Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪ್ರಲಾಪಗಳು 3

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರ ಕೋಪದ ಕೋಲಿನಿಂದ ಕಷ್ಟವನ್ನು ನೋಡಿದ ಮನುಷ್ಯನು ನಾನೇ.
2ಅವರು ನನ್ನನ್ನು ಕರೆತಂದು ನಡೆಸಿದ್ದು ಕತ್ತಲೆಗೇ ಹೊರತು ಬೆಳಕಿಗಲ್ಲ.
3ನಿಶ್ಚಯವಾಗಿ ಅವರು ನನಗೆ ವಿರೋಧವಾಗಿ ತಿರುಗಿದ್ದಾರೆ. ಅವರು ದಿನವೆಲ್ಲಾ ತಮ್ಮ ಕೈಯನ್ನು ನನಗೆ ವಿರೋಧವಾಗಿ ತಿರುಗಿಸಿದ್ದಾರೆ.
4ನನ್ನ ಮಾಂಸ, ಚರ್ಮವನ್ನು ಆತನು ಹಳೆಯದನ್ನಾಗಿ ಮಾಡಿದ್ದಾರೆ. ಅವರು ನನ್ನ ಎಲುಬುಗಳನ್ನು ಮುರಿದಿದ್ದಾರೆ.
5ಅವರು ನನಗೆ ವಿರೋಧವಾಗಿ ಕಟ್ಟಿದ್ದಾರೆ ಮತ್ತು ನನ್ನನ್ನು ವಿಷದಿಂದಲೂ, ಸಂಕಟದಿಂದಲೂ ಸುತ್ತಿಕೊಂಡಿದ್ದಾರೆ.
6ಅವರು ನನ್ನನ್ನು ಬಹುಕಾಲದ ಹಿಂದೆ ಸತ್ತವರ ಹಾಗೆ, ಕತ್ತಲೆಯ ಸ್ಥಳಗಳಲ್ಲಿ ಇರಿಸಿದ್ದಾರೆ.
7ನಾನು ಹೊರಗೆ ಬಾರದ ಹಾಗೆ, ಅವರು ನನ್ನ ಸುತ್ತಲೂ ಗೋಡೆಯನ್ನು ಕಟ್ಟಿದ್ದಾರೆ. ಅವರು ನನ್ನ ಸಂಕೋಲೆಯ ಭಾರವನ್ನು ಹೆಚ್ಚಿಸಿದ್ದಾರೆ.
8ನಾನು ಕರೆದು ಕೂಗಿದರೂ ಅವರು ನನ್ನ ಪ್ರಾರ್ಥನೆಯನ್ನು ಲಾಲಿಸುವುದಿಲ್ಲ.
9ಕೆತ್ತಿದ ಕಲ್ಲಿನಿಂದ ನನ್ನ ಮಾರ್ಗಗಳನ್ನು ಮುಚ್ಚಿ, ಆ ನನ್ನ ದಾರಿಗಳನ್ನು ಡೊಂಕು ಮಾಡಿದ್ದಾನೆ.
10ಅವರು ನನಗೆ ಹೊಂಚು ಹಾಕುವ ಕರಡಿಯ ಹಾಗೆಯೂ, ಗುಪ್ತ ಸ್ಥಳಗಳಲ್ಲಿರುವ ಸಿಂಹದ ಹಾಗೆಯೂ ಇದ್ದಾರೆ.
11ಅವರು ನನ್ನ ಮಾರ್ಗಗಳನ್ನು ತಪ್ಪಿಸಿ, ನನ್ನನ್ನು ತುಂಡುಗಳನ್ನಾಗಿ ಕತ್ತರಿಸಿ, ನನ್ನನ್ನು ಹಾಳು ಮಾಡಿದ್ದಾರೆ.
12ಅವರು ತನ್ನ ಬಿಲ್ಲನ್ನು ಬಗ್ಗಿಸಿದ್ದಾರೆ, ನನ್ನನ್ನು ಬಾಣಕ್ಕೆ ಗುರಿಮಾಡಿದ್ದಾರೆ.
13ಅವರು ತನ್ನ ಬತ್ತಳಿಕೆಯಲ್ಲಿನ ಬಾಣಗಳನ್ನು ನನ್ನ ಅಂತರಂಗಗಳಲ್ಲಿ ತೂರಿ ಹೋಗುವಹಾಗೆ ಮಾಡಿದ್ದಾರೆ.
14ನಾನು ನನ್ನ ಎಲ್ಲಾ ಜನರಿಗೆ ಹಾಸ್ಯವೂ, ದಿನವೆಲ್ಲವೂ ಅವರ ಗೇಲಿಯ ಹಾಡಾಗಿಯೂ ಇದ್ದೇನೆ.
15ಅವರು ನನ್ನನ್ನು ಕಹಿಯಿಂದ ತುಂಬಿಸಿ, ವಿಷ ಸಸ್ಯಗಳಿಂದ ನನ್ನನ್ನು ತಣಿಸಿದ್ದಾರೆ.
16ಅವರು ನುರುಜು ಕಲ್ಲುಗಳಿಂದ ನನ್ನ ಹಲ್ಲುಗಳನ್ನು ಮುರಿದು, ಅವರು ನನ್ನನ್ನು ಧೂಳಿನಲ್ಲಿ ತುಳಿದಿದ್ದಾರೆ.
17ನನ್ನ ಪ್ರಾಣವನ್ನು ಸಮಾಧಾನದಿಂದ ದೂರ ಮಾಡಿದ್ದಾರೆ, ನಾನು ಸಮೃದ್ಧಿಯನ್ನು ಮರೆತುಬಿಟ್ಟೆನು.
18“ಅಯ್ಯೋ, ನನ್ನ ಬಲವು ಮತ್ತು ನನ್ನ ನಿರೀಕ್ಷೆಯು ಯೆಹೋವ ದೇವರಿಂದ ನಾಶವಾದವು,” ಎಂದು ನಾನು ಹೇಳಿದೆನು.
19ನನ್ನ ಸಂಕಟವನ್ನು, ನನ್ನ ಅಲೆದಾಡುವಿಕೆಯನ್ನು, ನನ್ನ ಕಹಿಯನ್ನು, ನನ್ನ ವಿಷತನವನ್ನು ನಾನು ಜ್ಞಾಪಕಮಾಡಿಕೊಂಡಿದ್ದೇನೆ.
20ನನ್ನ ಪ್ರಾಣವು ಇನ್ನೂ ಅವುಗಳನ್ನು ಜ್ಞಾಪಿಸಿಕೊಳ್ಳುತ್ತಾ ನನ್ನೊಳಗೆ ಕುಂದಿಹೋಗಿದೆ.
21ಇದನ್ನು ನಾನು ನನ್ನ ಮನಸ್ಸಿಗೆ ತಂದುಕೊಳ್ಳುತ್ತೇನೆ. ಆದ್ದರಿಂದ ನನಗೆ ನಿರೀಕ್ಷೆ ಇದೆ.
22ನಾವು ನಾಶವಾಗದೇ ಉಳಿದಿರುವುದು ಯೆಹೋವ ದೇವರ ಮಹಾ ಪ್ರೀತಿಯಿಂದಲೇ. ಏಕೆಂದರೆ ಅವರ ಅನುಕಂಪಗಳು ಮುಗಿಯುವುದಿಲ್ಲ.
23ಅವು ಪ್ರತಿ ಮುಂಜಾನೆಯೂ ಹೊಸದಾಗಿರುವುವು. ನಿನ್ನ ನಂಬಿಗಸ್ತಿಕೆಯು ಮಹತ್ತಾದದ್ದು.
24“ಯೆಹೋವ ದೇವರೇ ನನ್ನ ಪಾಲು, ಆದ್ದರಿಂದ ನಾನು ಅವರಿಗಾಗಿ ಕಾದಿರುತ್ತೇನೆ,” ಎಂದು ನಾನು ನನ್ನೊಳಗೆ ಎಂದುಕೊಳ್ಳುವೆನು.
25ಆತನನ್ನು ನಿರೀಕ್ಷಿಸುವವರಿಗೂ, ಆತನನ್ನು ಹುಡಕುವವರಿಗೂ ಯೆಹೋವ ದೇವರು ಒಳ್ಳೆಯವರಾಗಿದ್ದಾರೆ.
26ಮನುಷ್ಯನು ಮೌನವಾಗಿ ಯೆಹೋವ ದೇವರ ರಕ್ಷಣೆಗೆ ಕಾಯುವುದು ಒಳ್ಳೆಯದು.
27ತನ್ನ ಯೌವನದಲ್ಲಿ ನೊಗವನ್ನು ಹೊಂದಿರುವುದು ಮಾನವನಿಗೆ ಒಳ್ಳೆಯದು.
28ಅವನು ಒಂಟಿಯಾಗಿ ಕುಳಿತು ಮೌನವಾಗಿರಲಿ. ಏಕೆಂದರೆ ಯೆಹೋವ ದೇವರೇ ಅದನ್ನು ಅವನ ಮೇಲೆ ಹೊರಿಸಿದ್ದಾರೆ.
29ಒಂದು ವೇಳೆ ನಿರೀಕ್ಷೆ ಇರಬಹುದೇನೋ ಎಂದು ಅವನು ತನ್ನ ಮುಖವನ್ನು ಧೂಳಿನಲ್ಲಿ ಇಟ್ಟುಕೊಳ್ಳಲಿ.
30ಅವನು ತನ್ನನ್ನು ಹೊಡೆಯುವವನಿಗೆ ಕೆನ್ನೆ ಕೊಡಲಿ. ಅವನು ನಿಂದೆಯಿಂದಲೇ ತುಂಬಿರಲಿ.
31ಏಕೆಂದರೆ ಕರ್ತದೇವರು ಜನರನ್ನು ಎಂದೆಂದಿಗೂ ತಳ್ಳಿಬಿಡುವುದಿಲ್ಲ.
32ಆತನು ದುಃಖಪಡಿಸಿದರೂ, ತನ್ನ ಒಡಂಬಡಿಕೆಯ ಮಹಾಪ್ರೀತಿಯಿಂದ ಅನುಕಂಪ ತೋರಿಸುವರು.
33ಏಕೆಂದರೆ ಆತನು ಬೇಕೆಂದು ಮನುಷ್ಯರ ಮಕ್ಕಳಿಗೆ ಬಾಧೆಯನ್ನೂ, ದುಃಖವನ್ನೂ ಕೊಡುವುದಿಲ್ಲ.
34ಭೂಲೋಕದ ಸೆರೆಯವರನ್ನೆಲ್ಲಾ ಕಾಲುಗಳ ಕೆಳಗೆ ತುಳಿಯುವುದನ್ನೂ,
35ಮಹೋನ್ನತನ ಸನ್ನಿಧಿಯಲ್ಲಿ ಮನುಷ್ಯನ ನ್ಯಾಯವನ್ನು ನಿರಾಕರಿಸುವುದನ್ನೂ,
36ಮನುಷ್ಯನನ್ನು ಅವನ ಜಗಳದಲ್ಲಿ ಅನ್ಯಾಯವಾಗಿ ತೀರಿಸುವುದು ಕರ್ತದೇವರು ಮೆಚ್ಚುವುದಿಲ್ಲ.
37ಕರ್ತದೇವರು ಆಜ್ಞಾಪಿಸದೆ ಇರುವಾಗ, ಸಂಭವಿಸಿ ನಡೆಯುವ ಹಾಗೆ ಹೇಳುವವನು ಯಾರು?
38ಮಹೋನ್ನತರ ಬಾಯಿಂದ ಕೇಡೂ, ಒಳ್ಳೆಯ ಸಂಗತಿಗಳೂ ಹೊರಡುವುದಿಲ್ಲವೇ?
39ಬದುಕುವ ಮನುಷ್ಯನು ತನ್ನ ಪಾಪಗಳ ಶಿಕ್ಷೆಗಾಗಿ ಗೊಣಗುಟ್ಟುವುದೇಕೆ?
40ನಾವು ನಮ್ಮ ಮಾರ್ಗಗಳನ್ನು ಪರಿಶೋಧಿಸಿ, ಪರೀಕ್ಷಿಸಿಕೊಂಡು ಆಮೇಲೆ ಯೆಹೋವ ದೇವರ ಬಳಿಗೆ ತಿರುಗಿಕೊಳ್ಳೋಣ.
41ನಮ್ಮ ಹೃದಯಗಳನ್ನು ನಮ್ಮ ಕೈಗಳೊಂದಿಗೆ ಪರಲೋಕದ ದೇವರ ಕಡೆಗೆ ಎತ್ತಿಕೊಳ್ಳೋಣ.
42ನಾವು ದ್ರೋಹಮಾಡಿದ್ದೇವೆ ಮತ್ತು ಎದುರು ಬಿದ್ದಿದ್ದೇವೆ, ನೀವು ಮನ್ನಿಸಲಿಲ್ಲ.
43ಕೋಪದಲ್ಲಿ ನಮ್ಮನ್ನು ಮುಚ್ಚಿ ಹಿಂಸಿಸಿದ್ದೀರಿ. ಕನಿಕರಿಸದೆ ಕೊಂದು ಹಾಕಿರುವಿರಿ.
44ನಮ್ಮ ಪ್ರಾರ್ಥನೆಯು ನಿನ್ನ ಸನ್ನಿಧಿಗೆ ಸೇರದಂತೆ ನಿನ್ನನ್ನು ಮೇಘದಿಂದ ಮುಚ್ಚಿಕೊಂಡಿದ್ದೀರಿ.
45ನೀನು ನಮ್ಮನ್ನು ಜನರ ಮಧ್ಯದಲ್ಲಿ ಕಲ್ಮಷವನ್ನಾಗಿಯೂ, ಕಸವನ್ನಾಗಿಯೂ ಮಾಡಿದ್ದೀಯೆ.
46ನಮ್ಮ ಎಲ್ಲಾ ಶತ್ರುಗಳು ನಮಗೆ ವಿರುದ್ಧವಾಗಿ ಅವರ ಬಾಯಿಗಳನ್ನು ತೆರೆದಿದ್ದಾರೆ.
47ಭಯವನ್ನೂ, ನಾಶವನ್ನೂ ನಾವು ಅನುಭವಿಸಿದ್ದೇವೆ.
48ನನ್ನ ಜನರ ನಾಶದ ನಿಮಿತ್ತವಾಗಿ, ನನ್ನ ಕಣ್ಣಿನಿಂದ ನೀರು ನದಿಯಾಗಿ ಹರಿದು ಹೋಗುತ್ತದೆ.
49ಯೆಹೋವ ದೇವರು ಕಟಾಕ್ಷಿಸಿ, ಪರಲೋಕದಿಂದ ನೋಡುವ ತನಕ ನೇತ್ರವು ನಿರಂತರ ಕಣ್ಣೀರು ಸುರಿಸುತ್ತದೆ.
50ವಿಶ್ರಮಿಸಿಕೊಳ್ಳುವುದೂ ಇಲ್ಲ.
51ನನ್ನ ನಗರದ ಪುತ್ರಿಯರೆಲ್ಲರ ನಿಮಿತ್ತವಾಗಿ ನನ್ನ ಕಣ್ಣುಗಳು ನನ್ನ ಹೃದಯವನ್ನು ಪೀಡಿಸಿದೆ.
52ನನ್ನ ಶತ್ರುಗಳು ಕಾರಣವಿಲ್ಲದೆ ಪಕ್ಷಿಯಂತೆ ನನ್ನನ್ನು ಕಠೋರವಾಗಿ ಹಿಂದಟ್ಟಿ ಬೇಟೆಯಾಡಿದರು.
53ಅವರು ಕಾರಾಗೃಹದಲ್ಲಿ ನನ್ನ ಜೀವವನ್ನು ತೆಗೆದುಹಾಕಿ, ನನ್ನ ಮೇಲೆ ಕಲ್ಲನ್ನು ಹಾಕಿದ್ದಾರೆ.
54ನನ್ನ ತಲೆಯ ಮೇಲೆ ನೀರು ಹರಿಯಿತು. ಆಗ ನಾನು ನಾಶವಾದೆನು ಅಂದುಕೊಂಡೆನು.
55ಯೆಹೋವ ದೇವರೇ, ನಾನು ಆಳವಾದ ಕಾರಾಗೃಹದಿಂದ ನಿಮ್ಮ ಹೆಸರನ್ನು ಎತ್ತಿ ಬೇಡಿಕೊಂಡೆನು.
56ನೀನು ನನ್ನ ಸ್ವರವನ್ನು ಕೇಳಿದ್ದೀ. “ನನ್ನ ಶ್ವಾಸಕ್ಕೂ, ನನ್ನ ಕೂಗಿಗೂ ನಿನ್ನ ಕಿವಿಯನ್ನು ಮರೆಮಾಡಬೇಡಿರಿ.”
57ನಾನು ನಿನ್ನನ್ನು ಕರೆದ ದಿನದಲ್ಲಿ ನೀನು ಸಮೀಪಕ್ಕೆ ಬಂದು, “ಭಯಪಡಬೇಡ,” ಎಂದು ಹೇಳಿದಿರಿ.
58ಕರ್ತದೇವರೇ, ನೀನು ನನ್ನ ಪ್ರಾಣದ ವ್ಯಾಜ್ಯಗಳನ್ನು ನಡೆಸಿ, ನನ್ನ ಜೀವವನ್ನು ವಿಮೋಚಿಸಿದ್ದೀರಿ.
59ಯೆಹೋವ ದೇವರೇ, ನೀವು ನನ್ನ ಅನ್ಯಾಯವನ್ನು ನೋಡಿದ್ದೀರಿ, ನೀವು ನನ್ನ ನ್ಯಾಯವನ್ನು ತೀರಿಸಿರಿ.
60ನನಗೆ ವಿರುದ್ಧವಾಗಿ ಅವರ ಎಲ್ಲಾ ಪ್ರತೀಕಾರವನ್ನೂ ನೋಡಿದ್ದೀರಲ್ಲಾ.
61ಯೆಹೋವ ದೇವರೇ, ಅವರ ಎಲ್ಲಾ ಕಲ್ಪನೆಗಳನ್ನೂ ಮತ್ತು ನನಗೆ ವಿರುದ್ಧವಾಗಿ ಹೇಳುವವರ ತುಟಿಗಳನ್ನೂ,
62ದಿನವಿಡೀ ನನಗೆ ವಿರುದ್ಧವಾದ ಅವರ ದುರಾಲೋಚನೆಯನ್ನೂ ಕೇಳಿರುವಿರಿ.
63ಅವರನ್ನು ನೋಡು! ಕುಳಿತು ಅಥವಾ ನಿಂತಾಗ, ಅವರು ತಮ್ಮ ಹಾಡುಗಳಲ್ಲಿ ನನ್ನನ್ನು ಅಣಕಿಸುತ್ತಾರೆ.
64ಯೆಹೋವ ದೇವರೇ, ಅವರ ಕೈಕೆಲಸಗಳ ಪ್ರಕಾರ ಅವರಿಗೆ ಪ್ರತಿಫಲವನ್ನು ಕೊಡಿ.
65ಅವರಿಗೆ ದುಃಖಕರವಾದ ಹೃದಯವನ್ನೂ, ನಿಮ್ಮ ಶಾಪವನ್ನೂ ಕೊಡಿ.
66ಯೆಹೋವ ದೇವರೇ, ಆಕಾಶದ ಕೆಳಗಿನಿಂದ ಕೋಪದಿಂದ ಅವರನ್ನು ಹಿಂಸಿಸಿ ಹಾಳುಮಾಡಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.