Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಬ 32

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೋಬನು ತಾನು ನೀತಿವಂತನೆಂದು ಸಾಧಿಸಿದ್ದನು. ಆದ್ದರಿಂದ ಆ ಮೂರು ಸ್ನೇಹಿತರು ಯೋಬನಿಗೆ ಉತ್ತರ ಕೊಡುವುದನ್ನು ನಿಲ್ಲಸಿಬಿಟ್ಟರು.
2ಆಗ ರಾಮ ಗೋತ್ರದ ಬೂಜ್ಯನಾದ ಬರಕೇಲನ ಮಗ ಎಲೀಹು, ಯೋಬನ ಮೇಲೆ ಬಹು ಕೋಪಗೊಂಡನು. ಯೋಬನು ದೇವರಿಗಿಂತ ತನ್ನನ್ನು ನ್ಯಾಯವಂತನೆಂದು ಸ್ಥಾಪಿಸಿದ್ದರಿಂದ, ಎಲೀಹು ಅವನ ಮೇಲೆ ಕೋಪಗೊಂಡನು.
3ಯೋಬನ ಮೂವರು ಸ್ನೇಹಿತರ ಮೇಲೆಯೂ ಎಲೀಹು ಕೋಪಗೊಂಡನು. ಅವರು ಉತ್ತರ ಕಂಡುಕೊಳ್ಳದೆ, ಯೋಬನನ್ನು ಖಂಡಿಸಿದ್ದರಿಂದ ಎಲೀಹುವಿನ ಕೋಪ ಉರಿಯಿತು.
4ಎಲೀಹು, ಯೋಬನ ಮಾತುಗಳು ಮುಗಿಯುವವರೆಗೂ ಕಾದಿದ್ದನು. ಏಕೆಂದರೆ ಅವನಿಗಿಂತ ಅವರೆಲ್ಲರೂ ಹಿರಿಯರಾಗಿದ್ದರು.
5ಆ ಮೂವರ ಮಾತಿನಲ್ಲಿ ಏನೂ ಉತ್ತರವಿಲ್ಲವೆಂದು ಎಲೀಹು ನೋಡಿದಾಗ, ಅವನ ಕೋಪ ಮತ್ತಷ್ಟು ಉರಿಯಿತು.
6ಆಗ ಬೂಜ್ಯನಾದ ಬರಕೇಲನ ಮಗ ಎಲೀಹು ಹೇಳಿದ್ದೇನೆಂದರೆ: “ನಾನು ಪ್ರಾಯದಲ್ಲಿ ಯುವಕನು, ನೀವು ಪ್ರಾಯಸ್ಥರು. ಆದ್ದರಿಂದ ನಾನು ಸಂಕೋಚಗೊಂಡು ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸುವುದಕ್ಕೆ ಭಯಪಟ್ಟೆನು.
7‘ದಿನ ಗತಿಸಿದವರು ಮಾತನಾಡಲಿ, ಬಹಳ ವರ್ಷದವರು ಜ್ಞಾನವನ್ನು ಬೋಧಿಸಲಿ,’ ಎಂದುಕೊಂಡೆನು.
8ಆದರೆ ಮನುಷ್ಯನಲ್ಲಿ ಒಂದು ಆತ್ಮ ಉಂಟು; ಸರ್ವಶಕ್ತರ ಶ್ವಾಸವು ಅವನಿಗೆ ತಿಳುವಳಿಕೆಯನ್ನು ಕೊಡುತ್ತದೆ.
9ದೊಡ್ಡ ಮನುಷ್ಯರೇ ಬುದ್ಧಿವಂತರಲ್ಲ; ಮುದುಕರೇ ನ್ಯಾಯವನ್ನು ಬಲ್ಲವರಲ್ಲ.
10“ಆದಕಾರಣ, ನಾನು ಹೇಳುತ್ತಿದ್ದೇನೆ: ನನ್ನ ಮಾತನ್ನು ಕೇಳಿಸಿಕೊಳ್ಳಿರಿ, ನನಗೆ ಗೊತ್ತಿದ್ದನ್ನು ನಾನು ತಿಳಿಸುತ್ತೇನೆ.
11ನೀವು ಮಾತಾಡಿ ಮುಗಿಸುವ ತನಕ ನಾನು ಕಾದಿದ್ದೆ. ನೀವು ಹೇಳುತ್ತಿದ್ದ ಕಾರಣಗಳನ್ನೂ, ಏನು ಹೇಳಬೇಕೆಂದು ಹುಡುಕುತ್ತಿದ್ದ ಪದಗಳನ್ನೂ ನಾನು ಕೇಳುತ್ತಿದ್ದೆನು.
12ನಾನು ನಿಮ್ಮ ಮಾತಿಗೆ ಪೂರ್ಣ ಲಕ್ಷ್ಯವಿಟ್ಟಿದ್ದೆನು. ಆದರೆ, ನಿಮ್ಮಲ್ಲಿ ಯೋಬನ ತಪ್ಪನ್ನು ರುಜುಪಡಿಸುವವರೂ, ಯೋಬನ ವಾದಗಳಿಗೆ ಸರಿಯಾಗಿ ಉತ್ತರ ಕೊಡುವವರೂ ನಿಮ್ಮಲ್ಲಿ ಯಾರೂ ಇಲ್ಲ.
13‘ನಾವು ಯೋಬನಲ್ಲಿ ಜ್ಞಾನವನ್ನು ಕಂಡುಕೊಂಡಿದ್ದೇವೆ ದೇವರೇ ಅವನನ್ನು ಖಂಡಿಸಿಬಿಡಲಿ, ಇದು ಮನುಷ್ಯನಿಂದಾಗುವುದಿಲ್ಲ,’ ಎಂಬುದಾಗಿ ಅಂದುಕೊಳ್ಳಬೇಡಿರಿ.
14ಯೋಬನು ನನಗೆ ವಿರೋಧವಾಗಿ ನುಡಿಗಳನ್ನು ಪ್ರಯೋಗ ಮಾಡಲಿಲ್ಲ; ನಿಮ್ಮ ವಾದಗಳಿಂದ ನಾನು ಅವನಿಗೆ ಉತ್ತರ ಕೊಡುವುದಿಲ್ಲ.
15“ಯೋಬನೇ, ಇವರು ವಿಸ್ಮಯಗೊಂಡು ಇನ್ನು ಉತ್ತರ ಕೊಡದವರಾಗಿದ್ದಾರೆ; ಇವರಿಗೆ ಮಾತನಾಡಲು ಪದಗಳೇ ಸಿಕ್ಕುತ್ತಾಯಿಲ್ಲ.
16ಇವರು ಇನ್ನು ಉತ್ತರ ಕೊಡದೆ ಮೌನವಾಗಿ ಸುಮ್ಮನೆ ನಿಂತಿದ್ದರೆ, ನಾನೂ ಕಾದುಕೊಂಡಿರಬೇಕೋ?
17ನಾನು ನನ್ನ ಪಾಲಿನ ಉತ್ತರವನ್ನು ಹೇಳುವೆನು, ನಾನೇ ನನ್ನ ಅಭಿಪ್ರಾಯವನ್ನು ತಿಳಿಸುವೆನು.
18ಏಕೆಂದರೆ ಅನೇಕ ವಿಷಯಗಳಿಂದ ನಾನು ತುಂಬಿದ್ದೇನೆ; ನನ್ನೊಳಗಿನ ಆತ್ಮವು ನನ್ನನ್ನು ಒತ್ತಾಯಪಡಿಸುತ್ತಿದೆ.
19ನನ್ನ ಅಂತರಾತ್ಮವು ತೆರೆಯದ ದ್ರಾಕ್ಷಾರಸದ ಹಾಗೆ ಇದೆ; ಒಡೆದು ಹೋಗುವ ಹೊಸ ಬುದ್ದಲಿಗಳ ಹಾಗೆಯೂ ಇದೆ.
20ನೆಮ್ಮದಿಯಿಂದಿರಲು ನಾನು ಮಾತಾಡಲೇಬೇಕು; ನನ್ನ ತುಟಿಗಳನ್ನು ತೆರೆದು ಉತ್ತರಕೊಡುವೆನು.
21ನಾನು ಯಾವ ಮನುಷ್ಯನ ಮುಖದಾಕ್ಷಿಣ್ಯ ನೋಡೆನು; ನಾನು ಯಾವ ಮನುಷ್ಯನನ್ನು ಹೊಗಳೆನು.
22ಹೊಗಳುವುದರಲ್ಲಿ ನಾನು ಪ್ರವೀಣನಾಗಿದ್ದರೆ, ನನ್ನ ಸೃಷ್ಟಿಕರ್ತ ಆಗಿರುವವರು ನನ್ನನ್ನು ಬೇಗ ತೆಗೆದುಕೊಂಡು ಹೋಗಲಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.