ಕೊರತೆಯಿರುವುದಾದರೆ, ಅದನ್ನು ಉಚಿತ ಕಾಣಿಕೆಯಾಗಿ ಅರ್ಪಿಸಬಹುದು. ಆದರೆ ಹರಕೆಯಾಗಿ ಅದು ಅಂಗೀಕಾರವಾಗುವುದಿಲ್ಲ.
24ಜಜ್ಜಿ ಗಾಯವಾದ, ನುಜ್ಜುಗುಜ್ಜಾದ, ಮುರಿದ ಇಲ್ಲವೆ ಕೊಯ್ದಿರುವ ಯಾವುದನ್ನೂ ಯೆಹೋವ ದೇವರಿಗೆ ಸಮರ್ಪಿಸಬಾರದು. ನಿಮ್ಮ ದೇಶದೊಳಗಿರುವ ಅಂಥ ಯಾವ ಬಲಿಯನ್ನಾದರೂ ನೀವು ಸಮರ್ಪಿಸಬಾರದು.
25ಇದಲ್ಲದೆ ಪರಕೀಯನಿಂದ ತೆಗೆದುಕೊಂಡ ಅಂತಹ ಯಾವ ಪಶುವನ್ನೂ ನಿಮ್ಮ ದೇವರಿಗೆ ಆಹಾರವಾಗಿ ಅರ್ಪಿಸಬಾರದು. ಏಕೆಂದರೆ ಅವರ ಕುಂದುಳ್ಳದ್ದು ಮತ್ತು ದೋಷಗಳೂ ಅವುಗಳಲ್ಲಿ ಇರುತ್ತವೆ. ಅವು ನಿಮಗೋಸ್ಕರವಾಗಿ ಅಂಗೀಕಾರವಾಗುವುದಿಲ್ಲ.’ ”
26ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
27“ಹೋರಿಯನ್ನಾಗಲಿ ಇಲ್ಲವೆ ಕುರಿಯನ್ನಾಗಲಿ ಇಲ್ಲವೆ ಆಡನ್ನಾಗಲಿ ತಂದಾಗ, ಏಳು ದಿವಸಗಳವರೆಗೆ ಅದು ತನ್ನ ತಾಯಿಯ ಬಳಿಯಲ್ಲಿ ಇರಲಿ. ಎಂಟನೆಯ ದಿನದಿಂದ ಅದು ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸಿದರೆ ಅಂಗೀಕಾರವಾಗುವುದು.
28ಹಸುವನ್ನಾಗಲಿ ಇಲ್ಲವೆ ಕುರಿಯನ್ನಾಗಲಿ ಅದರ ಮರಿಯೊಂದಿಗೆ ಎರಡನ್ನೂ ಒಂದೇ ದಿನದಲ್ಲಿ ವಧಿಸಬಾರದು.
29“ನೀವು ಕೃತಜ್ಞತೆಯ ಯಜ್ಞಾರ್ಪಣೆಯನ್ನು, ಯೆಹೋವ ದೇವರಿಗೆ ಮಾಡುವ ಬಲಿದಾನವನ್ನು ಮೆಚ್ಚಿಗೆಯಾದ ರೀತಿಯಲ್ಲಿ ಸಮರ್ಪಿಸಬೇಕು.
30ಅದೇ ದಿನದಲ್ಲಿ ಅದನ್ನು ತಿಂದುಬಿಡಬೇಕು. ಅದರಲ್ಲಿ ಯಾವುದನ್ನೂ ಮಾರನೆಯ ದಿನದವರೆಗೆ ಉಳಿಸಬಾರದು. ನಾನೇ ಯೆಹೋವ ದೇವರು.
31“ಆದ್ದರಿಂದ ನೀವು ನನ್ನ ಆಜ್ಞೆಗಳನ್ನು ಕೈಗೊಂಡು ಅವುಗಳನ್ನು ಮಾಡಬೇಕು. ನಾನೇ ಯೆಹೋವ ದೇವರು.
32ನನ್ನ ಪರಿಶುದ್ಧವಾದ ಹೆಸರನ್ನು ಅಪರಿಶುದ್ಧಗೊಳಿಸಬಾರದು, ಏಕೆಂದರೆ ಇಸ್ರಾಯೇಲರ ಮಧ್ಯದಲ್ಲಿ ನಾನು ಪರಿಶುದ್ಧನೆಂದು ಪರಿಗಣಿಸಬೇಕು. ನಿಮ್ಮನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವ ದೇವರು ನಾನೇ.
33ನಿಮಗೆ ದೇವರಾಗಿರಲು ನಿಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದೆನು. ನಾನೇ ಯೆಹೋವ ದೇವರು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.