Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಹೋಶುವ 14

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯಾಜಕನಾದ ಎಲಿಯಾಜರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲರ ಗೋತ್ರಗಳ ಮುಖ್ಯಸ್ಥರೂ ಜನರಿಗೆ ಸೊತ್ತಾಗಿ ಕೊಡಲು ಕಾನಾನ್ ದೇಶದಲ್ಲಿ ಇಸ್ರಾಯೇಲರು ಬಾಧ್ಯವಾಗಿ ಪ್ರದೇಶಗಳನ್ನು ಹೊಂದಿದರು.
2ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ ಹಾಗೆಯೇ ಒಂಬತ್ತುವರೆ ಗೋತ್ರಗಳಿಗೆ ಚೀಟುಗಳನ್ನು ಹಾಕಿ ಸೊತ್ತಾಗಿ ಪಾಲು ಹಂಚಿದರು.
3ಏಕೆಂದರೆ ಮೋಶೆಯು ಯೊರ್ದನ್ ನದಿ ಆಚೆ ಎರಡೂವರೆ ಗೋತ್ರಗಳಿಗೆ ಸೊತ್ತನ್ನು ಕೊಟ್ಟಿದ್ದನು. ಆದರೆ ಲೇವಿಯರಿಗೆ ಯಾವ ಸೊತ್ತನ್ನೂ ಕೊಡಲಿಲ್ಲ,
4ಯೋಸೇಫನ ಮಕ್ಕಳಾದ ಮನಸ್ಸೆಯೂ, ಎಫ್ರಾಯೀಮನೂ ಎರಡು ಗೋತ್ರಗಳಾಗಿದ್ದರು. ಲೇವಿಯರಿಗೆ ದೇಶದಲ್ಲಿ ಪಾಲುಕೊಡಲಿಲ್ಲ. ಆದರೆ ವಾಸಮಾಡುವ ಪಟ್ಟಣಗಳನ್ನೂ, ದನಕುರಿಗಳಿಗೋಸ್ಕರವಾಗಿ ಹುಲ್ಲುಗಾವಲುಗಳನ್ನೂ, ಪ್ರಾಂತಗಳನ್ನೂ ಮಾಡಿಕೊಟ್ಟರು.
5ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರಮಾಡಿ, ದೇಶವನ್ನು ಹಂಚಿಕೊಡಲಾಯಿತು. ಕಾಲೇಬನಿಗೆ ಹೆಬ್ರೋನು ಕೊಟ್ಟಿದ್ದು
6ಯೆಹೂದದ ಗೋತ್ರದವರು ಗಿಲ್ಗಾಲಿನಲ್ಲಿ ಯೆಹೋಶುವನ ಬಳಿಗೆ ಬಂದರು. ಆಗ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಅವನಿಗೆ, “ಕಾದೇಶ್ ಬರ್ನೇಯದಲ್ಲಿ ಯೆಹೋವ ದೇವರು ನನ್ನನ್ನೂ, ನಿನ್ನನ್ನೂ ಕುರಿತು ದೇವರ ಮನುಷ್ಯನಾದ ಮೋಶೆಗೆ ಹೇಳಿದ ಮಾತನ್ನು ನೀನು ಬಲ್ಲೆ.
7ದೇಶವನ್ನು ಸಂಚರಿಸಿ ನೋಡಲು ಯೆಹೋವ ದೇವರ ಸೇವಕನಾದ ಮೋಶೆಯು ನನ್ನನ್ನು ಕಾದೇಶ್ ಬರ್ನೇಯದಿಂದ ಕಳುಹಿಸುವಾಗ ನಾನು ನಾಲ್ವತ್ತು ವರ್ಷ ಪ್ರಾಯದವನಾಗಿದ್ದೆನು. ನನ್ನ ಮನಸ್ಸಿಗೆ ಬಂದಿದ್ದ ವರದಿಯನ್ನು ತಂದು ತಿಳಿಸಿದೆನು.
8ಆದರೂ ನನ್ನ ಸಂಗಡ ಹೋಗಿ ಬಂದ ನನ್ನ ಸಹೋದರರು ಜನರ ಹೃದಯವನ್ನು ಕರಗಿಸಿದರು. ಆದರೆ ನಾನು ನನ್ನ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದ ಹಿಂಬಾಲಿಸಿದೆನು.
9ಆ ದಿವಸದಲ್ಲಿ ಮೋಶೆಯು ನನಗೆ, ‘ನೀನು ನನ್ನ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದ ಹಿಂಬಾಲಿಸಿದ ಕಾರಣ, ನಿನ್ನ ಪಾದ ಮೆಟ್ಟಿದ ದೇಶವು ನಿನಗೂ, ನಿನ್ನ ಮಕ್ಕಳಿಗೂ ಎಂದೆಂದಿಗೂ ಬಾಧ್ಯತೆಯಾಗಿರುವುದು,’ ಎಂದು ಆಣೆ ಇಟ್ಟು ಹೇಳಿದನು.
10“ಈಗ ಯೆಹೋವ ದೇವರು ಮೋಶೆಗೆ ಈ ವಾಕ್ಯವನ್ನು ಹೇಳಿದಂದಿನಿಂದ ಇಸ್ರಾಯೇಲರು ಮರುಭೂಮಿಯಲ್ಲಿ ಸಂಚರಿಸಿದ ನಾಲ್ವತ್ತೈದು ವರ್ಷ ಯೆಹೋವ ದೇವರು ಹೇಳಿದ ಹಾಗೆಯೇ ನನ್ನನ್ನು ಜೀವದಿಂದ ಇಟ್ಟಿದ್ದಾರೆ. ಈಗ ನಾನು ಇಂದು ಎಂಬತ್ತೈದು ವರ್ಷ ಪ್ರಾಯದವನಾಗಿದ್ದೇನೆ.
11ಮೋಶೆ ನನ್ನನ್ನು ಕಳುಹಿಸಿದ ದಿವಸದಲ್ಲಿ ನಾನು ಹೇಗೆ ಬಲಿಷ್ಠನಾಗಿ ಇದ್ದೆನೋ, ಹಾಗೆಯೇ ಈಗಲೂ ಬಲಿಷ್ಠನಾಗಿದ್ದೇನೆ. ನಾನು ಯುದ್ಧ ಮಾಡುವದಕ್ಕೂ ವಿಶೇಷ ಕಾರ್ಯಗಳನ್ನು ನಿರ್ವಹಿಸುವದಕ್ಕೂ ನನಗೆ ಆಗ ಇದ್ದ ಶಕ್ತಿಯ ಹಾಗೆಯೇ ಈಗಲೂ ಶಕ್ತಿಯುಳ್ಳವನಾಗಿದ್ದೇನೆ.
12ಆದ್ದರಿಂದ ಯೆಹೋವ ದೇವರು ಆ ದಿವಸದಲ್ಲಿ ಹೇಳಿದ ಈ ಬೆಟ್ಟವನ್ನು ಈಗ ನನಗೆ ಕೊಡು; ಏಕೆಂದರೆ ಅಲ್ಲಿ ಅನಾಕ್ಯರು ಇದ್ದಾರೆಂದೂ, ಗೋಡೆಗಳುಳ್ಳ ದೊಡ್ಡ ಪಟ್ಟಣಗಳುಂಟೆಂದೂ ನೀನು ಆ ದಿವಸದಲ್ಲಿ ಕೇಳಿದ್ದಿ. ಯೆಹೋವ ದೇವರು ಹೇಳಿದ ಪ್ರಕಾರವೇ ನಾನು ಅವರನ್ನು ಹೊರಡಿಸಲು ಯೆಹೋವ ದೇವರು ನನಗೆ ಸಹಾಯ ಮಾಡುವರೆಂದು ನಂಬಿಕೊಂಡಿದ್ದೇನೆ,” ಎಂದನು.
13ಆಗ ಯೆಹೋಶುವನು ಯೆಫುನ್ನೆಯ ಮಗ ಕಾಲೇಬನನ್ನು ಆಶೀರ್ವದಿಸಿ, ಅವನಿಗೆ ಹೆಬ್ರೋನನ್ನು ಸೊತ್ತಾಗಿ ಕೊಟ್ಟನು.
14ಹೀಗೆಯೇ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದ ಹಿಂಬಾಲಿಸಿದ ಕಾರಣ, ಹೆಬ್ರೋನು ಇಂದಿನವರೆಗೂ ಅವನ ಸೊತ್ತಾಗಿದೆ.
15ಹೆಬ್ರೋನಿನ ಮೊದಲಿನ ಹೆಸರು ಕಿರ್ಯತ್ ಅರ್ಬ. “ಅರ್ಬ” ಎಂಬುವವನು ಅನಾಕ್ಯರಲ್ಲಿ ಪ್ರಮುಖನಾಗಿದ್ದನು. ದೇಶವು ಯುದ್ಧವಿಲ್ಲದೆ ಶಾಂತವಾಗಿತ್ತು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.