Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆರೆಮೀಯ 3

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1“ಒಬ್ಬನು ತನ್ನ ಹೆಂಡತಿಯನ್ನು ವಿಚ್ಛೇದನಮಾಡಿದರೆ, ಅವಳು ಅವನನ್ನು ಬಿಟ್ಟು ಹೋಗಿ ಬೇರೆಯವನ ಜೊತೆ ಇದ್ದರೆ, ಅವನು ಅವಳನ್ನು ಮತ್ತೆ ಸೇರಿಸಿಕೊಳ್ಳುವನೋ? ಸೇರಿಸಿಕೊಂಡರೆ, ಆ ದೇಶವು ಸಂಪೂರ್ಣವಾಗಿ ಅಪವಿತ್ರವಾಗುವುದಿಲ್ಲವೋ? ಆದರೆ ನೀನು ನಿನ್ನ ಅನೇಕ ಪ್ರೇಮಿಗಳ ಸಂಗಡ ವೇಶ್ಯೆಯಂತೆ ಇದ್ದೀ. ನೀನು ಈಗ ನನ್ನ ಬಳಿಗೆ ಹಿಂತಿರುಗುವೆಯಾ?” ಎಂದು ಯೆಹೋವ ದೇವರು ಹೇಳುತ್ತಾರೆ.
2“ನಿನ್ನ ಕಣ್ಣುಗಳನ್ನು ಉನ್ನತ ಸ್ಥಳಗಳ ಮೇಲೆ ಎತ್ತು. ಯಾವುದರಲ್ಲಿ ನಿನ್ನನ್ನು ನೀನು ಕೆಡಿಸಿಕೊಳ್ಳಲಿಲ್ಲ? ಮರುಭೂಮಿಯಲ್ಲಿ ಅರಬೀಯನ ಹಾಗೆ ದಾರಿಗಳಲ್ಲಿ ಅವರಿಗೋಸ್ಕರ ಕೂತುಕೊಂಡಿದ್ದೀ. ಹೀಗೆ ನಿನ್ನ ವೇಶ್ಯೆತನಗಳಿಂದಲೂ, ನಿನ್ನ ಕೆಟ್ಟತನಗಳಿಂದಲೂ ದೇಶವನ್ನು ಅಪವಿತ್ರ ಮಾಡಿದ್ದೀಯೆ.
3ಆದ್ದರಿಂದ ಮಳೆಗಳು ನಿಂತುಹೋದವು, ಹಿಂಗಾರೇ ಆಗಲಿಲ್ಲ. ವೇಶ್ಯೆಯ ನೋಟ ನಿನಗಿತ್ತು. ನಾಚುವುದನ್ನು ನಿರಾಕರಿಸಿದೆ.
4ಈಗಲೂ ನನಗೆ, ‘ನನ್ನ ತಂದೆಯೇ, ನನ್ನ ಯೌವನದ ಸ್ನೇಹಿತನು ನೀನೇ,’ ಎಂದು ನೀನು ಕರೆಯುತ್ತಿರುವೆ.
5ಆತನು ನಿತ್ಯ ಕೋಪಮಾಡುವವನೋ? ಕೊನೆಯ ತನಕ ಕೋಪವನ್ನು ಇಟ್ಟುಕೊಳ್ಳುವನೋ? ಇಗೋ, ನೀನು ಹೀಗೆ ಮಾತನಾಡಿದರೇನು? ಆದರೆ ನಿನ್ನಿಂದ ಸಾಧ್ಯವಾಗುವಷ್ಟು ದುಷ್ಕೃತ್ಯಗಳನ್ನು ಮಾಡಿದ್ದಿ.” ಅವಿಶ್ವಾಸವುಳ್ಳ ಇಸ್ರಾಯೇಲರು
6ಯೆಹೋವ ದೇವರು ಅರಸನಾದ ಯೋಷೀಯನ ದಿವಸಗಳಲ್ಲಿ ನನಗೆ ಹೇಳಿದ್ದೇನೆಂದರೆ: “ಭ್ರಷ್ಟಳಾದ ಇಸ್ರಾಯೇಲು ಮಾಡಿದ್ದನ್ನು ನೀನು ನೋಡಿದೆಯೋ? ಅವಳು ಒಂದೊಂದು ಎತ್ತರವಾದ ಬೆಟ್ಟದ ಮೇಲೆಯೂ, ಒಂದೊಂದು ಹಸುರಾದ ಮರದ ಕೆಳಗೆಯೂ ಹೋಗಿ, ಅಲ್ಲಿ ವೇಶ್ಯೆತನ ಮಾಡಿದ್ದಾಳೆ.
7ಅವಳು ಇವುಗಳನ್ನೆಲ್ಲಾ ಮಾಡಿದ ಮೇಲೆ ನಾನು ನನ್ನ ಬಳಿಗೆ ತಿರುಗಿಕೋ ಎಂದೆನು. ಆದರೆ ಅವಳು ತಿರುಗಿಕೊಳ್ಳಲಿಲ್ಲ. ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಅದನ್ನು ನೋಡಿದಳು.
8ಆಗ ನಾನು ಕಂಡದ್ದೇನೆಂದರೆ, ಭ್ರಷ್ಟಳಾದ ಇಸ್ರಾಯೇಲು ವ್ಯಭಿಚಾರ ಮಾಡಿದ ಎಲ್ಲಾ ಕಾರಣಗಳ ನಿಮಿತ್ತ ನಾನು ಅವಳನ್ನು ಬಿಟ್ಟುಬಿಟ್ಟು, ತ್ಯಾಗ ಪತ್ರವನ್ನು ಕೊಟ್ಟಿದ್ದಾಗ್ಯೂ ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಭಯಪಡದೆ, ತಾನು ಕೂಡ ಹೋಗಿ ವೇಶ್ಯೆತನ ಮಾಡಿದಳು.
9ಆದದ್ದೇನೆಂದರೆ, ಅವಳ ಸೂಳೆತನದ ಸುದ್ದಿಯಿಂದ ಅವಳು ದೇಶವನ್ನು ಅಪವಿತ್ರ ಮಾಡಿ, ಕಲ್ಲುಗಳ ಮತ್ತು ಮರಗಳ ಸಂಗಡ ವ್ಯಭಿಚಾರ ಮಾಡಿದಳು.
10ಇದೆಲ್ಲಾ ಆದಾಗ್ಯೂ ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಪೂರ್ಣಹೃದಯದಿಂದಲ್ಲ, ಕಪಟದಿಂದಲೇ ನನ್ನ ಬಳಿಗೆ ತಿರುಗಿಕೊಂಡಿದ್ದಾಳೆ,” ಎಂದು ಯೆಹೋವ ದೇವರು ನುಡಿಯುತ್ತಾರೆ.
11ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಭ್ರಷ್ಟಳಾದ ಇಸ್ರಾಯೇಲ್, ದ್ರೋಹಿಯಾದ ಯೆಹೂದಕ್ಕಿಂತಲೂ ಶಿಷ್ಟಳಾಗಿ ಕಂಡುಬಂದಿದ್ದಾಳೆ.
12ನೀನು ಹೋಗಿ ಉತ್ತರ ದಿಕ್ಕಿಗೆ ಈ ಮಾತುಗಳನ್ನು ಸಾರು. “ ‘ಭ್ರಷ್ಟಳಾದ ಇಸ್ರಾಯೇಲೇ, ತಿರುಗಿಕೋ,’ ಎಂದು ಯೆಹೋವ ದೇವರು ಕರೆಯುತ್ತಾರೆ. ‘ನಾನು ನನ್ನ ಕೋಪವನ್ನು ನಿಮ್ಮ ಮೇಲೆ ಬೀಳ ಮಾಡುವುದಿಲ್ಲ. ಏಕೆಂದರೆ ನಾನು ಕರುಣಾಸಾಗರನು,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ನಾನು ಎಂದೆಂದಿಗೂ ಕೋಪವಿಟ್ಟುಕೊಳ್ಳುವುದಿಲ್ಲ.
13ನಿನ್ನ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ದ್ರೋಹ ಮಾಡಿ, ಒಂದೊಂದು ಹಸುರು ಮರದ ಕೆಳಗೆ ನಿನ್ನ ಮಾರ್ಗಗಳನ್ನು ಅನ್ಯ ದೇವರುಗಳಿಗೆ ಚದರಿಸಿ, ನನ್ನ ಶಬ್ದಕ್ಕೆ ಕಿವಿಗೊಡಲಿಲ್ಲವೆಂಬ ನಿನ್ನ ಅಕ್ರಮವನ್ನು ಮಾತ್ರ ಅರಿಕೆ ಮಾಡು,’ ” ಎಂದು ಯೆಹೋವ ದೇವರು ಹೇಳುತ್ತಾರೆ.
14“ಓ ಭ್ರಷ್ಟರಾದ ಜನರೇ, ತಿರುಗಿಕೊಳ್ಳಿರಿ,” ಎಂದು ಯೆಹೋವ ದೇವರು ನುಡಿಯುತ್ತಾರೆ. “ಏಕೆಂದರೆ, ನಾನು ನಿಮಗೆ ಪತಿ. ಪಟ್ಟಣದೊಳಗಿಂದ ಒಬ್ಬನನ್ನು, ಗೋತ್ರದೊಳಗಿಂದ ಇಬ್ಬರನ್ನು ತೆಗೆದುಕೊಂಡು, ಚೀಯೋನಿಗೆ ಕರೆದುಕೊಂಡು ಬರುವೆನು.
15ನನ್ನ ಹೃದಯಕ್ಕೆ ಸರಿಯಾದ ಪಾಲಕರನ್ನು ನಿಮಗೆ ಕೊಡುವೆನು. ಅವರು ತಿಳುವಳಿಕೆಯಿಂದಲೂ, ಬುದ್ಧಿಯಿಂದಲೂ ನಿಮ್ಮನ್ನು ಪೋಷಿಸುವರು.
16ನೀವು ದೇಶದಲ್ಲಿ ಅಭಿವೃದ್ಧಿಯಾಗಿ ಫಲವುಳ್ಳವರಾದ ಮೇಲೆ ಆ ದಿವಸಗಳಲ್ಲಿ, ‘ಯೆಹೋವ ದೇವರ ಒಡಂಬಡಿಕೆಯ ಮಂಜೂಷವು,’ ಎಂದು ಇನ್ನು ಮೇಲೆ ಅವರು ಹೇಳದಿರುವರು. ಅದು ಮನಸ್ಸಿಗೆ ಬರುವುದಿಲ್ಲ, ಯಾರು ಅದನ್ನು ಸ್ಮರಿಸುವುದಿಲ್ಲ, ಅದರ ಬಗ್ಗೆ ವಿಚಾರಿಸುವುದೂ ಇಲ್ಲ; ಇನ್ನು ಮೇಲೆ ಸರಿಯಾಗುವುದಿಲ್ಲ ಎಂದು ಯೆಹೋವ ದೇವರು ನುಡಿಯುತ್ತಾರೆ.
17ಆ ಕಾಲ ಬಂದಾಗ ಯೆರೂಸಲೇಮನ್ನೇ, ‘ಯೆಹೋವ ದೇವರ ಸಿಂಹಾಸನ,’ ಎಂದು ಕರೆಯುವರು. ನನ್ನ ನಾಮ ಮಹತ್ವದ ಸ್ಥಾನವಾದ ಯೆರೂಸಲೇಮಿಗೆ ಸಕಲ ರಾಷ್ಟ್ರಗಳವರು ನೆರೆದು ಬರುವರು. ಆಮೇಲೆ ತಮ್ಮ ದುಷ್ಟ ಹೃದಯದ ನಿಮಿತ್ತ ಹಟಮಾರಿಗಳಂತೆ ನಡೆಯಲಾರರು.
18ಆ ಕಾಲದಲ್ಲಿ ಯೆಹೂದದ ವಂಶವು ಇಸ್ರಾಯೇಲ್ ವಂಶದೊಡನೆ ಜೊತೆಯಾಗಿ ಬಾಳುವುದು. ಈ ಎರಡು ವಂಶಗಳೂ ಉತ್ತರ ಪ್ರಾಂತಗಳನ್ನು ಬಿಟ್ಟು, ನಾನು ನಿಮ್ಮ ಪೂರ್ವಜರಿಗೆ ಬಾಧ್ಯವಾಗಿ ಕೊಟ್ಟ ನಾಡಿಗೆ ಬರುವುವು.”
19ಯೆಹೋವ ದೇವರು ಹೇಳುವುದೇನೆಂದರೆ: “ಎಲೈ ಇಸ್ರಾಯೇಲ್, ನಾನು ಎಷ್ಟೋ ಸಂತೋಷದಿಂದ ನಿನ್ನನ್ನು ನನ್ನ ಪುತ್ರನೆಂದು ಭಾವಿಸಿ, ನಿನಗೆ ಮನೋಹರವಾದ ನಾಡನ್ನು ಎಂದರೆ, ಸಮಸ್ತ ರಾಷ್ಟ್ರಗಳಲ್ಲಿ ರಮಣೀಯವಾದ ಸೊತ್ತನ್ನು ಕೊಡಬೇಕು ಎಂದುಕೊಂಡಿದ್ದೆ. ನೀನು ನನ್ನನ್ನು, ‘ತಂದೆ,’ ಎಂದು ಸನ್ಮಾನಿಸಿ, ನನ್ನನ್ನು ತಪ್ಪದೆ ಹಿಂಬಾಲಿಸಿ ಬರುವೆ ಎಂದಿದ್ದೆ.
20ನಿಶ್ಚಯವಾಗಿ ಹೆಂಡತಿ ತನ್ನ ಗಂಡನನ್ನು ವಂಚಿಸಿಬಿಡುವ ಕಾರಣ, ಓ ಇಸ್ರಾಯೇಲಿನ ಮನೆತನದವರೇ, ನನಗೆ ವಂಚನೆ ಮಾಡಿದ್ದೀರಿ,” ಎಂದು ಯೆಹೋವ ದೇವರು ಹೇಳುತ್ತಾರೆ.
21ಉನ್ನತ ಸ್ಥಳಗಳ ಮೇಲೆ ಸ್ವರವು ಕೇಳಿತು. ಅವು ಇಸ್ರಾಯೇಲಿನ ಮಕ್ಕಳ ಅಳುವಿಕೆಯ ಬೇಡಿಕೆಗಳೇ. ಏಕೆಂದರೆ ಅವರು ತಮ್ಮ ಮಾರ್ಗವನ್ನು ಡೊಂಕು ಮಾಡಿ, ತಮ್ಮ ದೇವರಾದ ಯೆಹೋವ ದೇವರನ್ನು ಮರೆತುಬಿಟ್ಟಿದ್ದರು.
22“ಭ್ರಷ್ಟರಾದ ಮಕ್ಕಳೇ, ನೀವು ತಿರುಗಿಕೊಳ್ಳಿರಿ; ನಿಮ್ಮ ಭ್ರಷ್ಟತನವನ್ನು ನಾನು ಸ್ವಸ್ಥ ಮಾಡುವೆನು.” “ಇಗೋ, ನಿಮ್ಮ ಬಳಿಗೆ ಬರುತ್ತೇವೆ, ಏಕೆಂದರೆ ನೀವು ಯೆಹೋವ ದೇವರು, ನಮ್ಮ ದೇವರಾಗಿದ್ದೀರಿ.
23ನಿಶ್ಚಯವಾಗಿ ಗುಡ್ಡಗಳಿಂದಲೂ, ಬೆಟ್ಟಗಳ ಸಮೂಹದಿಂದಲೂ ನಮಗೆ ಮೋಸವಾಗಿದೆ. ನಿಶ್ಚಯವಾಗಿ ಇಸ್ರಾಯೇಲಿನ ರಕ್ಷಣೆಯು ನಮ್ಮ ದೇವರಾದ ಯೆಹೋವ ದೇವರಲ್ಲಿಯೇ ಇದೆ.
24ನಾಚಿಕೆಯಾದದ್ದು, ನಮ್ಮ ಚಿಕ್ಕತನದಿಂದ ನಮ್ಮ ತಂದೆಗಳ ಕಷ್ಟವನ್ನೂ, ಅವರ ಕುರಿಗಳನ್ನೂ, ಅವರ ದನಗಳನ್ನೂ, ಅವರ ಪುತ್ರರನ್ನೂ, ಅವರ ಪುತ್ರಿಯರನ್ನೂ ತಿಂದುಬಿಟ್ಟಿದೆ.
25ನಮ್ಮ ನಾಚಿಕೆಯಲ್ಲಿ ಮಲಗಿಕೊಳ್ಳುತ್ತೇವೆ. ನಮ್ಮ ಗಲಭೆ ನಮ್ಮನ್ನು ಮುಚ್ಚಿಕೊಳ್ಳುತ್ತದೆ. ಏಕೆಂದರೆ ನಾವೂ, ನಮ್ಮ ಪೂರ್ವಜರೂ ನಮ್ಮ ಚಿಕ್ಕತನದಿಂದ ಇಂದಿನವರೆಗೂ ನಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದೇವೆ. ನಮ್ಮ ಯೆಹೋವ ದೇವರ ಸ್ವರಕ್ಕೆ ಕಿವಿಗೊಡಲಿಲ್ಲ.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.