Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆರೆಮೀಯ 49

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಅಮ್ಮೋನ್ಯರನ್ನು ಕುರಿತದ್ದು: ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಸ್ರಾಯೇಲಿಗೆ ಪುತ್ರರಿಲ್ಲವೋ? ಅವನಿಗೆ ಬಾಧ್ಯಸ್ಥನಿಲ್ಲವೋ? ಮಲ್ಕಾಮ್ ದೇವತೆಯು ಗಾದನ್ನು ಬಾಧ್ಯವಾಗಿ ತೆಗೆದುಕೊಳ್ಳುವುದು ಏಕೆ? ಅವನ ಜನರು ಅದರ ಪಟ್ಟಣಗಳಲ್ಲಿ ವಾಸಮಾಡುವುದು ಏಕೆ?
2ಆದ್ದರಿಂದ ಇಗೋ, ದಿನಗಳು ಬರುವುವು,” ಎಂದು ಯೆಹೋವ ದೇವರು ಹೇಳುತ್ತಾರೆ. “ಆಗ ನಾನು ಅಮ್ಮೋನನ ಮಕ್ಕಳು ರಬ್ಬಾದಲ್ಲಿ ಯುದ್ಧದ ಆರ್ಭಟವನ್ನು ಕೇಳುವಂತೆ ಮಾಡುವೆನು; ಅದು ಹಾಳು ದಿಬ್ಬವಾಗುವುದು; ಅದಕ್ಕೆ ಸೇರಿದ ಗ್ರಾಮಗಳು ಬೆಂಕಿಯಿಂದ ಸುಟ್ಟುಹೋಗುವುವು. ಆಗ ಇಸ್ರಾಯೇಲು ತನ್ನ ಬಾಧ್ಯಸ್ಥರ ಬಾಧ್ಯವನ್ನು ಹೊಂದುವುದು,” ಎಂದು ಯೆಹೋವ ದೇವರು ಹೇಳುತ್ತಾರೆ.
3“ಹೆಷ್ಬೋನೇ ಗೋಳಾಡು; ಏಕೆಂದರೆ ಆಯಿ ಎಂಬ ನಗರ ಹಾಳಾಯಿತು; ರಬ್ಬಾದ ನಿವಾಸಿಗಳೇ ಗೋಳಾಡಿರಿ; ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ; ಪ್ರಲಾಪಿಸಿರಿ, ಬೇಲಿಗಳ ಬಳಿಯಲ್ಲಿ ಅತ್ತಿತ್ತ ಓಡಾಡಿರಿ; ಏಕೆಂದರೆ ಮಲ್ಕಾಮ್ ದೇವತೆ, ಅವನ ಯಾಜಕರು, ಅವನ ಪ್ರಧಾನರು ಒಟ್ಟಾಗಿ ಸೆರೆಗೆ ಹೋಗುವರು.
4ಹಿಂದಿರುಗು, ಹಿಂಜರಿದು ಹೋದ ಮಗಳೇ, ನನ್ನ ಬಳಿಗೆ ಬರುವವರು ಯಾರೆಂದು ಹೇಳಿ, ನಿನ್ನ ಬೊಕ್ಕಸಗಳಲ್ಲಿ ನಂಬಿಕೆ ಇಟ್ಟವಳೇ, ನಿನ್ನ ತಗ್ಗು ಹರಿದು ಹೋಗುತ್ತದಲ್ಲಾ? ತಗ್ಗುಗಳ ವಿಷಯವಾಗಿ ಏಕೆ ಹೆಚ್ಚಳ ಪಡುತ್ತೀ?
5ಇಗೋ, ನಾನು ನಿನ್ನ ಸುತ್ತಲಿರುವವರೆಲ್ಲರಿಂದ ನಿನ್ನ ಮೇಲೆ ಭಯವನ್ನು ಬರಮಾಡುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಅನ್ನುತ್ತಾರೆ. “ಆಗ ನಿಮ್ಮಲ್ಲಿ ಪ್ರತಿಯೊಬ್ಬನನ್ನೂ ಅಟ್ಟಲಾಗುವುದು; ಓಡಿಹೋದವರನ್ನು ಕೂಡಿಸುವವನು ಒಬ್ಬನೂ ಇರುವುದಿಲ್ಲ.
6“ತರುವಾಯ ಅಮ್ಮೋನನ ಮಕ್ಕಳನ್ನು ಸೆರೆಯಿಂದ ತಿರುಗಿ ತರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. ಎದೋಮ್ಯರ ಕುರಿತು ಸಂದೇಶ
7ಎದೋಮ್ಯರನ್ನು ಕುರಿತದ್ದು: ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ. “ತೇಮಾನ್‌ನಲ್ಲಿ ಇನ್ನು ಮೇಲೆ ಜ್ಞಾನವಿರುವುದಿಲ್ಲವೋ? ವಿವೇಕಿಗಳಿಂದ ಆಲೋಚನೆಯು ನಾಶವಾಯಿತೋ? ಅವರ ಜ್ಞಾನವು ಕ್ಷೀಣಿಸಿದೆಯೇ?
8ದೇದಾನಿನ ನಿವಾಸಿಗಳೇ, ಓಡಿಹೋಗಿರಿ; ತಿರುಗಿಕೊಳ್ಳಿರಿ; ಆಳವಾದ ಗುಹೆಯಲ್ಲಿ ವಾಸಮಾಡಿರಿ; ಏಕೆಂದರೆ ಏಸಾವನ ಆಪತ್ತನ್ನೂ, ನಾನು ಅವನನ್ನು ಶಿಕ್ಷಿಸುವ ಕಾಲವನ್ನೂ ಅವನ ಮೇಲೆ ಬರಮಾಡುತ್ತೇನೆ.
9ದ್ರಾಕ್ಷಿ ಕೀಳುವವರು ನಿಮ್ಮ ಬಳಿಗೆ ಬಂದರೆ ಸ್ವಲ್ಪ ದ್ರಾಕ್ಷಿಯನ್ನು ಬಿಡುವುದಿಲ್ಲವೇ? ಕಳ್ಳರು ರಾತ್ರಿ ವೇಳೆಯಲ್ಲಿ ನುಗ್ಗಿದರೆ ತಮಗೆ ಸಾಕಾಗುವವರೆಗೂ ಕದಿಯುವುದಿಲ್ಲವೇ?
10ಆದರೆ ನಾನು ಏಸಾವನನ್ನು ಬರಿದು ಮಾಡಿದ್ದೇನೆ; ಅದರ ರಹಸ್ಯ ಸ್ಥಳಗಳನ್ನು ತೆರೆದಿದ್ದೇನೆ; ಅವನು ತನ್ನನ್ನು ತಾನೇ ಅಡಗಿಸಿಕೊಳ್ಳಲಾರನು; ಅವನ ಸಂತಾನವು ಹಾಳಾಯಿತು; ಅವನ ಸಹೋದರರೂ, ಅವನ ನೆರೆಯವರೂ, ಅವನೂ ಇಲ್ಲವಾದರು.
11ನಿನ್ನ ದಿಕ್ಕಿಲ್ಲದ ಮಕ್ಕಳನ್ನು ಬಿಡು. ನಾನೇ ರಕ್ಷಿಸುವೆನು. ನಿನ್ನ ವಿಧವೆಯರು ನನ್ನಲ್ಲಿ ನಂಬಿಕೆ ಇಡಲಿ.”
12ಏಕೆಂದರೆ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಪಾತ್ರೆಯಲ್ಲಿ ಕುಡಿಯುವುದಕ್ಕೆ ಯಾರಿಗೆ ನ್ಯಾಯ ತೀರ್ವಿಕೆ ಆಗಲಿಲ್ಲವೋ, ಅವರು ಸಹ ಕುಡಿದಿದ್ದಾರೆ; ಹಾಗಾದರೆ ನೀನು ಶುದ್ಧವಾಗಿ ಶಿಕ್ಷಿಸದೆ ಹೋಗಬೇಕು? ನೀವು ಶಿಕ್ಷಿಸದೆ ಹೋಗುವುದಿಲ್ಲ, ನಿಶ್ಚಯವಾಗಿ ಕುಡಿಯುವೆ.
13ಏಕೆಂದರೆ ಬೊಚ್ರವು ಹಾಳೂ ನಿಂದೆಯೂ ಅಡವಿಯೂ ಶಾಪವೂ ಆಗುವುದೆಂದೂ ಅದರ ಪಟ್ಟಣಗಳೆಲ್ಲಾ ಎಂದೆಂದಿಗೂ ಅಡವಿ ಸ್ಥಳಗಳಾಗುವುವೆಂದೂ, ನನ್ನ ಮೇಲೆ ಪ್ರಮಾಣ ಮಾಡಿಕೊಂಡಿದ್ದೇನೆ,” ಎಂದು ಯೆಹೋವ ದೇವರು ಅನ್ನುತ್ತಾರೆ.
14ಯೆಹೋವ ದೇವರಿಂದ ನಾನು ಸುದ್ದಿಯನ್ನು ಕೇಳಿದ್ದೇನೆ. ಅವರು ದೂತನ ಮೂಲಕ ಜನಾಂಗಗಳಿಗೆ ಹೀಗೆ ಹೇಳಿ ಕಳುಹಿಸಿದ್ದಾರೆ; “ನೀವು ಒಟ್ಟುಗೂಡಿಕೊಂಡು ಅದಕ್ಕೆ ವಿರೋಧವಾಗಿ ಬನ್ನಿರಿ, ಯುದ್ಧಕ್ಕಾಗಿ ಏಳಿರಿ!”
15“ಏಕೆಂದರೆ ಇಗೋ, ನಿನ್ನನ್ನು ಜನಾಂಗಗಳಲ್ಲಿ ಅತ್ಯಲ್ಪನನ್ನಾಗಿಯೂ, ಜನರ ತಿರಸ್ಕಾರಕ್ಕೆ ಈಡಾಗುವಂತೆಯೂ ಮಾಡುವೆನು.
16ಬಂಡೆಯ ಬಿರುಕುಗಳಲ್ಲಿ ವಾಸಮಾಡುವವನೇ, ಉನ್ನತದಲ್ಲಿ ನಿವಾಸಮಾಡಿಕೊಂಡವನೇ, ನಿನ್ನ ಭಯಂಕರವೂ ನಿನ್ನ ಹೃದಯದ ಗರ್ವವೂ ನಿನ್ನನ್ನು ಮೋಸಗೊಳಿಸಿದೆ. ನೀನು ಹದ್ದಿನಂತೆ ನಿನ್ನ ಗೂಡನ್ನು ಎತ್ತರ ಸ್ಥಳದಲ್ಲಿ ಕಟ್ಟಿದರೂ, ಅಲ್ಲಿಂದ ನಿನ್ನನ್ನು ಇಳಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
17“ಎದೋಮು ಸಹ ಹಾಳಾಗುವುದು; ಅದರ ಬಳಿಯಲ್ಲಿ ಹಾದುಹೋಗುವವರೆಲ್ಲರು ಅದರ ಎಲ್ಲಾ ಬಾಧೆಗಳ ನಿಮಿತ್ತ ವಿಸ್ಮಯಪಟ್ಟು, ಅಪಹಾಸ್ಯ ಮಾಡುವರು.
18ನಾನು ಕೆಡವಿದ ಸೊದೋಮ್ ಗೊಮೋರ ಪಟ್ಟಣಗಳಲ್ಲಿಯೂ, ಅವುಗಳ ಸುತ್ತಣ ಪಟ್ಟಣಗಳಲ್ಲಿಯೂ ಹೇಗೋ ಹಾಗೆಯೇ, ಎದೋಮಿನಲ್ಲಿಯೂ ಯಾರೂ ವಾಸಮಾಡುವುದಿಲ್ಲ; ಅದರಲ್ಲಿ ಯಾವ ನರಪ್ರಾಣಿಯೂ ತಂಗುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
19“ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ದಟ್ಟ ಅಡವಿಯಿಂದ ಬಲವಾದ ಗೋಮಾಳಕ್ಕೆ ವಿರೋಧವಾಗಿ ಏರಿ ಬರುವನು; ಆದರೆ ನಾನು ಕ್ಷಣಮಾತ್ರದಲ್ಲಿ ಅವರನ್ನು ಅಲ್ಲಿಂದ ದೂರವಾಗಿ ಓಡಿಸಿಬಿಡುವೆನು. ಅದನ್ನು ಕಾಯುವುದಕ್ಕೆ ನಾನು ಆರಿಸಿಕೊಂಡವನನ್ನೇ ನೇಮಿಸುವೆನು. ನನಗೆ ಸಮಾನನು ಯಾರು? ನನ್ನನ್ನು ನ್ಯಾಯವಿಚಾರಣೆಗೆ ಕರೆಯುವವನು ಯಾರು? ನನಗೆ ಎದುರಾಗಿ ನಿಲ್ಲತಕ್ಕ ಕುರುಬನು ಯಾರು?”
20ಆದ್ದರಿಂದ ಯೆಹೋವ ದೇವರು ಎದೋಮಿಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೂ, ತೇಮಾನಿನ ನಿವಾಸಿಗಳಿಗೆ ವಿರೋಧವಾಗಿ ಮಾಡಿದ ಯೋಜನೆಗಳನ್ನೂ ಕೇಳಿರಿ. ಕಾಡುಮೃಗಗಳು ನಿಶ್ಚಯವಾಗಿ, ಹಿಂಡಿನ ಮರಿಗಳನ್ನು ಎಳೆದುಕೊಂಡು ಹೋಗುವುವು. ಖಂಡಿತವಾಗಿ, ಹುಲ್ಲುಗಾವಲು ಅವುಗಳ ನಾಶನಕ್ಕಾಗಿ ಬೆದರುವುದು.
21ಎದೋಮ್ಯರು ತಟ್ಟನೆ ಬೀಳುವ ಶಬ್ದದಿಂದ ಭೂಮಿಯು ಕಂಪಿಸುವುದು. ಆಗ ಉಂಟಾಗುವ ಗೋಳು ಕೆಂಪು ಸಮುದ್ರದವರೆಗೂ ಪ್ರತಿಧ್ವನಿಸುವುದು.
22ಇಗೋ, ಅವನು ಹದ್ದಿನಂತೆ ಹಾರುವನು; ಬೊಚ್ರದ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು; ಎದೋಮಿನ ಪರಾಕ್ರಮಶಾಲಿಗಳು ಹೃದಯವು ಆ ದಿವಸದಲ್ಲಿ ಪ್ರಸವ ವೇದನೆಯುಳ್ಳ ಸ್ತ್ರೀಯ ಹೃದಯದ ಹಾಗೆ ಇರುವುದು. ದಮಸ್ಕದ ವಿಷಯವಾಗಿ ಸಂದೇಶ
23ದಮಸ್ಕದ ವಿಷಯವಾಗಿ: “ಹಮಾತ್ ಮತ್ತು ಅರ್ಪಾದ್ ನಗರಗಳು ಆಶಾಭಂಗಗೊಂಡಿವೆ, ಅವು ಕೆಟ್ಟ ಸುದ್ದಿಯನ್ನು ಕೇಳಿ ಅಧೈರ್ಯಪಟ್ಟಿವೆ; ಸಮುದ್ರದಂತೆ ಕಳವಳಪಡುತ್ತದೆ; ಅದು ಸುಮ್ಮನಿರಲಾರದು.
24ದಮಸ್ಕವು ನಿತ್ರಾಣವಾಯಿತು; ಓಡಿಹೋಗುವುದಕ್ಕೆ ತಿರುಗಿಕೊಳ್ಳುತ್ತದೆ; ಭಯವು ಅದನ್ನು ಹಿಡಿದುಕೊಂಡಿದೆ; ಹೆರುವ ಸ್ತ್ರೀಯ ಹಾಗೆ ಸಂಕಟವೂ, ವೇದನೆಗಳೂ ಅದನ್ನು ಹಿಡಿದಿವೆ.
25ಹೊಗಳಿಕೆಯ ಪಟ್ಟಣವೂ ನನ್ನ ಸಂತೋಷದ ಪಟ್ಟಣವೂ ಬಿಡಲಾಗಿದೆ ಅಲ್ಲವೋ?
26ಆದ್ದರಿಂದ ಅದರ ಯೌವನಸ್ಥರು ಅದರ ಚೌಕಗಳಲ್ಲಿ ಬೀಳುವರು; ಯುದ್ಧಭಟರೆಲ್ಲರೂ ಆ ದಿವಸದಲ್ಲಿ ಕಡಿದುಹಾಕಲಾಗುವರು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
27“ಏಕೆಂದರೆ ನಾನು ದಮಸ್ಕದ ಗೋಡೆಯಲ್ಲಿ ಬೆಂಕಿಯನ್ನು ಹಚ್ಚುತ್ತೇನೆ; ಅದು ಬೆನ್ಹದದನ ಅರಮನೆಗಳನ್ನು ತಿಂದುಬಿಡುವುದು.” ಕೇದಾರಿನ ಹಾಗೂ ಹಾಚೋರಿನ ವಿಷಯವಾಗಿ ಸಂದೇಶ
28ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ದಾಳಿಮಾಡಿದ ಕೇದಾರ್ ಹಾಗೂ ಹಾಚೋರ್ ರಾಜ್ಯಗಳನ್ನು ಕುರಿತದ್ದು: ಯೆಹೋವ ದೇವರು ಹೀಗೆ ಹೇಳುತ್ತಾರೆ, “ಏಳಿರಿ, ಕೇದಾರಿನ ಬಳಿಗೆ ಏರಿ ಹೋಗಿರಿ. ಪೂರ್ವದಿಕ್ಕಿನ ಮನುಷ್ಯರನ್ನು ಸುಲಿದುಕೊಳ್ಳಿರಿ.
29ಅವರ ಗುಡಾರಗಳನ್ನೂ, ಅವರ ಮಂದೆಗಳನ್ನೂ ತೆಗೆದುಕೊಳ್ಳುವರು. ಅವರ ಗುಡಾರದ ಪರದೆಗಳನ್ನೂ, ಅವರ ಎಲ್ಲಾ ಸಾಮಾನುಗಳನ್ನೂ, ಅವರ ಒಂಟೆಗಳನ್ನೂ ವಶಮಾಡಿಕೊಳ್ಳುವರು; ಸುತ್ತಲೂ ಭಯ, ಎಂದು ಅವರಿಗೆ ಕೂಗುವರು.
30“ಹಾಚೋರಿನ ನಿವಾಸಿಗಳೇ, ಓಡಿಹೋಗಿರಿ, ದೂರಕ್ಕೆ ಹೋಗಿ ಬಿಡಿರಿ, ಆಳವಾದ ಗುಹೆಯಲ್ಲಿ ವಾಸವಾಗಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ. ಏಕೆಂದರೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ನಿಮಗೆ ವಿರೋಧವಾಗಿ ಒಳಸಂಚು ಮಾಡಿದ್ದಾನೆ; ನಿಮಗೆ ವಿರೋಧವಾಗಿ ಯೋಜನೆಯನ್ನು ಮಾಡಿದ್ದಾನೆ.
31“ಏಳಿರಿ, ಭದ್ರವಾಗಿ ವಾಸಿಸುವ ಸುಖವುಳ್ಳ ಜನಾಂಗದ ಬಳಿಗೆ ಹೋಗಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ. “ಅದಕ್ಕೆ ಬಾಗಿಲುಗಳು ಇಲ್ಲ; ಅಗುಳಿಗಳು ಇಲ್ಲ; ಅದರ ಜನರು ಅಪಾಯದಿಂದ ದೂರ ವಾಸಿಸುತ್ತಾರೆ.
32ಅವರ ಒಂಟೆಗಳು ಕೊಳ್ಳೆಯಾಗುವುವು; ಅವರ ದನಗಳ ಸಮೂಹವು ಸುಲಿಗೆಯಾಗುವುದು; ಕಟ್ಟಕಡೆಯ ಮೂಲೆಗಳಲ್ಲಿ ಇರುವವರನ್ನು ಎಲ್ಲಾ ದಿಕ್ಕುಗಳಿಗೂ ಚದರಿಸುತ್ತೇನೆ; ಸರ್ವಕಡೆಯಿಂದ ಅವರ ಮೇಲೆ ಆಪತ್ತನ್ನು ತರಿಸುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
33ಹಾಚೋರು ನರಿಗಳ ನಿವಾಸವೂ, ಎಂದೆಂದಿಗೂ ಹಾಳಾದ ಸ್ಥಳವೂ ಆಗುವುದು. ಅಲ್ಲಿ ಯಾವನಾದರೂ ವಾಸಮಾಡುವುದಿಲ್ಲ. ಯಾವ ನರಪುತ್ರನಾದರೂ ಅಲ್ಲಿ ತಂಗುವುದಿಲ್ಲ. ಏಲಾಮ್ ಕುರಿತಾದ ಸಂದೇಶ
34ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಆರಂಭದಲ್ಲಿ ಪ್ರವಾದಿಯಾದ ಯೆರೆಮೀಯನಿಗೆ ಯೆಹೋವ ದೇವರಿಂದ ಏಲಾಮಿಗೆ ವಿರೋಧವಾಗಿ ಉಂಟಾದ ವಾಕ್ಯವು:
35ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಇಗೋ, ನಾನು ಏಲಾಮಿನ ಬಿಲ್ಲನ್ನೂ, ಅವರ ಪರಾಕ್ರಮವನ್ನೂ, ಶ್ರೇಷ್ಠತ್ವವನ್ನೂ ಮುರಿಯುತ್ತೇನೆ
36ಆಕಾಶದ ನಾಲ್ಕು ದಿಕ್ಕುಗಳಿಂದ ಏಲಾಮಿನ ಮೇಲೆ ನಾಲ್ಕು ಗಾಳಿಗಳನ್ನು ತಂದು, ಅವರನ್ನು ಆ ಎಲ್ಲಾ ದಿಕ್ಕುಗಳ ಕಡೆಗೆ ಚದರಿಸುವೆನು; ಏಲಾಮಿನಿಂದ ಓಡಿಸಲಾದವರು ಸೇರದ ಜನಾಂಗವು ಇರುವುದಿಲ್ಲ.
37ಏಕೆಂದರೆ ಏಲಾಮನ್ನು ಅವರ ಶತ್ರುಗಳ ಮುಂದೆಯೂ, ಅವರ ಪ್ರಾಣವನ್ನು ಹುಡುಕುವವರ ಮುಂದೆಯೂ ಹೆದರುವಂತೆ ಮಾಡುವೆನು; ಅವರ ಮೇಲೆ ಕೇಡನ್ನೂ, ನನ್ನ ಕೋಪದ ಉಗ್ರವನ್ನೂ ಬರಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ಅವನನ್ನು ಮುಗಿಸಿಬಿಡುವವರೆಗೆ ಖಡ್ಗವನ್ನು ಅವರ ಹಿಂದೆ ಕಳುಹಿಸುವೆನು.
38ಇದಲ್ಲದೆ ಏಲಾಮಿನಲ್ಲಿ ನನ್ನ ಸಿಂಹಾಸನವನ್ನಿಟ್ಟು, ಅದರೊಳಗಿಂದ ಅರಸನನ್ನೂ, ಪ್ರಧಾನರನ್ನೂ ನಾಶಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
39“ಆದಾಗ್ಯೂ ಅಂತ್ಯ ದಿವಸಗಳಲ್ಲಿ ಆಗುವುದೇನೆಂದರೆ, ನಾನು ಏಲಾಮಿನ ಸಮೃದ್ಧಿಯನ್ನು ತಿರುಗಿ ತರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.