Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಬ 24

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1“ಸರ್ವಶಕ್ತರು ತೀರ್ಪಿನ ಕಾಲವನ್ನು ನಿಗದಿಪಡಿಸದೆ ಇರುವುದೇಕೆ? ದೇವರನ್ನು ತಿಳಿದವರು ದೇವರ ದಿನಗಳಿಗೋಸ್ಕರ ವ್ಯರ್ಥವಾಗಿ ನೋಡುತ್ತಿರುವುದು ಏಕೆ?
2ಕೆಲವರು ಗಡಿಗಳ ಕಲ್ಲುಗಳನ್ನು ಬದಲಿಸುತ್ತಾರೆ, ಕದ್ದ ಮಂದೆಗಳನ್ನು ತೆಗೆದುಕೊಂಡು ಸಾಕಿಕೊಳ್ಳುತ್ತಾರೆ.
3ದಿಕ್ಕಿಲ್ಲದವರ ಕತ್ತೆಗಳನ್ನು ಹೊಡೆದುಕೊಂಡು ಹೋಗುತ್ತಾರೆ; ವಿಧವೆಯ ಎತ್ತನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.
4ದರಿದ್ರನನ್ನು ದಾರಿಯಿಂದ ತೊಲಗಿಸುತ್ತಾರೆ; ದೇಶದ ಬಡವರು ಕೂಡ ಅವರಿಂದ ಓಡಿ ಅಡಗಿಕೊಳ್ಳುತ್ತಾರೆ.
5ಕಾಡುಕತ್ತೆಗಳ ಹಾಗೆ ಬಡವರು ತಮ್ಮ ಆಹಾರಕ್ಕಾಗಿ ಅಲೆಯುತ್ತಾರೆ; ಪಾಳುಭೂಮಿಯಿಂದ ಅವರಿಗೂ, ಅವರ ಮಕ್ಕಳಿಗೂ ಆಹಾರ ಸಿಗುತ್ತದೆ.
6ಬಡವರು ಹೊಲಗಳಲ್ಲಿ ಮೇವನ್ನು ಕೊಯ್ದು, ದುಷ್ಟನ ದ್ರಾಕ್ಷಿತೋಟದಲ್ಲಿ ಹಕ್ಕಲಾಯುತ್ತಾರೆ.
7ಸಾಕಷ್ಟು ಬಟ್ಟೆ ಇಲ್ಲದೆ ಅವರು ರಾತ್ರಿಯನ್ನು ಕಳೆಯುತ್ತಾರೆ; ಚಳಿಯಲ್ಲಿ ಅವರಿಗೆ ಹೊದ್ದುಕೊಳ್ಳುವುದಕ್ಕೆ ಇಲ್ಲ.
8ಬೆಟ್ಟಗಳ ಮಳೆಯಿಂದ ನೆನೆದುಹೋಗುತ್ತಾರೆ; ಬಂಡೆಗಳಲ್ಲಿ ಆಶ್ರಯವನ್ನು ಪಡೆಯುತ್ತಾರೆ.
9ಆದರೆ ದುಷ್ಟರು ದಿಕ್ಕಿಲ್ಲದ ಶಿಶುವನ್ನು ತಾಯಿಯ ಎದೆಯಿಂದ ಕಸೆದುಕೊಳ್ಳುತ್ತಾರೆ; ಬಡವನ ಶಿಶುವನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.
10ಬಡವರೋ ಸಾಕಷ್ಟು ಬಟ್ಟೆಯಿಲ್ಲದವರಾಗಿ ಅಲೆಯುತ್ತಾರೆ; ಹಸಿದವರಾಗಿ ಸಿವುಡುಗಳನ್ನು ಹೊರುತ್ತಾರೆ.
11ಯಜಮಾನರ ಮಾಳಿಗೆಗಳ ಮೇಲೆ ಓಲಿವ್ ಎಣ್ಣೆಗಾಣಗಳನ್ನು ಆಡಿಸುತ್ತಾರೆ; ದಾಹಗೊಂಡೇ ದ್ರಾಕ್ಷೆಯ ತೊಟ್ಟಿಗಳಲ್ಲಿ ಕೆಲಸ ಮಾಡುತ್ತಾರೆ.
12ಪಟ್ಟಣದೊಳಗಿಂದ ಮನುಷ್ಯರ ನರಳುವಿಕೆಯು ಜೋರಾಗುತ್ತದೆ; ಗಾಯಪಟ್ಟವರ ಪ್ರಾಣವು ಸಹಾಯಕ್ಕಾಗಿ ಕೂಗುತ್ತದೆ; ಆದರೂ ದೇವರು ಯಾರ ಮೇಲೆಯೂ ತಪ್ಪು ಹೊರಿಸುವುದಿಲ್ಲ.
13“ಬೆಳಕಿನ ವಿರೋಧವಾಗಿ ತಿರುಗಿಬಿದ್ದವರು ಇದ್ದಾರೆ; ಅಂಥವರು ಬೆಳಕಿನ ಮಾರ್ಗಗಳನ್ನು ಅರಿಯದವರು; ಬೆಳಕಿನ ದಾರಿಗಳಲ್ಲಿ ವಾಸವಾಗಿರದವರೂ ಆಗಿದ್ದಾರೆ.
14ಕೊಲೆಗಾರನು ಮುಂಜಾನೆಯೇ ಎದ್ದು, ದಿಕ್ಕಿಲ್ಲದವರನ್ನೂ, ಬಡವರನ್ನೂ ಸಂಹರಿಸುತ್ತಾನೆ; ರಾತ್ರಿಯಲ್ಲಿ ಕಳ್ಳನಂತೆ ವರ್ತಿಸುತ್ತಾನೆ.
15ವ್ಯಭಿಚಾರಿಯು ಸಂಜೆಯನ್ನು ಎದುರುನೋಡುತ್ತಿರುವನು. ತರುವಾಯ, ‘ಯಾವ ಕಣ್ಣೂ ನನ್ನನ್ನು ನೋಡುವುದಿಲ್ಲ,’ ಎಂದು ಹೇಳುತ್ತಾನೆ; ಯಾರು ತನ್ನನ್ನು ಕಾಣದಂತೆ ಮುಖವನ್ನು ಮುಚ್ಚಿಕೊಳ್ಳುತ್ತಾನೆ.
16ಕಳ್ಳರು ಕತ್ತಲಲ್ಲಿ ಕನ್ನ ಕೊರೆದು ಮನೆಗಳೊಳಗೆ ನುಗ್ಗುತ್ತಾರೆ. ಹಗಲಿನಲ್ಲಿ ತಮ್ಮ ಮನೆಬಾಗಿಲುಗಳನ್ನು ಮುಚ್ಚಿಕೊಳ್ಳುತ್ತಾರೆ; ಅವರು ಬೆಳಕಿನಲ್ಲಿ ಏನೂ ಮಾಡಲು ಬಯಸುವುದಿಲ್ಲ.
17ಅವರೆಲ್ಲರಿಗೂ ಕಾರ್ಗತ್ತಲು ಬೆಳಕಿನಂತಿರುವುದು; ಕತ್ತಲೆಯ ಭೀತಿಯೇ ಅವರಿಗೆ ಸ್ನೇಹಿತರು.
18“ಆದರೂ ಅವರು ನೀರಿನ ಮೇಲಿನ ಗುಳ್ಳೆಯಂತೆ ಇದ್ದಾರೆ. ಅವರ ಜಮೀನು ಶಾಪಕ್ಕೆ ಒಳಪಟ್ಟಿರುವುದರಿಂದ, ಯಾರೂ ಅವರ ದ್ರಾಕ್ಷೆಯ ತೋಟಕ್ಕೆ ಹೋಗುವುದಿಲ್ಲ.
19ಬರಗಾಲದ ಬಿಸಿಲು ಹಿಮದ ನೀರನ್ನು ಹೀರಿಕೊಳ್ಳುವಂತೆ, ಪಾಪಮಾಡಿದವರನ್ನು ಸಮಾಧಿಯು ಹೀರಿಕೊಳ್ಳುತ್ತದೆ.
20ಹೆತ್ತ ಕರುಳು ಅಂಥವರನ್ನು ಮರೆತು ಬಿಡುವುದು; ಹುಳವು ಅಂಥವರ ಹೆಣವನ್ನು ರುಚಿಯಿಂದ ತಿಂದುಬಿಡುವುದು; ಇನ್ನು ಅವರ ನೆನಪು ಇರುವುದಿಲ್ಲ; ಮರದ ಹಾಗೆ ದುಷ್ಟರು ಮುರಿದುಹೋಗುವರು.
21ದುಷ್ಟರು ಆಸ್ತಿಯ ವಿಷಯದಲ್ಲಿ ಬಂಜೆಯರನ್ನು ಮೋಸಮಾಡುತ್ತಾನೆ; ದುಷ್ಟರು ವಿಧವೆಯರಿಗೆ ದಯೆ ತೋರಿಸುವುದಿಲ್ಲ.
22ಆದರೆ ದೇವರು ತಮ್ಮ ಶಕ್ತಿಯಿಂದ ಬಲಿಷ್ಠರನ್ನು ಎಳೆದೊಯ್ಯುತ್ತಾರೆ; ಬಲಿಷ್ಠರು ಉದ್ಧಾರವಾಗಿದ್ದರೂ ಅವರಿಗೆ ಜೀವನದ ಭರವಸೆ ಇಲ್ಲ.
23ಭದ್ರತೆಯಲ್ಲಿ ವಿಶ್ರಾಂತಿ ಪಡೆಯಲು ದೇವರು ಅವರಿಗೆ ಅವಕಾಶ ನೀಡಬಹುದು; ಆದರೆ ದೇವರ ಕಣ್ಣುಗಳು ಅವರ ಮಾರ್ಗಗಳ ಮೇಲಿರುವುದು.
24ಅವರು ಸ್ವಲ್ಪಕಾಲ ಉನ್ನತವಾಗಿದ್ದು ನಂತರ ಇಲ್ಲದೆ ಹೋಗುತ್ತಾರೆ; ಅವರು ಎಲ್ಲಾ ಮನುಷ್ಯರಂತೆ ಕೊಯ್ದ ತೆನೆಯ ಹಾಗೆ ಕೆಳಗೆ ಬಿದ್ದು ಕಾಳಿನಂತೆ ಬೇರ್ಪಡುತ್ತಾರೆ.
25“ಈ ಮಾತು ನಿಜ ಇಲ್ಲದಿದ್ದರೆ, ಯಾರು ನನ್ನನ್ನು ಸುಳ್ಳುಗಾರನನ್ನಾಗಿ ಸ್ಥಾಪಿಸಬಲ್ಲರು? ಯಾರು ನನ್ನ ಮಾತನ್ನು ವ್ಯರ್ಥಮಾಡಬಲ್ಲರು?”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.