Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯಾಜಕಕಾಂಡ 17

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,
2“ಆರೋನನಿಗೂ, ಅವನ ಪುತ್ರರಿಗೂ, ಇಸ್ರಾಯೇಲರೆಲ್ಲರಿಗೂ ಮಾತನಾಡಿ ಅವರಿಗೆ ಹೀಗೆ ಹೇಳು: ‘ಯೆಹೋವ ದೇವರು ನಿಮಗೆ ಇಂತೆಂದು ಆಜ್ಞಾಪಿಸುತ್ತಾರೆ.
3ಇಸ್ರಾಯೇಲಿನ ಮನೆತನದಲ್ಲಿ ಯಾವನು ಒಂದು ಎತ್ತನ್ನಾಗಲಿ ಇಲ್ಲವೆ ಒಂದು ಕುರಿಯನ್ನಾಗಲಿ ಇಲ್ಲವೆ ಒಂದು ಆಡನ್ನಾಗಲಿ ಪಾಳೆಯದೊಳಗೆ ಆಗಲಿ ಇಲ್ಲವೆ ಪಾಳೆಯದ ಹೊರಗೆ ಆಗಲಿ ವಧಿಸಿ,
4ಯೆಹೋವ ದೇವರಿಗೆ ಸಮರ್ಪಿಸುವುದಕ್ಕಾಗಿ ದೇವದರ್ಶನದ ಗುಡಾರದ ಬಾಗಿಲ ಮುಂದೆ ತಾರದಿದ್ದರೆ, ಆ ಮನುಷ್ಯನ ಮೇಲೆ ರಕ್ತಾಪರಾಧವು ಹೊರಿಸಬೇಕು. ಅವನು ರಕ್ತ ಸುರಿಸಿರುವವನು, ಆ ಮನುಷ್ಯನು ತನ್ನ ಜನರ ಮಧ್ಯದೊಳಗಿಂದ ತೆಗೆದುಹಾಕಬೇಕು.
5ಇಸ್ರಾಯೇಲರು ತಾವು ಬಯಲಿನಲ್ಲಿ ಸಮರ್ಪಿಸುವ ಬಲಿಗಳನ್ನು ಯೆಹೋವ ದೇವರಿಗೆ ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಯಾಜಕನ ಬಳಿಗೆ ತಂದು ಯೆಹೋವ ದೇವರಿಗೆ ಸಮಾಧಾನದ ಬಲಿಯಾಗಿ ಸಮರ್ಪಿಸಬೇಕು.
6ಯಾಜಕನು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಬಲಿಪೀಠದ ಮೇಲೆ ರಕ್ತವನ್ನು ಚಿಮುಕಿಸಬೇಕು. ಕೊಬ್ಬನ್ನು ಯೆಹೋವ ದೇವರಿಗೆ ಆಹ್ಲಾದಕರ ಸುಗಂಧ ವಾಸನೆಯಾಗಿ ಸುಡಬೇಕು.
7ಜಾರತ್ವ ಮಾಡುವಂತೆ ಅವರು ಇದುವರೆಗೆ ಪೂಜಿಸುತ್ತಿದ್ದ ಆ ಮೇಕೆ ದೇವತೆಗಳಿಗೆ ಇನ್ನೆಂದಿಗೂ ತಮ್ಮ ಯಜ್ಞಗಳನ್ನು ಸಮರ್ಪಿಸಬಾರದು. ಇದು ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾದ ನಿಯಮ.’
8“ಇದಲ್ಲದೆ ನೀನು ಅವರಿಗೆ ಹೇಳಬೇಕಾದದ್ದೇನೆಂದರೆ, ‘ಇಸ್ರಾಯೇಲಿನ ಮನೆತನದವರಲ್ಲಿ ಯಾವ ಮನುಷ್ಯನಾದರು ಇಲ್ಲವೆ ನಿಮ್ಮೊಳಗೆ ಪ್ರವಾಸಿಗರಾಗಿದ್ದ ಪರಕೀಯರು ದಹನಬಲಿಯನ್ನಾಗಲಿ, ಯಜ್ಞವನ್ನಾಗಲಿ ಅರ್ಪಿಸಿದರೆ,
9ಅದನ್ನು ಯೆಹೋವ ದೇವರಿಗೆ ಸಮರ್ಪಿಸುವಂತೆ ದೇವದರ್ಶನದ ಗುಡಾರದ ಬಾಗಿಲ ಬಳಿಗೆ ತಾರದಿದ್ದರೆ, ಆ ಮನುಷ್ಯನನ್ನು ತನ್ನ ಜನರ ಮಧ್ಯದೊಳಗಿಂದ ತೆಗೆದುಹಾಕಬೇಕು.
10“ ‘ಇದಲ್ಲದೆ ಇಸ್ರಾಯೇಲ್ ಮನೆತನದಲ್ಲಿ ಯಾವನಾದರೂ ನಿಮ್ಮ ಮಧ್ಯದೊಳಗೆ ಪ್ರವಾಸಿಯಾಗಿರುವ ಪರಕೀಯನಾದರೂ, ಯಾವುದೇ ತರದ ರಕ್ತವನ್ನು ತಿಂದರೆ, ರಕ್ತವನ್ನು ತಿನ್ನುವ ಆ ಪ್ರಾಣಕ್ಕೆ ನಾನು ವಿಮುಖನಾಗಿರುವೆನು, ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
11ಏಕೆಂದರೆ ದೇಹದ ಜೀವವು ರಕ್ತದೊಳಗೆ ಇರುತ್ತದೆ ಮತ್ತು ನಾನು ಅದನ್ನು ನಿಮ್ಮ ಆತ್ಮಗಳಿಗೆ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಬಲಿಪೀಠದ ಮೇಲೆ ನಿಮಗೆ ಕೊಟ್ಟಿದ್ದೇನೆ. ಪ್ರಾಣಕ್ಕೆ ಪ್ರಾಯಶ್ಚಿತ್ತ ಮಾಡುವುದು ರಕ್ತವೇ.
12ಆದಕಾರಣ ನಾನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಿದೆನು, “ನಿಮ್ಮಲ್ಲಿಯಾಗಲಿ, ನಿಮ್ಮ ನಡುವೆ ತಂಗಿರುವ ಪರಕೀಯರಲ್ಲಿಯಾಗಲಿ ಯಾರೂ ರಕ್ತವನ್ನು ಭುಜಿಸಬಾರದು.”
13“ ‘ಇದಲ್ಲದೆ ಇಸ್ರಾಯೇಲರು ಯಾವ ಮನುಷ್ಯನಾದರೂ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿರುವ ಪರಕೀಯನಾದರೂ ತಿನ್ನುವುದಕ್ಕಾಗಿ ಬೇಟೆಯಾಡಿ, ಯಾವುದೇ ಪಶುವನ್ನಾಗಲಿ ಇಲ್ಲವೆ ಪಕ್ಷಿಯನ್ನಾಗಲಿ ಹಿಡಿದರೆ, ಅದರ ರಕ್ತವನ್ನೆಲ್ಲಾ ಸುರಿದು ಅದನ್ನು ಮಣ್ಣಿನಿಂದ ಮುಚ್ಚಬೇಕು.
14ಏಕೆಂದರೆ ಅದು ಎಲ್ಲಾ ಶರೀರಗಳ ಜೀವವಾಗಿದೆ. ಅದಕ್ಕಿರುವ ರಕ್ತವು ಅದರ ಜೀವಕ್ಕಾಗಿಯೇ ಇದೆ. ಆದ್ದರಿಂದ ನಾನು ಇಸ್ರಾಯೇಲರಿಗೆ, “ನೀವು ಯಾವ ತರಹದ ರಕ್ತವನ್ನೂ ತಿನ್ನಬಾರದು,” ಎಂದು ಹೇಳಿದ್ದೇನೆ. ಏಕೆಂದರೆ ಎಲ್ಲಾ ಶರೀರಗಳ ಜೀವವೂ ಅದರ ರಕ್ತದಲ್ಲಿಯೇ ಇದೆ. ಅದನ್ನು ತಿನ್ನುವ ಯಾವನನ್ನಾದರೂ ಬಹಿಷ್ಕರಿಸಬೇಕು.
15“ ‘ಸ್ವದೇಶದವನಾಗಲಿ ಇಲ್ಲವೆ ಪರಕೀಯನಾಗಲಿ ತನ್ನಷ್ಟಕ್ಕೆ ತಾನೇ ಸತ್ತು ಹೋದದ್ದನ್ನು ಇಲ್ಲವೆ ಕಾಡುಮೃಗ ಕೊಂದದ್ದನ್ನು ತಿಂದ ಪ್ರತಿಯೊಬ್ಬನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಂಜೆಯವರೆಗೆ ಅವನು ಅಶುದ್ಧನಾಗಿರಬೇಕು. ತರುವಾಯ ಅವನು ಶುದ್ಧನಾಗಿರುವನು.
16ಆದರೆ ಅವನು ಬಟ್ಟೆಗಳನ್ನು ಒಗೆದುಕೊಳ್ಳದೆ ಇದ್ದರೆ, ಇಲ್ಲವೆ ತಾನು ಸ್ನಾನ ಮಾಡದಿದ್ದರೆ, ತನ್ನ ಅಪರಾಧವನ್ನು ತಾನೇ ಹೊತ್ತುಕೊಳ್ಳಬೇಕು.’ ”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.