Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆರೆಮೀಯ 24

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು, ಯೆಹೂದದ ಅರಸನಾದ ಯೆಹೋಯಾಕೀಮನ ಮಗನಾದ ಯೆಕೊನ್ಯನನ್ನೂ, ಯೆಹೂದದ ಪ್ರಧಾನರನ್ನೂ, ಬಡಗಿಯರನ್ನೂ, ಕಮ್ಮಾರರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆಗೆ ಒಯ್ದನು. ಯೆಹೋವ ದೇವರ ದೇವಾಲಯದ ಮುಂದೆ ಇಟ್ಟಿರುವ ಎರಡು ಬುಟ್ಟಿ ಅಂಜೂರದ ಹಣ್ಣುಗಳನ್ನು ಯೆಹೋವ ದೇವರು ನನಗೆ ತೋರಿಸಿದರು.
2ಒಂದು ಬುಟ್ಟಿಯಲ್ಲಿ ಕಾಲಕ್ಕೆ ಮುಂಚೆ ಮಾಗಿದ ಹಣ್ಣುಗಳು ತುಂಬಿದ್ದವು. ಅವು ಅತ್ಯುತ್ತಮವಾದ ಅಂಜೂರದ ಹಣ್ಣುಗಳು. ಇನ್ನೊಂದು ಬುಟ್ಟಿಯಲ್ಲಿ ಯಾರೂ ತಿನ್ನಲಾಗದಷ್ಟು ಅಸಹ್ಯವಾದ ಅಂಜೂರದ ಹಣ್ಣುಗಳು ತುಂಬಿದ್ದವು.
3ಆಗ ಯೆಹೋವ ದೇವರು ನನ್ನನ್ನು, “ಯೆರೆಮೀಯನೇ, ನಿನಗೆ ಕಾಣುತ್ತಿರುವುದು ಏನು?” ಎಂದು ಕೇಳಿದರು. ನಾನು, “ಅಂಜೂರದ ಹಣ್ಣುಗಳನ್ನು ನೋಡುತ್ತಿದ್ದೇನೆ. ಒಳ್ಳೆಯ ಹಣ್ಣುಗಳು ಅತ್ಯುತ್ತಮವಾಗಿವೆ. ಕೆಟ್ಟ ಹಣ್ಣುಗಳು ಬಹಳ ಕೆಟ್ಟಿವೆ. ಯಾರೂ ತಿನ್ನಲಾಗದಷ್ಟು ಅಸಹ್ಯವಾಗಿವೆ,” ಎಂದು ಉತ್ತರಕೊಟ್ಟೆ.
4ಆಗ ಯೆಹೋವ ದೇವರು ನನಗೆ ದಯಪಾಲಿಸಿದ ಸಂದೇಶ ಇದು:
5“ಇಸ್ರಾಯೇಲರ ದೇವರಾದ ಯೆಹೋವ ದೇವರು ಹೇಳುವುದನ್ನು ಕೇಳು, ‘ನಾನು ಈ ಸ್ಥಳದಿಂದ ಬಾಬಿಲೋನಿಗೆ ಕಳುಹಿಸಿಬಿಟ್ಟು, ಅಲ್ಲಿ ಸೆರೆಯಾಳುಗಳಾಗಿರುವ ಯೆಹೂದ್ಯರು ಈ ಉತ್ತಮವಾದ ಅಂಜೂರದ ಹಣ್ಣುಗಳಂತವರು. ನಾನು ಅವರನ್ನು ಒಳ್ಳೆಯವರಂತೆ ಪರಿಗಣಿಸುತ್ತೇನೆ.
6ಏಕೆಂದರೆ ನಾನು ಅವರ ಒಳ್ಳೆಯದರ ಮೇಲೆ ನನ್ನ ದೃಷ್ಟಿಯನ್ನು ಇಟ್ಟುಕೊಳ್ಳುತ್ತೇನೆ. ಈ ದೇಶಕ್ಕೆ ಅವರನ್ನು ತಿರುಗಿ ಬರಮಾಡುವೆನು. ಕೆಡವಿಹಾಕದೆ ಅವರನ್ನು ಕಟ್ಟುವೆನು. ಕೀಳದೆ ಅವರನ್ನು ನೆಡುವೆನು.
7ನಾನೇ ಯೆಹೋವನೆಂದು ನನ್ನನ್ನು ತಿಳಿದುಕೊಳ್ಳುವುದಕ್ಕೆ ಅವರಿಗೆ ಹೃದಯವನ್ನು ಕೊಡುವೆನು. ಅವರು ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು. ಏಕೆಂದರೆ ಅವರು ತಮ್ಮ ಪೂರ್ಣಹೃದಯದಿಂದ ನನ್ನ ಬಳಿಗೆ ಹಿಂದಿರುಗಿಕೊಳ್ಳುವರು.
8“ ‘ತಿನ್ನಕೂಡದ ಹಾಗೆ ಅಷ್ಟು ಕೆಟ್ಟವುಗಳಾಗಿರುವ ಆ ಕೆಟ್ಟ ಅಂಜೂರದ ಹಣ್ಣುಗಳ ಹಾಗೆ ನಿಶ್ಚಯವಾಗಿ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ, ಅವನ ಪ್ರಧಾನರನ್ನೂ ಈ ದೇಶದಲ್ಲಿ ಉಳಿಯುವ ಯೆರೂಸಲೇಮಿನ ಶೇಷವನ್ನೂ, ಈಜಿಪ್ಟ್ ದೇಶದಲ್ಲಿ ವಾಸಿಸುವವರನ್ನೂ ಒಪ್ಪಿಸುತ್ತೇನೆ,’ ಎಂದು ಯೆಹೋವ ದೇವರು ಹೇಳುತ್ತಾರೆ.
9‘ನಾನು ಅವರನ್ನು ಅಸಹ್ಯಪಡಿಸುತ್ತೇನೆ. ನಿಂದೆಗೂ, ಗಾದೆಗೂ, ಹಾಸ್ಯಕ್ಕೂ, ಶಾಪಕ್ಕೂ ಗುರಿಮಾಡಿ ಅವರನ್ನು ಭೂಮಿಯ ಸಮಸ್ತ ರಾಜ್ಯಗಳಿಂದ ತೆಗೆದು ಕೇಡಿಗೆ ಒಪ್ಪಿಸುವೆನು.
10ನಾನು ಅವರಿಗೂ, ಅವರ ತಂದೆಗಳಿಗೂ ಕೊಟ್ಟ ದೇಶದೊಳಗಿಂದ ಅವರು ನಾಶವಾಗುವವರೆಗೂ ಖಡ್ಗವನ್ನೂ, ಕ್ಷಾಮವನ್ನೂ, ವ್ಯಾಧಿಯನ್ನೂ ಅವರಲ್ಲಿ ಕಳುಹಿಸುವೆನು.’ ”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.