Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆರೆಮೀಯ 1

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಬೆನ್ಯಾಮೀನ್ ಸೀಮೆಗೆ ಸೇರಿ ಅನಾತೋತ್ ಊರಿನ ಯಾಜಕ ವರ್ಗದವನೂ, ಹಿಲ್ಕೀಯನ ಮಗನೂ ಆದ ಯೆರೆಮೀಯನ ಪ್ರವಾದನೆಗಳು.
2ಯೆಹೂದದ ಅರಸನೂ ಆಮೋನನ ಮಗನೂ ಆದ ಯೋಷೀಯನ ಆಳ್ವಿಕೆಯ ಹದಿಮೂರನೆಯ ವರ್ಷದಲ್ಲಿ ಯೆಹೋವ ದೇವರ ವಾಕ್ಯವು ಇವನಿಗೆ ಕೇಳಿಬಂತು.
3ಅಲ್ಲದೆ ಯೆಹೂದದ ಅರಸನೂ ಯೋಷೀಯನ ಮಗನೂ ಆದ ಯೆಹೋಯಾಕೀಮನ ಕಾಲದಿಂದ ಯೆಹೂದದ ಅರಸನೂ ಯೋಷೀಯನ ಮಗನೂ ಆದ ಚಿದ್ಕೀಯನ ಕಾಲದ ಆಳ್ವಿಕೆಯ ಹನ್ನೊಂದನೆಯ ವರ್ಷದ ಐದನೆಯ ತಿಂಗಳಿನಲ್ಲಿ ಯೆರೂಸಲೇಮಿನವರು ಸೆರೆ ಹೋಗುವ ತನಕ ಯೆಹೋವ ದೇವರ ವಾಕ್ಯವು ಒದಗುತ್ತಿತ್ತು. ಯೆರೆಮೀಯನ ಕರೆ
4ಯೆಹೋವ ದೇವರು ಈ ವಾಕ್ಯವನ್ನು ನನಗೆ ದಯಪಾಲಿಸಿದರು,
5“ನಾನು ನಿನ್ನನ್ನು ತಾಯಿಯ ಗರ್ಭದಲ್ಲಿ ನಿರ್ಮಿಸುವುದಕ್ಕಿಂತ ಮುಂಚೆಯೇ ನಿನ್ನನ್ನು ತಿಳಿದಿದ್ದೆನು. ನೀನು ಹುಟ್ಟುವುದಕ್ಕಿಂತ ಮುಂಚೆ ನಿನ್ನನ್ನು ಪ್ರತಿಷ್ಠಿಸಿದ್ದೆನು; ನಿನ್ನನ್ನು ಜನಾಂಗಗಳಿಗೆ ಪ್ರವಾದಿಯಾಗಿ ನೇಮಿಸಿದ್ದೇನೆ.”
6ಆಗ ನಾನು, “ಹಾ, ಸಾರ್ವಭೌಮ ಯೆಹೋವ ದೇವರೇ, ಇಗೋ ನಾನು ಮಾತು ಬಲ್ಲವನಲ್ಲ, ನಾನು ಚಿಕ್ಕವನು,” ಎಂದೆನು.
7ಆಗ ಯೆಹೋವ ದೇವರು ನನಗೆ, “ ‘ನಾನು ಚಿಕ್ಕವನೆಂದು ಹೇಳಬೇಡ.’ ಏಕೆಂದರೆ ನಾನು ನಿನ್ನನ್ನು ಕಳುಹಿಸುವವರೆಲ್ಲರ ಬಳಿಗೆ ನೀನು ಹೋಗಬೇಕು. ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ಮಾತನಾಡಬೇಕು.
8ಅವರಿಗೆ ಭಯಪಡಬೇಡ. ಏಕೆಂದರೆ ನಿನ್ನನ್ನು ತಪ್ಪಿಸುವುದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ,” ಎಂದು ಯೆಹೋವ ದೇವರಾದ ನಾನು ಹೇಳುತ್ತೇನೆ.
9ಆಗ ಯೆಹೋವ ದೇವರು ಕೈಚಾಚಿ, ನನ್ನ ಬಾಯಿಯನ್ನು ಮುಟ್ಟಿ ನನಗೆ, “ಇಗೋ, ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿ ಇಟ್ಟಿದ್ದೇನೆ.
10ನೋಡು, ಈ ಹೊತ್ತು ನೀನು ಕೀಳುವುದಕ್ಕೂ, ಕೆಳಗೆ ಹಾಕಿಬಿಡುವುದಕ್ಕೂ, ನಾಶಮಾಡುವುದಕ್ಕೂ, ಕೆಡವಿ ಹಾಕುವುದಕ್ಕೂ, ಕಟ್ಟುವುದಕ್ಕೂ, ನೆಡುವುದಕ್ಕೂ ನಾನು ನಿನ್ನನ್ನು ಜನಾಂಗಗಳ ಮೇಲೆಯೂ ರಾಜ್ಯಗಳ ಮೇಲೆಯೂ ನಿನ್ನನ್ನು ನೇಮಿಸಿದ್ದೇನೆ,” ಎಂದರು.
11ಇದಲ್ಲದೆ ಯೆಹೋವ ದೇವರ ವಾಕ್ಯವು ನನಗೆ, “ಯೆರೆಮೀಯನೇ, ನೀನು ಏನು ಕಾಣುತ್ತೀ?” ಎಂದು ಕೇಳಿದರು. ಅದಕ್ಕೆ ನಾನು, “ಬಾದಾಮಿ ಮರದ ಕೊಂಬೆಯನ್ನು ನೋಡುತ್ತೇನೆ,” ಎಂದೆನು.
12ಆಗ ಯೆಹೋವ ದೇವರು ನನಗೆ, “ನೀನು ಚೆನ್ನಾಗಿ ನೋಡಿದ್ದೀ. ಏಕೆಂದರೆ ನನ್ನ ವಾಕ್ಯವನ್ನು ನೆರವೇರಿಸಲು ಎಚ್ಚರಗೊಂಡಿದ್ದೇನೆಂದು, ತಿಳಿದುಕೊ” ಎಂದರು.
13ಎರಡನೆಯ ಸಾರಿ ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ, “ನೀನು ಏನು ನೋಡುತ್ತೀ?” ಎಂದು ಕೇಳಿದ್ದಕ್ಕೆ, ನಾನು, “ಬೇಯುವ ಮಡಕೆಯನ್ನು ನೋಡುತ್ತೇನೆ, ಅದರ ಬಾಯಿ ಉತ್ತರದ ಕಡೆಗೆ ಇದೆ,” ಎಂದೆನು.
14ಆಗ ಯೆಹೋವ ದೇವರು ನನಗೆ, “ಉತ್ತರ ಕಡೆಯಿಂದ ದೇಶದ ನಿವಾಸಿಗಳೆಲ್ಲರ ಮೇಲೆ ಕೇಡು ಹೊರಟು ಬರುವುದು.
15ಏಕೆಂದರೆ ನಾನು ಉತ್ತರದಲ್ಲಿರುವ ರಾಜ್ಯಗಳ ಕುಲಗಳನ್ನೆಲ್ಲಾ ಕರೆಯುತ್ತೇನೆ. “ಅವರು ಬಂದು ತಮ್ಮ ತಮ್ಮ ಸಿಂಹಾಸನಗಳನ್ನು ಯೆರೂಸಲೇಮಿನ ಬಾಗಿಲುಗಳ ಪ್ರವೇಶದಲ್ಲಿಯೂ, ಅದರ ಸುತ್ತಲಾಗಿರುವ ಗೋಡೆಗಳಿಗೆ ಎದುರಾಗಿಯೂ ಯೆಹೂದದ ಎಲ್ಲಾ ಪಟ್ಟಣಗಳಿಗೆ ಎದುರಾಗಿಯೂ ಇರಿಸುವರು.
16ನನ್ನನ್ನು ಬಿಟ್ಟು ಬೇರೆ ದೇವರುಗಳಿಗೆ ಧೂಪವನ್ನರ್ಪಿಸಿ ತಮ್ಮ ಸ್ವಂತ ಕೈಕೆಲಸಗಳಿಗೆ ಅಡ್ಡಬಿದ್ದಿದ್ದಾರೆ. ಅವರ ಎಲ್ಲಾ ಕೆಟ್ಟತನದ ನಿಮಿತ್ತ ಅವರಿಗೆ ವಿರೋಧವಾಗಿ ನನ್ನ ನ್ಯಾಯತೀರ್ಪುಗಳನ್ನು ನುಡಿಯುವೆನು.
17“ಆದ್ದರಿಂದ ಈಗ ನೀನು ನಿನ್ನ ನಡುವನ್ನು ಕಟ್ಟಿ ನಿಂತುಕೊಂಡು, ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ಅವರ ಸಂಗಡ ಮಾತನಾಡು. ನಾನು ನಿನ್ನನ್ನು ಅವರ ಮುಂದೆ ದಿಗಿಲುಪಡಿಸದ ಹಾಗೆ ನೀನು ಅವರಿಗೆ ಭಯಪಡಬೇಡ.
18ಸಮಸ್ತ ದೇಶಕ್ಕೆ ವಿರೋಧವಾಗಿ ಯೆಹೂದದ ಅರಸರಿಗೆ ವಿರೋಧವಾಗಿಯೂ, ಅದರ ಪ್ರಧಾನರಿಗೆ ವಿರೋಧವಾಗಿಯೂ, ಅದರ ಯಾಜಕರಿಗೆ ವಿರೋಧವಾಗಿಯೂ, ದೇಶದ ಜನರಿಗೆ ವಿರೋಧವಾಗಿಯೂ ನಾನೇ ಈ ಹೊತ್ತು ನಿನ್ನನ್ನು ಕೋಟೆಯುಳ್ಳ ಪಟ್ಟಣವಾಗಿಯೂ, ಕಬ್ಬಿಣದ ಸ್ತಂಭವಾಗಿಯೂ, ಕಂಚಿನ ಗೋಡೆಗಳಾಗಿಯೂ ಮಾಡಿದ್ದೇನೆ.
19ಅವರು ನಿನಗೆ ವಿರೋಧವಾಗಿ ಯುದ್ಧಮಾಡುವರು. ಆದರೆ ನಿನ್ನನ್ನು ಗೆಲ್ಲುವುದಿಲ್ಲ. ಏಕೆಂದರೆ ನಿನ್ನನ್ನು ತಪ್ಪಿಸುವುದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ,” ಇದು ಯೆಹೋವ ದೇವರ ನುಡಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.