Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 8

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರು, “ಒಂದು ದೊಡ್ಡ ಸುರುಳಿಯನ್ನು ತೆಗೆದುಕೊಂಡು ಸಾಮಾನ್ಯ ಲೇಖನಿಯಿಂದಲೇ ಮಹೇರ್ ಶಾಲಾಲ್ ಹಾಷ್ ಬಜ್, ಎಂದರೆ ಸೂರೆಗೆ ಆತುರ, ಕೊಳ್ಳೆಗೆ ಅವಸರ ಎಂದು ಬರೆ,” ಎಂಬುದಾಗಿ ನನಗೆ ಹೇಳಿದರು.
2ನಾನು ಯಾಜಕನಾದ ಊರೀಯನನ್ನೂ ಯೆಬೆರೆಕ್ಯನ ಮಗನಾದ ಜೆಕರ್ಯನನ್ನೂ ನಂಬಿಗಸ್ತ ಸಾಕ್ಷಿಗಳನ್ನಾಗಿ ಇರಿಸಿಕೊಂಡೆನು.
3ಅನಂತರ ನಾನು ಪ್ರವಾದಿನಿಯಾದ ನನ್ನ ಹೆಂಡತಿಯನ್ನು ಕೂಡಲು, ಆಕೆಯು ಗರ್ಭಧರಿಸಿ ಒಬ್ಬ ಗಂಡುಮಗುನ್ನು ಹೆತ್ತಳು. ಆಗ ಯೆಹೋವ ದೇವರು ನನಗೆ, “ಆ ಮಗುವಿಗೆ, ಮಹೇರ್ ಶಾಲಾಲ್ ಹಾಷ್ ಬಜ್ ಎಂದು ಹೆಸರಿಡು, ಎಂದು ಹೇಳಿದರು.
4ಏಕೆಂದರೆ ಆ ಮಗುವು, ‘ಅಪ್ಪಾ’ ಅಥವಾ ‘ಅಮ್ಮಾ’ ಎಂದು ಕೂಗಬಲ್ಲವನಾಗುವುದಕ್ಕಿಂತ ಮುಂಚೆ ಅಸ್ಸೀರಿಯದ ಅರಸನು ದಮಸ್ಕದ ಆಸ್ತಿಯನ್ನೂ ಸಮಾರ್ಯದ ಸೂರೆಯನ್ನೂ ತೆಗೆದುಕೊಂಡು ಹೋಗುವನು” ಎಂದರು.
5ಯೆಹೋವ ದೇವರು ಮತ್ತೊಮ್ಮೆ ನನಗೆ,
6“ಈ ಜನರು ಮೆಲ್ಲಗೆ ಹರಿಯುವ ಸಿಲೋವದ ನೀರನ್ನು ತ್ಯಜಿಸಿ, ರೆಚೀನನನ್ನೂ ರೆಮಲ್ಯನ ಮಗನನ್ನೂ ನೆಚ್ಚಿಕೊಂಡು ಮೆರೆದಿದ್ದರಿಂದ,
7ಯೆಹೋವ ದೇವರಾದ ನಾನು ಎಲ್ಲಾ ಪ್ರತಾಪದಿಂದ ಕೂಡಿದ ಅಸ್ಸೀರಿಯದ ಅರಸನೆಂಬ ಮಹಾನದಿಯ ರಭಸವಾದ ದೊಡ್ಡ ಪ್ರವಾಹವನ್ನು ಇವರ ಮೇಲೆ ಬರಮಾಡುವೆನು. ಅದು ತನ್ನ ಕಾಲುವೆಗಳನ್ನೆಲ್ಲಾ ಒಳಗೊಂಡು ದಡಗಳನ್ನೆಲ್ಲಾ ಮೀರಿ,
8ಯೆಹೂದದಲ್ಲಿಯೂ ನುಗ್ಗಿ, ತುಂಬಿತುಳುಕಿ ಹಬ್ಬಿಕೊಂಡು ಕತ್ತಿನವರೆಗೂ ಏರುವುದು. ಇಮ್ಮಾನುಯೇಲನೇ, ಆ ಅರಸನ ರೆಕ್ಕೆಗಳು ಹರಡಿ ನಿನ್ನ ದೇಶದ ಅಗಲವನ್ನೆಲ್ಲಾ ಆವರಿಸಿಕೊಳ್ಳುವುವು.”
9ಜನಾಂಗಗಳೇ, ನೀವು ಯುದ್ಧವನ್ನು ಘೋಷಿಸಿರಿ, ಆದರೂ ಚದರಿಹೋಗುವಿರಿ! ಎಲ್ಲಾ ದೂರ ದೇಶದವರೇ ಕಿವಿಗೊಡಿರಿ. ನಡುಕಟ್ಟಿಕೊಳ್ಳಿರಿ, ಆದರೂ ಚದರಿಹೋಗುವಿರಿ! ನಡುಕಟ್ಟಿಕೊಳ್ಳಿರಿ, ಆದರೂ ಚದರಿಹೋಗುವಿರಿ!
10ಆಲೋಚನೆ ಮಾಡಿಕೊಳ್ಳಿರಿ, ಅದು ಮುರಿದು ಹೋಗುವುದು, ನಿಮ್ಮ ಯೋಜನೆಯನ್ನು ಪ್ರಸ್ತಾಪಿಸಿರಿ, ಆದರೆ ಅದು ನಿಲ್ಲುವುದಿಲ್ಲ, ಏಕೆಂದರೆ ದೇವರು ನಮ್ಮ ಸಂಗಡ ಇದ್ದಾರೆ.
11ನಾನು ಈ ಜನರ ಮಾರ್ಗದಲ್ಲಿ ನಡೆಯಬಾರದೆಂದು ಯೆಹೋವ ದೇವರು ನನ್ನ ಮೇಲೆ ಬಲವಾಗಿ ಕೈಯನ್ನಿಟ್ಟು ನನಗೆ,
12“ಇವರು ಯಾವುದನ್ನು ಒಳಸಂಚು ಎಂದು ಹೇಳುತ್ತಾರೋ, ನೀವು ಅದನ್ನು ಒಳಸಂಚು ಎಂದು ಹೇಳಬೇಡಿರಿ. ಅವರ ಭಯಕ್ಕೆ ನೀವು ಭಯಪಡಬೇಡಿರಿ, ಇಲ್ಲವೆ ಹೆದರಬೇಡಿರಿ.
13ಸೇನಾಧೀಶ್ವರ ಯೆಹೋವ ದೇವರನ್ನೇ ಪ್ರತಿಷ್ಠೆ ಪಡಿಸಿಕೊಳ್ಳಿರಿ; ನೀವು ಭಯಪಡಬೇಕಾದುದು ಅವರಿಗೇ, ನೀವು ಹೆದರಬೇಕಾಗಿರುವುದು ಅವರಿಗೇ.
14ಅವರೇ ನಿಮಗೆ ಪರಿಶುದ್ಧ ಸ್ಥಳವಾಗಿರುವರು. ಆದರೆ ಇಸ್ರಾಯೇಲ್ ಮತ್ತು ಯಹೂದ ಎರಡು ಮನೆಗಳಿಗೆ ಎಡವುವ ಕಲ್ಲೂ, ಮುಗ್ಗರಿಸುವ ಬಂಡೆಯೂ, ಯೆರೂಸಲೇಮಿನ ನಿವಾಸಿಗಳಿಗೆ ಬಲೆಯೂ, ಬೋನೂ ಆಗಿರುವರು.
15ಅವರಲ್ಲಿ ಅನೇಕರು ಎಡವಿಬೀಳುವರು, ಮುಗ್ಗರಿಸಿ ಮೂಳೆ ಮುರಿದುಕೊಳ್ಳುವರು, ಬಲೆಗೆ ಸಿಕ್ಕಿ ಬೀಳುವರು.”
16ಸಾಕ್ಷಿಯನ್ನು ಕಟ್ಟಿಡು, ನನ್ನ ಶಿಷ್ಯರೊಳಗೆ ದೇವರ ಶಿಕ್ಷಣವನ್ನು ಮುದ್ರಿಸು.
17ಯಾಕೋಬಿನ ವಂಶದವರಿಗೆ ಮುಖವನ್ನು ಮರೆಮಾಡಿಕೊಂಡಿರುವ ಯೆಹೋವ ದೇವರಿಗಾಗಿ ನಾನು ಕಾದುಕೊಂಡು ಎದುರು ನೋಡುತ್ತಿರುವೆನು. ನಾನು ದೇವರ ಮೇಲೆ ಭರವಸೆ ಇಡುವೆನು.
18ಇಗೋ, ನಾನೂ ಯೆಹೋವ ದೇವರು ನನಗೆ ದಯಪಾಲಿಸಿರುವ ಮಕ್ಕಳೂ ಚೀಯೋನ್ ಪರ್ವತದಲ್ಲಿ ವಾಸವಾಗಿರುವ ಸೇನಾಧೀಶ್ವರ ಯೆಹೋವ ದೇವರಿಂದ ಉಂಟಾದ ಗುರುತುಗಳಾಗಿಯೂ, ಅದ್ಭುತಗಳಾಗಿಯೂ ಇಸ್ರಾಯೇಲಿನಲ್ಲಿದ್ದೇವೆ. ಕತ್ತಲೆ ಬೆಳಕಿಗೆ ತಿರುಗುತ್ತದೆ
19ಲೊಚಗುಟ್ಟುವ, ಪಿಸುಮಾತಾಡುವ ಮಂತ್ರಗಾರರನ್ನೂ; ಕಣಿಹೇಳುವವರನ್ನೂ ಹುಡುಕಿರಿ ಎಂದು ಅವರು ನಿಮಗೆ ಹೇಳುವಾಗ, ಜನರು ತಮ್ಮ ದೇವರನ್ನೇ ಹುಡುಕುವುದಿಲ್ಲವೋ? ಜೀವಿತರಿಗಾಗಿ ಸತ್ತವರಲ್ಲಿ ಹೋಗುವುದುಂಟೋ?
20ದೇವರ ಶಿಕ್ಷಣ ಮತ್ತು ಎಚ್ಚರಿಸುವ ಸಾಕ್ಷಿಯ ವಿಷಯದಲ್ಲಿ ಈ ವಾಕ್ಯದ ಪ್ರಕಾರ ಒಂದು ವೇಳೆ ಅವರು ಹೇಳದಿದ್ದರೆ, ಅವರಲ್ಲಿ ಮುಂಜಾವಿನ ಬೆಳಕು ಮೂಡಿಬರುವುದಿಲ್ಲ.
21ಅವರು ಘೋರಕಷ್ಟಕ್ಕೊಳಗಾಗಿ ಹಸಿದು ದೇಶದಲ್ಲಿ ಅಲೆಯುವರು. ಅವರು ಹಸಿದಾಗ ರೇಗಿಕೊಂಡು ತಮ್ಮ ರಾಜನನ್ನೂ, ದೇವರನ್ನೂ ಶಪಿಸಿ ಮೇಲಕ್ಕೆ ನೋಡುವರು.
22ಅವರು ಭೂಮಿಯನ್ನು ದೃಷ್ಟಿಸಿದರೂ, ಇಕ್ಕಟ್ಟೆಂಬ ಕತ್ತಲೂ, ಸಂಕಟವೆಂಬ ಅಂಧಕಾರವೂ ಕವಿದುಕೊಂಡಿರುವುದು, ಕಾರ್ಗತ್ತಲೆಗೆ ಅವರನ್ನು ದೂಡಲಾಗುವುದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.