Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋನನು 1

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರ ವಾಕ್ಯವು ಅಮಿತ್ತೈಯನ ಮಗ ಯೋನನಿಗೆ ಬಂದಿತು:
2“ನೀನು ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ಅದಕ್ಕೆ ವಿರೋಧವಾಗಿ ಪ್ರಸಂಗಿಸು, ಏಕೆಂದರೆ ಅವರ ಕೆಟ್ಟತನವು ನನ್ನ ಮುಂದೆ ಏರಿ ಬಂದಿದೆ,” ಎಂಬುದು.
3ಆದರೆ ಯೋನನು ಯೆಹೋವ ದೇವರ ಸಮ್ಮುಖದಿಂದ ತಾರ್ಷೀಷಿಗೆ ಓಡಿಹೋಗುವುದಕ್ಕೆ ಎದ್ದು, ಯೊಪ್ಪಕ್ಕೆ ಇಳಿದು ತಾರ್ಷೀಷಿಗೆ ಹೋಗುವ ಹಡಗನ್ನು ಕಂಡು, ಪ್ರಯಾಣದ ದರವನ್ನು ಕೊಟ್ಟು, ಯೆಹೋವ ದೇವರ ಸಮ್ಮುಖದಿಂದ ತಪ್ಪಿಸಿಕೊಂಡು ಹೋಗಲು, ಪ್ರಯಾಣಮಾಡುತ್ತಿದ್ದ ಹಡಗಿನವರೊಡನೆ ತಾರ್ಷೀಷಿಗೆ ಹೋಗುವುದಕ್ಕೆ ಅದನ್ನು ಹತ್ತಿದನು.
4ಆದರೆ ಯೆಹೋವ ದೇವರು ದೊಡ್ಡ ಗಾಳಿಯನ್ನು ಸಮುದ್ರದ ಮೇಲೆ ಕಳುಹಿಸಿದರು. ಸಮುದ್ರದಲ್ಲಿ ಮಹಾ ಬಿರುಗಾಳಿ ಉಂಟಾಗಿ, ಹಡಗು ಒಡೆಯುವುದರಲ್ಲಿತ್ತು.
5ಆಗ ಹಡಗಿನವರು ಭಯಪಟ್ಟು ಒಬ್ಬೊಬ್ಬನು ತನ್ನ ತನ್ನ ದೇವರಿಗೆ ಕೂಗಿ, ಹಡಗನ್ನು ಹಗುರ ಮಾಡುವ ಹಾಗೆ ಅದರಲ್ಲಿದ್ದ ಸರಕುಗಳನ್ನು ಸಮುದ್ರದಲ್ಲಿ ಹಾಕಿಬಿಟ್ಟರು. ಆದರೆ ಯೋನನು ಹಡಗಿನ ಕೆಳಭಾಗಕ್ಕೆ ಇಳಿದು ಹೋಗಿ, ಮಲಗಿಕೊಂಡು ಗಾಢ ನಿದ್ರೆಯಲ್ಲಿದ್ದನು.
6ಆಗ ಹಡಗಿನ ಯಜಮಾನನು ಅವನ ಬಳಿಗೆ ಬಂದು, “ನೀನು ನಿದ್ರೆ ಮಾಡುವುದೇಕೆ? ಎದ್ದು ನಿನ್ನ ದೇವರನ್ನು ಪ್ರಾರ್ಥಿಸು. ಒಂದು ವೇಳೆ ನಿನ್ನ ದೇವರು ನಮ್ಮ ಮೇಲೆ ಲಕ್ಷ್ಯವಿಟ್ಟು, ನಾವು ನಾಶವಾಗದಂತೆ ಕಾಪಾಡಿಯಾರು!” ಎಂದನು.
7ಆಗ ನಾವಿಕರು ಒಬ್ಬರಿಗೊಬ್ಬರು, “ಬನ್ನಿ, ಚೀಟುಗಳನ್ನು ಹಾಕೋಣ. ಯಾವನ ನಿಮಿತ್ತ ಈ ಕೇಡು ನಮಗೆ ಬಂತೋ ತಿಳಿಯೋಣ,” ಎಂದು ಹೇಳಿಕೊಂಡರು. ಹಾಗೆಯೇ ಅವರು ಚೀಟುಗಳನ್ನು ಹಾಕಿದಾಗ, ಯೋನನ ಮೇಲೆ ಚೀಟು ಬಿತ್ತು.
8ಆಗ ಅವರು ಅವನಿಗೆ, “ನಮಗಾಗಿ ಈ ಕಷ್ಟವನ್ನೆಲ್ಲಾ ಉಂಟುಮಾಡಿದ್ದಕ್ಕೆ ಯಾರು ಜವಾಬ್ದಾರರೆಂದು ನಮಗೆ ತೋರಿಸು. ನಿನ್ನ ಕೆಲಸವೇನು? ಎಲ್ಲಿಂದ ಬಂದೆ? ನಿನ್ನ ದೇಶ ಯಾವುದು? ನೀನು ಯಾವ ಜನಾಂಗದವನು?” ಎಂದು ಪ್ರಶ್ನಿಸಿದರು.
9ಅವನು ಅವರಿಗೆ, “ನಾನು ಹಿಬ್ರಿಯನು. ಸಮುದ್ರವನ್ನೂ, ಒಣಗಿದ ಭೂಮಿಯನ್ನೂ ಉಂಟುಮಾಡಿದ ಪರಲೋಕದ ದೇವರಾದ ಯೆಹೋವ ದೇವರಿಗೆ ನಾನು ಆರಾಧಿಸುವವನಾಗಿದ್ದೇನೆ,” ಎಂದು ಹೇಳಿದನು.
10ಆಗ ಆ ಮನುಷ್ಯರು ಬಹಳ ಭಯಪಟ್ಟು, “ನೀನು ಏನು ಮಾಡಿದ್ದೀ?” ಎಂದು ಅವನನ್ನು ಕೇಳಿದರು. ಏಕೆಂದರೆ ಯೆಹೋವ ದೇವರ ಸಮ್ಮುಖದಿಂದ ಅವನು ಓಡಿ ಹೋಗುತ್ತಿದ್ದಾನೆಂದು ಆ ಮನುಷ್ಯರಿಗೆ ತಿಳಿದಿತ್ತು. ಏಕೆಂದರೆ ಅವನೇ ಇದನ್ನು ಅವರಿಗೆ ಹೇಳಿದ್ದನು.
11ಆಗ ಬಿರುಗಾಳಿ ಮತ್ತಷ್ಟು ತೀವ್ರಗೊಳ್ಳುತ್ತಿತ್ತು. ನಾವಿಕರು ಯೋನನಿಗೆ, “ಸಮುದ್ರ ಶಾಂತವಾಗಬೇಕಾದರೆ, ನಿನ್ನನ್ನು ಏನು ಮಾಡಬೇಕು? ಹೇಳು,” ಎಂದು ಕೇಳಿದರು.
12ಅವನು ಅವರಿಗೆ, “ನನ್ನನ್ನು ಎತ್ತಿ ಸಮುದ್ರದಲ್ಲಿ ಹಾಕಿರಿ, ಆಗ ಸಮುದ್ರವು ಶಾಂತವಾಗುವುದು. ಏಕೆಂದರೆ ನನ್ನ ನಿಮಿತ್ತ ಈ ದೊಡ್ಡ ಬಿರುಗಾಳಿ, ನಿಮ್ಮ ಮೇಲೆ ಬಂತೆಂದು ಬಲ್ಲೆನು,” ಎಂದನು.
13ಆದರೂ ಆ ಮನುಷ್ಯರು ದಡಕ್ಕೆ ತಿರುಗಿಕೊಳ್ಳುವ ಹಾಗೆ ಬಲವಾಗಿ ಹುಟ್ಟುಹಾಕಿದರು. ಆದರೆ ಅವರಿಂದಾಗದೆ ಹೋಯಿತು. ಏಕೆಂದರೆ ಸಮುದ್ರವು ಅವರಿಗೆ ಎದುರಾಗಿ, ಹೆಚ್ಚೆಚ್ಚಾಗಿ ತೆರೆಗಳಿಂದ ರೋಷಗೊಂಡಿತು.
14ಆಗ ಅವರು ಯೆಹೋವ ದೇವರಿಗೆ ಕೂಗಿ, “ಯೆಹೋವ ದೇವರೇ, ನಾವು ಈ ಮನುಷ್ಯನ ಜೀವದ ನಿಮಿತ್ತ ನಾಶವಾಗದಿರಲಿ. ಅಪರಾಧವಿಲ್ಲದ ರಕ್ತವನ್ನು ನಮ್ಮ ಮೇಲೆ ಹೊರಿಸಬೇಡಿರಿ. ಯೆಹೋವ ದೇವರೇ, ಇದೆಲ್ಲವೂ ಸಂಭವಿಸಿರುವುದು ನಿಮ್ಮ ಚಿತ್ತವಲ್ಲವೇ?” ಎಂದು ಹೇಳಿದರು.
15ಆಗ ಅವರು ಯೋನನನ್ನು ಎತ್ತಿ ಸಮುದ್ರದಲ್ಲಿ ಹಾಕಿದರು. ಆಗ ಸಮುದ್ರವು ತನ್ನ ಉಗ್ರವನ್ನು ನಿಲ್ಲಿಸಿಬಿಟ್ಟಿತು.
16ಆಗ ಆ ಜನರು, ಯೆಹೋವ ದೇವರಿಗೆ ಬಹಳವಾಗಿ ಭಯಪಟ್ಟು, ಅವರಿಗೆ ಬಲಿ ಅರ್ಪಿಸಿ, ಹರಕೆಗಳನ್ನು ಸಲ್ಲಿಸಿದರು. ಯೋನನ ಪ್ರಾರ್ಥನೆ
17ಆದರೆ ಯೆಹೋವ ದೇವರು ಯೋನನನ್ನು ನುಂಗುವಂತೆ ದೊಡ್ಡ ಮೀನನ್ನು ಸಿದ್ಧಮಾಡಿದ್ದರು. ಯೋನನು ಆ ಮೀನಿನ ಹೊಟ್ಟೆಯಲ್ಲಿ ಮೂರು ಹಗಲು ಮತ್ತು ಮೂರು ರಾತ್ರಿ ಇದ್ದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.