Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಬ 22

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆಮೇಲೆ ತೇಮಾನ್ಯನಾದ ಎಲೀಫಜನು ಹೀಗೆಂದನು:
2“ಮನುಷ್ಯನಿಂದ ದೇವರಿಗೆ ಪ್ರಯೋಜನವೇನು? ಒಬ್ಬನು ಜ್ಞಾನಿಯಾಗಿದ್ದರೂ ದೇವರಿಗೆ ಪ್ರಯೋಜನವಾಗಿರುವನೇ?
3ನೀನು ನೀತಿವಂತನಾಗಿದ್ದರೆ, ಸರ್ವಶಕ್ತರಿಗೆ ಮೆಚ್ಚಿಕೆಯೋ? ನಿನ್ನ ಮಾರ್ಗಗಳು ನಿರ್ದೋಷವಾಗಿದ್ದರೆ, ದೇವರಿಗೆ ಲಾಭವೇನು?
4“ನಿನ್ನ ಭಕ್ತಿಗಾಗಿ ದೇವರು ನಿನ್ನನ್ನು ಗದರಿಸುತ್ತಾರೋ? ನಿನ್ನ ಭಕ್ತಿಗಾಗಿ ದೇವರು ನ್ಯಾಯತೀರ್ಪಿಗೆ ಗುರಿಪಡಿಸುತ್ತಾರೆಯೇ?
5ನಿನ್ನ ದುಷ್ಟತನವು ಬಹಳವಲ್ಲವೋ? ನಿನ್ನ ಪಾಪಗಳಿಗೆ ಅಂತ್ಯವೇ ಇಲ್ಲಾ.
6ನೀನು ಕಾರಣವಿಲ್ಲದೆ ನಿನ್ನ ಸಹೋದರರಿಂದ ಈಡು ತೆಗೆದುಕೊಂಡಿದ್ದೀ; ಅವರ ವಸ್ತ್ರಗಳನ್ನು ಸಹ ನೀನು ಕಿತ್ತುಕೊಂಡಿರುವೆ.
7ನೀನು ದಣಿದವರಿಗೆ ನೀರು ಕೊಡಲಿಲ್ಲ; ಹಸಿದವರಿಗೆ ಆಹಾರವನ್ನು ಬಡಿಸಲಿಲ್ಲ.
8ನೀನು ಬಲಿಷ್ಠನಾಗಿದ್ದರೂ, ಜಮೀನು ಬಹಳವಾಗಿದ್ದರೂ, ಗೌರವಕ್ಕೆ ಯೋಗ್ಯನಾದ ಮನುಷ್ಯನಾಗಿ ಊರಲ್ಲಿ ವಾಸಿಸಿದರೂ,
9ವಿಧವೆಯರನ್ನು ಬರಿದಾಗಿ ಕಳುಹಿಸಿಬಿಟ್ಟೆ; ದಿಕ್ಕಿಲ್ಲದವರ ತೋಳುಗಳನ್ನು ಮುರಿದುಬಿಟ್ಟೆ.
10ಆದ್ದರಿಂದ ನಿನ್ನ ಸುತ್ತಲೂ ಉರುಲುಗಳು ಕಾದಿವೆ; ಹಠಾತ್ತಾಗಿ ಬರುವ ವಿಪತ್ತು ನಿನ್ನನ್ನು ತಲ್ಲಣಗೊಳಿಸುತ್ತದೆ.
11ಇದಲ್ಲದೆ ನೀನು ಕಾಣದಷ್ಟು ಕತ್ತಲು ನಿನಗಿರುವುದು; ಜಲಪ್ರವಾಹವೂ ನಿನ್ನನ್ನು ಮುಳುಗಿಸುವುದು.
12“ದೇವರು ಸ್ವರ್ಗದಲ್ಲಿ ಇದ್ದಾರಲ್ಲವೇ? ನಕ್ಷತ್ರಮಂಡಲವನ್ನು ನೋಡು, ಅವು ಎಷ್ಟು ಉನ್ನತ!
13ನೀನಾದರೋ, ‘ದೇವರಿಗೆ ಏನು ಗೊತ್ತು? ಕಾರ್ಗತ್ತಲಿರುವಾಗ ದೇವರು ನ್ಯಾಯತೀರಿಸಲು ಸಾಧ್ಯವೇ?
14ದಟ್ಟವಾದ ಮೋಡಗಳು ದೇವರಿಗೆ ಪರದೆಯ ಹಾಗಿರುವುದರಿಂದ ದೇವರು ನಮ್ಮನ್ನು ನೋಡಲು ಸಾಧ್ಯವಿಲ್ಲ. ದೇವರು ಆಕಾಶಮಂಡಲದ ಮೇಲ್ಗಡೆಯಲ್ಲಿ ನಡೆದಾಡುತ್ತಾರೆ,’ ಎಂದು ಹೇಳಿಕೊಂಡಿರುವೆ ಅಲ್ಲವೇ?
15ದುಷ್ಟರು ಮೊದಲಿನಿಂದಲೂ ನಡೆದ ದಾರಿಯಲ್ಲಿ ನೀನು ನಡೆಯುವಿಯಾ?
16ಅಕಾಲ ಮರಣವು ಅವರನ್ನು ಅಪಹರಿಸಿತು; ಅವರ ಅಡಿಪಾಯವು ಪ್ರವಾಹದಿಂದ ಕೊಚ್ಚಿಹೋಯಿತು.
17ಅವರು ದೇವರಿಗೆ, ‘ನಮ್ಮಿಂದ ತೊಲಗಿಹೋಗು! ಸರ್ವಶಕ್ತ ನಮಗೇನು ಮಾಡಲು ಸಾಧ್ಯ?’ ಎಂದು ಹೇಳಿಕೊಳ್ಳುತ್ತಿದ್ದರು.
18ಆದರೂ ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದ್ದರು. ಅಬ್ಬಾ, ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!
19ನೀತಿವಂತರು ದುಷ್ಟರ ದುರ್ಗತಿಯನ್ನು ನೋಡಿ ಹಿಗ್ಗುವರು. ನಿರ್ದೋಷಿಗಳು ಹೀಗೆಂದು ದುಷ್ಟರನ್ನು ಅಣಕಿಸುವರು:
20‘ನಮಗೆ ವಿರುದ್ಧವಾಗಿ ಎದ್ದವರು ಹಾಳಾಗಿ ಹೋದರು. ಅವರ ಸೊತ್ತನ್ನು ಬೆಂಕಿಯು ನಾಶಮಾಡಿತು!’
21“ದೇವರಿಗೆ ಅಧೀನವಾಗಿ, ದೇವರೊಂದಿಗೆ ಸಮಾಧಾನದಿಂದಿರು; ಇದರಿಂದ ನಿನಗೆ ಸಮೃದ್ಧಿ ಬರುವುದು.
22ದೇವರ ಬಾಯಿಂದಲೇ ಶಿಕ್ಷಣವನ್ನು ಸ್ವೀಕರಿಸು; ದೇವರ ಮಾತುಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೋ.
23ನಿನ್ನ ಗುಡಾರಗಳಿಂದ ದುಷ್ಟತ್ವವನ್ನು ದೂರಮಾಡಿ, ಸರ್ವಶಕ್ತರ ಕಡೆಗೆ ನೀನು ತಿರುಗಿಕೊಂಡರೆ, ನೀನು ಪುನಃಸ್ಥಾಪಿತವಾಗುವೆ.
24ನೀನು ಬಂಗಾರವನ್ನು ಧೂಳಿನಂತೆಯೂ, ಓಫೀರ್ ದೇಶದ ಬಂಗಾರವನ್ನು ನದಿಯ ಕಲ್ಲುಗಳಂತೆಯೂ ಎಣಿಸು.
25ಆಗ ಸರ್ವಶಕ್ತರು ನಿನಗೆ ಬಂಗಾರವಾಗಿರುವರು. ದೇವರು ನಿನಗೆ ಸಮೃದ್ಧಿಯಾದ ಬೆಳ್ಳಿಯೂ ಆಗಿರುವರು.
26ನಿಶ್ಚಯವಾಗಿ ಸರ್ವಶಕ್ತರಲ್ಲಿ ನೀನು ಆನಂದಗೊಳ್ಳುವೆ. ನಿನ್ನ ಮುಖವನ್ನು ದೇವರ ಕಡೆಗೆ ಎತ್ತುವೆ.
27ನೀನು ದೇವರಿಗೆ ಪ್ರಾರ್ಥನೆಮಾಡುವೆ, ನಿನ್ನ ಪ್ರಾರ್ಥನೆಯನ್ನು ದೇವರು ಕೇಳುವರು; ನೀನು ಮಾಡಿದ ಹರಕೆಗಳನ್ನು ಸಲ್ಲಿಸುವೆ.
28ನೀನು ಏನಾದರೂ ನಿರ್ಣಯಿಸಿದ್ದರೆ, ಅದು ನಿನಗೆ ನೆರವೇರುವುದು ಮತ್ತು ಬೆಳಕು ನಿನ್ನ ಮಾರ್ಗಗಳಲ್ಲಿ ಪ್ರಕಾಶಿಸುವುದು.
29ಜನರು ನಿನ್ನನ್ನು ಕೆಳಕ್ಕೆ ಬೀಳಿಸುವಾಗ, ‘ಮೇಲಕ್ಕೆ ಎತ್ತು!’ ಎಂದು ನೀನು ದೇವರಿಗೆ ಮೊರೆಯಿಡಲು, ದೇವರು ಬಿದ್ದವರನ್ನು ರಕ್ಷಿಸುವರು.
30ನಿರ್ದೋಷಿಯಾಗಿ ಇಲ್ಲದವರನ್ನು ಸಹ ದೇವರು ವಿಮೋಚಿಸುತ್ತಾರೆ; ನಿನ್ನ ಕೈಗಳ ಶುದ್ಧತ್ವದಿಂದ ಅಂಥವರು ಬಿಡುಗಡೆಯಾಗುವರು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.