Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯಾಜಕಕಾಂಡ 14

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ:
2“ಚರ್ಮರೋಗಿಯು ತನ್ನ ಶುದ್ಧತೆಯ ದಿನದಲ್ಲಿ ಮಾಡತಕ್ಕ ನಿಯಮವು ಇದೇ. ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು.
3ಯಾಜಕನು ಪಾಳೆಯದ ಆಚೆಗೆ ಹೊರಟು ಹೋಗಬೇಕು. ಚರ್ಮರೋಗದಿಂದ ರೋಗಿಯು ಗುಣವಾದನೆಂದು ಯಾಜಕನು ಪರೀಕ್ಷಿಸಿದರೆ,
4ಆಗ ಶುದ್ಧಮಾಡಿಕೊಳ್ಳುವವನಿಗೋಸ್ಕರ ಜೀವವುಳ್ಳ ಮತ್ತು ಶುದ್ಧವಾದ ಎರಡು ಪಕ್ಷಿಗಳನ್ನೂ, ದೇವದಾರು ಕಟ್ಟಿಗೆಯನ್ನೂ, ರಕ್ತವರ್ಣದ ದಾರವನ್ನೂ ಮತ್ತು ಹಿಸ್ಸೋಪನ್ನೂ ತೆಗೆದುಕೊಳ್ಳುವಂತೆ ಯಾಜಕನು ಆಜ್ಞಾಪಿಸಬೇಕು.
5ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಮಣ್ಣಿನ ಪಾತ್ರೆಯಲ್ಲಿ ಕೊಲ್ಲಬೇಕೆಂದು ಯಾಜಕನು ಆಜ್ಞಾಪಿಸಬೇಕು.
6ಇದಲ್ಲದೆ ಜೀವವುಳ್ಳ ಪಕ್ಷಿಯನ್ನೂ, ದೇವದಾರು ಕಟ್ಟಿಗೆಯನ್ನೂ, ರಕ್ತವರ್ಣದ ದಾರವನ್ನೂ ಮತ್ತು ಹಿಸ್ಸೋಪನ್ನೂ ತೆಗೆದುಕೊಂಡು, ಹರಿಯುವ ನೀರಿನ ಬಳಿಯಲ್ಲಿ ವಧಿಸಿದ ಆ ಪಕ್ಷಿಯ ರಕ್ತದಲ್ಲಿ ಅದ್ದಿ,
7ಚರ್ಮರೋಗದಿಂದ ಶುದ್ಧಮಾಡಿಸಿಕೊಳ್ಳುವವನ ಮೇಲೆ ಏಳು ಸಾರಿ ಚಿಮುಕಿಸಿ, ಅವನನ್ನು ಶುದ್ಧನೆಂದು ನುಡಿದು, ಆ ಜೀವವುಳ್ಳ ಪಕ್ಷಿಯನ್ನು ಬಯಲಾದ ಹೊಲದಲ್ಲಿ ಬಿಟ್ಟುಬಿಡಬೇಕು.
8“ಶುದ್ಧವಾಗುವುದಕ್ಕಿರುವವನು ತನ್ನ ಬಟ್ಟೆಗಳನ್ನು ತೊಳೆದುಕೊಂಡವನಾಗಿ, ತನ್ನ ಎಲ್ಲಾ ಕೂದಲನ್ನು ಬೋಳಿಸಿಕೊಂಡು, ತಾನು ಶುದ್ಧನಾಗುವಂತೆ ತನ್ನನ್ನು ನೀರಿನಲ್ಲಿ ತೊಳೆದುಕೊಳ್ಳಬೇಕು. ತರುವಾಯ ಅವನು ಪಾಳೆಯದೊಳಗೆ ಬಂದು ತನ್ನ ಡೇರೆಯೊಳಗೆ ಏಳು ದಿನಗಳವರೆಗೆ ಕಾಯಬೇಕು.
9ಆದರೆ ಏಳನೆಯ ದಿನದಲ್ಲಿ ಅವನು ತನ್ನ ತಲೆಯ ಎಲ್ಲಾ ಕೂದಲನ್ನೂ, ಗಡ್ಡವನ್ನೂ, ತನ್ನ ಕಣ್ಣುಹುಬ್ಬುಗಳನ್ನೂ ಮಾತ್ರವಲ್ಲದೆ ತನ್ನ ಎಲ್ಲಾ ಕೂದಲನ್ನೂ ಬೋಳಿಸಿಕೊಳ್ಳಬೇಕು. ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಇದಲ್ಲದೆ ತನ್ನ ದೇಹವನ್ನು ಸಹ ನೀರಿನಲ್ಲಿ ತೊಳೆಯಬೇಕು. ಆಗ ಅವನು ಶುದ್ಧನಾಗಿರುವನು.
10“ಎಂಟನೆಯ ದಿವಸದಲ್ಲಿ ಅವನು ಕಳಂಕರಹಿತವಾದ ಎರಡು ಕುರಿಮರಿಗಳನ್ನು ಮತ್ತು ಒಂದು ವರುಷದ ಕಳಂಕರಹಿತವಾದ ಹೆಣ್ಣು ಕುರಿಯನ್ನು, ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಐದು ಕಿಲೋಗ್ರಾಂ ಗೋಧಿ ಹಿಟ್ಟನ್ನು, ಒಂದನೆಯ ಮೂರು ಭಾಗ ಎಣ್ಣೆಯನ್ನು ತೆಗೆದುಕೊಳ್ಳಬೇಕು.
11ಅವನನ್ನು ಶುದ್ಧಪಡಿಸುವ ಯಾಜಕನು ಶುದ್ಧಮಾಡಿಸಿಕೊಳ್ಳುವವನನ್ನು ಇವುಗಳೊಂದಿಗೆ ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಯೆಹೋವ ದೇವರ ಮುಂದೆ ನಿಲ್ಲಿಸಬೇಕು.
12“ಆಗ ಯಾಜಕನು ಒಂದು ಗಂಡು ಕುರಿಮರಿಯನ್ನೂ, ಒಂದನೆಯ ಮೂರು ಭಾಗದಷ್ಟು ಎಣ್ಣೆಯನ್ನೂ ತೆಗೆದುಕೊಂಡು ಪ್ರಾಯಶ್ಚಿತ್ತ ಬಲಿಯಾಗಿ ಅರ್ಪಿಸಿ, ಅವುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು.
13ಇದಲ್ಲದೆ ಅವನು ಆ ಕುರಿಮರಿಯನ್ನು ಪರಿಶುದ್ಧ ಸ್ಥಳದಲ್ಲಿ ಪಾಪ ಪರಿಹಾರದ ಬಲಿಯನ್ನು, ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ವಧಿಸಬೇಕು. ದೋಷಪರಿಹಾರ ಬಲಿಯಂತೆಯೇ ಪ್ರಾಯಶ್ಚಿತ್ತ ಬಲಿಯೂ ಯಾಜಕನದಾಗಿದೆ. ಅದು ಮಹಾಪರಿಶುದ್ಧವಾದದ್ದು.
14ಯಾಜಕನು ಪ್ರಾಯಶ್ಚಿತ್ತ ಬಲಿಯಲ್ಲಿ ಸ್ವಲ್ಪ ರಕ್ತವನ್ನು ತೆಗೆದುಕೊಳ್ಳಬೇಕು ಮತ್ತು ಯಾಜಕನು ಅದನ್ನು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಮತ್ತು ಬಲಗೈಯ ಹೆಬ್ಬೆರಳಿನ ಮೇಲೆಯೂ, ಬಲಗಾಲಿನ ಹೆಬ್ಬೆಟ್ಟಿನ ಮೇಲೆಯೂ ಹಚ್ಚಬೇಕು.
15ಯಾಜಕನು ಒಂದನೆಯ ಮೂರು ಭಾಗದಷ್ಟು ಎಣ್ಣೆಯಲ್ಲಿ ಸ್ವಲ್ಪ ತೆಗೆದುಕೊಂಡು ತನ್ನ ಸ್ವಂತ ಎಡ ಅಂಗೈಯಲ್ಲಿ ಹೊಯ್ಯಬೇಕು.
16ಯಾಜಕನು ತನ್ನ ಎಡಗೈಯಲ್ಲಿರುವ ಎಣ್ಣೆಯಲ್ಲಿ ತನ್ನ ಬಲಗೈ ಬೆರಳನ್ನು ಅದ್ದಿ, ತನ್ನ ಬೆರಳಿನಿಂದ ಆ ಎಣ್ಣೆಯನ್ನು ಏಳು ಸಾರಿ ಯೆಹೋವ ದೇವರ ಎದುರಿನಲ್ಲಿ ಚಿಮುಕಿಸಬೇಕು.
17ತನ್ನ ಕೈಯಲ್ಲಿ ಮಿಕ್ಕಿದ ಎಣ್ಣೆಯನ್ನು ಯಾಜಕನು ಶುದ್ಧಮಾಡಿಸಿಕೊಳ್ಳುವವನ ಬಲಗಿವಿಯ ತುದಿಯ ಮೇಲೆ ಮತ್ತು ಅವನ ಬಲಗೈಯ ಹೆಬ್ಬೆರಳಿನ ಮೇಲೆ, ಅವನ ಬಲಗಾಲಿನ ಹೆಬ್ಬೆಟ್ಟಿನ ಮೇಲೆ ಹಚ್ಚಬೇಕು. ಅದೇ ರೀತಿ ಪ್ರಾಯಶ್ಚಿತ್ತ ಬಲಿಯ ರಕ್ತದ ಮೇಲೆ ಹಚ್ಚಬೇಕು.
18ಯಾಜಕನ ಕೈಯಲ್ಲಿರುವ ಉಳಿದ ಆ ಎಣ್ಣೆಯನ್ನು ಶುದ್ಧಮಾಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ಯಬೇಕು. ಯಾಜಕನು ಅವನಿಗಾಗಿ ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತ ಮಾಡಬೇಕು.
19“ಯಾಜಕನು ಪಾಪ ಪರಿಹಾರದ ಬಲಿಯನ್ನು ಸಮರ್ಪಿಸಿ, ಶುದ್ಧಮಾಡಿಸಿಕೊಳ್ಳುವವನಿಗೋಸ್ಕರ ಅವನ ಅಶುದ್ಧತೆಗಾಗಿ ಪ್ರಾಯಶ್ಚಿತ್ತ ಮಾಡಬೇಕು. ತರುವಾಯ ಅವನು ದಹನಬಲಿಯ ಪ್ರಾಣಿಯನ್ನು ವಧಿಸಬೇಕು.
20ಯಾಜಕನು ದಹನಬಲಿಯನ್ನೂ, ಧಾನ್ಯ ಸಮರ್ಪಣೆಯನ್ನೂ ಬಲಿಪೀಠದ ಮೇಲೆ ಸಮರ್ಪಿಸಬೇಕು. ಇದಲ್ಲದೆ ಯಾಜಕನು ಅವನಿಗೋಸ್ಕರ ಪ್ರಾಯಶ್ಚಿತ್ತವನ್ನು ಮಾಡಬೇಕು. ಆಗ ಅವನು ಶುದ್ಧನಾಗಿರುವನು.
21“ಅವನು ಬಡವನಾಗಿದ್ದರೆ ಅಷ್ಟೊಂದು ತರುವುದಕ್ಕೆ ಆಗದಿದ್ದರೆ, ಅವನು ತನ್ನ ಪ್ರಾಯಶ್ಚಿತ್ತಕ್ಕಾಗಿ ಬಲಿ ಕೊಡಲು ನೈವೇದ್ಯ ಮಾಡುವುದಕ್ಕೆ ಒಂದು ಕುರಿಮರಿಯನ್ನೂ, ಎಣ್ಣೆ ಬೆರೆಸಿದ ಒಂದುವರೆ ಕಿಲೋಗ್ರಾಂ ನಯವಾದ ಹಿಟ್ಟನ್ನೂ, ಒಂದನೆಯ ಮೂರು ಭಾಗದಷ್ಟು ಎಣ್ಣೆಯನ್ನೂ
22ಮತ್ತು ಅವನಿಂದಾಗುವಷ್ಟು ಎರಡು ಬೆಳವಕ್ಕಿಗಳನ್ನೂ ಇಲ್ಲವೆ ಎರಡು ಪಾರಿವಾಳದ ಮರಿಗಳನ್ನೂ ತೆಗೆದುಕೊಳ್ಳಬೇಕು. ಅವುಗಳಲ್ಲಿ ಒಂದು ಪಾಪ ಪರಿಹಾರದ ಬಲಿಗಾಗಿಯೂ, ಇನ್ನೊಂದು ದಹನಬಲಿಗಾಗಿಯೂ ಇರುವುದು.
23“ಅವನು ತನ್ನ ಶುದ್ಧತೆಗಾಗಿ ಎಂಟನೆಯ ದಿನದಲ್ಲಿ ಇವುಗಳನ್ನು ದೇವದರ್ಶನದ ಗುಡಾರದ ಬಾಗಿಲ ಬಳಿಗೆ ಯಾಜಕನ ಹತ್ತಿರಕ್ಕೆ ಯೆಹೋವ ದೇವರ ಎದುರಿನಲ್ಲಿ ತರಬೇಕು.
24ಯಾಜಕನು ಪ್ರಾಯಶ್ಚಿತ್ತದ ಸಮರ್ಪಣೆಯ ಆ ಕುರಿಮರಿಯನ್ನೂ, ಒಂದನೆಯ ಮೂರು ಭಾಗದಷ್ಟು ಎಣ್ಣೆಯನ್ನೂ ತೆಗೆದುಕೊಳ್ಳಬೇಕು. ಯಾಜಕನು ಅವುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು.
25ಅವನು ಪ್ರಾಯಶ್ಚಿತ್ತ ಬಲಿಗಾಗಿ ಆ ಕುರಿಮರಿಯನ್ನು ವಧಿಸಬೇಕು. ಆ ಪ್ರಾಯಶ್ಚಿತ್ತ ಬಲಿಯ ಸ್ವಲ್ಪ ರಕ್ತವನ್ನು ಯಾಜಕನು ತೆಗೆದುಕೊಂಡು, ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಯ ಮೇಲೆಯೂ, ಅವನ ಬಲಗೈಯ ಹೆಬ್ಬೆರಳಿನ ಮೇಲೆಯೂ ಹಚ್ಚಬೇಕು.
26ಇದಲ್ಲದೆ ಯಾಜಕನು ತನ್ನ ಸ್ವಂತ ಎಡ ಅಂಗೈಯಲ್ಲಿ ಎಣ್ಣೆಯನ್ನು ಸುರಿಯಬೇಕು.
27ಯಾಜಕನು ತನ್ನ ಬಲಬೆರಳಿನಿಂದ ತನ್ನ ಎಡಗೈಯಲ್ಲಿರುವ ಸ್ವಲ್ಪ ಎಣ್ಣೆಯನ್ನು ಏಳು ಸಾರಿ ಯೆಹೋವ ದೇವರ ಎದುರಿನಲ್ಲಿ ಚಿಮುಕಿಸಬೇಕು.
28ಇದಲ್ಲದೆ ಯಾಜಕನು ತನ್ನ ಕೈಯಲ್ಲಿದ್ದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಯ ಮೇಲೆಯೂ, ಅವನ ಬಲಗೈಯ ಹೆಬ್ಬೆರಳಿನ ಮೇಲೆಯೂ, ಅವನ ಬಲಗಾಲಿನ ಹೆಬ್ಬೆಟ್ಟಿನ ಮೇಲೆಯೂ ಪ್ರಾಯಶ್ಚಿತ್ತ ಬಲಿಯ ರಕ್ತದ ಸ್ಥಳದ ಮೇಲೆಯೂ ಹಚ್ಚಬೇಕು.
29ಯಾಜಕನ ಕೈಯಲ್ಲಿರುವ ಉಳಿದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ದು, ಯೆಹೋವ ದೇವರ ಎದುರಿನಲ್ಲಿ ಅವನಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.
30ತರುವಾಯ ಅವನು ತನ್ನ ಸ್ಥಿತಿಗೆ ತಕ್ಕಂತೆ ತಂದ ಬೆಳವಕ್ಕಿಗಳಲ್ಲಿಯಾಗಲಿ ಪಾರಿವಾಳದ ಮರಿಗಳಲ್ಲಿಯಾಗಲಿ ಸಮರ್ಪಿಸಬೇಕು.
31ಅದರಂತೆಯೇ ಅವನು ತನ್ನ ಸ್ಥಿತಿಗೆ ತಕ್ಕಂತೆ ಒಂದನ್ನು ಪಾಪ ಪರಿಹಾರದ ಬಲಿಗಾಗಿ ಮತ್ತು ಇನ್ನೊಂದನ್ನು ದಹನಬಲಿಗಾಗಿ ಧಾನ್ಯಸಮರ್ಪಣೆಯೊಂದಿಗೆ ಸಮರ್ಪಿಸಬೇಕು, ಶುದ್ಧಪಡಿಸಿಕೊಳ್ಳುವವನಿಗೋಸ್ಕರ ಯಾಜಕನು ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತವನ್ನು ಮಾಡಬೇಕು.”
32ಚರ್ಮರೋಗವುಳ್ಳವನು ಶುದ್ಧತೆ ಮಾಡಿಸಿಕೊಳ್ಳಲು ಗತಿಯಿಲ್ಲದವನಿಗೆ ತನ್ನ ಶುದ್ಧತೆಗಾಗಿ ಇರುವ ನಿಯಮವು ಇದೇ. ಬೂಜು ಹಿಡಿದ ಮನೆಯನ್ನು ಶುದ್ಧಮಾಡುವುದು
33ಯೆಹೋವ ದೇವರು ಮೋಶೆ ಮತ್ತು ಆರೋನರೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ:
34“ನಾನು ನಿಮಗೆ ಸೊತ್ತಾಗಿ ಕೊಡುವ ಕಾನಾನ್ ದೇಶದೊಳಗೆ ನೀವು ಬಂದ ಬಳಿಕ ನಾನು ನಿಮಗೆ ಸೊತ್ತಾಗಿ ಕೊಡುವ ಮನೆಯಲ್ಲಿ ಬೂಜನ್ನು ಬರಮಾಡಿದಾಗ,
35ಮನೆಯವನು ಯಾಜಕನ ಬಳಿಗೆ ಬಂದು, ‘ನನ್ನ ಮನೆಯಲ್ಲಿ ಬೂಜಿನ ಗುರುತಿದ್ದಂತೆ ಕಾಣುತ್ತಿದೆ,’ ಎಂದು ಹೇಳಬೇಕು.
36ಆಗ ಯಾಜಕನು ಆ ಮನೆಯಲ್ಲಿ ಬೂಜನ್ನು ಪರೀಕ್ಷಿಸುವುದಕ್ಕೆ ಹೋಗುವ ಮೊದಲು, ಆ ಮನೆಯೊಳಗೆ ಇರುವವುಗಳು ಅಶುದ್ಧವಾಗದಂತೆ ಆ ಮನೆಯನ್ನು ಬರಿದುಮಾಡಬೇಕೆಂದು ಆಜ್ಞಾಪಿಸಬೇಕು. ತರುವಾಯ ಯಾಜಕನು ಮನೆಯನ್ನು ಪರೀಕ್ಷಿಸುವುದಕ್ಕೆ ಒಳಗೆ ಹೋಗಬೇಕು.
37ಅವನು ಆ ಬೂಜನ್ನು ಪರೀಕ್ಷಿಸಿದಾಗ, ಅದು ಮನೆಯ ಗೋಡೆಗಳಲ್ಲಿ ತಗ್ಗಾದ ಸಾಲುಗಳಲ್ಲಿ ಹಸಿರಾಗಿಯಾದರೂ, ಕೆಂಪಾಗಿ ಗೋಡೆಯ ಮಟ್ಟಕ್ಕಿಂತ ತಗ್ಗಿನಲ್ಲಿ ತೋರಿಬಂದರೆ,
38ಯಾಜಕನು ಆ ಮನೆಯ ಹೊರಗೆ ಮನೆಯ ಬಾಗಿಲ ಬಳಿಗೆ ಹೋಗಿ ಅದನ್ನು ಏಳು ದಿವಸಗಳವರೆಗೆ ಮುಚ್ಚಬೇಕು.
39ಏಳನೆಯ ದಿನದಲ್ಲಿ ಯಾಜಕನು ತಿರುಗಿಬಂದು ಪರೀಕ್ಷಿಸಿದಾಗ, ಆ ಬೂಜು ಮನೆಯ ಗೋಡೆಗಳಲ್ಲಿ ಹರಡಿಕೊಂಡಿದ್ದರೆ,
40ಬೂಜುಳ್ಳ ಕಲ್ಲುಗಳನ್ನು ಅವರು ತೆಗೆದು ಪಟ್ಟಣದ ಆಚೆಗೆ ಅಶುದ್ಧ ಸ್ಥಳದಲ್ಲಿ ಬಿಸಾಡಬೇಕೆಂದೂ,
41ಆ ಮನೆಯ ಒಳಭಾಗದಲ್ಲಿ ಸುತ್ತಲೂ ಕೆರೆದು, ಕೆರೆದ ಧೂಳನ್ನು ಪಟ್ಟಣದ ಹೊರಗೆ ಅಶುದ್ಧ ಸ್ಥಳದಲ್ಲಿ ಸುರಿಯಬೇಕೆಂದೂ,
42ಅವರು ಆ ಕಲ್ಲುಗಳಿಗೆ ಬದಲಾಗಿ ಬೇರೆ ಕಲ್ಲುಗಳನ್ನು ತೆಗೆದುಕೊಳ್ಳಬೇಕೆಂದೂ ಯಾಜಕನು ಆಜ್ಞಾಪಿಸಬೇಕು, ಅವನು ಬೇರೆ ಗಾರೆಯಿಂದ ಆ ಮನೆಗೆ ಗಿಲಾವುಮಾಡಬೇಕು.
43“ಅವನು ಆ ಮನೆಯ ಕಲ್ಲುಗಳನ್ನು ತೆಗೆಸಿ ಅದನ್ನು ಕೆತ್ತಿ ಗಿಲಾವು ಮಾಡಿಸಿದ ಮೇಲೆ ಆ ಬೂಜು ತಿರುಗಿ ಕಾಣಬಂದರೆ,
44ಯಾಜಕನು ಬಂದು ಪರೀಕ್ಷಿಸಬೇಕು. ಆಗ ಬೂಜು ಮನೆಯಲ್ಲಿ ಹರಡಿಕೊಂಡಿದ್ದರೆ, ಆ ಮನೆಯಲ್ಲಿ ಅದೊಂದು ನಾಶಕರವಾದ ಬೂಜು ಆಗಿರುವುದು, ಆ ಮನೆ ಅಶುದ್ಧವಾದದ್ದು.
45ಅವನು ಆ ಮನೆಯನ್ನು ಕೆಡವಿಹಾಕಿ, ಅದರ ಕಲ್ಲುಗಳನ್ನೂ, ಮರಗಳನ್ನೂ, ಆ ಮನೆಯ ಎಲ್ಲಾ ಧೂಳನ್ನೂ ತೆಗೆದು, ಅವುಗಳನ್ನು ಪಟ್ಟಣದ ಹೊರಗೆ ಅಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
46“ಆ ಮನೆಯು ಮುಚ್ಚಿರುವ ಕಾಲದಲ್ಲೆಲ್ಲಾ ಅದರೊಳಗೆ ಯಾವನಾದರೂ ಹೋದರೆ ಸಾಯಂಕಾಲದವರೆಗೆ ಅವನು ಅಶುದ್ಧನಾಗಿರುವನು.
47ಆ ಮನೆಯೊಳಗೆ ಮಲಗಿಕೊಳ್ಳುವವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅಲ್ಲದೆ ಆ ಮನೆಯೊಳಗೆ ತಿನ್ನುವವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು.
48“ಆದರೆ ಯಾಜಕನು ಒಳಗೆ ಬಂದು ಅದನ್ನು ಪರೀಕ್ಷಿಸಿದಾಗ, ಗಿಲಾವು ಮಾಡಿದ ನಂತರ ಆ ಮನೆಯಲ್ಲಿ ಆ ಬೂಜು ಹರಡಿಕೊಂಡಿರದಿದ್ದರೆ, ಆ ಮನೆಯು ಶುದ್ಧವೆಂದು ಯಾಜಕನು ನಿರ್ಣಯಿಸಬೇಕು. ಏಕೆಂದರೆ ಆ ಬೂಜು ಹೊರಟುಹೋಯಿತು.
49ಆ ಮನೆಯನ್ನು ಶುದ್ಧಪಡಿಸುವುದಕ್ಕೋಸ್ಕರ ಎರಡು ಪಕ್ಷಿಗಳನ್ನೂ, ದೇವದಾರು ಕಟ್ಟಿಗೆಯನ್ನೂ, ರಕ್ತವರ್ಣ ದಾರವನ್ನೂ, ಹಿಸ್ಸೋಪನ್ನೂ ತೆಗೆದುಕೊಳ್ಳಬೇಕು.
50ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಒಂದು ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕು.
51ತರುವಾಯ ದೇವದಾರು ಕಟ್ಟಿಗೆಯನ್ನೂ, ಹಿಸ್ಸೋಪನ್ನೂ, ರಕ್ತವರ್ಣ ದಾರವನ್ನೂ, ಸಜೀವವುಳ್ಳ ಪಕ್ಷಿಯನ್ನೂ ತೆಗೆದುಕೊಂಡು, ಅವುಗಳನ್ನು ವಧಿಸಿದ ಪಕ್ಷಿಯ ರಕ್ತದಲ್ಲಿ ಮತ್ತು ಹರಿಯುವ ನೀರಿನಲ್ಲಿ ಅದ್ದಿ, ಏಳು ಸಾರಿ ಆ ಮನೆಗೆ ಚಿಮುಕಿಸಬೇಕು.
52ಅವನು ಪಕ್ಷಿಯ ರಕ್ತದಿಂದಲೂ, ಹರಿಯುವ ನೀರಿನಿಂದಲೂ, ಸಜೀವವುಳ್ಳ ಪಕ್ಷಿಯಿಂದಲೂ, ದೇವದಾರು ಕಟ್ಟಿಗೆಯಿಂದಲೂ, ಹಿಸ್ಸೋಪಿನಿಂದಲೂ, ರಕ್ತವರ್ಣ ದಾರದಿಂದಲೂ ಆ ಮನೆಯನ್ನು ಶುದ್ಧೀಕರಿಸಬೇಕು.
53ಆದರೆ ಜೀವವುಳ್ಳ ಆ ಪಕ್ಷಿಯನ್ನು ಪಟ್ಟಣದ ಆಚೆಗೆ ಬಯಲಾದ ಹೊಲಗಳಲ್ಲಿ ಬಿಟ್ಟುಬಿಡಬೇಕು. ಆ ಮನೆಗೋಸ್ಕರ ಪಾಪದ ಪ್ರಾಯಶ್ಚಿತ್ತವನ್ನು ಮಾಡಬೇಕು. ಆಗ ಅದು ಶುದ್ಧವಾಗುವುದು.”
54ಎಲ್ಲಾ ವಿಧವಾದ ಚರ್ಮರೋಗಕ್ಕೂ, ಇಸಬಿಗೂ,
55ಬಟ್ಟೆಯ ಮತ್ತು ಮನೆಯ ಬೂಜಿಗೂ,
56ಬಾವು, ಚರ್ಮವ್ಯಾಧಿಗೂ, ಹೊಳೆಯುವ ಕಲೆಗೂ
57ಅವುಗಳ ಶುದ್ಧಾಶುದ್ಧ ಬೇಧವನ್ನು ಬೋಧಿಸುವ ನಿಯಮಗಳು ಇವೇ. ಚರ್ಮರೋಗಗಳ ಹಾಗೂ ಬೂಜಿನ ವಿಷಯದಲ್ಲಿರುವ ನಿಯಮಗಳು ಇವೇ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.