Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆರೆಮೀಯ 22

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರು ಹೀಗೆ ಹೇಳುತ್ತಾನೆ: “ಯೆಹೂದದ ಅರಸನ ಮನೆಗೆ ಇಳಿದು ಹೋಗಿ, ಅಲ್ಲಿ ಈ ವಾಕ್ಯವನ್ನು ಹೇಳು:
2‘ದಾವೀದನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಯೆಹೂದದ ಅರಸನೇ, ನೀನೂ, ನಿನ್ನ ಸೇವಕರೂ ಈ ಬಾಗಿಲುಗಳಿಂದ ಪ್ರವೇಶಿಸುವ ನಿನ್ನ ಜನರೂ ಸಹಿತವಾಗಿ ಯೆಹೋವ ದೇವರ ವಾಕ್ಯವನ್ನು ಕೇಳಿರಿ.
3ಯೆಹೋವ ದೇವರು ಹೇಳುವುದೇನೆಂದರೆ: ನ್ಯಾಯವನ್ನೂ, ನೀತಿಯನ್ನೂ ನಡೆಸಿರಿ. ಸುಲಿಗೆಯಾದವನನ್ನು ಬಲಾತ್ಕಾರಿಯ ಕೈಯೊಳಗಿಂದ ತಪ್ಪಿಸಿರಿ. ಪರದೇಶಸ್ಥನಿಗೆ, ದಿಕ್ಕಿಲ್ಲದವನಿಗೆ ಮತ್ತು ವಿಧವೆಗೆ ಉಪದ್ರವವನ್ನಾದರೂ, ಬಲಾತ್ಕಾರವನ್ನಾದರೂ ಮಾಡಬೇಡಿರಿ. ಈ ಸ್ಥಳದಲ್ಲಿ ನಿರಪರಾಧದ ರಕ್ತವನ್ನು ಚೆಲ್ಲಬೇಡಿರಿ.
4ನೀವು ನಿಶ್ಚಯವಾಗಿ ಈ ಕಾರ್ಯವನ್ನು ಮಾಡಿದರೆ, ಆಗ ದಾವೀದನ ಸಿಂಹಾಸನದ ಮೇಲೆ ಕುಳಿತುಕೊಳ್ಳುವವರೂ, ರಥಗಳಲ್ಲಿಯೂ, ಕುದುರೆಗಳ ಮೇಲೆಯೂ ಸವಾರಿ ಮಾಡುವ ಅರಸರು ತಮ್ಮ ಸೇವಕರ ಮತ್ತು ತಮ್ಮ ಜನರಸಹಿತವಾಗಿ ಈ ಅರಮನೆಯ ಬಾಗಿಲುಗಳಿಂದ ಪ್ರವೇಶಿಸಿದರು.
5ಆದರೆ ನೀವು ಈ ವಾಕ್ಯಗಳನ್ನು ಕೇಳದೆ ಹೋದರೆ, ಈ ಅರಮನೆ ಹಾಳಾಗುವುದು ಎಂದು ನನ್ನ ಮೇಲೆ ಆಣೆ ಇಡುತ್ತೇನೆಂದು ಯೆಹೋವ ದೇವರು ಹೇಳುತ್ತಾರೆ.’ ”
6ಯೆಹೋವ ದೇವರು ಯೆಹೂದದ ಅರಸನ ಅರಮನೆಗೆ ಹೀಗೆ ಹೇಳುತ್ತಾರೆ: “ನೀನು ನನಗೆ ಗಿಲ್ಯಾದೂ, ಲೆಬನೋನಿನ ಗಿರಿಶೃಂಗ ಆಗಿದ್ದೀ. ಆದರೂ ನಿಶ್ಚಯವಾಗಿ ನಿನ್ನನ್ನು ಮರುಭೂಮಿಯಾಗಿಯೂ, ನಿವಾಸಿಗಳಿಲ್ಲದ ಪಟ್ಟಣಗಳನ್ನಾಗಿಯೂ ಮಾಡುವೆನು.
7ನಿನಗೆ ವಿರೋಧವಾಗಿ ತಮ್ಮ ತಮ್ಮ ಆಯುಧಗಳಿಂದ ನಾಶಮಾಡುವವರನ್ನು ಸಿದ್ಧಮಾಡುತ್ತೇನೆ. ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು ಕಡಿದು ಬೆಂಕಿಯಲ್ಲಿ ಹಾಕುವರು.
8“ಅನೇಕ ಜನಾಂಗಗಳು ಈ ಪಟ್ಟಣವನ್ನು ಹಾದುಹೋಗುವರು. ‘ಯೆಹೋವ ದೇವರು ಈ ದೊಡ್ಡ ಪಟ್ಟಣಕ್ಕೆ ಏಕೆ ಈ ಪ್ರಕಾರ ಮಾಡಿದ್ದಾರೆ?’ ಎಂದು ಒಬ್ಬರಿಗೊಬ್ಬರು ಹೇಳಿಕೊಳ್ಳುವರು.
9‘ಆಗ ಅವರು ತಮ್ಮ ದೇವರಾದ ಯೆಹೋವ ದೇವರ ಒಡಂಬಡಿಕೆಯನ್ನು ಬಿಟ್ಟು, ಬೇರೆ ದೇವರುಗಳಿಗೆ ನಮಸ್ಕರಿಸಿ ಸೇವಿಸಿದ್ದರಿಂದಲೇ,’ ಎಂದು ಅವರು ಉತ್ತರಕೊಡುವರು.”
10ಮರಣ ಹೊಂದಿದ ಅರಸನಿಗಾಗಿ ಅಳಬೇಡಿರಿ. ಅವನಿಗಾಗಿ ಗೋಳಾಡಬೇಡಿರಿ. ಹೊರಟು ಹೋದವನಿಗಾಗಿ ಬಹಳವಾಗಿ ಅಳಿರಿ. ಏಕೆಂದರೆ ಅವನು ತಿರುಗಿ ಬರುವುದೇ ಇಲ್ಲ. ತಾನು ಹುಟ್ಟಿದ ದೇಶವನ್ನು ಇನ್ನು ನೋಡುವುದೇ ಇಲ್ಲ.
11ಯೆಹೂದದ ಅರಸನಾದ ಯೋಷೀಯನ ಮಗನು ತನ್ನ ತಂದೆಯಾದ ಯೋಷೀಯನಿಗೆ ಬದಲಾಗಿ ಆಳಿದವನೂ, ಈ ಸ್ಥಳದಿಂದ ಸೆರೆಯಾಗಿ ಹೋದವನೂ ಆದ ಶಲ್ಲೂಮನನ್ನು ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ: “ಅವನು ಇಲ್ಲಿಗೆ ಇನ್ನು ಹಿಂದಿರುಗಿ ಬರುವುದೇ ಇಲ್ಲ.
12ಅವರು ಅವನನ್ನು ಸೆರೆಯಾಗಿ ಒಯ್ದ ಸ್ಥಳದಲ್ಲಿಯೇ ಸಾಯುವನು. ಅವನು ಈ ದೇಶವನ್ನು ಇನ್ನು ನೋಡುವುದಿಲ್ಲ.”
13“ಅನೀತಿಯಿಂದ ತನ್ನ ಅರಮನೆಯನ್ನು ಅನ್ಯಾಯದಿಂದ ತನ್ನ ಕೊಠಡಿಗಳನ್ನು ಕಟ್ಟಿಸಿಕೊಳ್ಳುವವನಿಗೂ, ಕೂಲಿಕೊಡದೆ ತನ್ನ ನೆರೆಯವನ ಕೈಯಿಂದ ಸುಮ್ಮನೆ ಕೆಲಸ ತೆಗೆದುಕೊಳ್ಳುವವನೂ ಕಷ್ಟ!
14ಅವನು, ‘ನಾನು ವಿಸ್ತಾರವಾದ ಅರಮನೆಯನ್ನೂ, ವಿಶಾಲವಾದ ಕೊಠಡಿಗಳನ್ನೂ ಕಟ್ಟಿಸಿಕೊಳ್ಳುವೆನೆಂದು ಹೇಳಿ.’ ಕಿಟಕಿಗಳನ್ನು ಕೊರೆದು, ದೇವದಾರಿನ ಹಲಗೆಗಳನ್ನು ಹಾಕಿ, ಕೆಂಪು ಬಣ್ಣವನ್ನು ಹಚ್ಚುವವನಿಗೂ ಕಷ್ಟ!
15“ಹೆಚ್ಚು ಹೆಚ್ಚು ದೇವದಾರುಗಳನ್ನು ಹೊಂದಲು ಅದು ನಿಮ್ಮನ್ನು ರಾಜನನ್ನಾಗಿಸುತ್ತದೆಯೇ? ನಿನ್ನ ತಂದೆ ಉಂಡು, ಕುಡಿದು ನ್ಯಾಯವನ್ನೂ, ನೀತಿಯನ್ನೂ ಮಾಡಲಿಲ್ಲವೋ? ಆಗ ಅವನಿಗೆ ಒಳ್ಳೆಯದಾಗಲಿಲ್ಲವೋ?
16ಬಡವನ ಮತ್ತು ದರಿದ್ರನ ನ್ಯಾಯವನ್ನು ತೀರಿಸಿದನು. ಆಗ ಅವನಿಗೆ ಒಳ್ಳೆಯದಾಯಿತು. ನನ್ನನ್ನು ತಿಳಿದುಕೊಳ್ಳುವುದು ಇದೇ ಅಲ್ಲವೋ?” ಎಂದು ಯೆಹೋವ ದೇವರು ಹೇಳುತ್ತಾರೆ.
17“ಆದರೆ ನಿನ್ನ ಕಣ್ಣುಗಳು, ನಿನ್ನ ಹೃದಯವು ನಿನ್ನ ದುರ್ಲಾಭದ ಮೇಲೆ ಅಪರಾಧವಿಲ್ಲದವನ ರಕ್ತ ಚೆಲ್ಲುವುದರ ಮೇಲೆ ಮತ್ತು ಪೀಡೆಯನ್ನೂ, ಬಲಾತ್ಕಾರವನ್ನೂ ಮಾಡುವುದರ ಮೇಲೆಯೇ ಹೊರತು, ಮತ್ಯಾವುದರ ಮೇಲೆಯೂ ಇರುವುದಿಲ್ಲ.”
18ಆದ್ದರಿಂದ ಯೋಷೀಯನ ಮಗ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ: “ಅವರು ಅವನನ್ನು ಕುರಿತು ಗೋಳಾಡಿ, ‘ಅಯ್ಯೋ, ನನ್ನ ಸಹೋದರನೇ, ಅಯ್ಯೋ, ನನ್ನ ಸಹೋದರಿಯೇ,’ ಎಂದು ಅನ್ನುವುದಿಲ್ಲ. ‘ಅಯ್ಯೋ, ದೊರೆಯೇ, ಅಯ್ಯೋ, ಅವನ ವೈಭವವೇ,’ ಎಂದು ಅವನನ್ನು ಕುರಿತು ಗೋಳಾಡುವುದಿಲ್ಲ.
19ಕತ್ತೆಯನ್ನು ಹೂಳಿಡುವ ಪ್ರಕಾರ ಅವನನ್ನು ಹೂಳಿಡುವರು. ಅವನನ್ನು ಎಳೆದುಕೊಂಡು ಹೋಗಿ, ಯೆರೂಸಲೇಮಿನ ಬಾಗಿಲುಗಳ ಆಚೆಗೆ ಬಿಸಾಡುವರು.”
20“ಲೆಬನೋನಿಗೆ ಹೋಗಿ ಕೂಗು, ಬಾಷಾನಿನಲ್ಲಿ ನಿನ್ನ ಸ್ವರವನ್ನೆತ್ತು, ಅಬಾರೀಮಿನಲ್ಲಿ ಮೊರೆಯಿಡು; ಏಕೆಂದರೆ ನಿನ್ನ ಜೊತೆಗಾರರು ನಾಶವಾಗಿದ್ದಾರೆ.
21ನಿನ್ನ ಏಳಿಗೆಗೆ ನಿನ್ನ ಸಂಗಡ ಮಾತನಾಡಿದೆನು. ಆದರೆ ನೀನು, ‘ನಾನು ಕೇಳುವುದಿಲ್ಲ,’ ಎಂದೆ. ನನ್ನ ಮಾತಿಗೆ ಕಿವಿಗೊಡದೆ ಇರುವುದೇ ನಿನ್ನ ಯೌವನದ ರೀತಿಯಾಗಿದೆ.
22ನಿನ್ನ ಕುರುಬರನ್ನೆಲ್ಲಾ ಗಾಳಿ ಅಟ್ಟಿಸಿಕೊಂಡು ಹೋಗುವುದು. ನಿನ್ನ ಜೊತೆಗಾರರು ಸೆರೆಗೆ ಹೋಗುವರು. ನಿಶ್ಚಯವಾಗಿ ಆಗ ನಿನ್ನ ಎಲ್ಲಾ ಕೆಟ್ಟತನದ ನಿಮಿತ್ತ ನಿನಗೆ ನಾಚಿಕೆಯೂ, ಅವಮಾನವೂ ಆಗುವುದು.
23ಓ, ‘ಲೆಬನೋನಿನಲ್ಲಿ’ ವಾಸಮಾಡುವವಳೇ, ದೇವದಾರುಗಳಲ್ಲಿ ಗೂಡು ಮಾಡಿಕೊಂಡವಳೇ, ನಿನ್ನ ಮೇಲೆ ಬೇನೆಗಳೂ, ಹೆರುವವಳಂತಿರುವ ವೇದನೆಯೂ ಬರುವಾಗ ಎಷ್ಟೋ ದುಃಖಕರವಾಗಿರುವೆ.
24“ನನ್ನ ಜೀವದಾಣೆ, ಯೆಹೋಯಾಕೀಮನ ಮಗ ಯೆಹೂದದ ಅರಸನಾದ ಕೊನ್ಯನು ನನ್ನ ಬಲಗೈಯ ಮುದ್ರೆ ಉಂಗುರವಾಗಿದ್ದರೂ, ನಿನ್ನನ್ನು ಅಲ್ಲಿಂದ ಕಿತ್ತುಹಾಕಿ,
25ನಿನ್ನ ಪ್ರಾಣವನ್ನು ಹುಡುಕುವವರ ಕೈಗೂ, ನೀನು ಹೆದರಿಕೊಂಡವರ ಕೈಗೂ ಅಂದರೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಗೆ ಹಾಗೂ ಬಾಬಿಲೋನಿಯ ಕೈಗೆ ಒಪ್ಪಿಸಿ ಬಿಡುತ್ತೇನೆ.
26ನಿನ್ನನ್ನೂ, ನಿನ್ನ ಹೆತ್ತ ತಾಯಿಯನ್ನೂ ನೀವು ಹುಟ್ಟದಿರುವ ಬೇರೆ ದೇಶದಲ್ಲಿ ಹಾಕಿಬಿಡುವೆನು. ನೀವು ಅಲ್ಲೇ ಸಾಯುವಿರಿ.
27ಆದರೆ ಅವರು ತಿರುಗಿ ಬರುವುದಕ್ಕೆ ಮನಸ್ಸು ಮಾಡುವ ದೇಶಕ್ಕೆ ಹಿಂದಿರುಗಲಾರರು,” ಎಂದು ಯೆಹೋವ ದೇವರು ಹೇಳುತ್ತಾರೆ.
28ಕೊನ್ಯನೆಂಬ ಈ ಮನುಷ್ಯನು ಹೀನವಾಗಿ ಒಡೆದುಹೋದ ಮಡಿಕೆಯೆ? ಮೆಚ್ಚುಗೆ ಇಲ್ಲದ ಪಾತ್ರೆಯೆ? ಏಕೆ ಕೊನ್ಯನೂ, ಅವನ ಸಂತಾನವೂ ಬೀದಿಪಾಲಾಗಿದ್ದಾರೆ, ತಮಗೆ ತಿಳಿಯದ ದೇಶಕ್ಕೆ ಗಡಿಪಾರಾಗಿದ್ದಾರೆ?
29ಓ ದೇಶವೇ, ದೇಶವೇ, ದೇಶವೇ, ಯೆಹೋವ ದೇವರ ವಾಕ್ಯವನ್ನು ಕೇಳು.
30ಯೆಹೋವ ದೇವರು ಹೀಗೆ ಹೇಳುತ್ತಾರೆ: “ಈ ಮನುಷ್ಯನನ್ನು ಮಕ್ಕಳಿಲ್ಲದವನೆಂದೂ, ತನ್ನ ದಿನಗಳಲ್ಲಿ ವೃದ್ಧಿಯಾಗುವ ಪುರುಷನಲ್ಲವೆಂದೂ ಬರೆಯಿರಿ. ಏಕೆಂದರೆ ಅವನ ಸಂತಾನದಲ್ಲಿ ಒಬ್ಬನಾದರೂ ದಾವೀದನ ಸಿಂಹಾಸನದಲ್ಲಿ ಕುಳಿತುಕೊಂಡು ಯೆಹೂದದಲ್ಲಿ ಆಳುವ ಹಾಗೆ ಬಾಳುವುದಿಲ್ಲ.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.