Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆರೆಮೀಯ 9

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಓ, ನನ್ನ ತಲೆ ಚಿಲುಮೆಯೂ, ನನ್ನ ಕಣ್ಣುಗಳು ಕಣ್ಣೀರಿನ ಬುಗ್ಗೆಯಾಗಿಯೂ ಇದ್ದರೆ ಒಳ್ಳೆಯದು, ಆಗ ನನ್ನ ಜನರಲ್ಲಿ ಹತರಾದವರ ನಿಮಿತ್ತ ಹಗಲುರಾತ್ರಿ ಅಳುವೆನು.
2ಆಹಾ, ಮರುಭೂಮಿಯಲ್ಲಿ ನನಗೆ ಪ್ರಯಾಣಸ್ಥರ ಛತ್ರವು ಇದ್ದರೆ ಒಳ್ಳೆಯದು, ಆಗ ನನ್ನ ಜನರನ್ನು ಬಿಟ್ಟು ಹೊರಟು ಹೋಗುತ್ತಿದ್ದೆನು. ಏಕೆಂದರೆ ಅವರೆಲ್ಲರು ವ್ಯಭಿಚಾರಿಗಳೇ, ವಂಚಕರ ಕೂಟವೇ.
3“ಅವರು ತಮ್ಮ ನಾಲಿಗೆಗಳನ್ನು ಬಿಲ್ಲಿನಂತೆ ಸುಳ್ಳುಗಳಿಗಾಗಿ ಬಗ್ಗಿಸುತ್ತಾರೆ. ಆದರೆ ಭೂಮಿಯಲ್ಲಿ ಸತ್ಯಕ್ಕಾಗಿ ಬಲಿಷ್ಠರಾಗುವುದಿಲ್ಲ. ಏಕೆಂದರೆ ಅವರು ಒಂದು ಪಾಪದಿಂದ ಇನ್ನೊಂದು ಪಾಪಕ್ಕೆ ಹೋಗುತ್ತಾ, ನನ್ನನ್ನು ಅರಿಯದೆ ಇದ್ದಾರೆ,” ಎಂದು ಯೆಹೋವ ದೇವರು ಹೇಳುತ್ತಾರೆ.
4“ನಿಮ್ಮ ನಿಮ್ಮ ನೆರೆಯವರಿಗೆ ಎಚ್ಚರಿಕೆಯಾಗಿರಿ. ಯಾವ ಸಹೋದರನಲ್ಲಾದರೂ ನಂಬಿಕೆ ಇಡಬೇಡಿರಿ. ಏಕೆಂದರೆ ಸಹೋದರರೆಲ್ಲರೂ ಸಂಪೂರ್ಣವಾಗಿ ಮೋಸ ಮಾಡುವರು; ನೆರೆಯವರೆಲ್ಲರೂ ಚಾಡಿ ಹೇಳುತ್ತಾ ತಿರುಗಾಡುವರು.
5ತಮ್ಮ ತಮ್ಮ ನೆರೆಯವರಿಗೆ ವಂಚನೆಮಾಡಿ ಸತ್ಯವನ್ನು ಮಾತನಾಡರು. ಸುಳ್ಳುಗಳನ್ನು ಹೇಳುವುದಕ್ಕೆ ಅವರು ತಮ್ಮ ನಾಲಿಗೆಗೆ ಬೋಧಿಸಿದ್ದಾರೆ. ಪಾಪದಿಂದ ತಮ್ಮನ್ನು ಸುಸ್ತಾಗಿಸಿಕೊಳ್ಳುತ್ತಾರೆ.
6ನಿನ್ನ ನಿವಾಸವು ಮೋಸದ ಮಧ್ಯದಲ್ಲಿ ಇದೆ. ಮೋಸದಿಂದಲೇ ನನ್ನನ್ನು ನಿರಾಕರಿಸುತ್ತಾರೆ,” ಎಂದು ಯೆಹೋವ ದೇವರು ಹೇಳುತ್ತಾರೆ.
7ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: “ಇಗೋ, ನಾನು ಅವರನ್ನು ಕರಗಿಸಿ ಪರಿಶೋಧಿಸುತ್ತೇನೆ. ಏಕೆಂದರೆ ನನ್ನ ಜನರ ಪಾಪಗಳಿಗೋಸ್ಕರ ನಾನು ಇನ್ನೇನು ಮಾಡಲಿ?
8ಅವರ ನಾಲಿಗೆ ಎಸೆದ ಬಾಣದಂತಿದೆ. ಅದು ಮೋಸವನ್ನಾಡುತ್ತದೆ. ತನ್ನ ಬಾಯಿಂದ ತನ್ನ ನೆರೆಯವರ ಸಂಗಡ ಸಮಾಧಾನವಾಗಿ ಮಾತನಾಡಿ, ಹೃದಯದಲ್ಲಿ ಅವನಿಗೆ ಹೊಂಚುಹಾಕುತ್ತಾರೆ.
9ಇವುಗಳ ನಿಮಿತ್ತ ನಾನು ಅವರನ್ನು ದಂಡಿಸಬಾರದೋ?” ಎಂದು ಯೆಹೋವ ದೇವರು ಹೇಳುತ್ತಾರೆ. “ಇಂಥಾ ಜನಾಂಗಕ್ಕೆ ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವುದಿಲ್ಲವೋ?”
10ಬೆಟ್ಟಗಳಿಗೋಸ್ಕರ ನಾನು ಅಳುವಿಕೆಯನ್ನೂ, ದುಃಖವನ್ನೂ, ಮರುಭೂಮಿಯ ಸ್ಥಳಗಳಿಗೋಸ್ಕರ ಗೋಳಾಟವನ್ನೂ ಎತ್ತುವೆನು. ಅವುಗಳ ಮೂಲಕ ಹಾದುಹೋಗದಂತೆ ಅವು ಸುಟ್ಟುಹೋಗಿದೆ. ದನಗಳ ಕೂಗು ಕಿವಿಗೆ ಬೀಳುವುದಿಲ್ಲ. ಆಕಾಶದ ಪಕ್ಷಿಗಳೂ, ಮೃಗಗಳೂ ಸಹ ಓಡಿ ಹೋಗಿವೆ.
11ಯೆರೂಸಲೇಮನ್ನು ದಿಬ್ಬಗಳಾಗಿಯೂ, ನರಿಗಳ ಸ್ಥಾನವಾಗಿಯೂ ಮಾಡುತ್ತೇನೆ. ಯೆಹೂದದ ಪಟ್ಟಣಗಳನ್ನು ನಿವಾಸವಿಲ್ಲದೆ ಹಾಳು ಮಾಡುತ್ತೇನೆ.
12ಇದನ್ನು ಗ್ರಹಿಸುವ ಜ್ಞಾನಿಯಾದ ಮನುಷ್ಯನು ಯಾರು? ಇದನ್ನು ತಿಳಿಸುವ ಹಾಗೆ ಯೆಹೋವ ದೇವರ ಬಾಯಿ ಯಾರ ಸಂಗಡ ಮಾತನಾಡಿತು? ದೇಶವು ಯಾವುದಕ್ಕಾಗಿ ನಾಶವಾಗಿ ಹಾದು ಹೋಗುವವನಿಲ್ಲದೆ ಮರುಭೂಮಿಯ ಹಾಗೆ ಹಾಳಾಯಿತು?
13ಯೆಹೋವ ದೇವರು ಹೇಳುವುದೇನೆಂದರೆ, “ನಾನು ಅವರ ಮುಂದೆ ಇಟ್ಟ ನನ್ನ ನಿಯಮವನ್ನು ಅವರು ಬಿಟ್ಟು ನನ್ನ ಶಬ್ದಕ್ಕೆ ಕಿವಿಗೊಡದೆ ಅದರಲ್ಲಿ ನಡೆಯದೆ,
14ತಮ್ಮ ಹೃದಯದ ಕಾಠಿಣ್ಯದ ಪ್ರಕಾರವಾಗಿಯೂ, ತಮ್ಮ ಪಿತೃಗಳು ಅವರಿಗೆ ಬೋಧಿಸಿದ ಬಾಳ್ ದೇವತೆಗಳನ್ನು ಹಿಂಬಾಲಿಸಿದರು.”
15ಈ ಕಾರಣದಿಂದ ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ಅವರಿಗೆ ಹೌದು, ಈ ಜನರಿಗೆ ಮಾಚಿಪತ್ರೆಯನ್ನು ತಿನ್ನುವುದಕ್ಕೆ ಕೊಡುತ್ತೇನೆ. ವಿಷದ ನೀರನ್ನು ಅವರಿಗೆ ಕುಡಿಯಲು ಕೊಡುತ್ತೇನೆ.
16ಅವರಿಗೂ, ಅವರ ತಂದೆಗಳಿಗೂ ತಿಳಿಯದ ಇತರ ಜನಾಂಗಗಳಲ್ಲಿ ಅವರನ್ನು ಚದರಿಸುವೆನು. ಅವರನ್ನು ತೀರಿಸುವವರೆಗೆ ಖಡ್ಗವನ್ನು ಅವರ ಹಿಂದೆ ಕಳುಹಿಸುವೆನು.”
17ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, “ಆಲೋಚನೆ ಮಾಡಿರಿ; ದುಃಖಿಸುವ ಸ್ತ್ರೀಯರನ್ನು ಕರೆಯಿರಿ, ಅವರು ಬರಲಿ; ಜಾಣೆಯರನ್ನು ಕರೆಕಳುಹಿಸಿರಿ, ಅವರು ಬರಲಿ.
18ಅವರು ತ್ವರೆಪಟ್ಟು ನಮಗೋಸ್ಕರ ಗೋಳಾಟವನ್ನು ಎತ್ತಲಿ; ನಮ್ಮ ಕಣ್ಣುಗಳು ಕಣ್ಣೀರು ಸುರಿಸಲಿ; ನಮ್ಮ ರೆಪ್ಪೆಗಳು ನೀರು ಎರೆಯಲಿ.
19‘ನಾವು ಹೇಗೆ ಹಾಳಾದೆವು, ನಾವು ದೇಶವನ್ನು ಬಿಟ್ಟದ್ದರಿಂದಲೂ, ನಮ್ಮ ನಿವಾಸಗಳು ನಮ್ಮನ್ನು ಹೊರಗೆ ಹಾಕಿದ್ದರಿಂದಲೂ ಬಹಳವಾಗಿ ನಾಚಿಕೆ ಪಡುತ್ತೇವೆ, ಎಂಬ ಗೋಳಾಟದ ಶಬ್ದವು ಚೀಯೋನಿನಿಂದ ಕೇಳಿಬಂತು.’ ”
20ಆದ್ದರಿಂದ ಓ ಸ್ತ್ರೀಯರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ. ನಿಮ್ಮ ಕಿವಿಯು ಆತನ ಬಾಯಿಯ ವಾಕ್ಯವನ್ನು ಅಂಗೀಕರಿಸಲಿ. ನಿಮ್ಮ ಪುತ್ರಿಯರಿಗೆ ಗೋಳಾಟವನ್ನೂ, ನಿಮ್ಮ ನಿಮ್ಮ ನೆರೆಯವರಿಗೆ ಪ್ರಲಾಪವನ್ನೂ ಕಲಿಸಿರಿ.
21ಏಕೆಂದರೆ, ಮರಣವು ನಮ್ಮ ಕಿಟಕಿಗಳೊಳಗೆ ಏರಿ ಬಂತು. ನಮ್ಮ ಕೋಟೆಗಳಲ್ಲಿ ಸೇರಿತು. ಹೊರಗಡೆ ಮಕ್ಕಳನ್ನೂ, ಬೀದಿಗಳಲ್ಲಿ ಯೌವನಸ್ಥರನ್ನೂ ಕಡಿದು ಹಾಕುತ್ತದೆ.
22ಯೆಹೋವ ದೇವರು ನನಗೆ ಹೀಗೆಂದರು: “ ‘ಮನುಷ್ಯರ ಹೆಣಗಳು ಗೊಬ್ಬರದಂತೆ ಬಯಲಿನಲ್ಲಿ ಬೀಳುವುವು. ಧಾನ್ಯ ಕೊಯ್ಯುವವನು ಉಳಿಸಿದ ಕೈಹಿಡಿಯಂತೆ ಕೂಡಿಸುವವನಿಲ್ಲದೆ ಬೀಳುವುವು.’ ”
23ಯೆಹೋವ ದೇವರು ಹೀಗೆ ಹೇಳುತ್ತಾರೆ: “ಜ್ಞಾನಿಯು ತನ್ನ ಜ್ಞಾನದಲ್ಲಿ ಹೆಚ್ಚಳ ಪಡದಿರಲಿ. ಬಲಿಷ್ಠನು ತನ್ನ ಬಲದಲ್ಲಿ ಹೆಚ್ಚಳ ಪಡದಿರಲಿ. ಐಶ್ವರ್ಯವಂತನು ತನ್ನ ಐಶ್ವರ್ಯದಲ್ಲಿ ಹೆಚ್ಚಳ ಪಡದಿರಲಿ.
24ಆದರೆ ಹೆಚ್ಚಳ ಪಡುವವನು, ಯೆಹೋವ ದೇವರಾದ ನಾನು ಭೂಮಿಯಲ್ಲಿ ದಯೆಯನ್ನೂ, ನ್ಯಾಯವನ್ನೂ, ನೀತಿಯನ್ನೂ ನಡೆಸುವವನಾಗಿದ್ದೇನೆಂದು ಗ್ರಹಿಸಿ ತಿಳಿದುಕೊಳ್ಳುವುದರಲ್ಲಿಯೇ ಹೆಚ್ಚಳ ಪಡಲಿ. ಇವುಗಳಲ್ಲಿ ನಾನು ಸಂತೋಷಪಡುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
25–26“ಇಗೋ, ನಾನು ಸುನ್ನತಿ ಇಲ್ಲದವರ ಸಂಗಡ ಸುನ್ನತಿ ಉಳ್ಳವರೆಲ್ಲರನ್ನೂ, ಈಜಿಪ್ಟನ್ನೂ, ಯೆಹೂದವನ್ನೂ, ಎದೋಮನ್ನೂ, ಅಮ್ಮೋನನ ಮಕ್ಕಳನ್ನೂ, ಮೋವಾಬನ್ನೂ, ಮರುಭೂಮಿಯ ನಿವಾಸಿಗಳಾಗಿರುವ ಕಟ್ಟಕಡೆಯ ಮೂಲೆಯಲ್ಲಿ ಇರುವವರನ್ನೂ ನಾನು ಶಿಕ್ಷಿಸುವ ದಿವಸಗಳು ಬರುತ್ತವೆ. ಏಕೆಂದರೆ ಈ ಜನಾಂಗಗಳವರು ಸುನ್ನತಿಯಿಲ್ಲದವರು. ಇಸ್ರಾಯೇಲಿನ ಮನೆತನದವರೆಲ್ಲರೂ ಹೃದಯದಲ್ಲಿ ಸುನ್ನತಿ ಇಲ್ಲದವರಾಗಿದ್ದಾರೆ,” ಎಂದು ಯೆಹೋವ ದೇವರು ಅನ್ನುತ್ತಾರೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.