Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆರೆಮೀಯ 36

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ನಾಲ್ಕನೆಯ ವರ್ಷದಲ್ಲಿ ಯೆರೆಮೀಯನಿಗೆ ಯೆಹೋವ ದೇವರಿಂದ ಈ ವಾಕ್ಯವು ಬಂದಿತು:
2“ಗ್ರಂಥದ ಸುರುಳಿಯನ್ನು ತೆಗೆದುಕೊಂಡು ನಾನು ಇಸ್ರಾಯೇಲ್, ಯೆಹೂದ ಮತ್ತು ಸಕಲ ಜನಾಂಗಗಳ ವಿರೋಧವಾಗಿಯೂ ನಿನ್ನ ಸಂಗಡ ಮಾತನಾಡಿದ ದಿನದಿಂದ, ಯೋಷೀಯನ ದಿವಸಗಳು ಮೊದಲುಗೊಂಡು ಈ ದಿವಸದವರೆಗೂ ನಿನಗೆ ಹೇಳಿದ ವಾಕ್ಯಗಳನ್ನೆಲ್ಲಾ ಅದರಲ್ಲಿ ಬರೆ.
3ಒಂದು ವೇಳೆ ಯೆಹೂದದ ಮನೆತನದವರು ನಾನು ಅವರಿಗೆ ಮಾಡುವುದಕ್ಕೆ ನೆನಸುವ ಕೇಡನ್ನೆಲ್ಲಾ ಕೇಳಿ ನಾನು ಅವರ ಅಕ್ರಮವನ್ನೂ, ಅವರ ಪಾಪವನ್ನೂ ಮನ್ನಿಸುವ ಹಾಗೆ ತಮ್ಮ ತಮ್ಮ ಮಾರ್ಗಗಳನ್ನು ಬಿಟ್ಟು ತಿರುಗಿಕೊಂಡಾರು,” ಎಂದನು.
4ಆಗ ಯೆರೆಮೀಯನು ನೇರೀಯನ ಮಗ ಬಾರೂಕನನ್ನು ಕರೆದನು. ಬಾರೂಕನು ಯೆರೆಮೀಯನ ಬಾಯಿಂದ ಯೆಹೋವ ದೇವರು ಅವನಿಗೆ ಹೇಳಿದ್ದ ಮಾತುಗಳನ್ನೆಲ್ಲಾ ಕೇಳಿ, ಗ್ರಂಥದ ಸುರುಳಿಯನ್ನು ಬರೆದನು.
5ಆಮೇಲೆ ಯೆರೆಮೀಯನು ಬಾರೂಕನಿಗೆ ಆಜ್ಞಾಪಿಸಿದ್ದೇನೆಂದರೆ, “ನಾನು ಇಲ್ಲಿ ಬಂಧಿಸಲಾಗಿದ್ದೇನೆ. ಯೆಹೋವ ದೇವರ ಆಲಯಕ್ಕೆ ಹೋಗಲಾರೆನು.
6ಆದ್ದರಿಂದ ನೀನು ಹೋಗಿ ನನ್ನ ಬಾಯಿಂದ ಕೇಳಿ, ನೀನು ಬರೆದು ಸುರುಳಿಯಲ್ಲಿ ಯೆಹೋವ ದೇವರ ಆಲಯದೊಳಗೆ ಉಪವಾಸದ ದಿವಸದಲ್ಲಿ ಯೆಹೋವ ದೇವರ ವಾಕ್ಯಗಳನ್ನು ಜನರಿಗೆ ಕೇಳುವಂತೆ ಓದಿ ಹೇಳು ಮತ್ತು ತಮ್ಮ ಪಟ್ಟಣಗಳಿಂದ ಬರುವ ಯೆಹೂದದವರೆಲ್ಲರೂ ಕೇಳುವಂತೆಯೂ ಅವುಗಳನ್ನು ಓದಿ ಹೇಳಬೇಕು.
7ಒಂದು ವೇಳೆ ಅವರ ವಿಜ್ಞಾಪನೆ ಯೆಹೋವ ದೇವರ ಮುಂದೆ ಬಂದೀತು. ಅವರು ತಮ್ಮ ತಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ತಿರುಗಿಕೊಂಡಾರು. ಏಕೆಂದರೆ ಯೆಹೋವ ದೇವರು ಈ ಜನರಿಗೆ ವಿರೋಧವಾಗಿ ಪ್ರಕಟಿಸಿರುವ ಕೋಪವೂ, ಉರಿಯೂ ಅಪಾರವಾಗಿದೆ.”
8ಆಗ ನೇರೀಯನ ಮಗ ಬಾರೂಕನು ಪ್ರವಾದಿಯಾದ ಯೆರೆಮೀಯನು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿ, ಸುರುಳಿಯಲ್ಲಿನ ಯೆಹೋವ ದೇವರ ವಾಕ್ಯಗಳನ್ನು ಯೆಹೋವ ದೇವರ ಆಲಯದಲ್ಲಿ ಓದಿದನು.
9ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ಐದನೆಯ ವರ್ಷದ ಒಂಬತ್ತನೆಯ ತಿಂಗಳಲ್ಲಿ ಅವರು ಯೆರೂಸಲೇಮಿನಲ್ಲಿರುವ ಎಲ್ಲಾ ಜನರಿಗೂ, ಯೆಹೂದದ ಪಟ್ಟಣಗಳಿಂದ ಯೆರೂಸಲೇಮಿಗೆ ಬಂದ ಜನರೆಲ್ಲರಿಗೂ ಯೆಹೋವ ದೇವರ ಸನ್ನಿಧಿಯಲ್ಲಿ ಉಪವಾಸವನ್ನು ಸಾರಿದನು.
10ಆಗ ಬಾರೂಕನು ಪುಸ್ತಕದಿಂದ ಯೆರೆಮೀಯನ ವಾಕ್ಯಗಳನ್ನು ಯೆಹೋವ ದೇವರ ಆಲಯದಲ್ಲಿ ಲೇಖಕನಾಗಿರುವ ಶಾಫಾನನ ಮಗನಾಗಿರುವ ಗೆಮರೀಯನ ಕೊಠಡಿಯಲ್ಲಿ ಮೇಲಿನ ಅಂಗಳದಲ್ಲಿ, ಯೆಹೋವ ದೇವರ ಆಲಯದ ಹೊಸ ಬಾಗಿಲಿನ ಪ್ರವೇಶದಲ್ಲಿ ಎಲ್ಲಾ ಜನರು ಕೇಳುವಂತೆ ಓದಿ ಹೇಳಿದನು.
11ಶಾಫಾನನ ಮೊಮ್ಮಗನೂ, ಗೆಮರೀಯನ ಮಗನೂ ಆದ ಮೀಕಾಯನು ಸುರುಳಿಯಿಂದ ಓದಲಾದ ಯೆಹೋವ ದೇವರ ವಾಕ್ಯಗಳನ್ನು ಕೇಳಿದನು. ಅಲ್ಲಿಂದ ಅರಮನೆಯಲ್ಲಿದ್ದ ಲೇಖಕನ ಕೊಠಡಿಗೆ ಇಳಿದು ಹೋದನು.
12ಅಲ್ಲಿ ಲೇಖಕ ಎಲೀಷಾಮನು, ಶೆಮಾಯನ ಮಗ ದೆಲಾಯನು, ಅಕ್ಬೋರನ ಮಗ ಎಲ್ನಾಥಾನನು, ಶಾಫಾನನ ಮಗ ಗೆಮರೀಯನು, ಹನನ್ಯನ ಮಗ ಚಿದ್ಕೀಯನು ಹೀಗೆ ರಾಜ್ಯಾಧಿಕಾರಿಗಳೆಲ್ಲರೂ ಕುಳಿತುಕೊಂಡಿದ್ದರು.
13ಆಗ ಮೀಕಾಯನು ಅವರಿಗೆ ಬಾರೂಕನು ಆ ಪುಸ್ತಕವನ್ನು ಜನರಿಗೆ ಓದಿ ಹೇಳಿದಾಗ, ತಾನು ಕೇಳಿದ ವಾಕ್ಯಗಳನ್ನೆಲ್ಲಾ ತಿಳಿಸಿದನು.
14ಅಧಿಕಾರಿಗಳೆಲ್ಲರು ಸೇರಿ ನೆತನ್ಯನ ಮಗನೂ, ಶೆಲೆಮ್ಯನ ಮೊಮ್ಮಗನೂ, ಕೂಷಿಯ ಮರಿಮಗನೂ ಆದ ಯೆಹೂದಿಯನ್ನು ಬಾರೂಕನ ಬಳಿಗೆ ಕಳುಹಿಸಿದನು. “ನೀನು ಜನರ ಮುಂದೆ ಓದಿದ ಸುರುಳಿಯನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಬಾ,” ಎಂದು ಹೇಳಿ ಕಳುಹಿಸಿದರು. ಅಂತೆಯೇ ನೇರೀಯನ ಮಗ ಬಾರೂಕನು ಸುರುಳಿಯನ್ನು ತನ್ನ ಕೈಯಲ್ಲೆ ತೆಗೆದುಕೊಂಡು ಅವರ ಬಳಿಗೆ ಕೂಡಲೇ ಬಂದನು.
15ಆಗ ಅವರು ಅವನಿಗೆ, “ಈಗ ಕುಳಿತುಕೊಂಡು ನಮಗೆ ಓದಿ ಹೇಳು,” ಎಂದರು. ಆಗ ಬಾರೂಕನು ಅವರಿಗೆ ಓದಿ ಹೇಳಿದನು.
16ಆಗ ಅವರು ಆ ವಾಕ್ಯಗಳನ್ನೆಲ್ಲಾ ಕೇಳಿದ ಮೇಲೆ ಒಬ್ಬರಿಗೊಬ್ಬರು ಹೆದರಿಕೊಂಡು, “ನಾವು ನಿಶ್ಚಯವಾಗಿ ಈ ವಾಕ್ಯಗಳನ್ನೆಲ್ಲಾ ಅರಸನಿಗೆ ತಿಳಿಸುತ್ತೇವೆ,” ಎಂದು ಬಾರೂಕನಿಗೆ ಹೇಳಿದರು.
17ಅವರು ಬಾರೂಕನಿಗೆ, “ನೀನು ಅವನ ಬಾಯಿಂದ ಈ ವಾಕ್ಯಗಳನ್ನೆಲ್ಲಾ ಹೇಗೆ ಬರೆದೆ, ನಮಗೆ ತಿಳಿಸು,” ಎಂದರು.
18ಆಗ ಬಾರೂಕನು ಅವರಿಗೆ, “ಅವನು ಈ ವಾಕ್ಯಗಳನ್ನೆಲ್ಲಾ ನನಗೆ ಹೇಳಿಕೊಟ್ಟನು. ನಾನು ಅವುಗಳನ್ನು ಮಸಿಯಿಂದ ಸುರುಳಿಯಲ್ಲಿ ಬರೆದೆನು,” ಎಂದನು.
19ಆಗ ಪ್ರಧಾನರು ಬಾರೂಕನಿಗೆ, “ನೀನೂ, ಯೆರೆಮೀಯನೂ ಹೋಗಿ ಅಡಗಿಕೊಳ್ಳಿರಿ; ನೀವು ಎಲ್ಲಿದ್ದೀರೆಂಬುದು ಯಾರಿಗೂ ಗೊತ್ತಾಗಬಾರದು,” ಎಂದರು.
20ಆಮೇಲೆ ಅವರು ಅರಸನ ಬಳಿಗೆ ಅಂಗಳಕ್ಕೆ ಹೋದರು; ಆದರೆ ಆ ಸುರುಳಿಯನ್ನು ಲೇಖಕನಾದ ಎಲೀಷಾಮನ ಕೊಠಡಿಯಲ್ಲಿ ಇಟ್ಟುಬಿಟ್ಟರು ಮತ್ತು ಅರಸನಿಗೆ ಆ ವಾಕ್ಯಗಳನ್ನೆಲ್ಲಾ ಹೇಳಿದರು.
21ಹೀಗೆ ಅರಸನು ಯೆಹೂದಿಯನ್ನು, ಆ ಸುರುಳಿಯನ್ನು ತೆಗೆದುಕೊಂಡು ಬರುವ ಹಾಗೆ ಕಳುಹಿಸಿದನು; ಅವನು ಅದನ್ನು ಲೇಖಕನಾದ ಎಲೀಷಾಮನ ಕೊಠಡಿಯೊಳಗಿಂದ ತೆಗೆದುಕೊಂಡನು. ಯೆಹೂದಿಯು ಅದನ್ನು ಅರಸನಿಗೂ, ಅರಸನ ಬಳಿಯಲ್ಲಿ ನಿಂತ ಎಲ್ಲಾ ಪ್ರಧಾನರಿಗೂ ಓದಿ ಹೇಳಿದನು.
22ಆಗ ಒಂಬತ್ತನೆಯ ತಿಂಗಳಿನ ಅರಸನು ಚಳಿಗಾಲದ ಮನೆಯಲ್ಲಿ ಕುಳಿತುಕೊಂಡಿದ್ದನು; ಅವನ ಮುಂದೆ ಅಗ್ಗಿಷ್ಟಿಕೆಯಲ್ಲಿ ಬೆಂಕಿ ಉರಿಯುತ್ತಿತ್ತು.
23ಆಗ ಯೆಹೂದಿಯು ಬರವಣಿಗೆಯ ಮೂರು ನಾಲ್ಕು ಪುಟಗಳನ್ನು ಓದಿದ ಮೇಲೆ ಅದನ್ನು ಚೂರಿಯಿಂದ ಕೊಯ್ದು, ಅಗ್ಗಿಷ್ಟಿಕೆಯಲ್ಲಿದ್ದ ಬೆಂಕಿಯೊಳಗೆ ಸುರುಳಿಯನ್ನೆಲ್ಲಾ ಅಗ್ಗಿಷ್ಟಿಕೆಯ ಬೆಂಕಿಯಲ್ಲಿ ಸುಟ್ಟುಹೋಗುವವರೆಗೂ ಹಾಕಿಬಿಟ್ಟನು.
24ಈ ವಾಕ್ಯಗಳನ್ನೆಲ್ಲಾ ಕೇಳಿದ ಅರಸನಾದರೂ, ಅವರ ಸೇವಕರಾದ ಒಬ್ಬರಾದರೂ ಹೆದರಲಿಲ್ಲ.
25ಹೀಗಾದರೂ ಎಲ್ನಾಥಾನನೂ, ದೆಲಾಯನೂ, ಗೆಮರೀಯನೂ ಆ ಸುರುಳಿಯನ್ನು ಸುಡಬಾರದೆಂದು ಅರಸನಿಗೆ ಬಿನ್ನಹ ಮಾಡಿದರು; ಆದರೆ ಅವನು ಅವರಿಗೆ ಕಿವಿಗೊಡಲಿಲ್ಲ.
26ಆದರೆ ಅರಸನು ರಾಜಪುತ್ರ ಯೆರಹ್ಮೇಲನಿಗೂ, ಅಜ್ರಿಯೇಲನ ಮಗನಾದ ಸೆರಾಯನಿಗೂ, ಅಬ್ದೆಯೇಲನ ಮಗ ಶೆಲೆಮ್ಯನಿಗೂ, ಲೇಖಕನಾದ ಬಾರೂಕನನ್ನೂ, ಪ್ರವಾದಿಯಾದ ಯೆರೆಮೀಯನನ್ನೂ ಹಿಡಿಯಬೇಕೆಂದು ಆಜ್ಞಾಪಿಸಿದನು. ಆದರೆ ಯೆಹೋವ ದೇವರು ಅವರನ್ನು ಅಡಗಿಸಿದ್ದರು.
27ಅರಸನು ಆ ಸುರುಳಿಯನ್ನು ಬಾರೂಕನು ಯೆರೆಮೀಯನ ಬಾಯಿಂದ ಬರೆದಿದ್ದ ವಾಕ್ಯಗಳನ್ನೂ, ಸುಟ್ಟ ಮೇಲೆ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಬಂದಿತು:
28“ನೀನು ಮತ್ತೊಂದು ಸುರುಳಿಯನ್ನು ತೆಗೆದುಕೊಂಡು ಯೆಹೂದದ ಅರಸನಾದ ಯೆಹೋಯಾಕೀಮನು ಸುಟ್ಟ ಮೊದಲನೆಯ ಸುರುಳಿಯಲ್ಲಿದ್ದ ಮುಂಚಿನ ವಾಕ್ಯಗಳನ್ನೆಲ್ಲಾ ಅದರಲ್ಲಿ ಬರೆ.
29ಯೆಹೂದದ ಅರಸನಾದ ಯೆಹೋಯಾಕೀಮನ ವಿಷಯದಲ್ಲಿ ಹೀಗೆ ಬರೆಯಿಸು, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: “ಬಾಬಿಲೋನಿನ ಅರಸನು ನಿಶ್ಚಯವಾಗಿ ಬಂದು ಈ ದೇಶವನ್ನು ನಾಶಮಾಡಿ, ಮನುಷ್ಯರನ್ನೂ, ಮೃಗಗಳನ್ನೂ ಅದರೊಳಗಿಂದ ಹಾಳು ಮಾಡುವುದು ಖಂಡಿತ, ಎಂದು ಇದರಲ್ಲಿ ಏಕೆ ಬರೆದಿದ್ದೀ?” ಎಂದು ಹೇಳಿ ನೀನು ಈ ಸುರುಳಿಯನ್ನು ಸುಟ್ಟಿದ್ದೀ.
30ಆದ್ದರಿಂದ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಯೆಹೋವ ದೇವರು ಹೇಳುವುದೇನೆಂದರೆ: ದಾವೀದನ ಸಿಂಹಾಸನದಲ್ಲಿ ಕುಳಿತುಕೊಳ್ಳುವವನು ಅವನಿಗೆ ಇರುವುದಿಲ್ಲ. ಅವನ ಹೆಣವು ಹಗಲಿನಲ್ಲಿ ಬಿಸಿಲಿಗೂ, ರಾತ್ರಿಯಲ್ಲಿ ಹಿಮಕ್ಕೂ ಬಿಸಾಡಲಾಗುವುದು.
31ಅವನನ್ನೂ, ಅವನ ಸಂತಾನವನ್ನೂ, ಅವನ ಸೇವಕರನ್ನೂ, ಅವರ ಅಕ್ರಮಕ್ಕಾಗಿ ದಂಡಿಸುವೆನು. ಅವರ ಮೇಲೆಯೂ, ಯೆರೂಸಲೇಮಿನ ನಿವಾಸಿಗಳ ಮೇಲೆಯೂ, ಯೆಹೂದದ ಮನುಷ್ಯರ ಮೇಲೆಯೂ ನಾನು ಅವರಿಗೆ ವಿರೋಧವಾಗಿ ಮಾತಾಡಿದಂಥ ಅವರು ಕಿವಿಗೊಡದಂಥ ಕೇಡನ್ನೆಲ್ಲಾ ಬರಮಾಡುವೆನು.’ ”
32ಆಗ ಯೆರೆಮೀಯನು ಮತ್ತೊಂದು ಸುರುಳಿಯನ್ನು ತೆಗೆದುಕೊಂಡು ನೇರೀಯನ ಮಗ ಲೇಖಕನಾದ ಬಾರೂಕನಿಗೆ ಕೊಟ್ಟನು. ಇವನು ಯೆಹೂದದ ಅರಸನಾದ ಯೆಹೋಯಾಕೀಮನು ಬೆಂಕಿಯಲ್ಲಿ ಸುಟ್ಟ ಸುರುಳಿಯ ವಾಕ್ಯಗಳನ್ನೆಲ್ಲಾ ಯೆರೆಮೀಯನ ಬಾಯಿಂದ ಬಂದ ಹಾಗೆ ಬರೆದನು. ಅವುಗಳ ಹಾಗಿರುವ ಅನೇಕ ವಾಕ್ಯಗಳು ಅವುಗಳ ಸಂಗಡ ಕೂಡಿಸಲಾದವು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.