Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೋಬ 13

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1“ಇಗೋ, ನನ್ನ ಕಣ್ಣು ಎಲ್ಲವನ್ನು ನೋಡಿದೆ; ನನ್ನ ಕಿವಿ ಕೇಳಿ ಅದನ್ನು ಗ್ರಹಿಸಿಕೊಂಡಿದೆ.
2ನೀವು ತಿಳಿದುಕೊಳ್ಳುವ ಪ್ರಕಾರ ನಾನೂ ತಿಳಿದುಕೊಂಡಿದ್ದೇನೆ; ನಾನು ನಿಮಗಿಂತ ಕಡಿಮೆಯಾದವನಲ್ಲ.
3ನಾನು ಸರ್ವಶಕ್ತರ ಸಂಗಡ ಖಂಡಿತವಾಗಿ ಮಾತನಾಡುವೆನು; ದೇವರ ಸಂಗಡ ವಾದಿಸಲು ನನಗೆ ಮನಸ್ಸುಂಟು.
4ಆದರೆ ನೀವು ಸುಳ್ಳನ್ನು ಕಲ್ಪಿಸುವವರು; ನೀವೆಲ್ಲರು ವ್ಯರ್ಥ ವೈದ್ಯರೇ.
5ನೀವು ಮೌನವಾಗಿಯೇ ಇದ್ದರೆ ಎಷ್ಟೋ ಒಳ್ಳೇದು; ಮೌನವೇ ನಿಮಗೆ ಜ್ಞಾನವು.
6ಈಗ ನನ್ನ ವಾದವನ್ನು ಕೇಳಿಸಿಕೊಳ್ಳಿರಿ; ನನ್ನ ತುಟಿಗಳ ತರ್ಕಗಳನ್ನು ಆಲೈಸಿರಿ.
7ದೇವರ ಪರವಾಗಿ ಮಾತಾಡುವ ನೀವು ಅನ್ಯಾಯದಿಂದ ಮಾತಾಡುವಿರೋ? ದೇವರಿಗೋಸ್ಕರ ಮಾತಾಡುವ ನೀವು ವಂಚನೆಯಿಂದ ಮಾತಾಡುವಿರೋ?
8ನೀವು ದೇವರಿಗೆ ಪಕ್ಷಪಾತವನ್ನು ತೋರಿಸುವಿರೋ? ದೇವರ ಪರವಾಗಿ ನೀವು ವಾದಿಸುವಿರೋ?
9ದೇವರು ನಿಮ್ಮನ್ನು ಶೋಧಿಸಿದರೆ, ಅದು ನಿಮಗೆ ಒಳ್ಳೇದೋ? ಒಬ್ಬ ಮನುಷ್ಯನು ಇನ್ನೊಬ್ಬನನ್ನು ವಂಚಿಸುವ ಪ್ರಕಾರ, ನೀವೂ ದೇವರನ್ನು ವಂಚಿಸುವಿರೋ?
10ನೀವು ರಹಸ್ಯವಾಗಿ ಪಕ್ಷಪಾತಮಾಡಿದರೂ, ದೇವರು ನಿಶ್ಚಯವಾಗಿಯೂ ನಿಮ್ಮನ್ನು ಖಂಡಿಸುವರು.
11ದೇವರ ವೈಭವವು ನಿಮ್ಮನ್ನು ಹೆದರಿಸುವುದಿಲ್ಲವೋ? ದೈವಭಯವು ನಿಮ್ಮ ಮೇಲೆ ಬೀಳುವುದಿಲ್ಲವೋ?
12ನಿಮ್ಮ ನೀತಿವಚನಗಳು ಬೂದಿಯ ಗಾದೆಗಳು; ನಿಮ್ಮ ವಾದಗಳು ಬರೀ ಮಣ್ಣಿನ ಗೋಡೆಯೇ.
13“ಸುಮ್ಮನಿರಿ, ನನ್ನನ್ನು ಮಾತನಾಡಲು ಬಿಡಿರಿ; ನನಗೇನಾದರೂ ಆಗಲಿ.
14ನನ್ನ ಪ್ರಾಣವನ್ನು ಬಾಯಿಂದ ಕಚ್ಚಿಕೊಂಡಿರುವೆನು; ನನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರುವೆನು.
15ದೇವರು ನನ್ನನ್ನು ಕೊಂದರೂ, ನಾನು ದೇವರ ಮೇಲೆ ನಿರೀಕ್ಷೆಯಿಂದಿರುವೆನು; ನಾನು ನಿಶ್ಚಯವಾಗಿ ನನ್ನ ನಡತೆಯ ಒಳ್ಳೆಯತನವನ್ನು ದೇವರ ಮುಂದೆ ಸ್ಥಾಪಿಸುವೆನು.
16ಇದೇ ನನ್ನ ಬಿಡುಗಡೆಗೆ ಕಾರಣವಾಗಿರುವುದು; ಭಕ್ತಿಹೀನರು ದೇವರ ಮುಂದೆ ಬರಲು ಧೈರ್ಯಮಾಡುವುದಿಲ್ಲ.
17ನನ್ನ ನುಡಿಗಳನ್ನು ಲಕ್ಷ್ಯವಿಟ್ಟು ಕೇಳಿರಿ ಮತ್ತು ನನ್ನ ದೃಢ ವಚನವು ನಿಮ್ಮ ಕಿವಿಗೆ ಬೀಳಲಿ.
18ಇಗೋ, ನನ್ನ ನ್ಯಾಯವನ್ನು ಕ್ರಮಪಡಿಸಿದೆನು; ನಾನು ನೀತಿವಂತನೆಂದು ನಿರ್ಣಯ ಹೊಂದುವುದು ನನಗೆ ಗೊತ್ತೇ ಇದೆ.
19ಯಾರಾದರೂ ನನ್ನ ವಿರುದ್ಧ ದೂರನ್ನು ತರಬಹುದೋ? ಹಾಗಿದ್ದರೆ ನಾನು ಮೌನವಾಗಿದ್ದು ಸತ್ತು ಹೋಗುವೆನು.
20“ದೇವರೇ, ಈ ಎರಡು ಸಂಗತಿಗಳನ್ನು ಮಾತ್ರ ನನಗೆ ದಯಪಾಲಿಸಿರಿ; ಆಗ ನಿಮ್ಮಿಂದ ನಾನು ಅಡಗಿಕೊಳ್ಳುವುದಿಲ್ಲ:
21ನಿಮ್ಮ ಕೈಯನ್ನು ನನ್ನಿಂದ ದೂರಮಾಡಿರಿ; ನಿಮ್ಮ ಭಯವು ನನ್ನನ್ನು ಹೆದರಿಸದಿರಲಿ.
22ಆಮೇಲೆ ನೀವು ನನ್ನನ್ನು ಕರೆದರೆ, ನಾನು ಉತ್ತರಿಸುವೆನು; ಅಥವಾ ನಾನು ಮಾತಾಡಿದರೆ, ನೀವು ಉತ್ತರಕೊಡಿರಿ.
23ನಾನು ಎಷ್ಟೋ ಅಕ್ರಮಗಳನ್ನೂ, ಪಾಪಗಳನ್ನೂ ಮಾಡಿದ್ದೇನೆ. ನನ್ನ ಅಪರಾಧವನ್ನೂ, ಪಾಪವನ್ನೂ ನನಗೆ ತೋರಿಸಿಕೊಡಿರಿ.
24ಏಕೆ ನಿಮ್ಮ ಮುಖವನ್ನು ಮರೆಮಾಡುತ್ತೀರಿ? ನನ್ನನ್ನು ನಿಮ್ಮ ಶತ್ರುವಿನ ಹಾಗೆ ಏಕೆ ಭಾವಿಸುತ್ತೀರಿ?
25ಗಾಳಿಯಿಂದ ಹಾರಿಹೋಗುವ ಎಲೆಯನ್ನು ತೊಂದರೆಪಡಿಸುವಿರೋ? ಒಣಗಿದ ಕೊಳೆಯನ್ನು ಬೆನ್ನಟ್ಟುವಿರೋ?
26ಏಕೆಂದರೆ ನನಗೆ ವಿರೋಧವಾಗಿ ಕಹಿಯಾದ ತೀರ್ಪನ್ನು ನೀವು ಬರೆದಿರುವಿರಿ; ನನ್ನ ಯೌವನದ ಪಾಪಗಳನ್ನು ನನ್ನ ಮೇಲೆ ಹೊರಿಸಿರುವಿರಿ.
27ನನ್ನ ಪಾದಗಳನ್ನು ಸಂಕೋಲೆಗಳಿಂದ ಕಟ್ಟಿಹಾಕಿದ್ದೀರಿ, ನನ್ನ ಪಾದಗಳ ಹಿಮ್ಮಡಿಗಳ ಮೇಲೆ ಗುರುತು ಹಾಕಿದ್ದೀರಿ; ನನ್ನ ಹಾದಿಗಳನ್ನೆಲ್ಲಾ ಲಕ್ಷ್ಯವಿಟ್ಟು ನೋಡುತ್ತೀರಿ.
28“ಆದ್ದರಿಂದ ಮಾನವನು ಕೊಳೆತ ವಸ್ತುವಿನಂತೆಯೂ, ನುಸಿಹಿಡಿದ ಬಟ್ಟೆಯಂತೆಯೂ ಅಳಿದು ಹೋಗುತ್ತಾನೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.