Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಬ 9

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಅದಕ್ಕೆ ಯೋಬನು ಉತ್ತರಿಸುತ್ತಾ ಇಂತೆಂದನು:
2“ನಿಜಕ್ಕೂ, ಇದು ಸತ್ಯ ಎಂದು ಬಲ್ಲೆನು; ಆದರೆ ಮನುಷ್ಯರು ದೇವರ ಮುಂದೆ ತಮ್ಮ ಮುಗ್ಧತೆಯನ್ನು ಪ್ರಮಾಣಿಕರಿಸುವುದು ಹೇಗೆ?
3ದೇವರ ಸಂಗಡ ವ್ಯಾಜ್ಯವಾಡಲು ಮನುಷ್ಯನು ಬಯಸಿದರೂ, ದೇವರ ಸಾವಿರ ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರ ಕೊಡಲಾರನು.
4ದೇವರ ಜ್ಞಾನವು ಆಳವಾದದ್ದು, ಶಕ್ತಿಯಲ್ಲಿ ದೇವರು ಪ್ರಬಲರೂ ಆಗಿದ್ದಾರೆ; ದೇವರ ವಿರೋಧವಾಗಿ ತನ್ನನ್ನು ಕಠಿಣಪಡಿಸಿಕೊಂಡು ವೃದ್ಧಿಯಾಗುವವನು ಯಾರು?
5ದೇವರು ಪರ್ವತಗಳನ್ನು ಅವುಗಳಿಗೆ ತಿಳಿಯದ ಹಾಗೆ ಸರಿಸುತ್ತಾರೆ; ತಮ್ಮ ಎದುರಿನಲ್ಲಿ ಅವುಗಳನ್ನು ತಿರುಗಿಸುತ್ತಾರೆ.
6ಭೂಮಿಯನ್ನು ಅದರ ಸ್ಥಳದೊಳಗಿಂದ ಕದಲಿಸುತ್ತಾರೆ; ಅದರ ಸ್ತಂಭಗಳು ನಡುಗುತ್ತವೆ.
7ದೇವರು ಸೂರ್ಯನಿಗೆ ಪ್ರಕಾಶಿಸದಂತೆ ಅಪ್ಪಣೆ ಕೊಟ್ಟರೆ, ಪ್ರಕಾಶಿಸುತ್ತಿರಲಿಲ್ಲ; ನಕ್ಷತ್ರಗಳಿಗೆ ಮುದ್ರೆ ಹಾಕಿದ್ದರೆ, ನಕ್ಷತ್ರವೂ ಮಿನುಗುತ್ತಿರಲಿಲ್ಲ.
8ದೇವರೊಬ್ಬರೇ ಆಕಾಶಗಳನ್ನು ಹರಡಿಸುತ್ತಾರೆ; ದೇವರು ಸಮುದ್ರದ ತೆರೆಗಳ ಮೇಲೆ ನಡೆಯುತ್ತಾರೆ.
9ಸಪ್ತರ್ಷಿಮಂಡಲವನ್ನೂ, ಮೃಗಶಿರವನ್ನೂ, ಕೃತ್ತಿಕೆಯನ್ನೂ ದಕ್ಷಿಣ ದಿಕ್ಕಿನ ನಕ್ಷತ್ರಗ್ರಹಗಳನ್ನೂ ನಿರ್ಮಿಸಿದವರು ದೇವರೇ.
10ದೇವರು ಕಂಡು ಹಿಡಿಯಲಾರದಂಥ ಮಹತ್ಕಾರ್ಯಗಳನ್ನೂ, ಲೆಕ್ಕವಿಲ್ಲದಷ್ಟು ಅದ್ಭುತಗಳನ್ನೂ ಮಾಡುತ್ತಾರೆ.
11ದೇವರು ನನ್ನ ಮುಂದೆ ಹಾದುಹೋದಾಗ, ನನಗೆ ಅವರು ಕಾಣುವುದಿಲ್ಲ; ದೇವರು ದಾಟಿ ಹೋಗುತ್ತಾರೆ; ಆದರೆ ನಾನು ಅವರನ್ನು ಗ್ರಹಿಸಿಕೊಳ್ಳುವುದಿಲ್ಲ.
12ದೇವರು ತೆಗೆದುಕೊಂಡರೆ, ಅವರಿಗೆ ಅಡ್ಡಿ ಮಾಡುವವರು ಯಾರು? ದೇವರನ್ನು, ‘ನೀವು ಏನು ಮಾಡುತ್ತೀರಿ?’ ಎಂದು ಕೇಳುವವರ‍್ಯಾರು.
13ದೇವರು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಾರೆ; ರಹಾಬನ ಸಹಾಯಕರು ಸಹ ದೇವರ ಕಾಲಿಗೆ ಅಡ್ಡಬಿದ್ದರಲ್ಲಾ.
14“ದೇವರೊಂದಿಗೆ ವಾದಿಸಲು ನಾನು ಅಶಕ್ತನು; ದೇವರಿಗೆ ತಕ್ಕ ಉತ್ತರ ಕೊಡಲು ನಾನು ಎಷ್ಟರವನು?
15ನಾನು ನೀತಿವಂತನಾಗಿದ್ದರೂ ಉತ್ತರ ಕೊಡೆನು; ಆದರೆ ನನ್ನ ನ್ಯಾಯಾಧಿಪತಿಗೆ ಕರುಣೆಗೋಸ್ಕರ ಮೊರೆಯಿಡುವೆನು.
16ನಾನು ಕರೆಯಲು ದೇವರು ನನಗೆ ಉತ್ತರ ಕೊಟ್ಟರೂ, ನನ್ನ ವಿಜ್ಞಾಪನೆಗೆ ದೇವರು ಕಿವಿಗೊಡುವರೆಂದು ನಾನು ನಂಬುತ್ತಿರಲಿಲ್ಲ.
17ಏಕೆಂದರೆ ದೇವರು ಬಿರುಗಾಳಿಯಿಂದ ನನ್ನನ್ನು ಬಡಿಯುತ್ತಾರೆ; ನನ್ನ ಗಾಯಗಳನ್ನು ಕಾರಣವಿಲ್ಲದೆ ಹೆಚ್ಚಿಸುತ್ತಾರೆ.
18ನಾನು ಉಸಿರಾಡಲು ಕಷ್ಟಪಡುತ್ತಿದ್ದೇನೆ, ದೇವರು ಕಹಿಯಾದವುಗಳಿಂದ ನನ್ನನ್ನು ತುಂಬಿಸುತ್ತಾರೆ.
19ಶಕ್ತಿಯ ವಿಷಯದಲ್ಲಿ ಹೇಳಬೇಕಾದರೆ, ಇಗೋ ದೇವರು ಬಲಶಾಲಿ! ನ್ಯಾಯದ ವಿಷಯದಲ್ಲಿ ವಾದಿಸಬೇಕಾದರೆ, ದೇವರಿಗೆ ಸವಾಲು ಹಾಕುವವರು ಯಾರು?
20ನಾನು ನೀತಿವಂತನಾಗಿದ್ದರೂ, ನನ್ನ ಸ್ವಂತ ಬಾಯೇ ನನ್ನನ್ನು ಖಂಡಿಸುತ್ತದೆ; ನಾನು ನಿರ್ದೋಷಿಯಾಗಿದ್ದರೂ, ದೇವರು ನನ್ನನ್ನು ಅಪರಾಧಿ ಎಂದು ನಿರೂಪಿಸುವರು.
21“ನಾನು ನಿರ್ದೋಷಿಯೇ ಹೌದು, ನನ್ನ ಬಗ್ಗೆ ನನಗೆ ಚಿಂತೆ ಇಲ್ಲ; ನನ್ನ ಬಾಳನ್ನೇ ತಿರಸ್ಕಾರ ಮಾಡುತ್ತೇನೆ.
22ಇದೆಲ್ಲಾ ಒಂದೇ ವಿಷಯ; ಆದ್ದರಿಂದ ನಾನು ಇದನ್ನು ಹೇಳುತ್ತೇನೆ: ‘ನಿರ್ದೋಷಿಯನ್ನೂ, ಕೆಟ್ಟವನನ್ನೂ ದೇವರು ದಂಡಿಸುತ್ತಾರೆ.’
23ವಿಪತ್ತು ಅಕಸ್ಮಾತ್ತಾಗಿ ಮರಣವನ್ನು ತಂದರೆ, ನಿರಪರಾಧಿಯ ಬುದ್ಧಿಹೀನತೆಗೆ ದೇವರು ನಗುವರು.
24ಲೋಕವು ಕೆಟ್ಟವರ ಕೈವಶವಾಗಿದೆ; ನ್ಯಾಯಾಧಿಪತಿಗಳ ಮುಖಕ್ಕೆ ಮುಸುಕುಹಾಕಲಾಗಿದೆ; ಇದನ್ನು ಅನುಮತಿಸಿದವರು ದೇವರಲ್ಲದೆ ಮತ್ತೆ ಯಾರು?
25“ಆದರೆ ನನ್ನ ದಿನಗಳು ಅಂಚೆಯವನಿಗಿಂತಲೂ ತ್ವರೆಯಾಗಿವೆ; ಆನಂದವನ್ನೂ ನೋಡದೆ ದಿನಗಳು ಓಡಿಹೋಗುತ್ತವೆ.
26ಆಪಿನ ದೋಣಿಗಳು ದಾಟಿ ಹೋಗುವಂತೆಯೂ, ಹದ್ದು ತನ್ನ ಬೇಟೆಯ ಮೇಲೆ ಎರಗುವಂತೆಯೂ ದಿನಗಳು ವೇಗವಾಗಿ ಗತಿಸಿಹೋಗುತ್ತವೆ.
27‘ನಾನು ನನ್ನ ದೂರುಗಳನ್ನು ಮರೆತು, ನನ್ನ ಭಾರವನ್ನು ಬಿಟ್ಟು, ಆದರಣೆ ಹೊಂದುವೆನು,’ ಎಂದು ತೀರ್ಮಾನಿಸಿಕೊಂಡರೆ,
28ನನಗಾದ ವ್ಯಥೆಗಳಿಗೆಲ್ಲಾ ನಾನು ಇನ್ನೂ ಹೆದರುತ್ತಿದ್ದೇನೆ; ದೇವರು ನನ್ನನ್ನು ನಿರಪರಾಧಿ ಎಂದು ಎಣಿಸುವುದಿಲ್ಲವೆಂದು ಸಹ ನನಗೆ ಗೊತ್ತಿದೆ.
29ನಾನು ಈಗಾಗಲೇ ಅಪರಾಧಿ ಎಂದು ನಿರ್ಣಯವಾಗಿರುವಾಗ, ನಾನು ಏಕೆ ವ್ಯರ್ಥವಾಗಿ ಹೋರಾಡಬೇಕು?
30ನಾನು ಹಿಮದ ನೀರಿನಲ್ಲಿ ಸ್ನಾನಮಾಡಿ, ಸಾಬೂನಿನಿಂದ ನನ್ನ ಕೈಗಳನ್ನು ತೊಳೆದುಕೊಂಡರೂ,
31ದೇವರು ನನ್ನನ್ನು ಕುಣಿಯಲ್ಲಿ ಮುಳುಗಿಸಿ ಬಿಡುವರು; ನನ್ನ ಸ್ವಂತ ವಸ್ತ್ರಗಳೇ ನನ್ನನ್ನು ಅಸಹ್ಯಪಡಬೇಕಾಗುವುದು.
32“ದೇವರು ನನ್ನಂಥ ಕೇವಲ ಮನುಷ್ಯನಲ್ಲ, ನಾನು ದೇವರೊಂದಿಗೆ ವಾದಿಸುವುದು ಹೇಗೆ? ನಾವಿಬ್ಬರೂ ನ್ಯಾಯಾಲಯದ ಮುಂದೆ ಕೂಡಿ ವಾದಿಸುವುದು ಹೇಗೆ?
33ನಮ್ಮಿಬ್ಬರನ್ನು ಒಟ್ಟು ಸೇರಿಸುವ ಮಧ್ಯಸ್ಥ ಒಂದು ವೇಳೆ ನಮ್ಮ ನಡುವೆ ಇದ್ದಿದ್ದರೆ,
34ದೇವರ ಶಿಕ್ಷೆಯಕೋಲನ್ನು ನನ್ನ ಮೇಲಿನಿಂದ ತೊಲಗಿಸುವ ಒಬ್ಬ ಮಧ್ಯಸ್ಥ ಇದ್ದಿದ್ದರೆ, ದೇವರ ಭೀತಿಗೆ ನಾನು ಎಂದಿಗೂ ಹೆದರದೆ ಇರುತ್ತಿದ್ದೆ.
35ಆಗ ನಾನು ದೇವರೊಂದಿಗೆ ಭಯಪಡದೆ ಮಾತನಾಡುತ್ತಿದ್ದೆ; ನನ್ನ ಸ್ವಂತ ಶಕ್ತಿಯಿಂದ ಈಗ ನಾನು ಅದನ್ನೆಲ್ಲಾ ನನಗೆ ಮಾಡಲು ಸಾಧ್ಯವಿಲ್ಲ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.