Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 63

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರವನ್ನು ತೊಟ್ಟುಕೊಂಡವನಾಗಿ, ತನ್ನ ಮಹಾ ಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? “ನೀತಿಯನ್ನು ಘೋಷಿಸುವವನೂ, ರಕ್ಷಿಸಲು ಬಲಿಷ್ಠನೂ ನಾನೇ.”
2ನಿನ್ನ ವಸ್ತ್ರಗಳು ಏಕೆ ಕೆಂಪಾದವು? ನಿನ್ನ ಬಟ್ಟೆಗಳು ಏಕೆ ದ್ರಾಕ್ಷಿಯನ್ನು ತುಳಿಯುವವನ ಹಾಗಿವೆ?
3“ದ್ರಾಕ್ಷಿಯನ್ನು ತೊಟ್ಟಿಯಲ್ಲಿ ನಾನೊಬ್ಬನೇ ತುಳಿದಿದ್ದೇನೆ. ಜನಾಂಗಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ. ನನ್ನ ಕೋಪದಲ್ಲಿ ಅವರನ್ನು ತುಳಿದಿದ್ದೇನೆ, ನನ್ನ ಉರಿಯಲ್ಲಿ ಅವರನ್ನು ಜಜ್ಜಿದ್ದೇನೆ. ಆದ್ದರಿಂದ ಅವರ ರಕ್ತವು ನನ್ನ ಬಟ್ಟೆಗಳ ಮೇಲೆ ಸಿಡಿದು, ನನ್ನ ವಸ್ತ್ರಕ್ಕೆ ಮೆತ್ತಿಕೊಂಡಿದೆ;
4ಏಕೆಂದರೆ ಮುಯ್ಯಿಗೆ ಮುಯ್ಯಿ ತೀರಿಸುವ ದಿವಸವು ನನ್ನ ಹೃದಯದಲ್ಲಿದೆ. ನಾನು ವಿಮೋಚಿಸಿದವರ ವರುಷವು ಬಂತು.
5ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ, ಉದ್ಧಾರ ಮಾಡುವವನು ಇಲ್ಲದ್ದರಿಂದ ಆಶ್ಚರ್ಯಪಟ್ಟೆನು. ಆಗ ನನ್ನ ಸ್ವಂತ ಬಾಹುವು ನನಗೆ ರಕ್ಷಣೆಯನ್ನು ಉಂಟುಮಾಡಿತು. ನನ್ನ ಕೋಪವೇ ನನಗೆ ಆಧಾರವಾಯಿತು.
6ನನ್ನ ಕೋಪದಲ್ಲಿ ಜನಾಂಗಗಳನ್ನು ತುಳಿದುಬಿಟ್ಟೆನು. ನನ್ನ ಉರಿಯಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು. ಅವರ ರಕ್ತವನ್ನು ಭೂಮಿಗೆ ಸುರಿಸಿದೆನು.” ಸ್ತುತಿ ಮತ್ತು ಪ್ರಾರ್ಥನೆ
7ಯೆಹೋವ ದೇವರು ನಮಗೆ ಮಾಡಿದ್ದೆಲ್ಲದರ ಪ್ರಕಾರ, ಯೆಹೋವ ದೇವರ ಪ್ರೀತಿ ಕೃಪೆಗಳನ್ನೂ, ಯೆಹೋವ ದೇವರ ಕಾರ್ಯಗಳನ್ನು ಸ್ತೋತ್ರಗಳನ್ನೂ ಜ್ಞಾಪಕಪಡಿಸುವೆನು. ಆತನು ತನ್ನ ಅಂತಃಕರುಣೆಯ ಪ್ರಕಾರವೂ, ತನ್ನ ಕೃಪೆಯ ಮಹಾ ಒಳ್ಳೆಯತನದ ಪ್ರಕಾರವೂ, ಇಸ್ರಾಯೇಲಿನ ಮನೆಯವರಿಗೆ ದೊಡ್ಡ ಉಪಕಾರ ಮಾಡಿದನಲ್ಲಾ.
8ಆತನು ನಿಶ್ಚಯವಾಗಿ, “ಅವರು ನನ್ನ ಜನರೇ, ಸುಳ್ಳಾಡದ ಮಕ್ಕಳೇ!” ಎಂದು ಹೇಳಿದನು. ಆದ್ದರಿಂದ ಅವರಿಗೆ ರಕ್ಷಕನಾಗಿದ್ದನು.
9ಅವರಿಗೆ ಬಂದ ಎಲ್ಲಾ ಇಕ್ಕಟ್ಟಿನಲ್ಲಿ ಆತನಿಗೆ ಇಕ್ಕಟ್ಟಾಯಿತು. ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು. ತನ್ನ ಪ್ರೀತಿಯಲ್ಲಿಯೂ, ತನ್ನ ಕನಿಕರದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು. ಪೂರ್ವಕಾಲದ ದಿವಸಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು.
10ಆದರೆ ಅವರು ತಿರುಗಿಬಿದ್ದು, ಆತನ ಪರಿಶುದ್ಧಾತ್ಮನನ್ನು ದುಃಖಪಡಿಸಿದರು. ಆದ್ದರಿಂದ ಆತನು ಬೇರೆಯಾಗಿ ಅವರಿಗೆ ಶತ್ರುವಾದನು. ಆತನೇ ಅವರಿಗೆ ವಿರೋಧವಾಗಿ ಯುದ್ಧಮಾಡಿದನು.
11ಆಗ ಆತನು ಪೂರ್ವಕಾಲದ ದಿವಸಗಳನ್ನೂ, ಮೋಶೆಯನ್ನೂ, ಅವನ ಜನರನ್ನೂ ಜ್ಞಾಪಕಮಾಡಿಕೊಂಡು “ಅವರನ್ನು ತನ್ನ ಮಂದೆಯ ಕುರುಬನ ಸಂಗಡ ಸಮುದ್ರದೊಳಗಿಂದ ಸುರಕ್ಷಿತವಾಗಿ ಮೇಲಕ್ಕೆ ಬರಮಾಡಿದವನು ಎಲ್ಲಿ? ಅವರ ಮಧ್ಯದಲ್ಲಿ ತನ್ನ ಪರಿಶುದ್ಧಾತ್ಮನನ್ನು ಇಟ್ಟವನು ಎಲ್ಲಿ?
12ಮೋಶೆಯ ಬಲಗೈಯ ಮುಖಾಂತರ ತನ್ನ ಬಲವಾದ ಮಹಿಮೆಯುಳ್ಳ ತೋಳಿನಿಂದ ಅವರನ್ನು ನಡೆಸಿದವನೂ, ತನಗೆ ನಿತ್ಯವಾದ ಹೆಸರನ್ನು ಉಂಟುಮಾಡುವ ಹಾಗೆ ಅವರ ಮುಂದೆ ಜನರಾಶಿಯನ್ನೂ ಇಬ್ಬಾಗಿಸಿದವನು ಎಲ್ಲಿ?
13ಅಡವಿಯಲ್ಲಿ ಕುದುರೆಯಂತೆ ಅಗಾಧಗಳಲ್ಲಿ ಅವರನ್ನು ಎಡವದ ಹಾಗೆ ನಡೆಸಿದವನು ಎಲ್ಲಿ?”
14ಪಶುವು ತಗ್ಗಿಗೆ ಇಳಿಯುವ ಪ್ರಕಾರ, ಯೆಹೋವ ದೇವರ ಆತ್ಮರು ಅವರಿಗೆ ವಿಶ್ರಾಂತಿಯನ್ನು ಕೊಟ್ಟರು. ಈ ಪ್ರಕಾರ ನೀವು ನಿಮಗೆ ಮಹಿಮೆಯುಳ್ಳ ಹೆಸರನ್ನು ಉಂಟುಮಾಡುವುದಕ್ಕಾಗಿ, ನಿಮ್ಮ ಜನರನ್ನು ನಡಿಸಿದಿರಿ.
15ಆಕಾಶದಿಂದ ಕೆಳಗೆ ನೋಡಿರಿ, ನಿಮ್ಮ ಪವಿತ್ರವೂ ಮಹಿಮೆಯೂ ಆದ ನಿಮ್ಮ ಸಿಂಹಾಸನದಿಂದ ದೃಷ್ಟಿಸಿ ನೋಡಿರಿ. ನಿಮ್ಮ ಆಸಕ್ತಿಯೂ, ನಿಮ್ಮ ಪರಾಕ್ರಮವೂ, ನಿಮ್ಮ ಹೃದಯದ ಘೋಷವೂ, ನಮ್ಮ ವಿಷಯವಾದ ನಿಮ್ಮ ಕರುಣೆ ಕನಿಕರಗಳೂ ಎಲ್ಲಿ? ಬಿಗಿಹಿಡಿದುಕೊಂಡಿದ್ದೀರೋ?
16ಅಬ್ರಹಾಮನು ನಮ್ಮನ್ನು ತಿಳಿಯದಿದ್ದರೂ, ಇಸ್ರಾಯೇಲನು ನಮ್ಮನ್ನು ಗುರುತಿಸದಿದ್ದರೂ ಯೆಹೋವ ದೇವರಾದ ನೀವೇ ನಮ್ಮ ತಂದೆಯೂ, ನಮ್ಮ ವಿಮೋಚಕರೂ ಆಗಿದ್ದೀರಿ. ನಿಮ್ಮ ಹೆಸರು ಸದಾಕಾಲವೂ ಇದೆ
17ಯೆಹೋವ ದೇವರೇ, ಏಕೆ ನಮ್ಮನ್ನು ನಿಮ್ಮ ಮಾರ್ಗಗಳಿಂದ ತಪ್ಪಿಹೋಗುವಂತೆ ಅನುಮತಿಸಿದ್ದೀರಿ? ಏಕೆ ನಮ್ಮ ಹೃದಯವನ್ನು ನಿಮಗೆ ಭಯಪಡದ ಹಾಗೆ ಕಠಿಣ ಮಾಡಿದ್ದೀರಿ? ನಿಮ್ಮ ಸೇವಕರಿಗೋಸ್ಕರವೂ, ನಿಮ್ಮ ಬಾಧ್ಯರಾಗಿರುವ ಗೋತ್ರಗಳ ನಿಮಿತ್ತ ನೀವು ಹಿಂದಿರುಗಿರಿ.
18ಸ್ವಲ್ಪಕಾಲ ಮಾತ್ರ ನಿಮ್ಮ ಪರಿಶುದ್ಧ ಜನರು ಅದನ್ನು ಸ್ವಾಧೀನಮಾಡಿಕೊಂಡರು. ನಮ್ಮ ಶತ್ರುಗಳು ನಿಮ್ಮ ಪವಿತ್ರಾಲಯವನ್ನು ತುಳಿದುಬಿಟ್ಟಿದ್ದಾರೆ.
19ನಾವು ಆದಿಯಿಂದಲೂ ನಿಮ್ಮವರಾಗಿದ್ದೇವೆ. ಅವರ ಮೇಲೆ ನೀವು ದೊರೆತನ ಮಾಡಲಿಲ್ಲ. ಅವರು ನಿಮ್ಮ ಹೆಸರನ್ನು ಧರಿಸಲೂ ಇಲ್ಲ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.