Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಯೇಲ 3

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1“ಆ ದಿವಸಗಳಲ್ಲಿಯೂ, ಆ ಸಮಯದಲ್ಲಿಯೂ ನಾನು ಯೆಹೂದ ಮತ್ತು ಯೆರೂಸಲೇಮಿನ ಸಿರಿಸಂಪತ್ತನ್ನು ಪುನಃ ಸ್ಥಾಪಿಸುವಾಗ,
2ನಾನು ಎಲ್ಲಾ ಜನಾಂಗಗಳನ್ನು ಕೂಡಿಸುವೆನು. ಯೆಹೋಷಾಫಾಟನ ತಗ್ಗಿಗೆ ಅವರನ್ನು ತರುವೆನು. ಅಲ್ಲಿ ನನ್ನ ಜನರೂ ನನ್ನ ಬಾಧ್ಯತೆಯೂ ಆಗಿರುವ ಇಸ್ರಾಯೇಲಿನ ವಿಷಯವಾಗಿ ಅವರ ಸಂಗಡ ವ್ಯಾಜ್ಯವಾಡುವೆನು. ಅವರು ಅವರನ್ನು ಜನಾಂಗಗಳಲ್ಲಿ ಚದುರಿಸಿ, ನನ್ನ ದೇಶವನ್ನು ಹಂಚಿಕೊಂಡರು.
3ನನ್ನ ಜನರಿಗೋಸ್ಕರ ಚೀಟುಹಾಕಿ, ಬಾಲಕರನ್ನು ವೇಶ್ಯಾ ವೃತ್ತಿಗೆ ಕೊಟ್ಟು, ಬಾಲಕಿಯರನ್ನು ಕುಡಿಯುವ ದ್ರಾಕ್ಷಾರಸಕ್ಕಾಗಿ ಮಾರಿದ್ದಾರೆ.
4“ಟೈರೇ, ಸೀದೋನೇ, ಫಿಲಿಷ್ಟಿಯದ ಎಲ್ಲಾ ಪ್ರಾಂತ್ಯಗಳೇ, ನನ್ನ ವಿರೋಧವಾಗಿ ನಿಮಗೆ ಏನು ಇದೆ? ನನಗೆ ಮುಯ್ಯಿಗೆ ಮುಯ್ಯಿ ಸಲ್ಲಿಸುವಿರೋ? ನೀವು ಮುಯ್ಯಿ ನನಗೆ ಸಲ್ಲಿಸಿದರೆ, ಜಾಗ್ರತೆಯಾಗಿಯೂ ತ್ವರೆಯಾಗಿಯೂ ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿ ತರಿಸುವೆನು.
5ನೀವು ನನ್ನ ಬೆಳ್ಳಿಯನ್ನೂ ನನ್ನ ಬಂಗಾರವನ್ನೂ, ನನ್ನ ಅತ್ಯುತ್ತಮ ಸಂಪತ್ತನ್ನೂ ನಿಮ್ಮ ದೇವಸ್ಥಾನಗಳಿಗೆ ತೆಗೆದುಕೊಂಡು ಹೋಗಿದ್ದಿರಿ.
6ಯೆಹೂದದ ಹಾಗೂ ಯೆರೂಸಲೇಮಿನ ಜನರನ್ನು ಅವರ ಪ್ರಾಂತಗಳಿಂದ ದೂರ ಮಾಡುವುದಕ್ಕಾಗಿ ಗ್ರೀಕರಿಗೆ ಮಾರಿದ್ದೀರಿ.
7“ಇಗೋ, ಎಲ್ಲಿ ಅವರನ್ನು ಮಾರಿದಿರೋ, ಆ ಸ್ಥಳದಿಂದ ನಾನು ಅವರನ್ನು ಎಬ್ಬಿಸಿ, ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿತೀರಿಸುವೆನು.
8ನಿಮ್ಮ ಪುತ್ರರನ್ನೂ ನಿಮ್ಮ ಪುತ್ರಿಯರನ್ನೂ ಯೆಹೂದದ ಜನರಿಗೆ ಮಾರುವೆನು. ಇವರು ಅವರನ್ನು ದೂರ ಜನವಾದ ಶೆಬದವರಿಗೆ ಮಾರುವರು.” ಯೆಹೋವ ದೇವರು ಇದನ್ನು ಹೇಳಿದ್ದಾರೆ.
9ಜನಾಂಗಗಳಲ್ಲಿ ಇದನ್ನು ಘೋಷಿಸಿರಿ; ಯುದ್ಧಕ್ಕೆ ಇದನ್ನು ಸಿದ್ಧಮಾಡಿರಿ; ಶೂರರನ್ನು ಎಬ್ಬಿಸಿರಿ; ಯುದ್ಧಭಟರೆಲ್ಲರು ಸಮೀಪಿಸಿ ಬರಲಿ.
10ನಿಮ್ಮ ನೇಗಿಲುಗಳ ಗುಳಗಳನ್ನು ಖಡ್ಗಗಳನ್ನಾಗಿಯೂ ನಿಮ್ಮ ಕುಡುಗೋಲುಗಳನ್ನು ಈಟಿಗಳನ್ನಾಗಿಯೂ ಬಡಿಯಿರಿ ಬಲಹೀನನು ಸಹ ನಾನು ಶಕ್ತಿವಂತನು ಎಂದು ಹೇಳಲಿ.
11ಸುತ್ತಲಿನ ಎಲ್ಲಾ ರಾಷ್ಟ್ರಗಳೇ, ಸಭೆಯಾಗಿ ಕೂಡಿಕೊಳ್ಳಿರಿ. ಯೆಹೋವ ದೇವರೇ, ನಿನ್ನ ಶೂರರನ್ನು ಕೆಳಗೆ ಇಳಿಸಿರಿ.
12ಜನಾಂಗಗಳು ಎಚ್ಚೆತ್ತು ಯೆಹೋಷಾಫಾಟನ ಕಣಿವೆಗೆ ಇಳಿಯಲಿ. ಸುತ್ತಮುತ್ತ ನೆರೆದಿರುವ ಜನಾಂಗಗಳಿಗೆ ನ್ಯಾಯತೀರಿಸಲು ಅಲ್ಲಿ ನಾನು ಆಸೀನನಾಗಿರುವೆನು.
13ಕುಡುಗೋಲನ್ನು ಹಾಕಿರಿ. ಏಕೆಂದರೆ ಬೆಳೆ ಪಕ್ವವಾಯಿತು. ಬಂದು ಇಳಿಯಿರಿ. ಏಕೆಂದರೆ ದ್ರಾಕ್ಷಿಯ ಆಲೆ ತುಂಬಿ ಇದೆ. ತೊಟ್ಟಿಗಳು ತುಳುಕುವಂತೆ ಅವರ ಕೆಟ್ಟತನವು ಬಹಳವಾಗಿದೆ.
14ತೀರ್ಮಾನದ ಕಣಿವೆಯಲ್ಲಿ ಗುಂಪು ಗುಂಪುಗಳಾಗಿ ಜನರಿದ್ದಾರೆ! ಏಕೆಂದರೆ ಯೆಹೋವ ದೇವರ ದಿವಸವು ನಿರ್ಣಯದ ತಗ್ಗಿನಲ್ಲಿ ಸಮೀಪವಾಗಿದೆ.
15ಸೂರ್ಯ, ಚಂದ್ರರು ಕಪ್ಪಾಗುವುವು. ನಕ್ಷತ್ರಗಳು ತಮ್ಮ ಪ್ರಕಾಶವನ್ನು ಮರೆಮಾಡುವುವು.
16ಯೆಹೋವ ದೇವರು ಚೀಯೋನಿನೊಳಗಿಂದ ಗರ್ಜಿಸಿ, ಯೆರೂಸಲೇಮಿನೊಳಗಿಂದ ಗುಡುಗುವರು. ಆಕಾಶಗಳೂ ಭೂಮಿಯೂ ನಡುಗುವುವು. ಆದರೆ ಯೆಹೋವ ದೇವರು ತಮ್ಮ ಜನರಿಗೆ ಆಶ್ರಯವೂ, ಇಸ್ರಾಯೇಲರಿಗೆ ರಕ್ಷಣೆಯ ದುರ್ಗವೂ ಆಗಿರುವರು. ದೇವರ ಜನರಿಗೆ ಆಶೀರ್ವಾದಗಳು
17ಆಗ ನನ್ನ ಪರಿಶುದ್ಧ ಪರ್ವತವಾದ ಚೀಯೋನಿನಲ್ಲಿ ವಾಸಿಸುವ ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ ಎಂದು ನೀವು ತಿಳಿದುಕೊಳ್ಳುವಿರಿ. ಯೆರೂಸಲೇಮು ಪರಿಶುದ್ಧವಾಗಿರುವುದು. ವಿದೇಶಿಯರು ಅದನ್ನೆಂದಿಗೂ ಆಕ್ರಮಿಸರು.
18ಆ ದಿವಸದಲ್ಲಿ ಬೆಟ್ಟಗಳು ಹೊಸ ದ್ರಾಕ್ಷಾರಸವನ್ನು ಸುರಿಯುವುವು. ಗುಡ್ಡಗಳು ಹಾಲಿನಿಂದ ಹರಿಯುವುವು. ಯೆಹೂದದ ಹಳ್ಳಗಳೆಲ್ಲಾ ನೀರಿನಿಂದ ಹರಿಯುವುವು. ಯೆಹೋವ ದೇವರ ಆಲಯದೊಳಗಿಂದ ಬುಗ್ಗೆ ಹೊರಟು, ಶಿಟ್ಟೀಮಿನ ಕಣಿವೆಗೆ ಜಲ ಕೊಡುವುದು.
19ಈಜಿಪ್ಟ್ ಹಾಳಾಗುವುದು. ಎದೋಮು ಹಾಳಾದ ಮರುಭೂಮಿಯಾಗುವುದು. ಏಕೆಂದರೆ ಅವರು ಯೆಹೂದದ ಜನರನ್ನು ಬಲಾತ್ಕಾರ ಮಾಡಿ, ತಮ್ಮ ದೇಶದಲ್ಲಿ ಅಪರಾಧವಿಲ್ಲದ ರಕ್ತವನ್ನು ಚೆಲ್ಲಿದರು.
20ಯೆಹೂದವು ಎಂದೆಂದಿಗೂ ಜನಭರಿತವಾಗುವುದು. ಯೆರೂಸಲೇಮು ಸಹ ತಲತಲಾಂತರಕ್ಕೂ ನಿಲ್ಲುವುದು.
21ನಾನು ಅವರ ಮುಗ್ಧ ರಕ್ತಕ್ಕೆ ಪ್ರತೀಕಾರ ತೀರಿಸದೆ ಬಿಡಬೇಕೇ? ಇಲ್ಲ, ನಾನು ಎಂದಿಗೂ ಬಿಡುವುದಿಲ್ಲ. ಯೆಹೋವ ದೇವರು ಚೀಯೋನಿನಲ್ಲಿ ವಾಸವಾಗಿರುತ್ತಾರೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.